ಕೃಷ್ಣ ಭಟ್ ಅಳದಂಗಡಿ- Motivational story
ಒಂದು ಸಾರಿ ಒಂದು ಬೃಹತ್ ಹಡಗಿನ ಎಂಜಿನ್ ಹಾಳಾಯಿತು. ದೊಡ್ಡ ಕಂಪನಿ ಅದು. ಅದರ ಘಟಾನುಘಟಿ ಎಂಜಿನಿಯರ್‌ಗಳು, ತಂತ್ರಜ್ಞರೆಲ್ಲ ಬಂದು ನೋಡಿದರು. ಆದರೆ, ಅದರ ಸಮಸ್ಯೆ ಅರ್ಥವಾಗಲಿಲ್ಲ. ಹಾಗಂತ ಅದನ್ನು ತುಂಬಾ ಹೊತ್ತು ಹಾಗೇ ಬಿಡುವಂತಿರಲಿಲ್ಲ. ಸಮುದ್ರ ಮಧ್ಯೆ ಚಲನೆ ನಿಲ್ಲಿಸಿದ್ದ ಹಡಗು ಭಾರದಿಂದ ಮತ್ತು ಗಾಳಿಯಿಂದಾಗಿ ಅಲ್ಲೇ ಮುಳುಗುವ ಅಪಾಯವೂ ಇತ್ತು.
ಹೀಗಾಗಿ ಕಂಪನಿಯ ಮಾಲೀಕರು ಕೂಡಾ ಒಬ್ಬ ನಿಪುಣ ಟೆಕ್ನೀಷಿಯನ್‌ನನ್ನು ಕರೆಸಿಕೊಂಡರು. ಅವರಿಗೆ ಈ ರೀತಿಯ ಸಮಸ್ಯೆ ಬಗೆಹರಿಸುವಲ್ಲಿ ಸುಮಾರು ೪೦ ವರ್ಷಗಳ ಅನುಭವ ಇತ್ತು. ಅವರು ಬಂದರೆ ಸಮಸ್ಯೆ ಖಂಡಿತಾ ಸರಿ ಹೋದೀತು ಎನ್ನುವ ಅಭಿಪ್ರಾಯ ಅಲ್ಲಿದ್ದ ಎಲ್ಲರಲ್ಲೂ ಇತ್ತು.
ತುರ್ತು ಕರೆಯ ಹಿನ್ನೆಲೆಯಲ್ಲಿ ಆ ಎಂಜಿನಿಯರ್ ಕೂಡಲೇ ಆಗಮಿಸಿದರು. ಎಂಜಿನ್ ಅನ್ನು ಮೇಲಿಂದ ಕೆಳಗೆ ಎಲ್ಲವನ್ನೂ ಸರಿಯಾಗಿ ನೋಡಿದರು. ಒಮ್ಮೆ ಗಮನಿಸಿದ ಬಳಿಕ ತನ್ನ ಹೆಗಲ ಮೇಲಿನ ಬ್ಯಾಗನ್ನು ಕೆಳಗೆ ಇಳಿಸಿದರು. ಅದರೊಳಗಿನಿಂದ ಒಂದು ಸಣ್ಣ ಸ್ಪಾನರನ್ನು ಹೊರ ತೆಗೆದರು. ಎಂಜಿನ್ ಒಂದು ಭಾಗದ ಒಂದು ಬೋಲ್ಟನ್ನು ಸಣ್ಣದಾಗಿ ಟೈಟ್ ಮಾಡಿದರು. ಮತ್ತು ಚಾಲೂ ಮಾಡಿ ಅಂದರು. ಎಂಜಿನ್ ಸ್ಟಾರ್ಟ್ ಆಗಿಯೇ ಬಿಟ್ಟಿತ್ತು. ಕೇವಲ ಒಂದೇ ನಿಮಿಷದಲ್ಲಿ ದೊಡ್ಡ ಸಮಸ್ಯೆಯೊಂದು ಪರಿಹಾರವಾಗಿಬಿಟ್ಟಿತು. ಎಲ್ಲರೂ ನಿರಾಳರಾದರು. ಅದಲ್ಲೇ ಇಲ್ಲ ಶಿಪ್ಪಿಂಗ್ ಕಂಪನಿ ಮಾಲೀಕರಂತೂ ನಿರಾಳತೆಯ ನಿಟ್ಟುಸಿರು ಬಿಟ್ಟರು.
ಕೆಲಸ ಮುಗಿಸಿದ ಬಳಿಕ ಆ ಎಂಜಿನಿಯರ್ ತನ್ನ ಬಿಲ್‌ನ್ನು ನೀಡಿದರು. ಅದನ್ನು ನೋಡಿ ಶಿಪ್ ಮಾಲೀಕರಿಗೆ ತಲೆ ತಿರುಗಿದಂತಾಯಿತು. ಅದರಲ್ಲಿ ಬರೆದಿತ್ತು: ೫ ಲಕ್ಷ ರೂ.!
ಮಾಲೀಕ ಕೇಳಿಯೇ ಬಿಟ್ಟರು: ನಿಮ್ಮನ್ನು ನೀವಿರುವ ಜಾಗದಿಂದ ಕರೆದುಕೊಂಡು ಬರುವ ಎಲ್ಲ ವ್ಯವಸ್ಥೆ ನಾವೇ ಮಾಡಿದ್ದೇವೆ. ಮರಳಿ ಕರೆದುಕೊಂಡು ಹೋಗಿ ಬಿಡುತ್ತೇವೆ. ಕೇವಲ ಒಂದು ನಿಮಿಷದಲ್ಲಿ ಮುಗಿದು ಹೋದ ಈ ಕೆಲಸಕ್ಕೆ ಐದು ಲಕ್ಷ ರೂ. ಬಿಲ್ ಮಾಡಿದ್ದೀರಲ್ಲಾ.. ಇದು ಸರಿಯಾ? ಯಾವುದಕ್ಕೆ ಎಷ್ಟು ಅಂತ ಡಿಟೇಲ್ಡ್ ಬಿಲ್ ಕೊಡಿ ಎಂದರು.
ಎಂಜಿನಿಯರ್ ತಣ್ಣಗೆ ಹೋಗಿ ಇನ್ನೊಂದು ಬಿಲ್ ಬರೆದುಕೊಂಡು ಬಂದರು. ಅದರಲ್ಲಿ ಎಲ್ಲ ವಿವರಗಳೂ ಇದ್ದವು! ಮಾಲೀಕ ಬಿಲ್ ಓದತೊಡಗಿದರು.
ಒಂದು ಸ್ಪಾನರ್‌ನಿಂದ ಬೋಲ್ಟ್ ಟೈಟ್ ಮಾಡಿ ಎಂಜಿನ್‌ನ್ನು ಸರಿ ಮಾಡಿದ್ದಕ್ಕೆ: ೧೦೦೦ ರೂ.
ಎಲ್ಲಿಗೆ ಹೊಡೆಯಬೇಕು, ಹೇಗೆ ಹೊಡೆಯಬೇಕು ಎಂಬ ಜ್ಞಾನಕ್ಕೆ: ೪,೯೯,೦೦೦ ರೂ.
ಬಿಲ್‌ನ ಕೊನೆಯಲ್ಲಿ ಇನ್ನೊಂದು ವಾಕ್ಯ ಬರೆದಿತ್ತು: ನಾನು ಒಂದು ಕೆಲಸವನ್ನು ಒಂದು ನಿಮಿಷದಲ್ಲಿ ಮಾಡಿ ಮುಗಿಸಿದೆ ಎಂದ ಮಾತ್ರಕ್ಕೆ ಅದು ಒಂದು ನಿಮಿಷದ ಕೆಲಸ ಅಂತೇನಲ್ಲ. ಈ ಕೆಲಸವನ್ನು ಒಂದು ನಿಮಿಷದಲ್ಲಿ ಹೇಗೆ ಮಾಡಿ ಮುಗಿಸಬಹುದು ಎನ್ನುವುದನ್ನು ಕಂಡುಕೊಳ್ಳುವುದಕ್ಕೆ ೪೦ ವರ್ಷಗಳ ಪರಿಶ್ರಮವನ್ನು ಹಾಕಿದ್ದೇನೆ. ನೀವು ಹಣ ಕೊಡಬೇಕಾಗಿರುವುದು ಒಂದು ನಿಮಿಷಕ್ಕಷ್ಟೇ ಅಲ್ಲ. ನಿಮ್ಮ ಹಡಗು ಮುಳುಗದಂತೆ ಮಾಡಿದ್ದು ಒಂದು ನಿಮಿಷದ ಕೆಲಸಲ್ಲ, ೪೦ ವರ್ಷಗಳ ನನ್ನ ಅನುಭವ.
ಇದನ್ನೂ ಓದಿ | Motivational story | ಸ್ಪೆಷಲ್ ಸ್ಪೆಷಲ್ ಅಂತ ಒಳಗೇ ಮುಚ್ಚಿಟ್ಟಿದ್ದ ಬೆಳ್ಳಿ ತಟ್ಟೆ ಕೊನೆಗೆ ನಾಯಿಯ ಬಟ್ಟಲಾಯಿತು!