ಕೃಷ್ಣ ಭಟ್ ಅಳದಂಗಡಿ- Motivational story
ಆವತ್ತು ಶುಕ್ರವಾರ. ರವಿ ಕೆಲಸ ಮುಗಿಸಿ ಮನೆಗೆ ಬಂದಾಗ ರಾತ್ರಿಯಾಗಿತ್ತು. ನಿರಂತರ ಐದು ದಿನ ಒತ್ತಡದಲ್ಲಿ ಕೆಲಸ ಮಾಡಿದ್ದರಿಂದ ಒಮ್ಮೆ ಮನೆಗೆ ಹೋಗಿ ರಿಲ್ಯಾಕ್ಸ್ ಮಾಡಿದರೆ ಸಾಕಪ್ಪಾ.. ನಾಳೆ ನಾಡಿದ್ದು ಹೇಗೂ ರಜೆ ಅಂದುಕೊಂಡು ಬಂದಿದ್ದ. ಮನೆಗೆ ಬಂದು ನೋಡಿದರೆ ಮೂರು ವರ್ಷದ ಮಗಳು ಹಾಲ್‍ನಲ್ಲಿ ಕೂತು ಯಾವುದೋ ಅಗತ್ಯಕ್ಕೆ ಎಂದು ತಂದಿಟ್ಟಿದ್ದ ಗಿಫ್ಟ್ ರಾಪರ್ ಪೇಪರನ್ನು ಚೂರುಚೂರು ಮಾಡಿಟ್ಟಿದ್ದಳು. ರವಿಗೆ ಸಿಟ್ಟು ನೆತ್ತಿಗೇರಿತ್ತು.
ಮಗುವಿಗೂ, ಹೆಂಡತಿಗೂ ಬೈದು ಸಿಟ್ಟಿನಿಂದ ರೂಮು ಸೇರಿಕೊಂಡ. ಊಟಕ್ಕೆ ಕರೆದರೂ ಬಾರದೆ ಅಸಹನೆ ಪ್ರದರ್ಶಿಸಿದ. ಮಗಳು ಎಷ್ಟು ಸಾರಿ ಅಪ್ಪಾ.. ಬಾಗಿಲು ತೆಗಿಯಪ್ಪಾ..' ಅಂದರೂ ತೆಗೆಯಲಿಲ್ಲ.
ʻಮಕ್ಕಳನ್ನು ಹೇಗೆ ಸಾಕಬೇಕು ಅಂತ ಗೊತ್ತಿಲ್ಲ ನಿಂಗೆ. ಈ ತರ ಪೇಪರ್ ವೇಸ್ಟ್ ಮಾಡುವುದು, ಮನೆ ಗಲೀಜು ಮಾಡೋದೆಲ್ಲ ನೀನೇ ಕಲಿಸಿಕೊಟ್ಟಿದ್ದು’ ಅಂತ ಹೆಂಡತಿ ಮೇಲೆ ರೇಗಿದ.
ಹೇಗೋ ರಾತ್ರಿ ಕಳೆದು ಬೆಳಗಾಯಿತು. ಒಂಬತ್ತು ಗಂಟೆಗೆ ಅವನು ಏಳುತ್ತಿದ್ದಂತೆಯೇ ಮಗಳು ಪುಟಪುಟನೆ ಬಂದು ಒಂದು ಗಿಫ್ಟ್ ಬಾಕ್ಸ್ ಕೈಗೆ ಕೊಟ್ಟಳು.. ಇದು ನಿನಗಪ್ಪಾ!
ರವಿಗೆ ನಾಚಿಕೆ ಆಯ್ತು. `ʻಛೆ.. ಮಗು ನನಗಾಗಿ ಗಿಫ್ಟ್ ಪ್ಯಾಕ್ ಮಾಡಲು ಪೇಪರ್ ಬಳಸಿದೆ. ನಾನು ಬೈದು ಬಿಟ್ನಲ್ಲಾ’ ಅಂತ. ಖುಷಿಯಿಂದ ಓಪನ್ ಮಾಡಿದ. ಆದರೆ, ಅದು ಖಾಲಿ!
ರವಿಗೆ ಮತ್ತೆ ಸಿಟ್ಟು ಬಂತು. `ʻಈ ತರ ಮೋಸ ಮಾಡೋಕೆ ನಿಂಗೆ ಯಾರು ಕಲಿಸಿದ್ದು ಯಾರಾದ್ರೂ ಖಾಲಿ ಬಾಕ್ಸ್ ಗಿಫ್ಟ್ ಕೊಡ್ತಾರಾ? ಈ ತರ ಖಾಲಿ ಬಾಕ್ಸ್ ಗಿಫ್ಟ್ ಐಡಿಯಾ ಯಾರದ್ದು ಅಮ್ಮಂದಾ?’ ಅಂತ ಮತ್ತೆ ರೇಗಿದ.
ಮಗು ತಲೆ ಎತ್ತಿ ಅಪ್ಪನ ಮುಖವನ್ನೇ ನೋಡ್ತಾ, ಅಳ್ತಾ ಹೇಳಿದ್ಲು: ಅಪ್ಪಾ ಪ್ಲೀಸ್ ಬೈಬೇಡಪ್ಪ.. ಅದು ಖಾಲಿ ಬಾಕ್ಸ್ ಅಲ್ಲಪ್ಪ.. ನಾನು ಅದಕ್ಕೆ ತುಂಬ ಫ್ಲೈಯಿಂಗ್ ಕಿಸ್ ಕೊಟ್ಟು ಅದನ್ನು ಪ್ಯಾಕ್ ಮಾಡಿ ತಂದಿದ್ದೇನಪ್ಪಾ.. ನಂಗೆ ಆಗಾಗ ನಿಂಗೆ ಮುತ್ತು ಕೊಡಬೇಕು ಅನಿಸ್ತದೆ.. ನೀನು ಇರಲ್ವಲ್ಲಾ.. ಆಗೆಲ್ಲ ಆ ಬಾಕ್ಸ್‌ಗೆ ಫ್ಲೈಯಿಂಗ್ ಕಿಸ್ ಕೊಟ್ಟು ಮುಚ್ಚಿಡ್ತೇನೆ.. ತುಂಬಾ ಇದೆಯಪ್ಪಾ ಅದರಲ್ಲಿ!
ಅಪ್ಪ ಈಗ ನಾಚಿಕೆಯಲ್ಲಿ ಕುಸಿದೇ ಹೋದ. ಮಗಳನ್ನು ಬಾಚಿ ತಬ್ಬಿಕೊಂಡು ಲೊಚಲೊಚನೆ ಮುತ್ತಿಟ್ಟು ಹೇಳಿದ:
ಮಗೂ ನಾನು ನಿನ್ನನ್ನು ಅರ್ಥ ಮಾಡಿಕೊಳ್ಬೇಕಿತ್ತು. ಸೋತೆ ನಾನು. ನೀನು ನನ್ನನ್ನು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದೀಯಲ್ಲಾ.. ಸಾರಿ ಕಂದಾ, ಐ ಲವ್ ಯೂ.
ಇದನ್ನೂ ಓದಿ | Motivational story | ಆ ಇಬ್ಬರು ಪುಟಾಣಿ ಮಕ್ಕಳು ಮತ್ತು ಅವರ ಕೈಯಲ್ಲಿದ್ದ ನಾಲ್ಕು ಚಿಪ್ಪು ದುಡ್ಡು!