ಕೃಷ್ಣ ಭಟ್ ಅಳದಂಗಡಿ- Motivational story
ವಿಶ್ವನಾಥ್ ಒಬ್ಬ ಕಠಿಣ ಪರಿಶ್ರಮಿ. ಶ್ರದ್ಧೆಯಿಂದ, ಬುದ್ಧಿವಂತಿಕೆಯಿಂದ ಕೆಲಸವನ್ನು ನಿಭಾಯಿಸಬಲ್ಲ ಚಾಣಾಕ್ಷ. ಅವರ ಈ ಸೇವೆಯನ್ನು ಪರಿಗಣಿಸಿ ಕಂಪನಿಯು ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ (ಸಿಎಂಡಿ) ಹುದ್ದೆಗೆ ಪ್ರಮೋಟ್ ಮಾಡಿತ್ತು. ಸಾಮಾನ್ಯವಾಗಿ ಆ ಕಂಪನಿಯಲ್ಲಿ ಈ ಹುದ್ದೆಗೆ ಹೊರಗಿನಿಂದಲೇ ನೇಮಕಾತಿ ಆಗುವುದು ಹೆಚ್ಚು. ಆದರೆ, ಮೊದಲ ಬಾರಿಗೆ ಸಂಸ್ಥೆ ಇನ್‍ಹೌಸ್ ನೇಮಕಾತಿ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿತ್ತು. ಅದಕ್ಕೆ ಕಾರಣ ವಿಶ್ವನಾಥ್ ಅವರ ಬದ್ಧತೆ ಮತ್ತು ಪ್ರಾಮಾಣಿಕತೆ.
ಆವತ್ತು ಅಧಿಕಾರ ಸ್ವೀಕಾರದ ಸಣ್ಣ ಕಾರ್ಯಕ್ರಮ ಆಯೋಜನೆಯಾಗಿತ್ತು. ವಿಶ್ವನಾಥ್ ಅವರ ಪತ್ನಿ ಅನಿತಾ, ಇಬ್ಬರು ಮಕ್ಕಳೂ ಬಂದಿದ್ದರು. ಜತೆಗೆ ಸಿಇಒ ಚಂದ್ರಶೇಖರ್ ಅವರ ಪತ್ನಿ ಶೋಭಾ ದೇಸಾಯಿಯೂ ಇದ್ದರೂ. ಜತೆಗೆ ಉನ್ನತ ಹುದ್ದೆಯಲ್ಲಿರುವ ಎಲ್ಲರ ಪತ್ನಿಯರೂ ಅಲ್ಲಿದ್ದರು.
ಎಲ್ಲ ಉನ್ನತ ಅಧಿಕಾರಿಗಳ ಪತ್ನಿಯರು ಒಟ್ಟಿಗೇ ಒಂದು ಕಡೆ ಕೂತಿದ್ದರು. ಆಗ ಶೋಭಾ ದೇಸಾಯಿ ಅನಿತಾ ಅವರ ಬಳಿ ಒಂದು ಪ್ರಶ್ನೆಯನ್ನು ಕೇಳಿದರು: ಅನಿತಾ ಅವರೇ, ನಿಮ್ಮ ಗಂಡ ನಿಮಗೆ ಟೈಮ್ ಕೊಡ್ತಾ ಇದ್ದಾರಾ? ನಿಮ್ಮನ್ನು ಸಂತೋಷವಾಗಿಟ್ಟಿದ್ದಾರಾ?
ಈ ಪ್ರಶ್ನೆ ದೂರದಲ್ಲಿದ್ದ ವಿಶ್ವನಾಥ್‍ಗೂ ಸಣ್ಣದಾಗಿ ಕೇಳಿಸಿತು. ಬೇರೆಯವರ ಜತೆ ಮಾತನಾಡುತ್ತಿದ್ದರೂ ಒಂದು ಕಿವಿ ಅನಿತಾ ಹೇಳಬಹುದಾದ ಉತ್ತರವನ್ನು ಕೇಳಲು ಕಾತರಿಸುತ್ತಿತ್ತು. ನಿಜವೆಂದರೆ ವಿಶ್ವನಾಥ್‍ಗೆ ಮನೆ, ಮಕ್ಕಳ ವಿಷಯದಲ್ಲಿ ಹೆಚ್ಚು ಸಮಯ ಕೊಡಲು ಸಾಧ್ಯವಾಗುತ್ತಲೇ ಇರಲಿಲ್ಲ. ಎಲ್ಲಿಗೆ ಹೋಗುವುದಿದ್ದರೂ ನೀವೇ ಹೋಗಿಬನ್ನಿ ಎಂದು ಹೇಳಿಬಿಡುತ್ತಿದ್ದರು. ಮಕ್ಕಳ ಆಗುಹೋಗು, ಬೇಕು ಬೇಡಗಳನ್ನೆಲ್ಲ ಅನಿತಾ ಅವರೇ ನೋಡಿಕೊಳ್ಳುತ್ತಿದ್ದರು. ಆದರೆ, ಇಷ್ಟು ದೊಡ್ಡ ದೊಡ್ಡ ವ್ಯಕ್ತಿಗಳು ಸೇರಿರುವ ಜಾಗದಲ್ಲಿ ಅನಿತಾ ಸತ್ಯ ಹೇಳಿ ನನ್ನ ಮರ್ಯಾದೆ ಕಳೆಯಲಿಕ್ಕಿಲ್ಲ ಎಂದು ವಿಶ್ವನಾಥ್ ಅಂದುಕೊಂಡರು.
ಆದರೆ, ವಿಶ್ವನಾಥ್ ಅವರ ಎಲ್ಲ ನಿರೀಕ್ಷೆಗಳನ್ನು ಮೀರಿ ಅನಿತಾ ಸತ್ಯವನ್ನೇ ಹೇಳಿಬಿಟ್ಟರು: ಇಲ್ಲ, ಅವರು ಯಾವತ್ತು ನನ್ನನ್ನು ಸಂತೋಷವಾಗಿಟ್ಟಿಲ್ಲ.!
ಅನಿತಾ ಮಾತು ಕೇಳುತ್ತಿದ್ದಂತೆಯೇ ಇಡೀ ಸಭಾಂಗಣ ಅದುರಿ ಹೋಯಿತು. ವಿಶ್ವನಾಥ್ ಕಳಾಹೀನವಾದರು. ಒಂದು ಕಂಪನಿಯನ್ನು ನಡೆಸುವ ಈ ವ್ಯಕ್ತಿ ತನ್ನ ಪತ್ನಿಯನ್ನೇ ಖುಷಿಯಾಗಿಟ್ಟಿಲ್ಲ ಎಂದರೆ ನನ್ನ ಮರ್ಯಾದೆಗೆ ಏನಾಗಬೇಡ ಎಂಬ ಬೇಸರವೊಂದು ಹಾದು ಹೋಯಿತು. `ಅಲ್ಲ ಇದು ನಿಜವೇ ಆಗಿದ್ದರೂ ಈ ವಿಷಯವನ್ನು ಇಲ್ಲಿ ಇಷ್ಟು ಜನರ ಮುಂದೆ ಇಷ್ಟು ಜೋರಾಗಿ ಹೇಳಬೇಕಾಗಿತ್ತಾ’ ಎಂದು ಹೆಚ್ಚಿನವರು ಅಂದುಕೊಂಡರು.
ಆಗ ಅನಿತಾ ಕುಳಿತಲ್ಲಿಂದ ಎದ್ದು ನಿಂತರು. `ನಾನು ಕೊಟ್ಟ ಉತ್ತರದಿಂದ ನೀವೆಲ್ಲ ಕಳವಳಗೊಂಡಿದ್ದೀರಿ ಎಂದು ಬಲ್ಲೆ. ಹೌದು.. ನಾನು ವಿಶ್ವನಾಥ್ ಅವರು ನನ್ನನ್ನು ಖುಷಿಯಾಗಿಟ್ಟಿಲ್ಲ ಎಂದು ಹೇಳಿದೆ. ಹಾಗಂತ ನಾನು ಖುಷಿಯಾಗಿಲ್ಲ ಎಂದು ಹೇಳಿಲ್ಲ. ನಾನು ನಿಜಕ್ಕೂ ತುಂಬ ಖುಷಿಯಾಗಿದ್ದೇನೆ. ನನ್ನದೇ ಆಯ್ಕೆಯಂತೆ ನಾನು ಖುಷಿಯಾಗಿದ್ದೇನೆ. ನಾನು ವಿಶ್ವನಾಥ್ ಎಂಬ ಸಾಧಕನ ಪತ್ನಿಯಾಗಿದ್ದೇನೆ ಎಂಬ ಕಾರಣಕ್ಕೆ ಖುಷಿಯಾಗಿದ್ದೇನೆ. ಒಬ್ಬ ಪ್ರಾಮಾಣಿಕ, ಬದ್ಧತೆಯಿಂದ ಕೂಡಿದ, ಬುದ್ಧಿವಂತ, ಒಳ್ಳೆಯ ಮನುಷ್ಯನ ಪತ್ನಿ ಎಂಬ ಹೆಮ್ಮೆಯಿಂದ ಖುಷಿಯಾಗಿದ್ದೇನೆ. ನಿಜವೆಂದರೆ ಈ ಏಣಿಯನ್ನು ಏರುವ ಭರದಲ್ಲಿ ಅವರಿಗೆ ನಮ್ಮೆಲ್ಲ ಚಟುವಟಿಕೆಗಳಲ್ಲಿ ಭಾಗಿಯಾಗಲು ಸಮಯವಿರಲಿಲ್ಲ. ಹಾಗಂತ ನಾನು ಅವರನ್ನು ಕಟ್ಟಿ ಹಾಕಿ, ಪ್ರತಿಯೊಂದು ಹಂತದಲ್ಲೂ ನೀವು ನಮ್ಮ ಜತೆಗೇ ಇರಬೇಕು ಎನ್ನುವ ಸ್ವಾರ್ಥ ತೋರಿಸಿದ್ದರೆ ಅವರು ಈ ಹಂತಕ್ಕೆ ಬರಲು ಕಷ್ಟವಾಗುತ್ತಿತ್ತು. ಅವರ ಎಲ್ಲ ಕೆಲಸಗಳಿಗೆ ನಾನು ಬೆಂಗಾವಲಾಗಿ ನಿಂತು ಸಂತೋಷಪಟ್ಟೆ. ಸಣ್ಣ ಸಣ್ಣ ವಿಷಯಗಳಿಗೆ ಯಾವತ್ತೂ ಬೇಜಾರು ಮಾಡಿಕೊಳ್ಳಲೇ ಇಲ್ಲ. ಹೀಗಾಗಿ ನಾನು ಸಂತೋಷವಾಗಿಯೇ ಇದ್ದೆ. ಸಂತೋಷ ಎಂದರೆ ಇನ್ನೊಬ್ಬರಿಂದ ನಾವು ಪಡೆಯುವ ಸಂಗತಿಯಲ್ಲ, ಇನ್ನೊಬ್ಬರ ಏಳಿಗೆಯಲ್ಲಿ ಕಾಣುವ ಖುಷಿಯೇ ನಿಜವಾದ ಸಂತೋಷ ಅನ್ನೋದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಐ ಯಾಮ್ ಪ್ರೌಡ್ ಟು ಬಿ ಮಿಸೆಸ್ ವಿಶ್ವನಾಥ್.
ದೂರದಲ್ಲಿ ನಿಂತಿದ್ದ ವಿಶ್ವನಾಥ್‍ಗೆ ಕಣ್ಣಂಚಿನ ಕಂಬನಿಯನ್ನು ತಡೆದುಕೊಳ್ಳಲು ಆಗಲೇ ಇಲ್ಲ.. ಈಗ ಬಂದೆ ಎನ್ನುತ್ತಾ ರೆಸ್ಟ್ ರೂಮ್ ಕಡೆಗೆ ನಿಧಾನವಾಗಿ ಹೆಜ್ಜೆ ಹಾಕಿದರು.
ಇದನ್ನೂ ಓದಿ | Motivational story | ಮಗನಿಗಾಗಿ ಕಾಯುತ್ತಿದ್ದ ಆ ವೃದ್ಧ ದಂಪತಿಯ ಕೈಲಿದ್ದ ಚೀಟಿ ನೋಡಿ ಚಾಯ್‌ವಾಲಾ ಬೆಚ್ಚಿಬಿದ್ದ!