ಕೃಷ್ಣ ಭಟ್ ಅಳದಂಗಡಿ – Motivational story
ವಿಶ್ವನಾಥ ರಾಯರು ಕಂದಾಯ ಇಲಾಖೆಯಲ್ಲಿ ಅಧಿಕಾರಿಯಾಗಿ ನಿವೃತ್ತರಾದವರು. ಜೀವನದ ಕೊನೆಯ ಕ್ಷಣ ಹತ್ತಿರ ಬಂದಾಗ ಬೆಡ್‍ನಲ್ಲಿ ಮಲಗಿದಲ್ಲಿಂದಲೇ ತನ್ನ ಮಕ್ಕಳನ್ನು ಹತ್ತಿರ ಕರೆದರು. `ʻʻನೋಡಿ ಮಕ್ಕಳೇ ನನ್ನ ಬದುಕು ಕೊನೆಯಾಗುವ ಹಂತ ಬಂದಿದೆ. ನಾನು ನಿಮಗೇನೂ ಆಸ್ತಿ ಮಾಡಿಕೊಟ್ಟಿಲ್ಲ. ಆದರೆ, ಒಳ್ಳೆ ವಿದ್ಯಾಭ್ಯಾಸ ಕೊಟ್ಟಿದ್ದೇನೆ. ನನ್ನ ಹಾಗೇ ಪ್ರಾಮಾಣಿಕವಾಗಿ ಕೆಲಸ ಮಾಡಿ. ಇದರಿಂದ ಜೀವನದಲ್ಲಿ ನೆಮ್ಮದಿ ಸಿಗುತ್ತದೆ,” ಎಂದು ಹೇಳಿದರು.
ಅಪ್ಪನ ಮಾತು ಕೇಳಿದ ಕಿರಿಮಗಳು ದಿವ್ಯಾಳಿಗೆ ಆ ಕ್ಷಣದಲ್ಲೂ ಸಿಟ್ಟುಬಂತು. ಆಕೆ ಸಿಟ್ಟಿನಿಂದಲೇ ಹೇಳಿದಳು: ನಿಮ್ಮ ಅಗಲಿಕೆಯ ಬೇಸರ ಖಂಡಿತಾ ಇದೆ ಅಪ್ಪ. ಆದರೆ, ನೀವು ಪ್ರಾಮಾಣಿಕತೆ ಹೆಸರಲ್ಲಿ ನಮಗೆ ಮಾಡಿದ ಮೋಸದ ಬಗ್ಗೆ ಬೇಸರವಿದೆ. ನಿಮ್ಮದೇ ಇಲಾಖೆಯ ಕಿರಿಯ ಕೆಲಸಗಾರರು ಕೂಡಾ ತಮ್ಮ ಮಕ್ಕಳನ್ನು ಎಷ್ಟು ಚೆನ್ನಾಗಿ ನೋಡಿಕೊಂಡಿದ್ದಾರೆ, ಆಸ್ತಿಯನ್ನೂ ಮಾಡಿಕೊಟ್ಟಿದ್ದಾರೆ ಎನ್ನುವುದು ನಿಮಗೂ ಗೊತ್ತು. ನಾವು ಈಗಲೂ ಬಾಡಿಗೆ ಮನೆಯಲ್ಲೇ ಇದ್ದೇವೆ. ನಿಮಗೆ ಮಕ್ಕಳ ಬಗ್ಗೆ ಕಾಳಜಿ ಇದ್ದಿದ್ದರೆ ಹೀಗೆ ಮಾಡುತ್ತಿದ್ದಿರಾ? ಈ ಹೊತ್ತಲ್ಲೂ ಪ್ರಾಮಾಣಿಕವಾಗಿರಿ ಎಂದೇ ಹೇಳುತ್ತಿದ್ದೀರಿ. ನಾವೇನು ಕಳ್ಳರಾಗ್ತೀವಾ? ಪ್ರಾಮಾಣಿಕರಾಗೇ ಇರ್ತೇವೆ. ಆದರೆ, ಮಕ್ಕಳಿಗೆ ಒಂದು ಒಳ್ಳೆ ಊಟ ಕೊಡಿಸದೆ ಪ್ರಾಮಾಣಿಕತೆ ಹೆಸರಲ್ಲಿ ಮೋಸ ಮಾಡುವುದಿಲ್ಲ” ಎಂದು ತನ್ನ ನೋವು ಹೊರಹಾಕಿದಳು.
ಇದಾಗಿ ಸ್ವಲ್ಪ ಹೊತ್ತಿನಲ್ಲಿ ವಿಶ್ವನಾಥ ರಾಯರು ಕಣ್ಮುಚ್ಚಿದರು.
ಇದಾಗಿ ಕೆಲವು ವರ್ಷದ ಬಳಿಕ ದಿವ್ಯಾಳ ಕಲಿಕೆ ಮುಗಿದು ಒಂದು ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗಕ್ಕೆ ಆಹ್ವಾನ ಬಂತು. ಆಕೆ ಸಂದರ್ಶನಕ್ಕೆ ಹೋದಳು.
ಸಂದರ್ಶನ ನಡೆಸುತ್ತಿದ್ದ ವ್ಯಕ್ತಿ ಎದುರು ಕುಳಿತ ಯುವತಿಯ ಹೆಸರು ಓದಿದರು: ದಿವ್ಯಾ ವಿಶ್ವನಾಥ ರಾವ್.
ಎಲ್ಲೋ ಕೇಳಿದ ಹಾಗಿದೆಯಲ್ಲಾ ಅನಿಸಿ, ವಿಶ್ವನಾಥ ರಾವ್ ಏನಾಗಿದ್ದರು ಎಂದು ಕೇಳಿದರು. ಆಗ ದಿವ್ಯಾ, ಕಂದಾಯ ಇಲಾಖೆಯಲ್ಲಿ ಅಧಿಕಾರಿಯಾಗಿದ್ದರು ಸರ್ ಎಂದಳು.
ಆಗ ಆ ವ್ಯಕ್ತಿ, ʻʻಓ ದೇವರೇ ನೀವು ನಮ್ಮ ವಿಶ್ವನಾಥ ರಾವ್ ಸರ್ ಮಗಳಾʼʼ ಎಂದು ಅಚ್ಚರಿಯಿಂದ ಕೇಳಿದರು. ಪಕ್ಕದಲ್ಲಿದ್ದ ಇತರ ಸಂದರ್ಶಕರ ಕಡೆಗೆ ತಿರುಗಿ,`ʻʻನಾನು ಇವತ್ತು ಈ ಹುದ್ದೆಯಲ್ಲಿ ಇರಲಿಕ್ಕೆ ಕಾರಣ ವಿಶ್ವನಾಥ ರಾಯರು. ಲೈಬ್ರರಿಯಲ್ಲಿ ಸಿಕ್ತಾ ಇದ್ದರು. ಚೆನ್ನಾಗಿ ಕಲೀಬೇಕು ಅಂತ ಹೇಳುತ್ತಿದ್ದರು. ನನಗೆ ಆಡಳಿತಾತ್ಮಕ ಅಧ್ಯಯನ ಕಲಿಕೆಗೆ ಪ್ರವೇಶ ಸಿಕ್ಕಿದ್ದೇ ಅವರ ಶಿಫಾರಸಿನಿಂದ. ಉದ್ಯೋಗಕ್ಕೂ ಅವರ ರೆಕಮಂಡೇಷನೇ ಕಾರಣ. ನಿಜ ಹೇಳಬೇಕು ಅಂದರೆ ಅವರು ನನಗೆ ಲೈಬ್ರರಿಯಲ್ಲಷ್ಟೇ ಪರಿಚಯ. ನಾನು ಯಾರು, ಹಿನ್ನೆಲೆ ಏನು? ಮುಂದೇನಾದೆ ಎಂದು ಎಂದೂ ಕೇಳಲಿಲ್ಲ. ನನ್ನಂತೆ ಅದೆಷ್ಟು ಮಂದಿಯ ಬೆನ್ನು ತಟ್ಟಿದರೋ? ಗೊತ್ತಿಲ್ಲ. ನನಗೂ ಅವರನ್ನು ಭೇಟಿಯಾಗಲು ಅವಕಾಶ ಸಿಗಲೇ ಇಲ್ಲ. ಇವತ್ತು ಮಗಳು ಸಿಕ್ಕಿದಳು.. ಐ ಆಮ್ ಬ್ಲೆಸ್‍ಡ್ʼ ಎಂದರು.
ದಿವ್ಯಾಳತ್ತ ತಿರುಗಿ, ʻʻನಿನಗೆ ಯಾವ ಪ್ರಶ್ನೆಯೂ ಇಲ್ಲಮ್ಮ. ನಾಳೆ ಬಾ.. ಜಾಯಿನಿಂಗ್ ಲೆಟರ್ ತೆಗೆದುಕೊಂಡು ಹೋಗು. ಅದಕ್ಕಿಂತ ಮೊದಲು ನನಗೆ ಇವತ್ತು ನಿಮ್ಮಪ್ಪನನ್ನೊಮ್ಮೆ ತೋರಿಸ್ತೀಯಾ? ಒಮ್ಮೆ ಕಾಲಿಗೆ ನಮಸ್ಕಾರ ಮಾಡಿಬಿಡುತ್ತೇನೆ.” ಎಂದರು. ಆಗ ದಿವ್ಯಾ, ತಂದೆ ತೀರಿಕೊಂಡ ವಿಷಯ ತಿಳಿಸಿದಳು. `ʻʻಓ ಪರವಾಗಿಲ್ಲ. ಅವರ ಆಶೀರ್ವಾದ ನನ್ನ ಮೇಲೆ ಯಾವತ್ತು ಇರುತ್ತದೆ. ನನ್ನದೊಂದೇ ರಿಕ್ವೆಸ್ಟ್ ದಿವ್ಯಾ.. ನೀನೂ ಅವರಂತೆ ಬಾಳಿದರೆ ಸಾಕು,” ಎಂದರು. ದಿವ್ಯಾ ತಲೆಯಾಡಿಸಿದಳು.
ದಿವ್ಯಾಗೆ ಕಂಪನಿಯಲ್ಲಿ ಕಾರ್ಪೊರೇಟ್ ಅಫೇರ್ಸ್ ಮ್ಯಾನೇಜರ್ ಸಿಕ್ಕಿತು. ದೊಡ್ಡ ಮನೆ, ಕಾರು, ಡ್ರೈವರು, ಆಳು ಕಾಳು ಎಲ್ಲ. ಎರಡು ವರ್ಷ ಕಳೆದ ಬಳಿಕ ಕಂಪನಿಯ ಎಂ ಡಿ ತಾನು ಹುದ್ದೆಗೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದರು. ಅಷ್ಟು ಹೊತ್ತಿಗೆ ದಿವ್ಯಾ ಒಳ್ಳೆಯ, ಪ್ರಾಮಾಣಿಕ ಆಡಳಿತಗಾರ್ತಿ ಎಂಬ ಹೆಸರು ಪಡೆದಿದ್ದರು. ಕಂಪನಿ ಆಕೆಯ ಹೆಸರನ್ನೇ ಈ ಹುದ್ದೆಗೆ ನಾಮಕರಣ ಮಾಡಿತು.
ಅಧಿಕಾರ ವಹಿಸಿಕೊಂಡ ದಿನ ಎಲ್ಲರೂ ಆಕೆಯನ್ನು ಅಭಿನಂದಿಸಿದರು. ನಡುವೆ ಒಬ್ಬರು ಕೇಳಿದರು: ಸಣ್ಣ ವಯಸ್ಸಿನಲ್ಲಿ ಇಷ್ಟು ದೊಡ್ಡ ಸಾಧನೆ ಮಾಡುವುದು ಹೇಗೆ ಸಾಧ್ಯವಾಯಿತು ಮೇಡಂ.
ಆಗ ದಿವ್ಯಾ: ಇದನ್ನೆಲ್ಲ ಕಲಿಸಿದ್ದು ನನ್ನ ತಂದೆ ವಿಶ್ವನಾಥ ರಾವ್. ಈ ಶಿಸ್ತು, ಪ್ರಾಮಾಣಿಕತೆಗಳು ಅವರು ಕೊಟ್ಟ ಬಳುವಳಿ. ಈ ಹುದ್ದೆ ಅವರು ಕೊಟ್ಟ ಭಿಕ್ಷೆ- ಎಂದು ಹೇಳುತ್ತಾ ಕಣ್ಣೀರಾದಳು.
ಆಗ ಉಳಿದವರು ಹೇಳಿದರು: ಓಕೆ ಮೇಡಂ.. ಈಗ ಕಣ್ಣೀರಾಗುತ್ತಿರುವುದು ಯಾಕೆ?
ದಿವ್ಯಾ ಹೇಳಿದಳು: ಅಪ್ಪ ಬದುಕಿದ್ದಾಗ ಅವರ ಮೌಲ್ಯ ನಮಗೆ ಗೊತ್ತಿರಲಿಲ್ಲ. ಉಳಿದವರೆಲ್ಲ ದುಡ್ಡು ಮಾಡಿದ್ದಾರೆ, ಬಂಗಲೆ ಕಟ್ಟಿದ್ದಾರೆ. ಒಬ್ಬ ಅಧಿಕಾರಿಯಾಗಿದ್ದರೂ ನಮಗೆ ಹೊತ್ತಿನ ಊಟಕ್ಕೂ ಕಷ್ಟ ಎನ್ನುವ ಪರಿಸ್ಥಿತಿಗೆ ತಂದಿಟ್ಟಿದ್ದಾರೆ ಎಂಬ ಸಿಟ್ಟಿತ್ತು. ಅವರ ಪ್ರಾಮಾಣಿಕ ಸೇವೆ, ದಾನ, ಭೋಳೇತನಗಳ ಬಗ್ಗೆ ಆಕ್ರೋಶವಿತ್ತು. ಇದೇ ಕಾರಣಕ್ಕೆ ಅವರ ಸಾಯುವ ಸಂದರ್ಭದಲ್ಲೂ ನಾನೊಂದು ಒಳ್ಳೆ ಮಾತು ಹೇಳಲಿಲ್ಲ. ಆದರೆ, ಈಗ ಅಪ್ಪನ ಆಸ್ತಿ ಏನು ಎನ್ನುವುದು ಗೊತ್ತಾಗುತ್ತಿದೆ. ಸ್ಸಾರಿ ಅಪ್ಪ….
ದಿವ್ಯಾ ಉಕ್ಕಿ ಬರುತ್ತಿದ್ದ ಅಳುವನ್ನು ನಿಯಂತ್ರಿಸಿಕೊಂಡಳು. ನೆರೆದಿದ್ದವರ ಕಣ್ಣಾಲಿಗಳು ತುಂಬಿಕೊಳ್ಳತೊಡಗಿದವು.
ಇದನ್ನೂ ಓದಿ| Motivational story | ಅಪಮಾನಗಳಿಗೆ ಜಗ್ಗದಿರು ಮಗಳೇ, ಎದ್ದು ಕುಣಿಯುತ್ತಿರು…