ಕೃಷ್ಣ ಭಟ್ ಅಳದಂಗಡಿ-Motivational story
ನೀತಾ ಆಗಷ್ಟೇ ಮದುವೆಯಾಗಿ ಗಂಡನ ಮನೆಗೆ ಬಂದಿದ್ದಳು. ತಲೆಯಲ್ಲಿ ಸಾವಿರ ಸಾವಿರ ಕನಸಿತ್ತು. ಮನೆಯಲ್ಲಿ ಗಂಡ ಮತ್ತು ಅವನ ತಾಯಿ ಇದ್ರು. ಆರಂಭದಲ್ಲಿ ಚೆನ್ನಾಗೇ ಇತ್ತು. ಕೆಲವು ದಿನ ಕಳೆದ ಮೇಲೆ ಅತ್ತೆ ಜತೆ ಸರಿ ಹೋಗಲ್ಲ ಅನಿಸಿತು. ನೀತಾ ತುಂಬ ಮಾಡರ್ನ್ ಆದ್ರೆ ಅತ್ತೆ ಸಂಪ್ರದಾಯವಾದಿ. ಹೀಗಾಗಿ ಅತ್ತೆ ಏನು ಹೇಳಿದ್ರೂ ಅದನ್ನು ಒಪ್ಪಲು ನೀತಾಗೆ ಸಾಧ್ಯವಾಗುತ್ತಿರಲಿಲ್ಲ.
ಹೀಗಾಗಿ ಇಬ್ಬರ ಮಧ್ಯೆ ಸಣ್ಣ ಪುಟ್ಟ ವಿಷಯಗಳಿಗೆ ಜಗಳ ಆಗೋದು ಕಾಯಂ ಆಯಿತು. ನೀತಾಗಂತೂ ಅತ್ತೆಯನ್ನು ಕಂಡರೆ ಮೈಯೆಲ್ಲ ಉರಿಯೋಕೆ ಶುರುವಾಯಿತು. ಮನೆ ಬೇರೆ ಮಾಡೋಣವೆಂದರೆ ಅತ್ತೆಯನ್ನು ಒಬ್ಬರನ್ನೇ ಬಿಟ್ಟು ಹೋಗುವುದು ಹೇಗೆ ಎಂಬ ಪ್ರಶ್ನೆ ಎದುರಾಯಿತು.
ಅದೊಂದು ದಿನ ಜಗಳದ ವೇಳೆ ಗಂಡ ಅಮ್ಮನ ಪರ ನಿಂತಾಗ ನೀತಾ *ಇನ್ನು ಸಾಧ್ಯವೇ ಇಲ್ಲ* ಎಂದು ಸಿಟ್ಟಿನಲ್ಲಿ ತವರು ಮನೆಗೆ ಹೋಗೇ ಬಿಟ್ಟಳು.
ನೀತಾಳ ತಂದೆ ಒಬ್ಬ ಕೆಮಿಸ್ಟ್. ಅವರಿಗೆ ಎಲ್ಲ ವಿಷಯ ತಿಳಿಸಿದ ನೀತಾ *ಅತ್ತೆಯನ್ನು ಸಾಯಿಸಲು ಒಂದು ಒಳ್ಳೆ ವಿಷ ಕೊಡಿ* ಎಂದು ತಂದೆಯನ್ನು ಕೇಳಿದಳು. ತಂದೆ ಎಷ್ಟು ಬುದ್ಧಿಮಾತು ಹೇಳಿದರೂ ಕೇಳಲಿಲ್ಲ. *ಜೈಲಿಗೆ ಹೋಗ್ತೀಯಾ ಮಗಳೇ* ಅಂತಂದರೂ ಒಪ್ಪಲಿಲ್ಲ.
ಕೊನೆಗೆ ಅಪ್ಪ ಹೇಳಿದ್ರು: ಮಗಳೇ ಒಂದು ಉಪಾಯ ಮಾಡೋಣ. ಒಮ್ಮೆಗೇ ಕೊಂದರೆ ನಿನ್ನ ಬದುಕೂ ಹಾಳಾಗ್ತದೆ. ನಾನೂ ಜೈಲು ಸೇರಬೇಕಾದೀತು. ಹಾಗಾಗಿ ಸ್ವಲ್ಪ ಸ್ವಲ್ಪ ವಿಷ ಕೊಟ್ಟು ಸಾಯಿಸುವ. ಆಗ ಅವರಿಗೆ ಸಾವೂ ಬರ್ತದೆ. ಅದಕ್ಕೆ ನೀನು ಕಾರಣ ಅಂತ ಯಾರಿಗೂ ಗೊತ್ತಾಗಲ್ಲ.
ಅಪ್ಪ ಮುಂದುವರಿಸಿದರು: ನಾನೊಂದು ಪೌಡರ್ ಕೊಡುತ್ತೇನೆ. ಅದನ್ನು ಪ್ರತಿ ಹೊತ್ತೂ ಅತ್ತೆ ತಿನ್ನುವ ಆಹಾರಕ್ಕೆ ಬೆರೆಸಿ ಕೊಡಬೇಕು. ತುಂಬ ಕಡಿಮೆ ಪ್ರಮಾಣ ಹಾಕುವುದರಿಂದ ಅತ್ತೆ ಸಾಯಲು ಕೆಲವು ತಿಂಗಳಾದರೂ ಬೇಕಾದೀತು. ಜನರು ಸಹಜ ಸಾವೆಂದೇ ತಿಳೀತಾರೆ. ನೀನೂ ಸಿಕ್ಕಿ ಹಾಕಿಕೊಳ್ಳಲ್ಲ. ಇನ್ನೊಂದು ವಿಷಯ ಮಗಳೇ, ಏನೇ ಆದರೂ ನಿನ್ನ ಮೇಲೆ ಸಂಶಯ ಬರಬಾರದು. ಹಾಗಾಗಿ ನೀನು ಇರುವಷ್ಟು ದಿನ ಅತ್ತೆ ಜತೆ ಚೆನ್ನಾಗಿ ಇರುವಂತೆ ನಟಿಸಬೇಕು. ನಿಂಗೆ ಕಷ್ಟ ಆದೀತು. ಆದ್ರೂ ಸ್ವಲ್ಪ ಕರುಣೆ ತೋರೋ ತರ ಇರು.
ಕೆಲವು ತಿಂಗಳಲ್ವಾ ಹೇಗಾದ್ರೂ ಮ್ಯಾನೇಜ್ ಮಾಡೋದು ಅಂತ ನೀತಾ ಅಪ್ಪನ ಷರತ್ತು ಒಪ್ಪಿಕೊಂಡಳು. ಅತ್ತೆ ಮನೆಗೆ ಮರಳಿದಳು. ಪ್ರತಿ ದಿನವೂ ಊಟಕ್ಕೆ ಪೌಡರ್ ಬೆರೆಸಿದಳು. ಒಳಗೊಳಗೆ ಖುಷಿ!
ಅತ್ತೆ ಜಗಳಕ್ಕೆ ಇಳಿದರೂ ಅಪ್ಪನ ಸೂಚನೆಯಂತೆ ನೀತಾ ಮಾತ್ರ ಸಂಯಮದಿಂದಲೇ ಇದ್ದಳು. ಜಗಳ ಮಾಡಲಿಲ್ಲ.. *ಆಯ್ತತ್ತೆ* ಅಂತ ಹೇಳ್ತಾ ಇದ್ದಳು.
ಈ ನಡುವೆ ಸೊಸೆಯ ವರ್ತನೆ ಬದಲಾಗಿದ್ದು ನೋಡಿ ಅತ್ತೆಯೂ ಆಶ್ಚರ್ಯ ಪಟ್ಟರು. ಅವರೂ ಸೊಸೆಯ ರೀತಿಯೇ ಪ್ರೀತಿಯಿಂದ ಮಾತನಾಡಲು ಆರಂಭಿಸಿದರು. ಹೀಗೆ ಕೆಲವು ತಿಂಗಳು ಕಳೆದಾಗ ಅತ್ತೆ-ಸೊಸೆ ತಾಯಿ-ಮಗಳಂತೆ ಆಗಿ ಹೋಗಿದ್ದರು.
ಇನ್ನೊಂದು ಕಥೆ: Motivational story: ಕಿಟಕಿ ಆಚೆಗೆ ಇದ್ದದ್ದು ಕತ್ತಲೆ! ಆದರೆ, ಇವರಿಗೆ ಬೆಳಕು ತುಂಬಿತ್ತು!
ಈ ನಡುವೆ ಒಂದಿನ ನೀತಾಳಿಗೆ ತಾನು ಕೊಡ್ತಾ ಇರೋದು ವಿಷ ಅಂತ ನೆನಪಾಯಿತು.. ಅಯ್ಯೋ ಅತ್ತೆ ಸತ್ತೇ ಹೋಗ್ಬೋದಲ್ವಾಂತ ಭಯವಾಯಿತು..
ಕೂಡಲೇ ತವರು ಮನೆಗೆ ಓಡಿ ಹೋಗಿ ಅಪ್ಪನಲ್ಲಿ ಹೇಳಿದಳು: ಅಪ್ಪಾ ನೀವು ಕೊಟ್ಟ ವಿಷ ದಿನಾ ಕೊಡ್ತಾ ಇದ್ದೆ. ಅವರು ಯಾವಾಗ ಬೇಕಾದರೂ ಸಾಯಬಹುದು. ಆದ್ರೆ, ನನ್ನ ಅತ್ತೆ ಸಾಯಬಾರದು, ಏನಾದ್ರೂ ಮಾಡಿ ಅಂತ.
ಅಪ್ಪ ಹೇಳಿದ್ರು: ನಾನೆಲ್ಲಿ ವಿಷ ಕೊಟ್ಟೆ ಮಗಳೆ. ನಾನು ಕೊಟ್ಟಿದ್ದು ಸಕ್ಕರೆ..
ಅಪ್ಪನ ಮಾತು ಮುಂದುವರಿದಿತ್ತು: ಮಗಳೇ ನಿನ್ನ ಸಮಸ್ಯೆಯನ್ನು ಕೇಳಿ ನಾನು ವಿಷ ಕೊಡಬಹುದಿತ್ತು ಮಗಳೇ.. ಕೊಡಲಿಲ್ಲ ಯಾಕೆ ಗೊತ್ತಾ? ನಿನಗೂ ಒಬ್ಬ ಅಣ್ಣ ಇದಾನೆ. ಒಂದು ವೇಳೆ ಅವನ ಹೆಂಡತಿಯೂ ಸಿಟ್ಟು ಮಾಡಿಕೊಂಡು ಹೀಗೇ ನಿನ್ನಮ್ಮ ಮತ್ತು ನಂಗೆ ವಿಷ ಕೊಟ್ಟರೆ ಹೇಗಿದ್ದೀತು ಅಂತ ಯೋಚಿಸಿಯೇ ಕಂಪಿಸಿದೆ ಮಗಳೇ.
ಮಗಳು ಜೋರಾಗಿ ಅಳುತ್ತಾ ಅಪ್ಪನನ್ನು ಅಪ್ಪಿಕೊಂಡಳು.
ಇನ್ನೊಂದು ಕಥೆ| motivational story: ನಾವಾಡಿದ ಮಾತೇ ನಮಗೆ ತಿರುಗಿ ಕೇಳೋದು ಮಗಾ..!