Site icon Vistara News

Motivational story : ಇನ್ನೊಂದು ಐದು ನಿಮಿಷ, ಐದೇ ನಿಮಿಷ.. ಪ್ಲೀಸ್‌ ಅಪ್ಪ!

motivational story

ಕೃಷ್ಣ ಭಟ್‌ ಅಳದಂಗಡಿ | Motivational story
ಬೆಳಗಿನ ಹೊತ್ತು. ಬೆಂಗಳೂರಿನಲ್ಲಿ ಯಾವತ್ತೂ ಇರುವ ಹಾಗೇ ಚುಮುಚುಮು ಚಳಿ. ಶ್ರೀಹರಿ ಬ್ಲಾಂಕೆಟ್‍ನ್ನು ಮೆಲ್ಲಗೆ ಸರಿಸಿ ಎದ್ದ. ಪಕ್ಕದಲ್ಲೇ ಮಲಗಿದ್ದ ನಾಲ್ಕು ವರ್ಷದ ಪುಟ್ಟ ಮಗಳಿಗೆ ಎಚ್ಚರವಾಗದಿರಲಿ ಅಂತ ಬ್ಲಾಂಕೆಟ್‍ನ್ನು ಹಾಗೇ ಆಕೆಯ ಮೇಲೆ ಹಾಸಿದ. ಆದರೆ, ಅಷ್ಟು ಹೊತ್ತಿಗೆ ಚಿಂತನಾ ಕಣ್ಣುಬಿಟ್ಟು `ಅಪ್ಪಾ’ ಅಂತ ನಗುತ್ತಿದ್ದಳು. ಒಮ್ಮೆಗೇ ಎದ್ದು ಕೊರಳಿಗೆ ಜೋತುಬಿದ್ದಳು. ಇಬ್ಬರೂ ಹಲ್ಲುಜ್ಜಿ ಒಂದು ಚಹಾ ಕುಡಿಯುತ್ತಿದ್ದಂತೆಯೇ ಅವಳ ಎಂದಿನ ರಾಗದ ಧ್ವನಿ: ಪಾರ್ಕ್‍ಗೆ ಹೋಗೋಣ ಪ್ಲೀಸಪ್ಪಾ!

ಶ್ರೀಹರಿ ತಾನೂ ಹೊರಟು, ಅವಳನ್ನೂ ಹೊರಡಿಸಿ ಬೈಕ್ ಹತ್ತಿ ಸಮೀಪದಲ್ಲೇ ಇದ್ದ ಜಯನಗರ ಪಾರ್ಕ್ ಗೆ ಹೊರಟ. ಚಿಂತನಾಳಿಗೆ ಅಲ್ಲಿರುವ ಬೇರೆಲ್ಲಾ ಆಟದ ಸಲಕರಣೆಗಳಿಗಿಂತಲೂ ಬೈಕ್ ತುಂಬ ಇಷ್ಟ. ಪಾರ್ಕ್‍ನಲ್ಲಿ ತುಂಬ ಜನ ಏನೂ ಇರಲಿಲ್ಲ. ಓಡಿ ಹೋದವಳೇ ಬೈಕ್ ಹತ್ತಿ ಕೂತಳು. ಶ್ರೀಹರಿ ಸ್ವಲ್ಪ ದೂರದಲ್ಲಿದ್ದ ಬೆಂಚ್‍ನಲ್ಲಿ ಕುಳಿತು ಮಗಳು ಆಟವಾಡುವುದನ್ನೇ ನೋಡುತ್ತಿದ್ದ. ಒಂದರ್ಧ ಗಂಟೆ ಆಗಿರಬಹುದು. ಅಷ್ಟು ಹೊತ್ತಿಗೆ ಒಬ್ಬ ಮಹಿಳೆ ಬಂದು ಸ್ವಲ್ಪ ದೂರದಲ್ಲಿ ಕುಳಿತರು. ಮುಖ ನೋಡಿ ನಸು ನಕ್ಕ ಶ್ರೀಹರಿ. “ಅಲ್ಲಿ ಉಯ್ಯಾಲೆಯಲ್ಲಿ ಕೂತಿದ್ದಾನಲ್ಲ.. ಅವನು ನನ್ನ ಮಗ. ಬೆಳಗ್ಗೆ ಎದ್ದು ಪಾರ್ಕ್ ಗೆ ಹೋಗೋಣ ಅಂತ ಹಠ ಮಾಡ್ತಾನೆ,” ಅಂದರು. “ಮಕ್ಕಳಿಗೆ ಆಸೆ ಆಗ್ತದೆ ಪಾಪ.. ಅಲ್ಲಿ ನೋಡಿ ಬೈಕ್ ಮೇಲೆ ಕೂತಿದ್ದಾಳಲ್ಲಾ.. ಪಿಂಕ್ ಬಣ್ಣದ ಅಂಗಿ ಹಾಕಿದ್ದಾಳೆ.. ಅವಳು ನನ್ನ ಮಗಳು,” ಅಂದ ಶ್ರೀಹರಿ.

ಅಷ್ಟು ಹೊತ್ತಿಗೆ ಶ್ರೀಹರಿ ಮಗಳಿಗೆ ಕೇಳುವಂತೆ ಹೇಳಿದ: ಚಿಂತನಾ ಹೋಗೋಣ್ವಾ?

ಮಗಳು ಹೇಳಿದಳು: ಇರಪ್ಪಾ ಪ್ಲೀಸ್, ಇನ್ನೊಂದು ಐದೇ ನಿಮಿಷ.

ಶ್ರೀಹರಿ ನಕ್ಕು ಹೇಳಿದ: ಆಯ್ತು ಮಗಳೇ.

15 ನಿಮಿಷ ಕಳೆದು ಮತ್ತೊಮ್ಮೆ ನೆನಪಿಸಿದ. ಚಿಂತನಾ ಕೊರಳು ಕೊಂಕಿಸಿ ಹೇಳಿದಳು: ಅಪ್ಪಾ… ಇನ್ನು ಐದೇ ನಿಮಿಷ.

ಶ್ರೀಹರಿ `ತುಂಬ ಆಸೆನಾ ಮಗಳೇ.. ಆಡು ಪುಟ್ಟಾ’ ಅಂದ.. ಅವಳೋ ಖುಷಿಯಿಂದ ಕುಣೀತಾ ಇದ್ದಳು. ಹೀಗೆ ಹಲವು ಸಲ ಐದು ನಿಮಿಷದ ಆಟ ನಡೆಯಿತು.

ಪಕ್ಕದಲ್ಲಿದ್ದ ಮಹಿಳೆ ಹೇಳಿದರು: ನಿಮಗೆ ತುಂಬ ತಾಳ್ಮೆ ಸರ್. ಮಗಳು ಅಷ್ಟು ಸಾರಿ ಹೇಳಿದಾಗಲೂ ನೀವು ನಗುನಗುತ್ತಲೇ ಆಯ್ತು ಮಗಳೇ ಅನ್ನುತ್ತೀರಲ್ಲಾ.. ನಾನಾಗಿದ್ದರೆ ಇಷ್ಟು ಹೊತ್ತಿಗೆ ಬೈದು ಎಳ್ಕೊಂಡು ಹೋಗ್ತಿದ್ನೋ ಏನೋ.

ಶ್ರೀಹರಿ ನಿಧಾನವಾಗಿ ಹೇಳಿದ: ಚಿಂತನಳಿಗೊಬ್ಬ ಅಣ್ಣ ಇದ್ದ ಮೇಡಂ.. ಅವನನ್ನು ಯಾವಾಗಲಾದರೊಮ್ಮೆ ಇಲ್ಲಿಗೆ ಕರ್ಕೊಂಡು ಬರ್ತಿದ್ದೆ. ಅವನೂ ಇದೇ ತರ ಐದು ನಿಮಿಷ ಅಂತಿದ್ದ. ಆದರೆ, ನಾನು ಅದಕ್ಕೆಲ್ಲ ಅವಕಾಶ ಕೊಡದೆ ಎಳ್ಕೊಂಡು ಹೋಗ್ತಿದ್ದೆ. ತುಂಬ ಬೇಜಾರು ಮಾಡ್ತಿದ್ದ. ಒಂದು ಸಾರಿ ಹೀಗೆ ಮರಳಿ ಹೋಗುವಾಗ ಒಬ್ಬ ಕುಡುಕ ಬೈಕನ್ನು ಮಗುವಿಗೆ ಡಿಕ್ಕಿಹೊಡೆಸಿದ. ಮಗು ಬದುಕುಳಿಯಲಿಲ್ಲ. ನಾನು ಆಫೀಸು, ಒತ್ತಡ ಅಂತೆಲ್ಲ ಮಗುವಿಗೆ ಸಮಯವನ್ನೇ ಕೊಡದೆ ನೋವುಂಟು ಮಾಡಿದೆ ಅನಿಸ್ತಾ ಇತ್ತು. ಎಲ್ಲಕ್ಕಿಂತ ಹೆಚ್ಚಾಗಿ ನಾನು ಮಕ್ಕಳ ಜತೆ ಕಳೆಯಲೇ ಇಲ್ಲ. ಅದೇ ತಪ್ಪನ್ನು ಚಿಂತನಾ ವಿಷಯದಲ್ಲಿ ಮಾಡಬಾರದು ಅಂತ ತೀರ್ಮಾನ ಮಾಡಿದ್ದೇನೆ ಮೇಡಂ.

ಮೇಡಂ ನಿಮಗೆ ನಾನು ಅವಳಿಗೆ ಸಮಯ ಕೊಡ್ತಿದ್ದೇನೆ ಅಂತ ಕಾಣಿಸಬಹುದು. ಆದರೆ, ಅವಳು ಐದು ನಿಮಿಷ ಅಪ್ಪಾ ಅನ್ನೋದು, ನಾನು ಆಯ್ತು ಮಗಳೇ ಅನ್ನೋದು ಎಷ್ಟೊಂದು ಸುಖ ಕೊಡುತ್ತೆ ಗೊತ್ತಾ ಮೇಡಂ. ಅವಳು ಐದು ನಿಮಿಷ ಆಡೋದಕ್ಕಿಂತಲೂ ಅಷ್ಟು ಹೊತ್ತು ಅವಳು ಖುಷಿಯಿಂದ ಆಡೋದನ್ನು ನೋಡೋದಕ್ಕೆ ಸಿಗುತ್ತಲ್ವಾ ನಂಗೆ?

ಮಹಿಳೆ ಏನೋ ಹೇಳಲು ಹೋದರು. ಆದರೆ, ಗದ್ಗದ ಕಂಠ, ಉಕ್ಕಿ ಬರುತ್ತಿದ್ದ ಅಳು ತಡೆಯಲಾಗಲಿಲ್ಲ. ಅಷ್ಟು ಹೊತ್ತಿಗೆ ಚಿಂತನಾ ಓಡೋಡಿ ಬಂದು ಅಪ್ಪನ ಕೊರಳಿಗೆ ಜೋತುಬಿದ್ದಳು.

ಇದನ್ನೂ ಓದಿ| Motivational Story: ವಾಹನಗಳಲ್ಲಿ ಬ್ರೇಕ್ ಇರುವುದು ನಿಲ್ಲಿಸುವುದಕ್ಕಲ್ಲ!

Exit mobile version