ಕೃಷ್ಣ ಭಟ್ ಅಳದಂಗಡಿ-Motivational story
ಆವತ್ತು ಅವರ ಮದುವೆ ಆನಿವರ್ಸರಿ. ಆರಂಭದ ಕೆಲವು ವರ್ಷಗಳಲ್ಲಿ ಅದೊಂದು ಖುಷಿಯ ಹಬ್ಬವೇ ಆಗಿತ್ತು. ಮುಂದೆ ಯಾವ್ಯಾವುದೋ ಕಾರಣಕ್ಕೆ ಸಿಟ್ಟು, ಜಗಳಗಳ ನಡುವೆ ಅದಕ್ಕೆ ಅರ್ಥವೇ ಇಲ್ಲ ಎಂಬಂತಾಗಿತ್ತು. ಆನಿವರ್ಸರಿ ನೆನಪಿಟ್ಟುಕೊಳ್ಳದ ಕಾರಣಕ್ಕಾಗಿಯೇ ಶರಂಪರ ಜಗಳ ಮಾಡಿದ್ದಳು ಅವಳು.
ವಿಶ್ವನಾಥ್ ಬೆಳಗ್ಗೆ ಎದ್ದು ಆಫೀಸಿಗೆ ಹೋಗಿದ್ದ. ವಿಶ್ ಮಾಡಿರಲಿಲ್ಲ. ಸಂಜೆ ಬಂದ ಮೇಲಾದರೂ ವಿಶ್ ಮಾಡುತ್ತಾರಾ ನೋಡಬೇಕು ಅಂತ ಪ್ರತಿಮಾ ಕಾಯುತ್ತಿದ್ದಳು. ಅಷ್ಟು ಹೊತ್ತಿಗೆ ಬಾಗಿಲು ಬಡಿದ ಸದ್ದು. ತೆರೆದರೆ ಎದುರಲ್ಲಿ ವಿಶ್ವನಾಥ್. ಕೈಯಲ್ಲಿ ಹೂವಿನ ಬೊಕ್ಕೆ.`ʻಪ್ರತಿ ಸಾರಿ ಮರ್ತು ಹೋಗ್ತಿತ್ತು. ಇವತ್ತು ನೆನಪಿಟ್ಟು ತಂದಿದ್ದೇನೆ. ಸುಮ್ಮ ಸುಮ್ಮನೆ ಜಗಳ ಮಾಡ್ಕೊಂಡಿರುವುದು ಯಾಕಲ್ವಾ’ ಅಂತ ಹೇಳುತ್ತಾ ಪ್ರತಿಮಾಳನ್ನು ಬಳಸಿ ಹಣೆಗೆ ಮುತ್ತಿಟ್ಟ.
ಮೊಬೈಲನ್ನು ಟೀಪಾಯ್ ಮೇಲಿಟ್ಟು ಡ್ರೆಸ್ ಚೇಂಜ್ ಮಾಡಲೆಂದು ಬೆಡ್ ರೂಂಗೆ ಹೋದ. ಅಷ್ಟು ಹೊತ್ತಿಗೆ ಅವನ ಮೊಬೈಲ್ ರಿಂಗಾಯಿತು.
ʻಹಲೋ.. ನೀವು ವಿಶ್ವನಾಥ್ ಅವರಿಗೆ ಸಂಬಂಧಪಟ್ಟವರಾ?’- ಆ ಕಡೆಯಿಂದ ಕೇಳಿತು. `ʻಹೌದು.. ನಾನು ಅವರ ಹೆಂಡತಿ. ಏನು ಹೇಳಿ’ ಎಂದಳು ಪ್ರತಿಮಾ. `ʻಇದು ಪೊಲೀಸ್ ಸ್ಟೇಷನ್‍ನಿಂದ ಮಾತಾಡ್ತಿರುವುದು. ಕ್ಷಮಿಸಿ ಮೇಡಂ ನಿಮ್ಮ ಪತಿ ಅಪಘಾತದಲ್ಲಿ ತೀರಿಕೊಂಡಿದ್ದಾರೆ. ಬಸ್ಸಿನಿಂದ ಇಳಿಯುವಾಗ ಆಯತಪ್ಪಿ ಚಕ್ರದಡಿ ಬಿದ್ದು ಡೆತ್ ಆಗಿದೆ. ಅವರ ವ್ಯಾಲೆಟ್‍ನಲ್ಲಿ ಈ ನಂಬರ್ ಇತ್ತು. ದಯವಿಟ್ಟು ಬಂದು ಬಾಡಿ ಐಡೆಂಟಿಫೈ ಮಾಡ್ತೀರಾ?’ ಎಂದು ಕೇಳಿತು.
ʻಅಯ್ಯೋ ಇಲ್ವಲ್ಲಾ.. ಅವರು ಇಲ್ಲೇ ಇದ್ದಾರೆ..’ ಅನ್ನುತ್ತಾ ಪ್ರತಿಮಾ `ರೀ ಎಲ್ಲಿದ್ದೀರಿ’ ಎಂದು ಕೂಗಿದಳು. ಉತ್ತರ ಇಲ್ಲ. ಬೆಡ್ ರೂಮಿಗೆ ಓಡಿದಳು. ಅಲ್ಲಿಲ್ಲ. ಕಿಚನ್, ಬಾಲ್ಕನಿ, ಹೊರಗೆ ಅಲ್ಲಿ ಇಲ್ಲಿ… ಎಲ್ಲೂ ಇಲ್ಲ.
ತಲೆಯಲ್ಲಿ ನೂರು ಆಲೋಚನೆಗಳು. ದೆವ್ವದ ಕಥೆಗಳನ್ನು ಕೇಳಿದ್ದ ಅವಳಿಗೆ ಆತ್ಮ ಕೊನೆಯ ಪಯಣಕ್ಕೆ ಮುನ್ನ ಪ್ರೀತಿಪಾತ್ರರನ್ನು ಭೇಟಿ ಮಾಡುತ್ತದಂತೆ, ಹಾಗಾಗಿರಬಹುದಾ? ಎಂಬೆಲ್ಲ ಯೋಚನೆ ಬಂತು.
ʻಅಯ್ಯೋ ದೇವ್ರೆ.. ಇಷ್ಟು ವರ್ಷದಲ್ಲಿ ಅದೆಷ್ಟು ಸಾರಿ ಸುಮ್ಮ ಸುಮ್ಮನೆ ಜಗಳ ಮಾಡಿದ್ದೇನೆ. ಕಿರಿಕಿರಿ ಮಾಡಿದ್ದೇನೆ. ಆನಿವರ್ಸರಿಗಳನ್ನು, ಬರ್ತ್ ಡೇಗಳನ್ನು ನಾನೇ ನೆನಪಿಸಬೇಕಾಗಿತ್ತು. ಆದರೂ ಅವರೇ ನೆನಪು ಮಾಡಿಕೊಂಡು ವಿಶ್ ಮಾಡಬೇಕು ಎಂಬ ಹಠದಲ್ಲಿ ಜಗಳ ಮಾಡಿದ್ದೇನೆ. ಇವತ್ತು ಅವರೇ ನೆನಪಿಸಿಕೊಂಡು ಬಂದು ವಿಶ್ ಮಾಡಿದ್ದಾರೆ. ಅಷ್ಟೊಂದು ಪ್ರೀತಿ ತೋರಿದ್ದಾರೆ. ಆದರೆ, ಇಂಥ ಹೊತ್ತಲ್ಲಿ ಹೀಗಾಗಿ ಹೋಯಿತೇ.. ದೇವ್ರೆ’ ಅಂತ ಹೇಳುತ್ತಲೇ ಕುಸಿದು ಬಿದ್ದಳು ಪ್ರತಿಮಾ.
ಅಷ್ಟು ಹೊತ್ತಿಗೆ ವಾಶ್ ರೂಮಿನಿಂದ ಹೊರಬಂದ ವಿಶ್ವನಾಥ್!
ಹೆಂಡತಿ ನೆಲದ ಮೇಲೆ ಬಿದ್ದಿರುವುದನ್ನು ನೋಡಿ ಕೂಡಲೇ ನೀರು ಚಿಮುಕಿಸಿದ. ತಲೆಯನ್ನು ಕಾಲ ಮೇಲೆ ಇಟ್ಟುಕೊಂಡು ಗಾಳಿ ಬೀಸಿದ. ಪ್ರತಿಮಾ ಎಚ್ಚರಗೊಂಡು ನೋಡಿದಾಗ ಮತ್ತೊಮ್ಮೆ ಬೆಚ್ಚಿಬಿದ್ದಳು.
ʻಏನ್ರೀ ಇದು.. ಯಾವುದು ನಿಜ’ ಅಂತ ಕೇಳುತ್ತಾ ಫೋನ್ ಬಂದ ವಿಷಯ ತಿಳಿಸಿದಳು. ʻʻಅಯ್ಯೋ ಅದಾ.. ನಾನು ನಿಂಗೆ ಹೇಳುವುದನ್ನೇ ಮರೆತೆ. ಇವತ್ತು ಬಸ್ಸಿನಲ್ಲಿ ಹೋಗುತ್ತಿದ್ದಾಗ ನನ್ನ ವ್ಯಾಲೆಟ್ ಕಳೆದುಹೋಯಿತು,” ಅಂದ.
ಪ್ರತಿಮಾ ಗಂಡನನ್ನು ಇನ್ನಷ್ಟು ಗಟ್ಟಿಯಾಗಿ ತಬ್ಬಿಕೊಂಡಳು.
ಇದನ್ನೂ ಓದಿ | Motivational story | ಆ ಕೊನೆಯ ಕ್ಷಣದಲ್ಲಿ ವೃದ್ಧ ಜೀವಕ್ಕೊಬ್ಬ ಮಗ ಬೇಕಿತ್ತು.. ಇವನೇ ಮಗನಾದ!