ಕೃಷ್ಣ ಭಟ್ ಅಳದಂಗಡಿ- motivational story
ಆವತ್ತೊಂದು ದಿನ ಚಂದ್ರಿಕಾ ಮತ್ತು ಆರು ವರ್ಷದ ಪುಟ್ಟ ಮಗ ಮಾರ್ಕೆಟ್‍ಗೆ ಹೊರಟಿದ್ದರು. ಕೈಯಲ್ಲೆರಡು ಚೀಲವಿತ್ತು. ಆಗ ಪಕ್ಕದ ಮನೆಯ ಮಹಿಳೆ ಅವರನ್ನು ಅಡ್ಡಗಟ್ಟಿ ನಿಂತು ಬಾಯಿಗೆ ಬಂದಂತೆ ಬೈಯತೊಡಗಿದರು.
ಪಕ್ಕದ ಮನೆಯವರು ಅಂದ್ರೆ ಬೇರೆ ಯಾರೂ ಅಲ್ಲ…ಸಂಬಂಧಿಕರೇ. ಒಬ್ಬರೇ ತಂದೆಯ ಇಬ್ಬರು ಮಕ್ಕಳ ಮನೆ ಅಕ್ಕಪಕ್ಕದಲ್ಲೇ ಇತ್ತು. ಜಾಗ, ಹಣ, ಚಿನ್ನ ಎಲ್ಲವೂ ಪಾಲು ಮಾಡಲಾಗಿತ್ತು. ದೊಡ್ಡ ಅಣ್ಣನ ಮಕ್ಕಳಿಗೆ ಹೇಳಿಕೊಳ್ಳುವ ಕೆಲಸವೇನೂ ಇರಲಿಲ್ಲ. ಹಾಗಾಗಿ ಅವರ ಜೀವನ ಸಾಮಾನ್ಯ ಮಟ್ಟದಲ್ಲಿತ್ತು. ಸಣ್ಣವರ ಮಕ್ಕಳು ಒಳ್ಳೆಯ ಕೆಲಸದಲ್ಲಿ ಇದ್ದು, ಜೀವನ ಉತ್ತಮವಾಗಿತ್ತು. ಇದು ಆಗಾಗ ಜಗಳಕ್ಕೆ ಕಾರಣವಾಗುತ್ತಲೇ ಇತ್ತು.
ಮೊನ್ನೆ ಆಗಿದ್ದೂ ಹಾಗೇನೆ. ವರಸೆಯಲ್ಲಿ ಅಕ್ಕನೇ ಆಗುವ ಹೆಂಗಸು ಚಂದ್ರಿಕಾ ಅವರ ಮೇಲೆ ಹರಿಹಾಯ್ದಿದ್ದರು. ಕೆಟ್ಟದಾಗಿ ಬೈಯುತ್ತಿದ್ದರು. ಆದರೆ, ಚಂದ್ರಿಕಾ ಮಾತ್ರ ಏನೂ ಪ್ರತ್ಯುತ್ತರ ಕೊಡದೆ ನಕ್ಕು ʻಬಾ ಮಗನೆ’ ಅಂತ ಮಗನನ್ನು ಎಳೆದುಕೊಂಡು ಮುಂದೆ ಹೋದರು.
ಇದು ಮಹಿಳೆಯನ್ನು ಇನ್ನಷ್ಟು ಕೆರಳಿಸಿತು. ಮತ್ತೆ ಬೆನ್ನತ್ತಿ ಹೋಗಿ ಚಂದ್ರಿಕಾಳ ಗಂಡ, ಅತ್ತೆ, ಮಾವ, ಅಪ್ಪ, ಅಮ್ಮ ಹೀಗೆ ಯಾರನ್ನೂ ಬಿಡದೆ ಬೈದರು.. ಮೊದಲಿಗಿಂತಲೂ ಜೋರಾಗಿ. ಆದರೂ ಚಂದ್ರಿಕಾ ಸುಮ್ಮನೇ ಇದ್ದರು.
ಆದರೆ, ಆರು ವರ್ಷದ ಮಗನಿಗೆ ಸಿಕ್ಕಾಪಟ್ಟೆ ಸಿಟ್ಟುಬಂತು. ಮಹಿಳೆ ಸ್ವಲ್ಪ ದೂರ ಹೋದ ಮೇಲೆ ಕೇಳಿದ: ʻಏನಮ್ಮಾ ನೀನು ಅವರು ಅಷ್ಟು ಬೈದರೂ ಸುಮ್ಮನೇ ಇದ್ದೆಯಲ್ಲಾ.. ಅವರು ಅಜ್ಜಿಗೆ, ಅಪ್ಪನಿಗೆಲ್ಲ ಬೈದ್ರು.. ಆ ಕೆಟ್ಟ ಹೆಂಗಸು ಅಷ್ಟೆಲ್ಲ ಬೈದರೂ ನೀನು ಸುಮ್ನೆ ನಗ್ತಾ ಇದ್ದಿ. ನಿನಗೆ ಕಿರಿಕಿರಿ ಆಗಲ್ವಾ?’
ಅಮ್ಮ ಹೇಳಿದ್ಳು: ಈಗ ನಾವು ಮಾರ್ಕೆಟ್‍ಗೆ ಹೋಗಿ ಬರುವ. ಅದೆಲ್ಲ ಆಮೇಲೆ ನೋಡುವಾ.
ಮಾರ್ಕೆಟ್‍ಗೆ ಹೋಗಿ ವಾಪಸ್ ಮನೆಗೆ ಬಂದ ಕೂಡಲೇ ಅಮ್ಮ ಒಂದು ಹಳೇ ನೆಲ ಒರೆಸಲು ಬಳಸುತ್ತಿದ್ದ ಶರ್ಟ್ ತಂದು ಮಗನ ಕೈಗೆ ಕೊಟ್ಟು ಹೇಳಿದಳು: ಮಗಾ ಆ ಶರ್ಟ್ ತೆಗಿ, ಈ ಶರ್ಟ್ ಹಾಕಿಕೋ.
ಮಗ ಅದನ್ನು ಕಿರುಬೆರಳಲ್ಲೂ ಮುಟ್ಟದೆ ದೂರ ಎಸೆದು ಬಿಟ್ಟ.
ಆಗ ಅಮ್ಮ: ಯಾಕೋ ಎಸೀತಾ ಇದ್ದೀಯಾ? ಹಾಕ್ಕೊಳ್ಳೋ..ಅಂದ್ಳು.
ಅದಕ್ಕೆ ಮಗ ಹೇಳಿದ: ಏನಮ್ಮಾ ನೀನು.. ಅಷ್ಟು ಕೊಳಕು ಬಟ್ಟೆನ ನಾನು ಹಾಕ್ಬೇಕಾ? ಹೇಗೆ ವಾಸನೆ ಬರ್ತಾ ಇದೆ ನೋಡು.. ಅದನ್ನು ಕೈಯಲ್ಲಿ ಹಿಡಿಯೋದಕ್ಕೇ ಹೇಸಿಗೆ ಆಗ್ತಾ ಇದೆ. ಇನ್ನು ಹಾಕ್ಕೊಬೇಕು ಅಂತೀಯಲ್ಲಾ.. ಏನಾಗಿದೆ ನಿಂಗೆ?
ಆಗ ಅಮ್ಮ ಹೇಳಿದಳು..
ನೀನು ಯಾವಾಗಲೂ ಒಳ್ಳೆ ಬಟ್ಟೆಯನ್ನೇ ಧರಿಸೋನು.. ನಿನಗೆ ಕೊಳಕು ಬಟ್ಟೆ ಹಾಕೊಳೋದು ಕಷ್ಟ ಆಗುತ್ತೆ ಅಲ್ವಾ? ಹಾಗಂತ ಕೊಳಕು ಬಟ್ಟೇನೇ ಹಾಕೊಳ್ಳೋರು ಇದಾರೆ ಅಲ್ವಾ? ನೋಡು ನಿನ್ನ ಹಾಗೇನೇ ನಂಗೂ ಈ ಕೆಟ್ಟ ಮಾತುಗಳು ಅಂದರೆ ಅಲರ್ಜಿ. ನಾನು ಅದನ್ನು ಮುಟ್ಟಿಸಿಕೊಳ್ಳಲು ಬಯಸುವುದಿಲ್ಲ. ಆಗ ಪಕ್ಕದ್ಮನೆ ಆಂಟಿ ಅಷ್ಟೆಲ್ಲ ಬೈದ್ರೂ ನಾನು ಸುಮ್ಮನೆ ಇದ್ದದ್ದು ಅದಕ್ಕೇ. ಅವರು ನಮ್ಮ ಮನಸು, ತಲೆ ಹಾಳು ಮಾಡಲು, ನಮಗೆ ಸಿಟ್ಟು ಬರುವಂತೆ ಮಾಡಲು ಏನೆಲ್ಲ ಕೊಳಕು ಪ್ರಯತ್ನ ಮಾಡ್ತಾ ಇರ್ತಾರೆ.. ಅವರಿಗೂ ಏನೇನೋ ಸಮಸ್ಯೆ ಇರ್ತವೆ. ಅವುಗಳನ್ನು ನಾವು ತುಂಬಾ ಹಚ್ಚಿಕೊಳ್ಳಬಾರದು. ಅವರೇನೋ ಅಂದರು ಅಂತ ನಾವು ತಿರುಗಿ ಬೈಯೋದ್ರಿಂದ ಸಮಸ್ಯೆ ಪರಿಹಾರ ಆಗಲ್ಲ. ನಮ್ಮ ಮನಸು ಹಾಳಾಗುತ್ತದೆ. ಇಡೀ ದಿನದ ಎಲ್ಲ ಕೆಲಸವೂ ಹಾಳಾಗುತ್ತದೆ. ಶಾಂತಿಯೇ ಇರುವುದಿಲ್ಲ. ಹಾಗಾಗಿ ನಾನು ರಿಯಾಕ್ಟ್ ಮಾಡಲಿಲ್ಲ ಮಗಾ..
ಸಣ್ಣ ವಯಸ್ಸಿನ ಆ ಮಗುವಿಗೂ ಇದು ಅರ್ಥವಾಯಿತು.
ಇದನ್ನೂ ಓದಿ | Motivational story | ತುರ್ತು ಬೇಕಾಗಿದ್ದಾಳೆ, ಒಬ್ಬ ಪರ್ಫೆಕ್ಟ್ ಆದ ಹೆಂಡತಿ!