ಕೃಷ್ಣ ಭಟ್ ಅಳದಂಗಡಿ-motivational story
ಇದು ಒಂದಾನೊಂದು ಕಾಲದ ಕಥೆ. ಅದೊಂದು ಕಾಡು. ಅಲ್ಲಿ ಇಬ್ಬರು ಪ್ರಾಣಸ್ನೇಹಿತರಿದ್ದರು. ಒಂದು ಬೆಟ್ಟದ ಬುಡದಲ್ಲಿ ಅವರಿಬ್ಬರು ಜತೆಯಾಗಿ ಬಾಳುತ್ತಿದ್ದರು. ನಿಮಗೆ ಆಶ್ಚರ್ಯ ಆಗಬಹುದು… ಅದರಲ್ಲಿ ಒಂದು ಹುಲಿ.. ಇನ್ನೊಂದು ಸಿಂಹ!
ಹುಲಿ ಅಂದ್ರೇನು? ಸಿಂಹ ಅಂದ್ರೇನು? ದ್ವೇಷ ಅಂದ್ರೇನು ಅಂತ ಗೊತ್ತಾಗುವ ಮೊದಲೇ ಅವುಗಳೆರಡೂ ಜತೆಯಾಗಿದ್ದವು. ಆ ಸ್ನೇಹ ಅದೆಷ್ಟು ಗಟ್ಟಿಯಾಗಿತ್ತೆಂದರೆ, ನಿಸರ್ಗ ಸಹಜವಾದ ದ್ವೇಷದ ಅರಿವಾದ ಬಳಿಕವೂ ಅವು ಆಪ್ತವಾಗಿಯೇ ಇದ್ದವು. ಹಾಗಂತ, ಇದೇನೂ ವಿಚಿತ್ರ ಅಂತ ಅವುಗಳಿಗೆ ಅನಿಸಿರಲೇ ಇಲ್ಲ. ಇದೇ ಸುಂದರವಾದ ಬದುಕು ಅನ್ನುವ ವಿವೇಕವೂ ಅವೆರಡಕ್ಕೂ ಇತ್ತು. ಬಹುಶಃ ಇದಕ್ಕೆಲ್ಲ ಕಾರಣ ಆ ಭಾಗದಲ್ಲಿ ವಾಸಿಸುತ್ತಿದ್ದ ಒಬ್ಬ ಸನ್ಯಾಸಿಯ ಪ್ರಭಾವವೂ ಆಗಿರಬಹುದು. ಜನರಿಂದ ದೂರವಾದ ನಿರ್ಜನ ಪ್ರದೇಶದಲ್ಲಿ ಅವರು ವಾಸಿಸುತ್ತಿದ್ದರು.
ಇಷ್ಟೆಲ್ಲದರ ನಡುವೆಯೂ ಒಂದು ದಿನ ಸಿಂಹ ಮತ್ತು ಹುಲಿಗಳ ಮಧ್ಯೆ ಒಂದು ಕ್ಷುಲ್ಲಕ ವಿಚಾರಕ್ಕೆ ವಾದ ಹುಟ್ಟಿಕೊಂಡಿತು. ಅದು ಅವರ ಬದುಕಿಗೆ ಸಂಬಂಧಿಸಿದ್ದೂ ಅಲ್ಲ, ವರ್ತನೆಗೆ ಸಂಬಂಧಿಸಿದ್ದೂ ಅಲ್ಲ, ಸ್ನೇಹಕ್ಕೆ ಸಂಬಂಧಿಸಿದ್ದೂ ಅಲ್ಲ. ಅವರಿಗೆ ಯಾವ ರೀತಿಯಲ್ಲೂ ಸಂಬಂಧವಿಲ್ಲದ ವಿಚಾರ ಅದು.
ಹುಲಿ ಹೇಳಿತು: ಈಗೀಗ ಭಾರಿ ತಂಪು ಗಾಳಿ ಬೀಸ್ತಾ ಇದ್ಯಲ್ವಾ? ಚಂದ್ರ ಅಮಾವಾಸ್ಯೆಯಿಂದ ಹುಣ್ಣಿಮೆ ಕಡೆಗೆ ಹೋಗುವಾಗ ಅಂದ್ರೆ ಪೂರ್ಣ ಚಂದಿರನಾಗುವ ಹಂತದಲ್ಲಿ ಈ ತರ ಆಗ್ತದಂತೆ.
ಆಗ ಸಿಂಹ ಹೇಳಿತು: ಯಾರು ಹೇಳಿದ್ದು ಈ ತಲೆ ಬುಡ ಇಲ್ಲದ ವಿಷಯ. ಎಲ್ಲರಿಗೂ ಗೊತ್ತಿದೆ, ಚಂದ್ರ ಹುಣ್ಣಿಮೆಯಿಂದ ಸಣ್ಣದಾಗುತ್ತಾ ಹೋಗಿ ಅಮಾವಾಸ್ಯೆ ದಿನ ಮಾಯ ಆಗ್ತಾನಲ್ಲಾ.. ಈ ಪ್ರಾಸೆಸ್‍ನಲ್ಲಿ ತಂಪು ಹೆಚ್ಚು. ನಿನಗೆಲ್ಲ ಯಾರು ತಲೆ ಹಾಳು ಮಾಡ್ತಾರೋ..
ಈ ಸಣ್ಣ ವಿಷಯವೇ ಅವರ ನಡುವೆ ದೊಡ್ಡ ವಿವಾದವಾಗಿ ಮಾರ್ಪಟ್ಟಿತು. ಒಬ್ಬರ ಮಾತನ್ನು ಇನ್ನೊಬ್ಬರು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಒಂದು ಹಂತದಲ್ಲಿ ಇಷ್ಟು ವರ್ಷದ ಸ್ನೇಹವನ್ನೂ ಮರೆತು ಮಾತಿಗೆ ಮಾತು ಬೆಳೆಯಿತು. ಹೆಸರು ಹಿಡಿದು ಬೈದಾಡಿದರು. ಪರಸ್ಪರ ಕೈ ಕೈ ಮಿಲಾಯಿಸುವ ಹಂತವೊಂದೂ ಬಂತು. ಆಗ ಇಬ್ಬರಿಗೂ ಜ್ಞಾನೋದಯ ಆಯಿತು. `ಅಯ್ಯೋ ನಮಗೆ ಸಂಬಂಧವೇ ಇಲ್ಲದ ವಿಷಯದ ಬಗ್ಗೆ ನಾವು ಜಗಳವಾಡುತ್ತಿದ್ದೇವಲ್ಲ. ಜಗಳ ಯಾಕೆ, ಸನ್ಯಾಸಿ ಇದ್ದಾರಲ್ವಾ? ಅವರನ್ನೇ ಕೇಳೋಣ. ಅವರಿಗೆ ಖಂಡಿತಾ ಗೊತ್ತಿರ್ತದೆ’- ಅಂತ ಆ ಕಡೆಗೆ ಹೋದವು.
ಸನ್ಯಾಸಿಯ ಬಳಿಗೆ ಹೋಗಿ ಎರಡೂ ತಲೆ ಬಾಗಿ ನಿಂತವು. ತಮ್ಮ ನಡುವಿನ ಭಿನ್ನಾಭಿಪ್ರಾಯದ ವಿಷಯ ಹೇಳಿದವು.
ಸನ್ಯಾಸಿ ಯೋಚಿಸಿ ಉತ್ತರ ಹೇಳಿದರು: ನಿಜ ಅಂದ್ರೆ ಹುಣ್ಣಿಮೆಯಿಂದ ಅಮಾವಾಸ್ಯೆವರೆಗೂ ತಂಪಿರಬಹುದು, ಅಮಾವಾಸ್ಯೆಯಿಂದ ಹುಣ್ಣಿಮೆವರೆಗೂ ತಂಪು ಇರಲಿಕ್ಕೆ ಅವಕಾಶವಿದೆ. ಯಾಕೆಂದರೆ, ಈ ತಂಪನ್ನು ಹೊತ್ತು ತರುವುದು ಚಂದ್ರನಲ್ಲ, ಗಾಳಿ. ಅದು ಜೋರಾಗಿ ಬೀಸಿದಾಗಲೆಲ್ಲ ತಂಪಾಗುತ್ತದೆ. ಈ ನಿಟ್ಟಿನಲ್ಲಿ ಯೋಚಿಸಿದರೆ ನೀವು ಇಬ್ಬರು ಹೇಳಿದ್ದೂ ಸರಿಯೇ ಇದೆ. ಹಾಗಾಗಿ ನಿಮ್ಮಲ್ಲಿ ಯಾರೂ ಸೋತ ಹಾಗಾಗಲಿಲ್ಲ, ಗೆದ್ದ ಹಾಗಾಗಲಿಲ್ಲ. ನಂಗೆ ಒಂದು ವಿಚಾರ ತುಂಬ ಖುಷಿ ಆಯಿತು. ನಿಮ್ಮ ನಡುವೆ ಘರ್ಷಣೆ ಹುಟ್ಟಿಕೊಂಡಾಗ ನೀವು ನೀವೇ ಅರ್ಥವಿಲ್ಲದೆ ಬಡಿದಾಡಲಿಲ್ಲ. ನನ್ನ ಹತ್ತಿರ ಬಂದ್ರಲ್ವ.. ಆ ಕಾರಣಕ್ಕಾಗಿ ನಿಮಗೆ ನಿಜವಾದ ವಿಷಯ ಅರಿವಾಯ್ತು. ಯಾವತ್ತೂ ಹೀಗೇ ಮಾಡಬೇಕು ನೀವು. ನಿಮಗೆ ಸಂಬಂಧಪಡದ ವಿಚಾರದಲ್ಲಿ ತುಂಬ ತಲೆ ಕೆಡಿಸಿಕೊಳ್ಳಬೇಡಿ, ಸ್ನೇಹವನ್ನು ದ್ವೇಷವಾಗಿಸಲು ಬಿಡಬೇಡಿ. ಹಾಗೇನಾದರೂ ನಿಮಗೆ ಗೊಂದಲವಾದರೆ ನನ್ನಲ್ಲಿಗೆ ಬನ್ನಿ. ನಾನು ಹೇಳುತ್ತೇನೆ. ಅದೆಲ್ಲಕ್ಕಿಂತ ಮುಖ್ಯವಾಗಿ ನಾನು ನಿಮಗೆ ಹೇಳಬೇಕಾಗಿರುವುದು.. ಈ ಸಂಬಂಧವಿಲ್ಲದ ಜಗಳಗಳಿಗೆ ನಿಮ್ಮ ಸ್ನೇಹ ಬಲಿಯಾಗದಂತೆ ನೋಡಿಕೊಳ್ಳಿ.
ಹುಲಿ ಮತ್ತು ಸಿಂಹ ಪರಸ್ಪರ ಅಪ್ಪಿಕೊಂಡವು. ಯಾವತ್ತೂ ಈ ತರ ಸಿಲ್ಲಿ ವಿಷಯಗಳ ಬಗ್ಗೆ ವಾದ ಮಾಡಬಾರದು ಅಂತ ತೀರ್ಮಾನಿಸಿದವು. ಎರಡೂ ಜತೆಯಾಗಿ ಸಾಗುವ ಚಿತ್ರವನ್ನು ನೋಡುತ್ತಾ ಸನ್ಯಾಸಿ ಅಂದುಕೊಂಡರು: ಜಗತ್ತು ಹೀಗೇ ಇದ್ದರೆ ಎಷ್ಟು ಚಂದ?
ಇದನ್ನೂ ಓದಿ | Motivational story | ಬಟ್ಟೆ ವಾಷ್‍ಗೆ ಕೊಡಲು ಹೋದರೆ ಮನಸ್ಸನ್ನೇ ಮೆಲ್ಲಗೆ ತೊಳೆದುಬಿಟ್ಟ!