ಕೃಷ್ಣ ಭಟ್ ಅಳದಂಗಡಿ-motivational story
ಮಾಸಿದ ಬೂದು ಬಣ್ಣದ ದಿರಸು ತೊಟ್ಟ ಒಬ್ಬ ಮಹಿಳೆ ಮತ್ತು ಅಷ್ಟೇ ಕಳೆರಹಿತ ಬಣ್ಣದ ಬಟ್ಟೆ ತೊಟ್ಟ ಅವರ ಗಂಡ ಇಬ್ಬರೂ ಹಾರ್ವರ್ಡ್ ವಿವಿಯ ಅಧ್ಯಕ್ಷರ ಕೊಠಡಿಯ ಕಡೆಗೆ ನಡೆದುಹೋಗುತ್ತಿದ್ದರು. ಅವರಿಬ್ಬರನ್ನು ದೂರದಿಂದಲೇ ಗಮನಿಸುತ್ತಿದ್ದ ಕಾರ್ಯದರ್ಶಿ ಅವರನ್ನು ಒಳಗೆ ಬಿಟ್ಟ ಭದ್ರತಾ ಸಿಬ್ಬಂದಿಗೆ ಮನಸ್ಸಲ್ಲೇ ಬಯ್ಯುತ್ತಿದ್ದ.
ನಾವು ಒಮ್ಮೆ ಪ್ರೆಸಿಡೆಂಡ್ ಅವರನ್ನು ಭೇಟಿ ಮಾಡಬಹುದಾ?- ಮಹಿಳೆ ಕೇಳಿದರು.
ಕಷ್ಟ. ಅವರು ಇಡೀ ದಿನ ತುಂಬ ಬ್ಯುಸಿ ಇರ್ತಾರೆ.. ನೀವು ಅಪಾಯಿಂಟ್ ಮೆಂಟ್ ಕೂಡಾ ಪಡೆದುಕೊಂಡಿಲ್ಲ- ಸೆಕ್ರೆಟರಿ ಹೇಳಿದ.
ಪರವಾಗಿಲ್ಲ. ನಮಗೇನೂ ಬ್ಯುಸಿ ಇಲ್ಲ.. ಕಾಯುತ್ತೇವೆ- ಎಂದರು ಮಹಿಳೆ.
ಸೆಕ್ರೆಟರಿ ಕೆಲವು ಗಂಟೆಗಳಷ್ಟು ಹೊತ್ತು ಕಾಯಿಸಿದ. ಕಾದು ಕಾದು ಸುಸ್ತಾಗಿ ಹೋಗಬಹುದು ಎಂಬುದು ಆತನ ನಿರೀಕ್ಷೆಯಾಗಿತ್ತು. ಆದರೆ ಈ ದಂಪತಿ ಯಾವ ಕಿರಿಕಿರಿಯೂ ಇಲ್ಲದೆ ಕಾಯುತ್ತಲೇ ಇದ್ದರು.
ಕೊನೆಗೆ ಕಿರಿಕಿರಿಗೆ ಒಳಗಾದ ಕಾರ್ಯದರ್ಶಿ ಅಧ್ಯಕ್ಷರ ಬಳಿಗೆ ಹೋಗಿ, ಅವರು ಒಂಥರಾ ಅಂಟಿನ ಹಾಗೆ ಮಾಡ್ತಾರೆ. ಒಂದು ನಿಮಿಷ ಮಾತಾಡಿ ಕಳಿಸಬಹುದೇ ಅಂತ ಅಧ್ಯಕ್ಷರನ್ನು ಕೇಳಿದ.
ಸಿಟ್ಟಿನಿಂದಲೇ ಒಪ್ಪಿಕೊಂಡರು ಅಧ್ಯಕ್ಷರು. ದಂಪತಿ ಒಳಬರುತ್ತಿದ್ದಂತೆಯೇ ಯಾಕೆ ಈ ತರ ಕಾಟ ಕೊಡ್ತೀರಿ. ನಂಗೆ ತುಂಬ ಕೆಲಸವಿದೆ.. ಏನು ಹೇಳಿ ನಿಮ್ಮ ಪ್ರಾಬ್ಲಮ್ ಅಂತ ಕೇಳಿದರು.
ಮಹಿಳೆ ಹೇಳಿದರು: ನಮಗೊಬ್ಬ ಮಗನಿದ್ದ. ಹಾರ್ವರ್ಡ್ ವಿವಿಯಲ್ಲಿ ಓದುತ್ತಿದ್ದ ಎನ್ನುವುದು ನಮಗೆ ಹೆಮ್ಮೆಯಾಗಿತ್ತು. ಕಳೆದ ವರ್ಷ ಅವನು ತೀರಿಕೊಂಡ. ಅವನ ನೆನಪಿನಲ್ಲಿ ಇಲ್ಲೊಂದು ಸ್ಮಾರಕ ನಿರ್ಮಿಸಲು ಅವಕಾಶ ಕೊಡಬಹುದೇ?
ಅಧ್ಯಕ್ಷರಿಗೆ ಸಿಟ್ಟು ಬಂತು. ಇಲ್ಲಿ ಕಲಿತು ಸತ್ತು ಹೋದವರಿಗೆಲ್ಲ ಸಮಾಧಿ ಕಟ್ಟಲು ಶುರು ಮಾಡಿದರೆ ಇಲ್ಲಿ ಯುನಿವರ್ಸಿಟಿ ಇರುದಿಲ್ಲ. ಗೋರಿಗಳಷ್ಟೇ ಇರ್ತವೆ ಅಂದರು.
ಆಗ ಮಹಿಳೆ: ಅಲ್ಲಲ್ಲ, ನಾವು ಸಮಾಧಿ ಕಟ್ಟಿ ಅನ್ತಿಲ್ಲ. ಮಗನ ಹೆಸರಲ್ಲಿ ಒಂದು ಕಟ್ಟಡ ಕಟ್ಟಿಸಬಹುದಲ್ವಾ?
ಆಗ ಅಧ್ಯಕ್ಷರು ಇಬ್ಬರೂ ವ್ಯಕ್ತಿಗಳನ್ನು ಮೇಲಿಂದ ಕೆಳಗೆ ನೋಡಿ ನಕ್ಕರು. ಕಟ್ಟಡ ಕಟ್ಟೋದು ಅಂದ್ರೆ ಮಕ್ಕಳಾಟ ಅಂದ್ಕೊಂಡಿದೀರಾ? ಮಗನನ್ನು ಕಳೆದುಕೊಂಡು ಏನೋ ಭಾವುಕರಾಗಿ ಮಾತಾಡ್ತಾ ಇದೀರಿ.. ಇಲ್ಲಿರುವ ಕಟ್ಟಡಗಳು, ವಿವಿಯ ಒಟ್ಟು ಮೌಲ್ಯ ಎಷ್ಟು ಗೊತ್ತಾ… 1000 ಕೋಟಿ ರೂ. ಸಂಸ್ಥೆಗೆ ನೀವು ಕಟ್ಟಡ ಕಟ್ಟಿ ಕೊಡುವ ಅವಶ್ಯಕತೆಯೂ ಇಲ್ಲ. ನಿಮ್ಮಿಂದ ಅದು ಸಾಧ್ಯವೂ ಇಲ್ಲ ಅಂದರು.
ಆ ಮಾತು ಕೇಳಿದ ಮಹಿಳೆ ಸ್ತಬ್ಧರಾದರು.. ಗಂಡನ ಕಡೆ ನೋಡಿದರು. ಗಂಡ ಹೇಳಿದರು: ಏಳು ಕಣೆ ಹೋಗೋಣ.
ಅಧ್ಯಕ್ಷರಿಗೆ ಪೀಡೆ ತೊಲಗಿತು ಅಂತ ಅನಿಸಿತು. ದಂಪತಿ ಎದ್ದು ಹೊರಟರು.. ಹೆಂಡತಿ ಹೇಳಿದರು: ಯುನಿವರ್ಸಿಟಿ ಸ್ಥಾಪನೆಗೆ ಬೇಕಾಗೋದು ಬರೀ ಸಾವಿರ ಕೋಟಿಯಂತೇರಿ. ಹಾಗಿದ್ದರೆ ನಾವೇ ಒಂದು ಹೊಸ ವಿವಿ ಕಟ್ಟಬಹುದಲ್ವಾ?
ಈ ಮಾತು ಕೇಳಿ ಅಧ್ಯಕ್ಷರು ಇವರು ಯಾರೋ ಹುಚ್ಚರು ಅಂದುಕೊಂಡರು.
ಮುಂದಿನ ಕೆಲವೇ ವರ್ಷದಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಭವ್ಯ ಯುನಿವರ್ಸಿಟಿಯೊಂದು ತಲೆ ಎತ್ತಿತು. ಅದರ ಹೆಸರು: ಸ್ಟ್ಯಾನ್ ಫೋರ್ಡ್ ಯುನಿವರ್ಸಿಟಿ.
ಸ್ಟ್ಯಾನ್ ಫೋರ್ಡ್ ಎಂಬ ಮಗನ ನೆನಪಿನಲ್ಲಿ ವಿವಿ ನಿರ್ಮಿಸಿದ ಆ ಹೆತ್ತವರ ಹೆಸರು: ಮಿಸ್ಟರ್ ಎಂಡ್ ಮಿಸೆಸ್ ಸ್ಟ್ಯಾನ್ ಫೋರ್ಡ್.
(ಗಮನಿಸಿ: ಇದು ಸ್ಟ್ಯಾನ್ ಫೋರ್ಡ್ ವಿವಿ ಸ್ಥಾಪನೆಯ ಹಿಂದಿನ ನಿಜ ಕಥೆಯಲ್ಲ. ಯಾರನ್ನೂ ಕಡೆಗಣಿಸಬೇಡಿ
ಎಂದು ಹೇಳಲು ಹುಟ್ಟಿಕೊಂಡಿರುವ ಕಾಲ್ಪನಿಕ ಕಥೆಯಷ್ಟೆ. ಗವರ್ನರ್ ಆಗಿದ್ದ ಸ್ಟ್ಯಾನ್ ಫೋರ್ಡ್ ಅವರು 15ನೇ ವರ್ಷದಲ್ಲಿ ಟೈಫಾಯ್ಡ್ ನಿಂದ ಮರಣಿಸಿದ ಮಗನ ನೆನಪಿನಲ್ಲಿ ತಾವಾಗಿಯೇ ಈ ವಿವಿ ಸ್ಥಾಪಿಸಿದರು ಎನ್ನುವುದು ವಾಸ್ತವ.)
ಇದನ್ನೂ ಓದಿ | Motivational story | ಅಪ್ಪ-ಅಮ್ಮ ಏನೂ ಮಾಡ್ಲಿಲ್ಲ ಅಂತಿದ್ದ ಅವನಿಗೆ ಪೆನ್ನು ಮಾರುವ ಹುಡುಗ ಕಲಿಸಿದ ಚಂದದ ಪಾಠ