Site icon Vistara News

Motivational story | ತಪ್ಪಾಗಿದ್ದು ಗೊತ್ತಾಗಬಾರದು ಎಂದು ತಿದ್ದುತ್ತಿದ್ದ ಹುಡುಗನಿಗೆ ಟೀಚರ್ ಹೇಳಿದ ಪಾಠ ಏನು?

student teacher motivational story

ಕೃಷ್ಣ ಭಟ್‌ ಅಳದಂಗಡಿ- Motivational story
ಒಬ್ಬ ಸಣ್ಣ ಹುಡುಗ ಮೂರನೇ ಕ್ಲಾಸಿನಲ್ಲಿ ಕಲಿಯುತ್ತಿದ್ದ. ಅಲ್ಲಿವರೆಗೆ ಪೆನ್ಸಿಲ್‍ನಲ್ಲಿ ಬರೆಯುತ್ತಿದ್ದ ಮಗು ಪೆನ್‍ಗೆ ಶಿಫ್ಟ್ ಆಗಿತ್ತು. ಕ್ಲಾಸಿನಲ್ಲಿ ಟೀಚರ್ ಉಕ್ತಲೇಖನವನ್ನು ಕೊಡುತ್ತಿದ್ದರು. ಟೀಚರ್ ಹೇಳಿದ್ದನ್ನು ಮಕ್ಕಳು ಸ್ಪೆಲ್ಲಿಂಗ್ ಸರಿಯಾಗಿರುವಂತೆ ಬರೆಯಬೇಕು. ಟೀಚರ್ ಹೇಳಿದ ಹಲವಾರು ಶಬ್ದಗಳಲ್ಲಿ ಒಂದು ಶಬ್ದವನ್ನು ತಾನು ತಪ್ಪು ಬರೆದಿದ್ದೇನೆ ಎಂದು ಹುಡುಗನಿಗೆ ಅನಿಸಿತು.

ತಾನು ಬರೆದಿದ್ದನ್ನು ಟೀಚರ್‌ಗೆ ಕೊಡುವ ಮುನ್ನ ತಪ್ಪಾದ ಶಬ್ದವನ್ನು ಸರಿ ಮಾಡಿ ಬರೆಯಲು ಪ್ರಯತ್ನಿಸಿದ. ಮೊದಲು ರಬ್ಬರ್ ತೆಗೆದುಕೊಂಡು ಉಜ್ಜಿದ. ಆದರೆ, ಪೆನ್ನಲ್ಲಿ ಬರೆದಿದ್ದರಿಂದ ಅದು ಹೋಗಲಿಲ್ಲ. ಅದನ್ನು ಉಗುರಿನಿಂದ ಕೆರೆಸಿ ತೆಗೆಯಲು ನೋಡಿದ. ಸಾಧ್ಯವಾಗಲಿಲ್ಲ. ಎಂಜಲನ್ನು ಹಚ್ಚಿ ಉಜ್ಜಿದ. ಪುಸ್ತಕದ ಹಾಳೆಯೇ ಹರಿದು ಹೋಯಿತು. ತಪ್ಪು ಮಾಡಿದ್ದನ್ನು ತಿದ್ದಲಾಗಲಿಲ್ಲ.

ಆಗ ಟೀಚರ್: ಎಷ್ಟು ಹೊತ್ತು ಚಿಂತನ್, ಬೇಗ ತಗೊಂಡು ಬಾ ಅಂದರು. ಚಿಂತನ್ ಭಯದಿಂದಲೇ ಪುಸ್ತಕವನ್ನು ತೆಗೆದುಕೊಂಡು ಹೋಗಿ ಶಿಕ್ಷಕಿಯ ಮುಂದಿಟ್ಟ.
ಆಗ ಟೀಚರ್: ಇದೇನು ಮಾಡಿದ್ದೀ? ಪೇಪರೇ ಹರಿದು ಹೋಗಿದೆಯಲ್ವಾ? ಅಂತ ಹೇಳಿದರು.
ಹುಡುಗ ನಡೆದಿದ್ದನ್ನು ವಿವರಿಸಿದ. ಟೀಚರ್ ಈಗ ಬೈತಾರೆ ಅಂತ ಭಯದಿಂದಲೇ ಅಳಲು ಶುರು ಮಾಡಿದ.

ಟೀಚರ್ ಹುಡುಗನನ್ನು ಸಂತೈಸುತ್ತಾ ಹೇಳಿದರು: ಮಗೂ, ಸಣ್ಣ ಕ್ಲಾಸಿನಲ್ಲಿರುವಾಗ ನೀನು ಪೆನ್ಸಿಲ್ ಬಳಸ್ತಾ ಇದ್ದೆ. ಆಗ ನೀನು ಮಾಡಿರುವ ತಪ್ಪುಗಳನ್ನು ರಬ್ಬರ್ ಬಳಸಿ ಸರಿ ಮಾಡಬಹುದಿತ್ತು. ಈಗ ನೀನು ದೊಡ್ಡವನಾಗಿದ್ದಿ, ಪೆನ್ನಿನಲ್ಲಿ ಬರೀತಾ ಇದ್ದಿ. ಈಗ ತಪ್ಪು ಆಗದಂತೆಯೇ ಹೆಚ್ಚು ಜಾಗೃತೆ ವಹಿಸಬೇಕು. ಯಾಕೆಂದರೆ, ಇಲ್ಲಿ ತಪ್ಪಿದ್ದನ್ನು ಮರಳಿ ತಿದ್ದಲಾಗದು. ತಪ್ಪಿನ ಕಲೆ ಉಳಿದೇ ಹೋಗುತ್ತದೆ. ಇಲ್ಲಿ ನೀನು ಪೇಪರನ್ನೇ ಹರಿದು ಹಾಕಿದೆಯಲ್ವಾ.. ಹಾಗೆ.

ಆಗ ಹುಡುಗ ಕೇಳಿದ: ಹಾಗಿದ್ದರೆ ಇನ್ನು ಮುಂದೆ ನಾವು ಮಾಡಿದ ತಪ್ಪು ಬೇರೆಯವರಿಗೆ ತಿಳಿಯದಂತೆ ಮಾಡುವುದು ಸಾಧ್ಯವೇ ಇಲ್ವಾ? ನಂಗೆ ತಪ್ಪು ಮಾಡಿದ್ದನ್ನು ಬೇರೆಯವರು ನೋಡಿದರೆ ಅಂತ ಹೆದರಿಕೆ ಆಗ್ತದೆ. ಫ್ರೆಂಡ್ಸೆಲ್ಲ ತಮಾಷೆ ಮಾಡಬಹುದು ಅನಿಸ್ತದೆ.

ಅದಕ್ಕೆ ಟೀಚರ್ ಹೇಳಿದರು: ನೀನು ಬರೆಯುವಾಗಲೇ ತಪ್ಪಾಗದಂತೆ ಜಾಗೃತೆ ವಹಿಸಿ ಬರೆಯಬೇಕು. ಹಾಗಂತ ತಪ್ಪೇ ಆಗಿ ಹೋಯಿತು ಅಂತಾನೇ ಇಟ್ಟುಕೋ.. ಅದನ್ನು ಮರೆಮಾಚಲು ಪ್ರಯತ್ನಿಸಬೇಕಾಗಿಲ್ಲ. ನೀನು ಅದನ್ನು ಅಳಿಸಿಹಾಕಲು ಪ್ರಯತ್ನಿಸಿದಷ್ಟೂ ಪೇಪರ್ ಹರಿಯುತ್ತದೆ, ಕೊಳಕಾಗುತ್ತದೆ, ಅಲ್ಲೊಂದು ಕಪ್ಪು ಚುಕ್ಕೆ ಉಳಿದೇ ಹೋಗುತ್ತದೆ. ಅದಕ್ಕಿಂತ ತಪ್ಪಾಗಿದೆ ಅಂತ ನಿನಗೆ ಅನಿಸಿದರೆ ಅಲ್ಲೇ ಅದರ ಮೇಲೆರಡು ಗೆರೆ ಎಳೆದು ಸರಿ ಎಂದು ನಿನಗಿಸಿದ್ದನ್ನು ಬರೆದುಬಿಡು. ಆಗ ಮೊದಲಿನಷ್ಟು ಕೊಳಕಾಗಿ ಕಾಣುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನೀನು ನಿನ್ನ ತಪ್ಪುಗಳನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಾ ಇದ್ದಿ ಎಂದು ಯಾರೂ ಅಂದುಕೊಳ್ಳುವುದಿಲ್ಲ.

ಟೀಚರ್ ಮುಂದುವರಿಸಿದರು: ನಾವು ತಪ್ಪು ಮಾಡುವುದು ತಪ್ಪಲ್ಲ. ಅದನ್ನು ತಿದ್ದಿ ನಡೆಯುವುದು ತುಂಬ ಮುಖ್ಯ. ನಾವು ಯಾರನ್ನೋ ಖುಷಿಪಡಿಸಲು ಈ ಕೆಲಸ ಮಾಡಬೇಕಾಗಿಲ್ಲ. ನಮಗಾಗಿ ಮಾಡಿಕೊಂಡರೆ ಸಾಕು.

ಇದನ್ನೂ ಓದಿ | Motivational story | ಆ ರೈತ ಸೂಪರ್‌ ಸ್ಟಾರ್‌ ಆಗಿ ಮಿಂಚಿದ್ದರ ಹಿಂದಿನ ನಿಜವಾದ ರಹಸ್ಯ ಪಕ್ಕದ ಹೊಲದ ಫಸಲು!

Exit mobile version