ಕೃಷ್ಣ ಭಟ್ ಅಳದಂಗಡಿ- Motivational story
ಆನೆಯೊಂದು ಸಮೀಪದ ನದಿಯಲ್ಲಿ ನೀರಾಟವಾಡಿ ಮರಳಿ ತನ್ನ ಗುಂಪಿನ ಕಡೆಗೆ ನಡೆದುಬರುತ್ತಿತ್ತು. ಆಗ ಎದುರಿನಿಂದ ಒಂದು ಹಂದಿ ಬಂತು. ಅದು ಎಂದಿನಂತೆ ಕೆಸರಿನಲ್ಲಿ ಹೊರಳಾಡಿ ಮೈತುಂಬಾ ಕೆಸರು ಮೆತ್ತಿಕೊಂಡು ಖುಷಿಪಟ್ಟು ಅದರ ಸುಖವನ್ನು ಹೇಳಲೋ ಎಂಬಂತೆ ತನ್ನ ಗುಂಪಿನ ಕಡೆಗೆ ನಡೆಯುತ್ತಿತ್ತು.
ಒಂದು ಹಂತದಲ್ಲಿ ಎರಡೂ ಎದುರುಬದುರಾದವು. ಅದೊಂದು ಸ್ವಲ್ಪ ಇಕ್ಕಟ್ಟಾದ ದಾರಿ. ಹಾಗಾಗಿ, ಆನೆ ಸಾಧ್ಯವಾದಷ್ಟು ಬದಿಗೆ ಸರಿದು ನಿಂತು ಹಂದಿಗೆ ಹೋಗಲು ಅವಕಾಶ ಮಾಡಿಕೊಟ್ಟಿತು.
ಆನೆ ತನಗೆ ದಾರಿ ಬಿಟ್ಟಿದ್ದನ್ನು ನೋಡಿ ಹಂದಿಗೆ ಭಯಂಕರ ಖುಷಿ ಆಯಿತು. ತನ್ನ ಪವರ್ ಜೋರಿದೆ ಅನಿಸಿತು. ಅದು ಆನೆ ತನಗೆ ಹೆದರಿದೆ ಎಂದು ಹೇಳಿ ಸಣ್ಣಗೆ ತಮಾಷೆಯನ್ನೂ ಮಾಡಿತು. ಬೇಗ ಬೇಗನೆ ಸಾಗಿ ಹತ್ತಿರದಲ್ಲೇ ಇದ್ದ ತನ್ನವರ ಗುಂಪನ್ನು ಸೇರಿಕೊಂಡಿತು. ಆನೆ ತನಗೆ ಹೆದರಿ ದಾರಿ ಕೊಟ್ಟಿದ್ದನ್ನು ಬಣ್ಣ ಬಣ್ಣದಲ್ಲಿ ವರ್ಣಿಸಿತು. ಆಗ ಹಂದಿಗಳೆಲ್ಲ ಸೇರಿ ಆನೆ ಹೆದರುಪುಕ್ಕಲ ಎಂದು ತಮಾಷೆ ಮಾಡಲು ಶುರು ಮಾಡಿದವು.
ಇತ್ತ ಕಡೆ ಆನೆಯೂ ತನ್ನ ಗುಂಪನ್ನು ಸೇರಿಕೊಂಡಿತು. ಹಂದಿಗಳು ಆನೆಯನ್ನು ನೋಡಿ ತಮಾಷೆ ಮಾಡಿದ್ದು ನೋಡಿ ಅವುಗಳಿಗೆಲ್ಲ ಕಿರಿಕಿರಿ ಅನಿಸಿತು. ಒಂದು ಆನೆ ಕೇಳಿತು: ನಿಜಕ್ಕೂ ನೀನು ಆ ಹಂದಿಗೆ ಹೆದರಿದ್ಯೇನಾ?
ಆನೆ ಹೇಳಿತು: ಇಲ್ಲ ಗೆಳೆಯ.. ಅದಕ್ಕೆಂತ ಹೆದರುವುದು? ನಾನು ಮನಸು ಮಾಡಿದ್ದರೆ ಆ ಹಂದಿಯನ್ನು ಸೊಂಡಿಲಲ್ಲಿ ಎತ್ತಿ ನೂರು ಮೀಟರ್ ದೂರಕ್ಕೆ ಎಸೆಯಬಹುದಿತ್ತು. ಒಂದು ಝಾಡಿಸಿ ಒದ್ದಿದ್ದರೆ ಸಾಕಿತ್ತು. ಸುಮ್ಮನೆ ಕಾಲಿನಲ್ಲಿ ಹೊಸಕಿ ಹಾಕಬಹುದಿತ್ತು. ಆದರೆ ನನಗೆ ಹಾಗೆ ಮಾಡಬೇಕು ಅನಿಸಲಿಲ್ಲ. ಹಾಗೆ ಮಾಡಿದರೆ ಮೊದಲೇ ಕೆಸರಿನಲ್ಲಿ ಮಿಂದೆದ್ದ ಹಂದಿಯ ಕೆಸರು ನನ್ನ ಮೈಗೂ ತಾಗುತ್ತಿತ್ತು. ಅದಕ್ಕೆ ನಾನು ಅದರ ಉಸಾಬರಿ ಬೇಡ ಅಂತ ಅದಕ್ಕೆ ದಾರಿ ಬಿಟ್ಟು ನಿಂತೆ.. ಈ ಕೊಳಕರ ಸಹವಾಸ ಯಾರಿಗೆ ಬೇಕು?
ಆಗ ಉಳಿದ ಆನೆಗಳು ಕೇಳಿದವು: ನೀನೇನೋ ಹೀಗೆ ಯೋಚನೆ ಮಾಡಿ ಬಿಟ್ಟುಬಿಟ್ಟೆ. ಆದರೆ, ಅದು ನೋಡು ಅಲ್ಲಿ ಹೋಗಿ ಏನು ಹೇಳುತ್ತಿದೆ. ನೀನು ಹೆದರುಪುಕ್ಕಲ ಅಂತೆ.
ಆಗ ಆನೆ ಹೇಳಿತು: ಅದು ಹೇಳಲಿ ಬಿಡು, ಅದರಿಂದ ನಮ್ಮ ಶಕ್ತಿಯೇನು ಕುಂದುತ್ತದೆಯೇ? ಹಂದಿಗಳು ಯಾವತ್ತೂ ಕೆಸರಿನಲ್ಲೇ ಬಿದ್ದಿರ್ತವೆ. ಇತರರಿಗೂ ಕೆಸರು ಎರಚಲು ಪ್ರಯತ್ನಿಸುತ್ತವೆ. ನಾವು ಜಾಗೃತೆ ಮಾಡಬೇಕು ಅಷ್ಟೆ. ಕಿರಿಕಿರಿ ತುಂಬ ಜಾಸ್ತಿ ಆದ್ರೆ ಒಮ್ಮೆ ಒಂದು ಜೋರಾಗಿ ಘೀಳಿಡಬೇಕು ಅಷ್ಟೆ. ಅದಕ್ಕೆಲ್ಲ ಅಷ್ಟು ಸಾಕಾಗ್ತದೆ. ಅದರ ವಿಷಯ ಬಿಡುವಾ.. ನಾವೆಲ್ಲ ಒಂದು ರೌಂಡ್ ತಿರುಗಾಡಿಕೊಂಡು ಬರೋಣ. ಕೆಸರಲ್ಲಿರುವ ಹಂದಿಗಳ ಬಗ್ಗೆ ನಾವ್ಯಾಕೆ ತಲೆ ಕೆಡಿಸಿಕೊಳ್ಳೋದು?
ಇದನ್ನೂ ಓದಿ | Motivational story | ಚಹಾ ಹೇಗಿದೆ ಅನ್ನೋದು ಮುಖ್ಯಾನಾ? ಅದನ್ನು ಕುಡಿಯೋ ಕಪ್ ಮುಖ್ಯಾನಾ?