Site icon Vistara News

Motivational story | Don’t worry ನಮ್ಮ ಅತಿ ದೊಡ್ಡ ದೌರ್ಬಲ್ಯವೇ ನಮ್ಮ ಅತಿ ದೊಡ್ಡ ಶಕ್ತಿಯೂ ಆದೀತು!

judo

ಕೃಷ್ಣ ಭಟ್‌ ಅಳದಂಗಡಿ-Motivational story
ಅವನು ಹತ್ತು ವರ್ಷದ ಹುಡುಗ. ಅವನಿಗೆ ಜುಡೋ ಕಲಿಯಬೇಕು ಎಂದು ತುಂಬಾ ಆಸೆ ಇತ್ತು. ಆದರೆ, ದುರದೃಷ್ಟ. ಅದೇ ಹೊತ್ತಿಗೆ ಸಂಭವಿಸಿದ ಒಂದು ಅಪಘಾತದಲ್ಲಿ ಅವನು ತನ್ನ ಎಡಗೈಯನ್ನೇ ಕಳೆದುಕೊಂಡ. ಆದರೂ ಜುಡೋ ಕಲಿಯುವ ಆಸೆಯನ್ನು ಮಾತ್ರ ಬಿಡಲಿಲ್ಲ.

ಆದರೆ, ಒಂದು ಕೈ ಇಲ್ಲದ ಅವನಿಗೆ ಜುಡೋ ಕಲಿಸಲು ಯಾರೂ ಮುಂದಾಗಲಿಲ್ಲ. ಒಬ್ಬ ಹಳೆಯ ಜಪಾನಿ ಜುಡೋ ಶಿಕ್ಷಕ ಕೊನೆಗೂ ಅವನಿಗೆ ಜುಡೋ ಪಟ್ಟುಗಳನ್ನು ಕಲಿಸಲು ಒಪ್ಪಿದರು. ಆದರೆ ಪಾಠ ಶುರುವಾಗಿ ಮೂರು ತಿಂಗಳು ಕಳೆದರೂ ಅವರು ಕಲಿಸುತ್ತಿದ್ದುದು ಒಂದೇ ಒಂದು ಹೊಡೆತವನ್ನು ಮಾತ್ರ.

ಜುಡೋದಲ್ಲಿ ಎಷ್ಟೆಲ್ಲ ಹೊಡೆತಗಳಿವೆ. ಇವರು ನನಗೆ ಒಂದೇ ಒಂದು ಮಾತ್ರ ಕಲಿಸುತ್ತಿದ್ದಾರಲ್ಲಾ.. ಉಳಿದುದನ್ನು ನಾನು ಯಾವಾಗ ಕಲಿಯುವುದು ಎಂದು ಹುಡುಗನಿಗೆ ಆತಂಕವಾಯಿತು. ಅವರು ಒಂದು ದಿನ ಸೆನ್ಸೀ (ಶಿಕ್ಷಕ) ಅವರನ್ನು ಕೇಳಿಯೇಬಿಟ್ಟ. ಆಗ ಸೆನ್ಸೀ ಹೇಳಿದರು: ಹುಡುಗಾ.. ನಿನಗೆ ಗೊತ್ತಿರುವುದು ಇದೊಂದೇ ಮೂವ್‌ ಮತ್ತು ನೀನು ಕಲಿಯಬೇಕಾಗಿರುವುದು ಕೂಡಾ ಇದೊಂದೇ ಮೂವ್‌.
ಹುಡುಗನಿಗೆ ಮುಂದೆ ಏನು ಕೇಳಬೇಕು, ಹೇಳಬೇಕು ಎಂದು ತೋಚದೆ ಸುಮ್ಮನಾದ. ಆದರೂ ಒಳಗೆ ಬೇಸರವಿತ್ತು. ಇದರಲ್ಲಿ ಗುರುಗಳು ಏನೋ ಹೇಳುತ್ತಿದ್ದಾರೆ ಎಂದು ಸುಮ್ಮನಾದ.

ಸುಮಾರು ಏಳು ತಿಂಗಳುಗಳೇ ಕಳೆದವು. ಪ್ರತಿ ದಿನ ಅದೊಂದೇ ಪಟ್ಟು, ಅದೊಂದೇ ಹೊಡೆತ! ಕೊನೆಗೆ ಒಂದು ದಿನ ಸೆನ್ಸೀ ಈ ಹುಡುಗನನ್ನು ಒಂದು ಟೂರ್ನಮೆಂಟ್‌ಗೆ ಕರೆದುಕೊಂಡು ಹೋಗುತ್ತಿರುವುದಾಗಿ ಘೋಷಿಸಿದರು. ಉಳಿದ ಮಕ್ಕಳೆಲ್ಲ ನಕ್ಕರು!

ಕೊನೆಗೂ ಆ ದಿನ ಬಂದೇ ಬಿಟ್ಟಿತು. ಅಚ್ಚರಿ ಎಂದರೆ ಹುಡುಗ ಮೊದಲ ಎರಡು ಪಂದ್ಯಗಳನ್ನು ಅತ್ಯಂತ ಸುಲಭದಲ್ಲಿ ಗೆದ್ದುಬಿಟ್ಟಿದ್ದ. ಆದರೆ, ಮೂರನೇ ಪಂದ್ಯ ಸ್ವಲ್ಪ ಕಠಿಣವಾಗಿತ್ತು. ಆದರೆ, ಎದುರಾಳಿ ತಾಳ್ಮೆ ಕಳೆದುಕೊಂಡ ಸಂದರ್ಭ ನೋಡಿಕೊಂಡು ಬಾಲಕ ಹೊಡೆತ ಕೊಟ್ಟ. ಗೆಲುವು ಸಿಕ್ಕಿಯೇಬಿಟ್ಟಿತು.

ಈಗ ಅವನು ಫೈನಲ್‌ನಲ್ಲಿದ್ದ. ಎದುರಾಳಿ ಒಬ್ಬ ದೈತ್ಯನಂತೆ ಕಾಣುತ್ತಿದ್ದ. ನಿಂತು ನೋಡುತ್ತಿದ್ದವರಿಗೇ ಪಾಪ.. ಕೈಯಿಲ್ಲದ ಈ ಹುಡುಗ ಅಪ್ಪಚ್ಚಿಯಾಗಿ ಹೋಗುತ್ತಾನೆ ಅನಿಸುತ್ತಿತ್ತು. ಹುಡುಗನಿಗೂ ನಿರಂತರ ಮೂರು ಆಟಗಳ ಸುಸ್ತು ಇತ್ತು. ಹುಡುಗನಿಗೆ ಏನಾದರೂ ಗಾಯವಾದೀತಾ ಎನ್ನುವ ಭಯದಿಂದ ರೆಫ್ರೀ ಕೂಡಾ ಸಮಯ ತಗೊಳ್ಳಿ ಅಂದ.

ಆದರೆ, ಸೆನ್ಸೀ ಮಾತ್ರ.. ನೋ ಎಂದ. ಅವನಿಗೇನೂ ತೊಂದರೆ ಇಲ್ಲ. ಆಟ ಮುನ್ನಡೆಯಲಿ ಅಂದ. ಗುರುಗಳಿಗೆ ನಮಸ್ಕರಿಸಿ ಹುಡುಗ ಕಣಕ್ಕೆ ಇಳಿದೇ ಬಿಟ್ಟ. ತುಂಬ ಹೊತ್ತು ಆಟ ಮುನ್ನಡೆಯಿತು. ಒಂದು ಹಂತದಲ್ಲಿ ವಿರೋಧಿ ದೊಡ್ಡ ತಪ್ಪೊಂದನ್ನು ಮಾಡಿಬಿಟ್ಟ. ಅವನ ಗಾರ್ಡ್‌ ಕೆಳಗೆ ಬಿತ್ತು. ಆ ಕ್ಷಣಕ್ಕೆ ಕಾದವನಂತೆ ಹುಡುಗ ಮೂವ್‌ ಆಗಿಯೇ ಬಿಟ್ಟ. ಎದುರಾಳಿ ಈತನನ್ನು ಹಿಡಿದುಕೊಳ್ಳಲು ಪ್ರಯತ್ನಿಸಿದ. ಆದರೆ, ಈಗ ಸಿಗಲೇ ಇಲ್ಲ. ಟೂರ್ನಮೆಂಟನ್ನು ಹುಡುಗ ಗೆದ್ದುಬಿಟ್ಟಿದ್ದ.

ಟೂರ್ನಮೆಂಟ್‌ ಮುಗಿಸಿ ಮನೆಗೆ ಮರಳುವಾಗಲೂ ಹುಡುಗನಿಗೆ ಆ ಒಂದು ಪ್ರಶ್ನೆ ಕಾಡುತ್ತಲೇ ಇತ್ತು. ʻʻಗುರುಗಳು ನನಗೆ ಬೇರೇನೂ ಕಲಿಸುತ್ತಿಲ್ಲವಲ್ಲ ಯಾಕೆ? ಮತ್ತು ಒಂದೇ ಒಂದು ಮೂವ್‌ನಿಂದ ನಾನು ಈ ಟೂರ್ನಮೆಂಟ್‌ ಹೇಗೆ ಗೆದ್ದೆ?ʼ! ಕೊನೆಗೂ ಧೈರ್ಯ ಮಾಡಿ ಕೇಳಿಯೇಬಿಟ್ಟ.

ಆಗ ಗುರುಗಳು ಹೇಳಿದರು: ಹುಡುಗಾ ನೀನು ಎರಡು ಕಾರಣಕ್ಕಾಗಿ ಗೆದ್ದಿದ್ದೀಯಾ.. ಒಂದು ನೀನು ಜುಡೋದಲ್ಲಿ ಅತ್ಯಂತ ಶಕ್ತಿಶಾಲಿಯಾದ, ಯಾರಿಗೂ ಸುಲಭದಲ್ಲಿ ಒಲಿಯದ, ಎದುರಾಳಿಯನ್ನು ಗಲಿಬಿಲಿ ಮಾಡಬಹುದಾದ ದೊಡ್ಡ ಪಟ್ಟೊಂದನ್ನು ನೀನು ಇನ್ನಿಲ್ಲದಂತೆ ಕರಗತ ಮಾಡಿಕೊಂಡಿದ್ದೀಯಾ? ಎರಡನೇ ಕಾರಣ.. ನಿನಗೆ ಕೈ ಇಲ್ಲದೆ ಇರುವುದು!

ಹುಡುಗ ಕೇಳಿದ: ಕೈ ಇಲ್ಲದಿರುವುದು ನನ್ನ ಗೆಲುವಿಗೆ ಕಾರಣವಾಯಿತಾ?
ಗುರುಗಳು ಹೇಳಿದರು: ಹೌದು.. ನೀನು ಕರಗತ ಮಾಡಿಕೊಂಡ ಈ ಮೂವ್‌ ಇದೆಯಲ್ಲಾ.. ಇದನ್ನು ಎದುರಿಸಲು ಎದುರಾಳಿಗೆ ಇರುವ ಒಂದೇ ಒಂದು ಅಸ್ತ್ರವೆಂದರೆ ನಿನ್ನ ಎಡಗೈಯನ್ನು ಹಿಡಿದುಕೊಳ್ಳುವುದು. ಆದರೆ, ನಿನಗೆ ಎಡಗೈಯೇ ಇಲ್ಲ! ಈಗ ಗೊತ್ತಾಯಿತಾ ನಮ್ಮ ದೌರ್ಬಲ್ಯಗಳು ಕೂಡಾ ಕೆಲವೊಮ್ಮೆ ನಮ್ಮ ಶಕ್ತಿಗಳಾಗುತ್ತವೆ ಅಂತ.

ಹುಡುಗಾ ತನ್ನ ಬಲಗೈಯನ್ನು ಬೀಸುತ್ತಾ ಆಕಾಶದೆತ್ತರಕ್ಕೆ ಜಿಗಿದ.

ಇದನ್ನೂ ಓದಿ | Motivational story: ನೆಮ್ಮದಿಯೇ ಇಲ್ಲದ ಶ್ರೀಮಂತ ಮಹಿಳೆಗೆ ಏನೂ ಇಲ್ಲದ ವಿಶಾಲಾಕ್ಷಮ್ಮ ಹೇಳಿದ ಕಥೆ

Exit mobile version