Site icon Vistara News

Motivational story : ಮುಳುಗುತ್ತಿದ್ದ ಆ ಗುರು ಇನ್ನೂ ದೇವರು ಬಂದು ರಕ್ಷಿಸುತ್ತಾನೆ ಎಂದೇ ಕಾಯುತ್ತಿದ್ದರು! ಆದರೆ ದೇವರು ಬಂದಿದ್ದೇ ಗೊತ್ತಾಗಲಿಲ್ಲ!

#image_title

ಕೃಷ್ಣ ಭಟ್‌ ಅಳದಂಗಡಿ- Motivationa story
ಒಂದು ಊರಿನಲ್ಲಿ ಒಬ್ಬ ಪರಮ ದೈವ ಭಕ್ತರಿದ್ದರು. ಏನೇ ಆದರೂ ದೇವರು ರಕ್ಷಿಸುತ್ತಾರೆ ಎನ್ನುವ ಅತಿ ದೊಡ್ಡ ನಂಬಿಕೆಯಿಂದಲೇ ಅವರು ಬದುಕುತ್ತಿದ್ದರು. ಎಲ್ಲರಿಗೂ ಒಳಿತನ್ನೇ ಬಯಸುವ, ಒಳಿತಿನ ಪಾಠಗಳನ್ನೇ ಹೇಳುವ ಅವರ ಬಗ್ಗೆ ಊರಿನವರಿಗೂ ತುಂಬಾ ಗೌರವವಿತ್ತು. ದಿನದ ಹೆಚ್ಚಿನ ಹೊತ್ತು ದೇವರ ಧ್ಯಾನದಲ್ಲೇ ಇರುತ್ತಿದ್ದ ಅವರೇ ಕೆಲವರ ಪಾಲಿಗೆ ದೇವರಂತೆ ಕಾಣುತ್ತಿದ್ದರು.

ಹೀಗಿರುತ್ತಾ ಒಂದು ಬಾರಿ ಭಾರಿ ಮಳೆಯಿಂದ ಊರಿನ ನದಿ, ಹಳ್ಳ ಕೊಳ್ಳಗಳೆಲ್ಲ ತುಂಬಿ ನೆರೆ ನೀರು ಆವರಿಸಿತು. ಇಡೀ ಊರೇ ಪ್ರವಾಹದ ನೀರಿನಲ್ಲಿ ಮುಳುಗಿತು. ಊರಿನ ಜನರೆಲ್ಲ ತಮ್ಮ ಊರು ಬಿಟ್ಟು ಪಕ್ಕದ ಎತ್ತರದ ಪ್ರದೇಶಕ್ಕೆ ಓಡಿ ಹೋಗಲು ಶುರು ಮಾಡಿದರು. ಆದರೆ, ಈ ದೈವಭಕ್ತ ಸಜ್ಜನರು ಮಾತ್ರ ತಾನು ಎಲ್ಲೂ ಹೋಗುವುದಿಲ್ಲ, ಈ ಪ್ರವಾಹವೆಲ್ಲ ದೇವರ ಪಾಲಿಗೆ ಏನೂ ಅಲ್ಲ, ಅವನೇ ನನ್ನನ್ನು ರಕ್ಷಿಸುತ್ತಾನೆ ಎಂದು ನಂಬಿದ್ದರು. ಊರಿನವರು ಬೆಟ್ಟದ ಕಡೆಗೆ ಓಡುವಾಗ ಇವರ ಮನೆಯ ಮುಂಭಾಗದಲ್ಲಿ ಬಂದು ದಯವಿಟ್ಟು ಬನ್ನಿ ಗುರುಗಳೇ ಎಂದು ಮನವಿ ಮಾಡಿದರು. ಆದರೆ, ಈ ಗುರುಗಳು ಮಾತ್ರ ಅದನ್ನು ನಯವಾಗಿ ನಿರಾಕರಿಸಿದರು. ʻʻನನಗೆ ಭಗವಂತನ ಮೇಲೆ ನಂಬಿಕೆ ಇದೆ. ನನಗೆ ಅವನು ಏನೂ ಮಾಡುವುದಿಲ್ಲʼʼ ಎಂದು ಹೇಳಿದರು.

ಮುಂದೆ ಸ್ವಲ್ಪ ಹೊತ್ತಿಗೆ ನೀರು ಅವರ ಮನೆಯ ಅಂಗಳವನ್ನೆಲ್ಲ ತುಂಬಿತು. ಮನೆಯ ಒಳಗಿದ್ದ ಅವರ ಸೊಂಟದವರೆಗೂ ನೀರುಬಂತು. ಆದರೆ, ಗುರುಗಳು ಮಾತ್ರ ಮನೆ ಬಿಟ್ಟು ಹೋಗಲು ಬಯಸಲಿಲ್ಲ. ದೇವರು ಮನಸು ಮಾಡಿದರೆ ಈ ಪ್ರವಾಹವನ್ನು ಇಳಿಸಲು ಎಷ್ಟು ಹೊತ್ತು ಎನ್ನುವ ನಂಬಿಕೆ ಅವರದು. ಅಷ್ಟು ಹೊತ್ತಿಗೆ ಊರಿನ ಮನೆಗಳಲ್ಲಿ ಸಿಕ್ಕಿಬಿದ್ದಿದ್ದ ವಯಸ್ಸಾದವರು, ಅಶಕ್ತರನ್ನು ರಕ್ಷಿಸಲು ದೋಣಿಗಳನ್ನು ತರಲಾಗಿತ್ತು. ಊರಿನವರು ಮತ್ತು ರಕ್ಷಣಾ ತಂಡದವರು ದೋಣಿಯನ್ನು ಇವರ ಮನೆ ಬಾಗಿಲಿಗೇ ತಂದು ನಿಲ್ಲಿಸಿದರು. ಆಗ ಗುರುಗಳು ʻʻಇಲ್ಲ ನೀರು ತಗ್ಗುತ್ತದೆ. ಅಥವಾ ಹೇಗಾದರೂ ದೇವರು ನನ್ನನ್ನು ರಕ್ಷಿಸುತ್ತಾನೆʼʼ ಎಂದು ಹೇಳಿ ಅವರನ್ನು ಸಾಗ ಹಾಕಿದರು. ದೇವರ ಮೇಲಿನ ಅವರ ಅಚಲ ನಂಬಿಕೆ ಕಂಡು ಅಲ್ಲಿಗೆ ಬಂದವರೂ ಮೂಗಿಗೆ ಬೆರಳಿಟ್ಟರು.

ಇನ್ನೂ ಸ್ವಲ್ಪ ಹೊತ್ತು ಕಳೆಯಿತು. ನೀರು ಇನ್ನಷ್ಟು ಏರತೊಡಗಿತು. ಊರಿನ ಜನರೆಲ್ಲ ಬಹುತೇಕ ಅಲ್ಲಿಂದ ಓಡಿ ಹೋಗಿ ರಕ್ಷಣೆ ಪಡೆದಿದ್ದರು. ಆದರೂ ಕೆಲವರು ನಡುಗಡ್ಡೆಗಳಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಅವರನ್ನು ಹೆಲಿಕಾಪ್ಟರ್‌ ಮೂಲಕ ರಕ್ಷಿಸುವ ಕಾರ್ಯಾಚರಣೆ ನಡೆಯಿತು. ಊರಿನ ಜನರು ಗುರುಗಳು ಇನ್ನೂ ಮನೆಯಲ್ಲಿರುವುದಾಗಿ ತಿಳಿಸಿದರು. ಹೆಲಿಕಾಪ್ಟರ್‌ ಕಾರ್ಯಾಚರಣೆ ನಡೆಸುವವರು ಇವರ ಮನೆ ಮುಂದೆ ಬಂದು ಹಗ್ಗ ಇಳಿಸಿ ಇದನ್ನು ಹಿಡಿದುಕೊಳ್ಳಿ ಎಂದರು. ಆಗಲೂ ಗುರುಗಳು ದೇವರನ್ನೇ ನಂಬಿ ಕುಳಿತರು.

ಸ್ವಲ್ಪ ಹೊತ್ತಿಗೆ ನೀರು ಇನ್ನಷ್ಟು ಹೆಚ್ಚಿತು. ಗುರುಗಳು ನೀರಿನಲ್ಲಿ ಮುಳುಗಿ ಪ್ರಾಣವನ್ನೇ ಕಳೆದುಕೊಂಡರು. ಕೊನೆಯ ಕ್ಷಣದವರೆಗೂ ಭಗವಂತನೇ ಬಂದು ತನ್ನನ್ನು ರಕ್ಷಣೆ ಮಾಡುತ್ತಾನೆ ಎಂದು ನಂಬಿದ ಅವರಿಗೆ ಪ್ರಾಣ ಹೋಗುವ ಹೊತ್ತಿಗೆ ದೇವರ ಮೇಲೇ ಸಿಟ್ಟು ಬಂದಿತ್ತು. ಜೀವನದ ಪ್ರತಿ ಕ್ಷಣವನ್ನೂ ದೇವರ ನೆನಪಿನಲ್ಲಿ, ಸ್ಮರಣೆಯಲ್ಲಿ ಕಳೆದುದಕ್ಕೆ ಕೊಟ್ಟ ಫಲ ಇದುವೇನಾ ಎಂದು ಅವರು ಬೇಸರಗೊಂಡರು.

ಇತ್ತ ಅವರ ಪ್ರಾಣ ಪಕ್ಷಿ ಹೋಗಿ ದೇವರ ಮುಂದೆ ನಿಂತಿತು. ಆಗ ಗುರುಗಳು ದೇವರ ಮುಂದೆಯೇ ತನ್ನ ಆಕ್ಷೇಪಣೆಯನ್ನು ಸಲ್ಲಿಸಿದರು. ʻʻಅಲ್ಲ ದೇವರೇ.. ಊರಿನಲ್ಲಿ ಅದೆಷ್ಟೋ ಕಳ್ಳರು, ಸುಳ್ಳರು ಇದ್ದರು. ಅವರೆಲ್ಲರೂ ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ, ಸದಾ ಕಾಲ ನಿನ್ನನ್ನು ಧ್ಯಾನಿಸುವ. ಭಜಿಸುವ ನನ್ನನ್ನು ಮಾತ್ರ ನೀನು ರಕ್ಷಿಸಲಿಲ್ಲʼʼ ಎಂದು ಹೇಳಿದರು.

ಆಗ ದೇವರು, ʻಭಕ್ತಾ.. ನಿಜಕ್ಕೂ ನಿನ್ನ ಮೇಲೆ ಅತಿಯಾದ ಪ್ರೀತಿ ಇದೆ. ನಿಜವೆಂದರೆ ನಾನು ಹಲವು ರೂಪಗಳಲ್ಲಿ ಬಂದು ನಿನ್ನನ್ನು ರಕ್ಷಿಸಲು ಯತ್ನಿಸಿದೆ. ಮೊದಲು ಯಾರೋ ದಾರಿಹೋಕರ ಮೂಲಕ ನಿನಗೆ ಸಂದೇಶ ಕಳುಹಿಸಿದೆ. ಬಳಿಕ ನಾವೆಯನ್ನೇ ಕಳುಹಿಸಿದೆ. ಕೊನೆಗೆ ವಿಮಾನವನ್ನೇ ಕಳುಹಿಸಿದೆ. ಆದರೆ, ನೀನು ನನ್ನ ದೊಡ್ಡ ಭಕ್ತನೇ ಆದರೂ ಬಂದಿದ್ದು ನಾನು ಎನ್ನುವ ಅರಿವು ನಿನಗಾಗಲಿಲ್ಲ. ದೇವರು ಯಾವ ರೂಪದಲ್ಲಾದರೂ ಬಂದು ನಮ್ಮನ್ನು ರಕ್ಷಿಸುತ್ತಾನೆ ಎಂದು ಬೋಧನೆ ಮಾಡಿದ ನೀನೇ ಈ ಸಾರಿ ನಾನು ಬಂದ ಯಾವ ರೂಪಗಳನ್ನೂ ಗುರುತಿಸಲಿಲ್ಲವಲ್ಲ..ʼʼ ಎಂದು ಪ್ರಶ್ನಿಸಿದ.

ಇದನ್ನೂ ಓದಿ : Motivational story : ಹಬ್ಬದೂಟ ಬಡಿಸಲು ಬೇಕಿರುವುದು ದುಡ್ಡಲ್ಲ! ಮತ್ತೇನು?

ನೀನು ಅಂತಲ್ಲ, ತುಂಬ ಜನ ಹೀಗೇ ಇರುತ್ತಾರೆ. ದೇವರು ಇದೇ ರೀತಿಯಲ್ಲಿ ಸಹಾಯ ಮಾಡಬೇಕು, ಇದೇ ರೂಪದಲ್ಲಿ ತಮ್ಮನ್ನು ಉದ್ಧರಿಸಬೇಕು ಎಂದು ಬಯಸುತ್ತಾರೆ… ಹೀಗಾಗಿ ಉಳಿದ ಅವಕಾಶಗಳನ್ನೆಲ್ಲ ಮಿಸ್‌ ಮಾಡಿಕೊಳ್ಳುತ್ತಾರೆ. ದೇವರೇ ನನಗೆ ಹಣ ಕೊಡು ಎಂದು ಅನನ್ಯ ಭಕ್ತಿಯಿಂದ ಕೇಳುತ್ತಾರೆ, ಅವರಿಗೆ ಲಾಟರಿ ಹೊಡೆಯಬೇಕು ಎನ್ನುವ ಆಸೆ ಇರುತ್ತದೆ. ನಿಜವೆಂದರೆ ನಾನು ಅವನಿಗೆ ಒಂದು ಒಳ್ಳೆಯ ಉದ್ಯೋಗ ಒದಗಿಸುವ ಮೂಲಕ ಲಾಟರಿಗಿಂತಲೂ ಹೆಚ್ಚು ಸಂಪಾದಿಸುವ ಅವಕಾಶ ಕೊಟ್ಟಿರುತ್ತೇನೆ. ಅವನು ಅದನ್ನು ಗಮನಿಸಿಯೇ ಇರುವುದಿಲ್ಲ. ಬದುಕಿನಲ್ಲಿ ಅವಕಾಶಗಳು ಬರುವುದು ಅಂತಾರಲ್ಲ.. ಅದು ದೇವರು ಕೊಡುವ ಚಾನ್ಸ್‌ಗಳು. ಅದನ್ನು ಬಳಸಿಕೊಳ್ಳದೆ ಹೋದರೆ ದೇವರನ್ನು ದೂರಿ ಏನು ಪ್ರಯೋಜನ? ಎಂದು ಕೇಳಿದರು. ಗುರುಗಳಿಗೆ ಎಲ್ಲವೂ ಮತ್ತೆ ನೆನಪಾಗತೊಡಗಿತು.

Exit mobile version