Site icon Vistara News

Motivational story | ಎಚ್ಚರಿಕೆ ಬೇಕಿರುವುದು ಕೇವಲ ಮರ ಹತ್ತುವಾಗ ಅಲ್ಲ, ಇಳಿಯುವಾಗಲೂ ಬೇಕು!

Tree climbing

ಕೃಷ್ಣ ಭಟ್‌ ಅಳದಂಗಡಿ- Motivational story
ಅದೊಂಥರಾ ನಮ್ಮ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಚಾಮರಾಜನಗರ ಜಿಲ್ಲೆಯಲ್ಲಿರುವಂಥ ಮಲೆನಾಡಿನ ತಪ್ಪಲಿನ ಪ್ರದೇಶ. ಇಲ್ಲಿನಂತೆ ಅಲ್ಲೂ ಕಾಡು ಪ್ರಾಣಿಗಳ ಕಾಟ ಜಾಸ್ತಿ. ಮರ ಹತ್ತಿ ಮಾಡಬೇಕಾದ ಕೆಲಸಗಳು, ಉದ್ಯೋಗ ನೂರಾರು. ಹಾಗಾಗಿ ಅಲ್ಲಿ ಮರ ಹತ್ತುವುದು ತುಂಬಾ ಮುಖ್ಯವಾದ, ಅಗತ್ಯವಾದ ಕೌಶಲ.

ಆ ಊರಿನಲ್ಲೊಬ್ಬರು ಹಿರಿಯ ವ್ಯಕ್ತಿ ಇದ್ದಾರೆ. ಅವರು ಎಲ್ಲ ಯುವಕರು, ಸಣ್ಣ ಮಕ್ಕಳಿಗೆ ಮರ ಹತ್ತುವ ಬಗ್ಗೆ ತರಬೇತಿಯನ್ನು ನೀಡುತ್ತಿದ್ದರು. ಅವರ ಕೈಯಲ್ಲಿ ಪಳಗಿದವರು ಪರ್ಫೆಕ್ಟ್‌ ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು. ಅದೊಂದು ಸಾರಿ ಅವರು ಒಂದು ತಂಡಕ್ಕೆ ನೀಡಿದ ತರಬೇತಿ ಅವಧಿ ಅಂದಿಗೆ ಮುಕ್ತಾಯವಾಗಿತ್ತು. ಆವತ್ತು ಅವರು ಆ ಬ್ಯಾಚಿನ ಎಲ್ಲ ಹುಡುಗರನ್ನು ಒಂದು ದೊಡ್ಡ, ಉದ್ದನೆಯ, ಹತ್ತಲು ಕಷ್ಟವಾದ ಮರದ ಬಳಿಗೆ ಕರೆದುಕೊಂಡು ಹೋದರು.

ʻʻನೋಡಿ ಮಕ್ಕಳೇ.. ಇವತ್ತು ನಿಮ್ಮ ತರಬೇತಿಯ ಕೊನೆಯ ದಿನ. ಮರ ಹತ್ತುವ ವಿದ್ಯೆ ನಿಮಗೆ ಎಷ್ಟರ ಮಟ್ಟಿಗೆ ಸಿದ್ಧಿಸಿದೆ ಎಂದು ಪರೀಕ್ಷೆ ಮಾಡೋ ದಿನ. ಇವತ್ತು ನೀವು ಈ ಮರವನ್ನು ಯಾವುದೇ ತೊಂದರೆ ಇಲ್ಲದೆ ಹತ್ತಿ ಇಳಿದಿರಿ ಎಂದಾದರೆ ಜಗತ್ತಿನ ಯಾವ ಮರವನ್ನಾದರೂ ಹತ್ತಿಳಿಯಬಲ್ಲಿರಿ ಎನ್ನುವ ವಿಶ್ವಾಸ ನನಗೆ ಮೂಡುತ್ತದೆʼʼ ಎಂದು ಮಕ್ಕಳನ್ನು ಉದ್ದೇಶಿಸಿ ಹೇಳಿದರು.

ತರಬೇತಿ ಪಡೆದ ಹುಡುಗರೆಲ್ಲ ಸಾಲಾಗಿ ನಿಂತರು. ಒಬ್ಬ ಮರ ಹತ್ತಿದ. ಅತ್ಯಂತ ಸುಲಭವಾಗಿ ಅವನು ಮರವನ್ನು ಹತ್ತಿ, ಬಳಿಕ ಇಳಿಯಲು ಆರಂಭಿಸಿದ. ಆತ ಅರ್ಧಕ್ಕೆ ಇಳಿಯುತ್ತಿದ್ದಂತೆಯೇ ಗುರುಗಳು ಹೇಳಿದರು: ಹುಡುಗಾ.. ನಿಧಾನಕ್ಕೆ ಇಳಿ.. ಜಾಗೃತೆ. ಅವಸರವೇನೂ ಇಲ್ಲ.

ಹುಡುಗಾ ಗುರುಗಳ ಮಾತಿನಂತೆ ನಿಧಾನಕ್ಕೆ ಇಳಿದು ಬಂದು ನಮಸ್ಕರಿಸಿದ. ಆಗ ಇನ್ನೊಬ್ಬ ಮರ ಹತ್ತಲು ಆರಂಭಿಸಿದ. ಅವನೂ ಯಶಸ್ವಿಯಾಗಿ ಹತ್ತಿ ಮರಳಿ ಇಳಿಯತೊಡಗಿದ. ಅರ್ಧಕ್ಕೆ ಬರುತ್ತಿದ್ದಂತೆಯೇ ಗುರುಗಳು ಮತ್ತೆ ಹೇಳಿದರು: ಜಾಗೃತೆ, ನಿಧಾನಕ್ಕೆ ಇಳಿ.. ಅವಸರವೇನೂ ಇಲ್ಲ.

ಹೀಗೆ ಪ್ರತಿಬಾರಿಯೂ ಹುಡುಗರು ಮರ ಹತ್ತಿ ಇಳಿಯುವ ವೇಳೆ ಅರ್ಧಕ್ಕೆ ಬಂದಾಗ ಗುರುಗಳು ಈ ಎಚ್ಚರಿಕೆ ಮಾತನ್ನು ಹೇಳುತ್ತಿದ್ದರು. ಇದು ಎಲ್ಲರಲ್ಲೂ ಕುತೂಹಲ ಮೂಡಿಸಿತ್ತು. ಒಬ್ಬ ಹುಡುಗ ಕೇಳಿಯೇ ಬಿಟ್ಟ: ಅಲ್ಲಾ ಗುರುಗಳೇ.. ನೀವು ನಿಜವಾಗಿ ನೀವು ಮರ ಹತ್ತುವ ಮೊದಲು ನಮಗೆ ಎಚ್ಚರಿಕೆ ಮಾತುಗಳನ್ನು ಹೇಳಬಹುದಿತ್ತು. ಆದರೆ, ಆಗ ಹೇಳಲಿಲ್ಲ. ಇಳಿಯುವಾಗ ಯಾಕೆ ಹೇಳುತ್ತೀರಿ.. ಇದಕ್ಕೇನರ್ಥ?

ಆಗ ಗುರುಗಳು ಹೇಳಿದರು
ʻʻಹುಡುಗಾ.. ಇಂಥಹುದೊಂದು ಮರದ ಕೊನೆಯ ಗೆಲ್ಲನ್ನು ತಲುಪಿ ಬರುವುದು ಎಷ್ಟು ಕಷ್ಟ, ಎಷ್ಟು ಎಚ್ಚರ ಬೇಕು ಎನ್ನುವುದು ಎಲ್ಲರಿಗೂ ಗೊತ್ತು. ಹಾಗಾಗಿ ಯಾರಿಗೂ ಎಚ್ಚರಿಕೆಯನ್ನು ಕೊಡಬೇಕಾದ ಅವಶ್ಯಕತೆ ಇಲ್ಲ. ನೋಡು ನಿನಗೇ ಇದರ ವಿಷಯ ಗೊತ್ತು. ನಾನು ಹೇಳದಿದ್ದರೂ ನೀವೆಲ್ಲರೂ ಎಚ್ಚರಿಕೆ ವಹಿಸಿಯೇ ವಹಿಸುತ್ತೀರಿ. ಪ್ರತಿಯೊಬ್ಬರೂ ಹಾಗೇ ಒಂದು ಕೆಲಸ ಮಾಡುವ ಮೊದಲು ತುಂಬಾ ಎಚ್ಚರಿಕೆ, ತುಂಬಾ ಲೆಕ್ಕಾಚಾರದಲ್ಲೇ ಇರುತ್ತಾರೆ. ಆದರೆ, ಒಂದು ಗುರಿಯ ಹತ್ತಿರ ತಲುಪುವ ಹೊತ್ತಿಗೆ ಏನೋ ಸಣ್ಣ ನಿರ್ಲಕ್ಷ್ಯ ಮಾಡುತ್ತಾರೆ. ಹಾಗಾಗಿ ಎಲ್ಲ ಪ್ರಯತ್ನಗಳು ವಿಫಲವಾಗುತ್ತವೆ. ಯಾಕೆಂದರೆ ಆಗ ಕೆಲಸ ಆಗಿಯೇ ಹೋಯಿತು ಎನ್ನುವ ಸಣ್ಣದೊಂದು ಭಾವ ಮನಸನ್ನು ಆವರಿಸುತ್ತದೆ. ಹಾಗಾಗಿ ನಮ್ಮ ಮನಸು ಬೇರೆಲ್ಲೋ ಅಲೆಯಲು ಶುರು ಮಾಡುತ್ತದೆ. ಯಶಸ್ಸನ್ನು ಸಂಭ್ರಮಿಸುವ ಕಡೆಗೆ ಹೋಗುತ್ತದೆ. ಹೀಗಾಗಿ ತಪ್ಪು ಆಗೋ ಜಾಗ ಇದು. ಅಲ್ಲಿ ನಾವು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಈ ಪ್ರಕರಣದಲ್ಲಿ ಹತ್ತುವಾಗ ಇರುವ ಎಚ್ಚರಿಕೆ ಇಳಿಯುವಾಗ ಇರುವುದಿಲ್ಲ. ಹೇಗೂ ಇಳಿಯುವುದಲ್ವಾ ಎನ್ನುವ ಉಡಾಫೆ ಇರುತ್ತದೆ. ಹೀಗಾಗಿ ಅದನ್ನು ಹೋಗಲಾಡಿಸಲು ಇಳಿಯುವಾಗ ನಾನು ಸೂಚನೆ ಕೊಟ್ಟೆʼʼ ಎಂದರು. ಹುಡುಗ ಅರ್ಥವಾಯಿತು ಎನ್ನುವಂತೆ ತಲೆದೂಗಿದ.

ಇದನ್ನೂ ಓದಿ | Motivational story | ಪ್ರತಿ ನೆಗೆಟಿವ್‌ನಲ್ಲೂ ಹಲವು ಪಾಸಿಟೀವ್‌ ಇರ್ತದೆ ಅಂದ ಆ ಕಲಾವಿದ! ಒಂಟಿ ಕಣ್ಣಿನ ರಾಜನೂ ಅಲ್ಲಿ ಮಿಂಚಿದ್ದ!

Exit mobile version