Site icon Vistara News

Motivational story | ತುಂಬ ಹೊತ್ತು ಹಿಡ್ಕೊಂಡೇ ಇದ್ರೆ ಬಲೂನೂ ಭಾರವಾಗುತ್ತೆ!

balloon

ಕೃಷ್ಣ ಭಟ್‌ ಅಳದಂಗಡಿ- motivational story

ಚಂದ್ರಮೋಹನ್ ಸರ್ ಅಂದ್ರೆ ಎಲ್ಲರಿಗೂ ಇಷ್ಟ. ಪದವಿ ತರಗತಿಗೆ ಪಾಠ ಮಾಡುತ್ತಿದ್ದ ಅವರು ಕ್ಲಾಸಲ್ಲಿ ಆಗಾಗ ಹೊಸ ಹೊಸ ವಿಷಯಗಳನ್ನು ತುಂಬ ಸುಂದರವಾಗಿ ವರ್ಣಿಸಿ ಹೇಳ್ತಾ ಇದ್ದರು.

ಆವತ್ತು ಕ್ಲಾಸಿಗೆ ಬಂದಾಗ ಅವರು ಪುಸ್ತಕಗಳ ಜತೆಗೆ ಒಂದು ಬಲೂನು ಹಿಡಿದುಕೊಂಡು ಬಂದಿದ್ದರು. ವಿದ್ಯಾರ್ಥಿಗಳು ಆಗಲೇ ಒಂದೊಂದು ರೀತಿಯಲ್ಲಿ ಯೋಚನೆ ಮಾಡಲು ಶುರು ಮಾಡಿದ್ದರು. ಬಲೂನಲ್ಲಿ ಏನಿದೆ ಅಂತ ಕೇಳಬಹುದು.. ಕೆಲವರು ಅದಕ್ಕೆ ಗಾಳಿ ಅನ್ನಬಹುದು, ಕೆಲವರು ಬುದ್ಧಿವಂತರು ನಾವು ಬಾಯಿಯಿಂದ ಊದಿ ದೊಡ್ಡದು ಮಾಡುವುದರಿಂದ ಇಂಗಾಲದ ಡೈ ಆಕ್ಸೈಡ್ ಅಂತ ಹೇಳಬಹುದು. ಕೊನೆಗೆ ಚಂದ್ರಮೋಹನ್ ಸರ್, ಇಲ್ಲ ಅದರಲ್ಲಿ ನಮ್ಮ `ಉಸಿರಿದೆ’ ಅಂತ ಹೇಳಬಹುದು ಅಂತೆಲ್ಲ ಲೆಕ್ಕ ಹಾಕಿದ್ರು. ಇನ್ನೂ ಕೆಲವು ಬುದ್ಧಿವಂತರು `ಒತ್ತಡ ಜಾಸ್ತಿ ಆಗುತ್ತಿದ್ದ ಹಾಗೇ ಬಲೂನು ಒಡೆಯುವ ಅಪಾಯ ಜಾಸ್ತಿ ಇರ್ತದೆ. ಹಾಗಾಗಿ ಒತ್ತಡ ಹೆಚ್ಚಾಗದಂತೆ ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು,’ ಅನ್ನುವ ಪಾಠ ಹೇಳಬೇಕು ಅಂತೆಲ್ಲ ಯೋಚಿಸಿದರು. ಹೇಗಿದ್ದರೂ ಇಂಥ ಹತ್ತಾರು ಕಥೆಗಳನ್ನು ಆಗಲೇ ಚಂದ್ರಮೋಹನ್ ಸರ್ ಅವರಿಗೆ ಹೇಳಿದ್ದರು.

ಆವತ್ತು ಚಂದ್ರಮೋಹನ್ ಸರ್ ಹೇಳಿದ್ದೇ ಬೇರೆ.

ʻಈ ಬಲೂನು ಎಷ್ಟು ಭಾರ ಇರಬಹುದು’ ಎಂದು ಕೇಳಿದರು. `ಅಯ್ಯೋ ಬಲೂನು ಭಾರವೇ’ ಎಂದು ಎಲ್ಲರೂ ನಕ್ಕರು. ತಮಗೆ ತಿಳಿದಂತೆ ಗ್ರಾಮ್ಸ್ ಲೆಕ್ಕ ಹೇಳಿದರು. ಆಗ ಚಂದ್ರಮೋಹನ್ ಸರ್ `ʻನೀವು ಹೇಳಿದ್ದು ನಿಜ. ಖಂಡಿತಕ್ಕೂ ಇದು ಭಾರವೇನೂ ಇಲ್ಲ. ಎಲ್ಲೋ ಕೆಲವು ಮಿಲಿಗ್ರಾಂ ಇರಬಹುದು ಅಷ್ಟೆ” ಎಂದರು.

ಬಳಿಕ ಚಂದ್ರಮೋಹನ್ ಸರ್ ಎಲ್ಲ ವಿದ್ಯಾರ್ಥಿಗಳಿಗೆ ಒಂದೊಂದು ಬಲೂನು ಕೊಟ್ಟು ಇದನ್ನು ಊದಿ ದೊಡ್ಡದು ಮಾಡಿ ಎಂದರು. ವಿದ್ಯಾರ್ಥಿಗಳು ಉತ್ಸಾಹದಿಂದ ಊದಿದರು.

`ʻಈಗ ನಿಮ್ಮ ಒಂದು ಕೈಯನ್ನು ಮುಂದೆ ಚಾಚಿ ಅದರಲ್ಲಿ ಈ ಬೆಲೂನನ್ನು ಹಿಡಿದುಕೊಳ್ಳಿ’ ಎಂದರು. ಎಲ್ಲರೂ ಹಾಗೇ ಮಾಡಿದರು. `ಭಾರ ಇದೆಯಾ’ ಎಂದು ಕೇಳಿದರು. `ʻಇಲ್ಲ ಸರ್’ ಎಲ್ಲರದೂ ಒಂದೇ ಉತ್ತರ.

`ʻಬಲೂನನ್ನು ಹಾಗೇ ಹಿಡ್ಕೊಂಡೇ ಇರಿ ಸ್ವಲ್ಪ ಹೊತ್ತು. ನಾನು ಬಲೂನು ಬಿಡಿ ಅನ್ನೋವರೆಗೆ ಬಿಡಬೇಡಿ’ ಎಂದರು. ವಿದ್ಯಾರ್ಥಿಗಳು ಓಕೆ ಸರ್ ಎಂದರು. ಎರಡು ನಿಮಿಷ ಬಿಟ್ಟು ಕೇಳಿದರು `ಭಾರ ಇದ್ಯಾ?’. ವಿದ್ಯಾರ್ಥಿಗಳು ಇಲ್ಲ ಸರ್. ಹತ್ತು ನಿಮಿಷ ಬಿಟ್ಟು ಮತ್ತೆ ಕೇಳಿದರು: ಭಾರ ಇದ್ಯಾ?

ವಿದ್ಯಾರ್ಥಿಗಳಲ್ಲಿ ಕೆಲವರು: ಹೌದು ಸರ್ ಕೈ ನೋಯ್ತಾ ಇದೆ ಎಂದರು.
ಹಾಗೇ ಒಂದರ್ಧ ಗಂಟೆ ಬಲೂನು ಹಿಡಿದುಕೊಂಡಿದ್ದ ಹಾಗೇ ವಿದ್ಯಾರ್ಥಿಗಳು ಕೈಸೋಲಲು ಆರಂಭಿಸಿದರು. ಕೆಲವರಂತೂ ಇನ್ನು ಆಗಲ್ಲ ಅಂದರು. ಕೊನೆಗೆ ಚಂದ್ರಮೋಹನ್ ಸರ್, ಬಿಟ್ಟು ಬಿಡಿ ಬಲೂನು ಅಂದರು. ಬಲೂನು ಬಿಟ್ಟರು, ಕೈ ಇಳಿಸಿದರು. `ʻಅಬ್ಬಾ ನೋವೇ’ ಎಂದು ಕೆಲವರು ಅರಚಿದರು.

ಚಂದ್ರಮೋಹನ್ ಸರ್ ಕೇಳಿದರು: ಬಲೂನನ್ನು ಸ್ವಲ್ಪ ಹೊತ್ತು ಹಿಡಿದುಕೊಂಡಾಗ ಏನೂ ಆಗಿರಲಿಲ್ಲ ಅಲ್ವಾ? ಜಾಸ್ತಿ ಹೊತ್ತಾಗುತ್ತಾ ಇದ್ದ ಹಾಗೇ ಕೈ ನೋಯಲು ಶುರುವಾಯಿತು ಹೌದಲ್ವಾ? ಹಾಗಿದ್ದರೆ ಬಲೂನಿನ ಭಾರ ಜಾಸ್ತಿಯೇನಾದರೂ ಆಯ್ತಾ?

ವಿದ್ಯಾರ್ಥಿಗಳೆಲ್ಲ ಜೋರಾಗಿ ಅದು ಹೇಗೆ ಸಾಧ್ಯ ಸರ್.. ಆಗಿರಲ್ಲ’ ಎಂದರು.

ʻʻನಂಗೂ ಹಾಗೇ ಅನಿಸಿತು. ನೀವು ಹಿಡಿದುಕೊಂಡಿದ್ದು ಅತಿ ಹಗುರದ ಬಲೂನು. ಆದರೂ ಸ್ವಲ್ಪ ಹೊತ್ತಲ್ಲೇ ನೋವು ಬಂತು. ಒಂದು ವೇಳೆ ಇಡೀ ದಿನ ಅದನ್ನು ಹಿಡಿದುಕೊಂಡಿದ್ದರೆ ಕೈ ಮರಗಟ್ಟಿಯೇ ಹೋಗ್ತಿತ್ತು ಅಲ್ವಾ? ಬೇರೆ ಯಾವ ಕೆಲಸವನ್ನೂ ಮಾಡಲೂ ಸಾಧ್ಯವಾಗುವುದಿಲ್ಲ ಅಲ್ವಾ?” -ಸರ್ ಕೇಳಿದರು. ವಿದ್ಯಾರ್ಥಿಗಳು ಹೌದೆಂದರು.

ಚಂದ್ರಮೋಹನ್ ಸರ್ ಮುಂದುವರಿಸಿದರು: ಬಲೂನು ಅನ್ನೋದು ಏನೋ ಸಣ್ಣ ಅಸಹನೆ, ಸಿಟ್ಟು, ಯಾವುದೋ ಜಗಳ, ಇನ್ನೇನೋ ಕಿರಿಕಿರಿ, ಮತ್ಯಾವುದೋ ನೋವು ಅಂತ ಇಟ್ಕೊಳ್ಳಿ. ಒಂದೆರಡು ನಿಮಿಷದಲ್ಲಿ ಅದನ್ನು ನಿವಾರಿಸಿಕೊಂಡರೆ ದೊಡ್ಡ ಸಮಸ್ಯೆ ಏನೂ ಆಗುವುದಿಲ್ಲ. ಗಂಟೆಗಳಷ್ಟು ಕಾಲ, ದಿನಗಟ್ಟಲೆ ಅದನ್ನು ಹಾಗೇ ಹಿಡಿದಿಟ್ಟುಕೊಂಡರೆ ಕೈಗಳು ಸೋತಂತೆ, ಮನಸು, ದೇಹ ಎರಡೂ ಸೋಲ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಅದನ್ನು ಹಿಡಿದುಕೊಂಡಿದ್ದಷ್ಟೂ ಹೊತ್ತು ಬೇರೆ ಏನೂ ಮಾಡಲಿಕ್ಕೂ ಆಗುವುದಿಲ್ಲ. ಅಲ್ವಾ? ಸಣ್ಣ ಸಣ್ಣ ಸಮಸ್ಯೆಗಳನ್ನು ದೊಡ್ಡದು ಮಾಡಿದಷ್ಟೂ ಹೆಚ್ಚೆಚ್ಚು ನೋವಾಗುತ್ತದೆ ಅಲ್ವಾ?

ವಿದ್ಯಾರ್ಥಿಗಳೆಲ್ಲ.. ಹೋ ಹೌದಲ್ವಾ? ಎಂದು ಅಚ್ಚರಿಪಟ್ಟರು.

ಇದನ್ನೂ ಓದಿ | Motivational story | ನನ್ನ ಸಂಬಳ ನೀವು ನಿರ್ಧರಿಸೋದಲ್ಲ, ನಾನು ನಿರ್ಧರಿಸೋದು!

ಇದನ್ನೂ ಓದಿ |Motivational story | ಅಪ್ಪಾ… ಒಂದು ಮುತ್ತು ಕೊಡದೆ ಹೋದೆ ಯಾಕಪ್ಪ?

Exit mobile version