ಕೃಷ್ಣ ಭಟ್ ಅಳದಂಗಡಿ- motivational story
ಬೆಂಗಳೂರಿನ ಬಸವನಗುಡಿಯ ಹತ್ತಿರದ ಮನೆ ಅದು. ಅಲ್ಲೊಬ್ಬ 10 ವರ್ಷದ ಹುಡುಗ. ಹೆಸರು ಸುರೇಶ್. ಅವನಿಗೆ ವಿಡಿಯೋ ಗೇಮ್ಸ್ ಅಂದರೆ ತುಂಬಾ ಇಷ್ಟ. ಸಣ್ಣ ವಯಸ್ಸಿನಿಂದಲೇ ವಿಡಿಯೊ ಗೇಮ್ಸ್ ಆಡುತ್ತಿದ್ದುದರಿಂದ ಅದರಲ್ಲಿ ಎಕ್ಸ್‌ಪರ್ಟ್ ಆಗಿಬಿಟ್ಟಿದ್ದ. ಅವನಿಗೆ ವಿಡಿಯೊ ಗೇಮ್‌ನ ಎಲ್ಲ ತಂತ್ರಗಳು ಗೊತ್ತಿತ್ತು ಮತ್ತು ಕೆಲವು ಕುತಂತ್ರಗಳೂ ಗೊತ್ತಿತ್ತು. ಹಾಗಾಗಿ, ಅವನು ಎದುರಾಳಿ ಯಾರೇ ಇದ್ದರೂ ಸೋಲಿಸಿ ಬಿಡುತ್ತಿದ್ದ. ಅವನ ಆಟದ ರೀತಿ ಯಾರಿಗೇ ಅದರೂ ʻಅಬ್ಬಾʼ ಅನಿಸುವಂತೆ ಇರುತ್ತಿತ್ತು.
ಅವನು ಎಷ್ಟು ಬುದ್ಧಿವಂತನೆಂದರೆ ಅವನು ಮೋಸ ಮಾಡಿದರೂ ಎದುರಾಳಿಗಳಿಗೆ ಗೊತ್ತೇ ಆಗುತ್ತಿರಲಿಲ್ಲ. ಹಾಗಾಗಿ ಅಕ್ಕ ಪಕ್ಕದ ಹುಡುಗರನ್ನೆಲ್ಲ ತುಂಬ ಸುಲಭವಾಗಿ ಸೋಲಿಸಿ ಖುಷಿಪಡುತ್ತಿದ್ದ. ಅವನು ಚಾಂಪಿಯನ್ ಎಂದು ಎಲ್ಲರೂ ಒಪ್ಪಿಕೊಂಡಿದ್ದರು. ಅವನೇ ಪ್ರತಿ ಸಾರಿಯೂ ಗೆಲ್ಲುತ್ತಿದ್ದುದರಿಂದ ಹೆಚ್ಚಿನವರು ಅವನ ಜತೆ ಆಡಲು ಇಷ್ಟಪಡುತ್ತಿರಲಿಲ್ಲ. ʻಹೋಗು ಮಾರಾಯ, ನೀನೇ ಪ್ರತಿ ಸಾರಿ ಗೆಲ್ಲುವುದಾದರೆ ನಾವು ಯಾಕೆ ಆಡುವುದುʼ ಎನ್ನುತ್ತಿದ್ದರು.
ಆದರೆ, ಪಕ್ಕದ ಮನೆಯ ಪಾಪದ ಹುಡುಗ ಗಿರೀಶ್ ಮಾತ್ರ ಇವನು ಯಾವಾಗ ಕರೆದರೂ ಬರುತ್ತಿದ್ದ. ಸುರೇಶನ ಜತೆ ಆಡಿ ಸೋತು ಹೋಗುತ್ತಿದ್ದ. ಆಗೆಲ್ಲ ಸುರೇಶ್ ಹೆಮ್ಮೆಯಿಂದ ಬೀಗುತ್ತಿದ್ದ. ಗಿರೀಶನಿಗೆ ತಮಾಷೆ ಮಾಡುತ್ತಿದ್ದ.
ಹೀಗಿರುತ್ತಾ ಸುರೇಶ್‌ಗೆ ಲೈಫೇ ಒಂಥರಾ ಬೋರಾಯಿತು. ಯಾರನ್ನಾದರೂ ದೊಡ್ಡ ಮಟ್ಟದಲ್ಲಿ ಸೋಲಿಸಬೇಕು ಅನಿಸಿತು. ಅದಕ್ಕೆ ವಿಡಿಯೊ ಗೇಮ್ ಚಾಂಪಿಯನ್‌ಷಿಪ್‌ಗೆ ಹೆಸರು ನೋಂದಾಯಿಸಿದ. ಅಲ್ಲಿಯಾದರೂ ತನಗೊಬ್ಬ ಸರಿಯಾದ ಪ್ರತಿಸ್ಪರ್ಧಿ ಸಿಗಬಹುದು ಅಂತ ಅವನಿಗೆ ಆಸೆ. ಒಬ್ಬನೇ ಹೋಗಲು ಬೋರಾಗುತ್ತದೆ ಅಂತ ಗಿರೀಶನಿಗೂ ಬಾ ಎಂದು ಕರೆದ.
ಅದೊಂದು ಭಾನುವಾರ ಇಬ್ಬರೂ ಹೋದರು. ಗಿರೀಶ ʻನಾನು ಆಡುವುದಿಲ್ಲ. ನೀನು ಆಡುʼ ಎಂದು ಸುರೇಶನಿಗೆ ಹೇಳಿದ. ʻಹೇಗೂ ಇರ್ತೀಯಲ್ಲಾ.. ಇಲ್ಲೇ ಆಡ್ತಾ ಇರುʼ ಎಂದು ಸುರೇಶ್ ಸಲಹೆ ಕೊಟ್ಟ.
ಪಂದ್ಯಗಳು ಶುರುವಾದವು. ಆದರೆ, ಸುರೇಶನಿಗೆ ಈಗ ತನ್ನ ತಪ್ಪುಗಳು ಅರಿವಾಗತೊಡಗಿತು. ಅವನಿಗೆ ಚೀಟಿಂಗ್ ಮಾಡದೆ ಆಟ ಆಡಲು ಬರುತ್ತಲೇ ಇರಲಿಲ್ಲ. ಆದರೆ, ಇಲ್ಲಿ ದೊಡ್ಡ ಮಟ್ಟದ ಚಾಂಪಿಯನ್‌ಷಿಪ್ ಆಗಿದ್ದರಿಂದ ಅದಕ್ಕೆಲ್ಲ ಅವಕಾಶವಿರಲಿಲ್ಲ. ಸಣ್ಣ ಮೋಸ ಮಾಡಿದರೂ ಸಿಕ್ಕಿಬೀಳುತ್ತಿದ್ದ. ಸುರೇಶನ ಟ್ರಿಕ್‌ಗಳು ಇಲ್ಲಿ ನಡೆಯಲಿಲ್ಲ. ಹಾಗಾಗಿ ಬೇಗನೆ ಎಲಿಮಿನೇಟ್ ಆದ. ಹಾಗಾಗಿ ಬೇಜಾರಾಗಿ ದೂರದಲ್ಲಿ ಹೋಗಿ ಕುಳಿತಿದ್ದ.
ಸ್ವಲ್ಪ ಹೊತ್ತಿನಲ್ಲಿ ಚಾಂಪಿಯನ್‌ಷಿಪ್ ಕೊನೆಯ ಹಂತಕ್ಕೆ ತಲುಪಿತು. ವಿನ್ನರ್ ಘೋಷಿಸುವ ಸಮಯ. ಸುರೇಶನಿಗೆ ತಾನು ಗಿರೀಶನ ಜತೆ ಬಂದಿರುವುದು ನೆನಪಾಯಿತು. ಅವನನ್ನು ಹುಡುಕಿಕೊಂಡು ಹೊರಟ. ಆಗ ಮೈಕ್‌ನಲ್ಲಿ ವಿನ್ನರ್ ಯಾರೆಂದು ಘೋಷಿಸಿದರು. ಸುರೇಶ ವಿನ್ನರ್ ಹೆಸರು ಕೇಳಿ, ದಂಗಾಗಿ ಹೋದ. ಅವರು ಘೋಷಣೆ ಮಾಡಿದರು: ಇವತ್ತಿನ ಚಾಂಪಿಯನ್‌ಷಿಪ್‌ನ ವಿನ್ನರ್ ಗಿರೀಶ್!
ಆ ಕ್ಷಣವೇ ಸುರೇಶ ಓಡಿ ಹೋಗಿ ಗಿರೀಶನನ್ನು ಅಪ್ಪಿಕೊಂಡ. ನಿನಗೆ ಗೆಲ್ಲೋದಕ್ಕೆ ಹೇಗೆ ಸಾಧ್ಯ ಆಯ್ತು ಕಣೋ, ನನ್ನ ಮುಂದೆ ದಿನಾ ಸೋಲ್ತಾ ಇದ್ದೆ- ಎಂದು ಪ್ರಶ್ನಿಸಿದ.
ಆಗ ಗಿರೀಶ ಹೇಳಿದ: ನಿಜವಾಗಿ ನಾನು ಗೆಲ್ಲೋದಕ್ಕೆ ನೀನೇ ಕಾರಣ ಕಣೋ. ನೀನು ಪ್ರತಿ ಸಾರಿ ನನ್ನನ್ನು ಸೋಲಿಸಿದಾಗಲೂ ನಾನು ಅದರಿಂದ ಪಾಠ ಕಲಿಯುತ್ತಿದ್ದೆ. ಎಲ್ಲೆಲ್ಲ ತಂತ್ರಗಳನ್ನು ಬಳಸಬಹುದು? ಎದುರಾಳಿ ಎಲ್ಲೆಲ್ಲ ಕುತಂತ್ರಗಳನ್ನು ಬಳಸೋ ಸಾಧ್ಯತೆ ಇರುತ್ತದೆ ಎಂದು ನಾನು ಅರ್ಥ ಮಾಡಿಕೊಂಡೆ. ಹೀಗಾಗಿ ನನಗೆ ಎದುರಾಳಿಯ ಪ್ರತಿ ಹೆಜ್ಜೆಗಳೂ ಅರ್ಥವಾಗುತ್ತಿದ್ದವು.. ಅಂದ.
ಸುರೇಶ ಕೇಳಿದ: ಅಲ್ಲ ಕಣೋ, ಹಾಗಿದ್ದರೆ ನನ್ನ ಎದುರು ಪ್ರತಿ ಸಾರಿಯೂ ಯಾಕೆ ಸೋಲ್ತಿದ್ದೆ?
ಗಿರೀಶ್ ಕೇಳಿದ: ಹೆಚ್ಚಿನ ಸಾರಿ ನೀನೇ ಗೆಲ್ತಿದ್ದೆ. ಆದರೆ, ಕೆಲವೊಮ್ಮೆ ನಿನ್ನ ಖುಷಿಗಾಗಿ ನಾನೂ ಸೋಲ್ತಿದ್ದೆ ಕಣೋ. ಯಾಕಂದರೆ ಸೋತರೆ ನೀನು ತುಂಬ ಬೇಜಾರಾಗ್ತಿದ್ದೆಯಲ್ವಾ ಅದಕ್ಕೆ ಅಂದ.
ಸುರೇಶ್ ಗೆಳೆಯನನ್ನು ತಬ್ಬಿಕೊಂಡ.
ಇದನ್ನೂ ಓದಿ| Motivational story : ಬದುಕಿನಲ್ಲಿ ನಮಗೆ ಎಷ್ಟು ಗೆಳೆಯರು ಬೇಕು?