ಅವಳು ತುಂಬ ಕಷ್ಟಪಟ್ಟು ಐಎಎಸ್ ಪರೀಕ್ಷೆಗೆ ಅಧ್ಯಯನ ಮಾಡಿದ್ದಳು. ಆದರೆ, ಎಷ್ಟು ಬಾರಿ ಪ್ರಯತ್ನಿಸಿದರೂ ಪಾಸ್ ಆಗಲೇ ಇಲ್ಲ. ಈ ಸೋಲಿನಿಂದ ತುಂಬ ಕುಸಿದು ಹೋದ ಆಕೆ ಜೀವನವೇ ಬೇಡ ಎನ್ನುವಷ್ಟು ನಿರುತ್ಸಾಹಿಯಾದಳು. ಸದಾ ಕಣ್ಣೀರಿಡುತ್ತಿದ್ದ ಆಕೆಯ ಬಗ್ಗೆ ವಯಸ್ಸಾದ ಅಪ್ಪನಿಗೆ ತುಂಬ ಕಳವಳವಾಯಿತು.
ಒಂದು ಸಾರಿ ಅವರು ಆಕೆಯನ್ನು ಅಡುಗೆ ಮನೆಗೆ ಕರೆದರು. ನಿನಗೇನೋ ತೋರಿಸಬೇಕಾಗಿದೆ ಮಗಳೇ ಎಂದರು. ಅಡುಗೆ ಮನೆಯಲ್ಲಿ ಮೂರು ಸ್ಟವ್‌ಗಳ ಮೇಲೆ ಮೂರು ಪಾತ್ರೆಯನ್ನಿಟ್ಟು ಬೆಂಕಿ ಮಾಡಿದರು. ಒಂದರಲ್ಲಿ ಕೆಲವು ಆಲೂಗಡ್ಡೆ ಹಾಕಿದರು, ಇನ್ನೊಂದರಲ್ಲಿ ಕೆಲವು ಮೊಟ್ಟೆ, ಮೂರನೆಯದರಲ್ಲಿ ಕಾಫಿ ಬೀಜ ಹಾಕಿದರು. ಮೂರೂ ಕುದಿಯಲು ಆರಂಭವಾಯಿತು.
ಐದು ನಿಮಿಷ, ಹತ್ತು ನಿಮಿಷ ಆಯಿತು. ಮಗಳಿಗೆ ಕಿರಿಕಿರಿ ಆಗತೊಡಗಿತು. ನಾನು ಇಷ್ಟೊಂದು ಬೇಜಾರಲ್ಲಿದ್ದೇನೆ. ನಿನ್ನದೆಂಥ ಆಟ ಇದು ಅಂತ ಆಕೆ ಅಪ್ಪನ ಮೇಲೆ ಸಿಟ್ಟಾದಳು. ಆದರೆ, ಅಪ್ಪ ಸಮಾಧಾನ ಮಾಡಿದರು: ಒಂದೆರಡು ನಿಮಿಷ ಮಗಳೇ.
ಎರಡು ನಿಮಿಷ ಆದಮೇಲೆ ಮೂರು ಒಲೆಗಳನ್ನು ಆರಿಸಿದರು. ಆಲೂಗಡ್ಡೆಗಳನ್ನು ತೆಗೆದು ಒಂದು ತಟ್ಟೆಯಲ್ಲಿಟ್ಟರು, ಇನ್ನೊಂದರಲ್ಲಿ ಮೊಟ್ಟೆಗಳನ್ನು ತೆಗೆದಿಟ್ಟರು. ಮೂರನೇ ಪಾತ್ರೆಯಲ್ಲಿದ್ದ ಕಾಫಿ ಬೀಜ ಮತ್ತು ನೀರನ್ನು ಇನ್ನೊಂದು ಪಾತ್ರೆಗೆ ಸೋಸಿದರು. `ಏನು ಕಾಣ್ತಿದೆ ಮಗಳೇ’ ಕೇಳಿದರು. ಮಗಳು ಸಿಟ್ಟಿನಿಂದ ಹೇಳಿದಳು: ಕಾಣೋದಕ್ಕೇನಿದೆ? ಒಂದರಲ್ಲಿ ಆಲೂ, ಇನ್ನೊಂದರಲ್ಲಿ ಮೊಟ್ಟೆ, ಇನ್ನೊಂದರಲ್ಲಿ ಕಾಫಿ.
ಆಗ ಅಪ್ಪ ಹೇಳಿದರು: ಒಮ್ಮೆ ಇವುಗಳನ್ನು ಮುಟ್ಟಿನೋಡು. ಮಗಳು ಆಲೂಗಡ್ಡೆ ಮುಟ್ಟಿ ನೋಡಿದಳು. ಅದು ಮೆತ್ತಗಾಗಿತ್ತು. ಅಪ್ಪ ಮೊಟ್ಟೆಯನ್ನು ತೆಗೆದು ಒಡೆಯಲು ಪ್ರಯತ್ನಿಸಿದರು. ಅದು ಒಳಗಿನಿಂದ ಗಟ್ಟಿಯಾಗಿತ್ತು. ಹೊರಗಿನ ಚಿಪ್ಪಷ್ಟೇ ಹೋಯಿತು. ಸೋಸಿಟ್ಟ ಕಾಫಿಯನ್ನೊಮ್ಮೆ ಮೂಸಿ ನೋಡಲು ಹೇಳಿದರು. ಮಗಳು ಮೂಸಿ ನೋಡಿ: ಆಹಾ ಎಷ್ಟೊಂದು ಪರಿಮಳ ಎಂದಳು.
ಇದನ್ನೂ ಓದಿ | NEERAJ CHOPRA ಎಂಬ ಏಕಲವ್ಯನಿಗೆ ಗುರುವಾದ ದ್ರೋಣಾಚಾರ್ಯ ಯಾರು?
ಅಪ್ಪ ಹೇಳುತ್ತಾ ಹೋದರು: ಮಗಳೇ ನಾನು ಮೂರನ್ನೂ ಒಂದೇ ಬಿಸಿಯಲ್ಲಿ ಎಲ್ಲವನ್ನೂ ಬೇಯಿಸಿದ್ದೆ. ಆದರೆ, ಮೂರೂ ಬೇರೆ ಬೇರೆ ರೀತಿಯಲ್ಲಿ ಪ್ರತಿಕ್ರಿಯಿಸಿದವು. ಆಲೂಗಡ್ಡೆ ಮೊದಲು ಗಟ್ಟಿಯಾಗಿತ್ತು, ನೀರಲ್ಲಿ ಬೇಯುತ್ತಾ ಬೇಯುತ್ತಾ ದುರ್ಬಲವಾಯಿತು. ಮೊಟ್ಟೆ ನೀರಿಗೆ ಬೀಳುವ ಮೊದಲು ಒಳಗಿನಿಂದ ತುಂಬ ದುರ್ಬಲವಾಗಿತ್ತು. ಬೇಯುತ್ತಾ ಬೇಯುತ್ತಾ ಗಟ್ಟಿಯಾಯಿತು. ಇನ್ನು ಮೂರನೇಯದು ಕಾಫಿ ಬೀಜ. ಅದು ಬಿಸಿ ನೀರಿಗೆ ಬಿದ್ದಾಗ ತಾನು ಎಳ್ಳಷ್ಟೂ ಬದಲಾಗಲಿಲ್ಲ. ಬದಲಿಗೆ ನೀರನ್ನೇ ಬದಲಾಯಿಸಿತು.
ನೀನೇನಾಗ್ತೀಯಾ ಮಗಳೇ? ಕಷ್ಟಗಳ ಈ ಬೇಗುದಿಯಲ್ಲಿ ಆಲೂಗಡ್ಡೆ ತರ ಬೆಂದು ಹೋಗುತ್ತೀಯಾ? ಮೊಟ್ಟೆಯ ತರ ಒಳಗಿನಿಂದ ಗಟ್ಟಿಯಾಗುತ್ತಿಯಾ? ಅಥವಾ ಪರಿಸ್ಥಿತಿಯನ್ನು ಮೆಟ್ಟಿನಿಂತು ಬದುಕನ್ನೇ ಕಾಫಿಯ ಹಾಗೆ ಬದಲಿಸ್ತೀಯಾ?
ಮಗಳು ಅಪ್ಪನನ್ನು ಗಟ್ಟಿಯಾಗಿ ತಬ್ಬಿಕೊಂಡಳು.
ಇದನ್ನೂ ಓದಿ: First Days @ office: ಹೊಸ ಆಫೀಸಲ್ಲಿ ಎಲ್ಲರ ಜತೆ ಬೆರೆಯೋದು ಹೇಗೆ?