ಕೃಷ್ಣ ಭಟ್ ಅಳದಂಗಡಿ-Motivational stroy
ಅದೊಂದು ಊರು. ಅಲ್ಲೊಬ್ಬರು ಸಣ್ಣ ಉದ್ಯಮ ನಡೆಸುತ್ತಿದ್ದರು. ಆದರೆ, ಅದು ವಿಪರೀತ ನಷ್ಟವನ್ನು ಅನುಭವಿಸುತ್ತಿತ್ತು. ಹೇಗಾದರೂ ಮಾಡಿ ಉದ್ದಿಮೆಯನ್ನು ಮುಂದುವರಿಸಲೇಬೇಕೆಂಬ ಹಠದಲ್ಲಿ ಅವರು ತಮ್ಮ ಕಾರು, ಆಸ್ತಿಗಳನ್ನೆಲ್ಲ ಮಾರಿದ್ದರು. ಆದರೂ ಪರಿಸ್ಥಿತಿ ಸುಧಾರಿಸುವಂತೆ ಕಾಣುತ್ತಿರಲಿಲ್ಲ.
ಇದನ್ನೆಲ್ಲ ನೋಡುತ್ತಿದ್ದ ಪುಟ್ಟ ಮಗ ಅಪ್ಪನ ಕೈಹಿಡಿದು ಕೇಳಿದ: ಅಪ್ಪ, ನಮ್ಗೆ ಇಷ್ಟೆಲ್ಲ ನಷ್ಟ ಆಗ್ತಿದೆ. ಮನೆ ಮಾರಿದ್ವಿ, ಕಾರು ಮಾರಿದ್ವಿ. ಇನ್ನೂ ಎಷ್ಟು ದಿನಾಂತ ಹೀಗೆ? ಇದಕ್ಕಿಂತ ಈ ಉದ್ಯಮವನ್ನೇ ಮುಚ್ಚಿಬಿಡಬಾರದಾ?
ಅಪ್ಪನಿಗೆ ಪುಟ್ಟ ಮಗನ ನೋವು ಅರ್ಥವಾಯಿತು. ಆದರೂ ತನ್ನ ಉದ್ದೇಶ ಹೇಳಿದ: ಮಗನೇ, ಬದುಕು ನಮಗೆ ನೂರು ಸವಾಲುಗಳನ್ನು ಎದುರು ತಂದು ನಿಲ್ಲಿಸುತ್ತದೆ. ಕೆಲವೊಮ್ಮೆ ನಮ್ಮನ್ನು ನೆಲಕ್ಕೇ ಬೀಳಿಸಬಹುದು. ಆದರೂ ಒಂದು ಸಣ್ಣ ಆಶಾವಾದವಿದ್ದರೆ ಮತ್ತೆ ಮೇಲೆದ್ದು ನಿಲ್ಲಬಹುದು ಮಗನೇ..
ಮಗ ಕೇಳಿ: ಈ ಆಶಾವಾದ ಎಲ್ಲ ನಮ್ಮನ್ನು ಬದುಕಿಸುತ್ತಾ ಅಪ್ಪ?
ಅಪ್ಪ ಮಗನ ಮುಖವನ್ನೇ ನೋಡಿದ. `ಬಾ ಮಗನೇ.. ನಾನು ನಿನಗೇನೋ ತೋರಿಸಬೇಕು'' ಎಂದು ಹೇಳಿ ಒಂದು ಬಾವಿಯ ಹತ್ತಿರಕ್ಕೆ ಕರೆದುಕೊಂಡು ಹೋದ.
ʻಈ ಬಾವಿಗೆ ಜಿಗಿ ಮಗನೇ’ ಎಂದ. ಭಯದಿಂದ ನಡುಗಿದ ಮಗ ಹೇಳಿದ: ಅಪ್ಪಾ ನನಗೆ ಈಜಲು ಬರುವುದಿಲ್ಲ. ಹಾರಲ್ಲ ಅಪ್ಪ ನಾನು’ ಎಂದ. ಅಪ್ಪ ಸ್ವಲ್ಪವೂ ಯೋಚಿಸದೆ ಮಗನನ್ನು ನೀರಿಗೆ ತಳ್ಳಿಯೇ ಬಿಟ್ಟ! ಮತ್ತು ದೂರ ಹೋಗಿ ನಿಂತುಬಿಟ್ಟ.
ಬಾವಿಗೆ ಬಿದ್ದ ಮಗ ಸುಮಾರು ಐದು ನಿಮಿಷಗಳ ಕಾಲ ಕೈಕಾಲು ಬಡಿದು ಈಜಲು, ತೇಲಲು ಪ್ರಯತ್ನ ಮಾಡಿದ. ಇನ್ನೇನೂ ಸಾಧ್ಯವೇ ಇಲ್ಲ, ಮುಳುಗೇ ಬಿಡುತ್ತಾನೆ ಅಂದಾಗ ಅಪ್ಪನೇ ಬಾವಿಗೆ ಹಾರಿ ರಕ್ಷಣೆ ಮಾಡಿ ಮೇಲೆ ತಂದ.
ಮರುದಿನ ಮತ್ತೆ ಮಗನನ್ನು ಕರೆದುಕೊಂಡು ಹೋಗಿ ಬಾವಿಗೆ ಹಾರು ಅಂದ. ಹುಡುಗ ಹಿಂದೆ ಮುಂದೆ ನೋಡಿದ. ಮತ್ತೆ ಅಪ್ಪನೇ ಅವನನ್ನು ತಳ್ಳಿಬಿಟ್ಟ. ನೀರಿಗೆ ಬಿದ್ದ ಹುಡುಗ ಕೈಕಾಲು ಬಡಿಯುತ್ತಾ ಈಜಲು ಯತ್ನಿಸಿದ. ಸುಮಾರು 15 ನಿಮಿಷ ಕಳೆದರೂ ಹುಡುಗನ ಮುಳುಗದಿರುವ ಪ್ರಯತ್ನ ಮುಂದುವರಿದಿತ್ತು. ಆಗ ಮತ್ತೆ ಅಪ್ಪನೇ ಬಾವಿಗೆ ಜಿಗಿದು ಮಗನನ್ನು ರಕ್ಷಿಸಿ ಮೇಲೆ ತಂದ.
ಮೇಲೆ ನಿಲ್ಲಿಸಿ ಅಪ್ಪ ಕೇಳಿದ: ನೀನು ನಿನ್ನೆಗಿಂತ ಹೆಚ್ಚು ಪ್ರಯತ್ನ ಮಾಡಿದೆಯಲ್ಲ ಯಾಕೆ?
ಮಗ ಹೇಳಿದ: ನಿನ್ನೆ ನನಗೆ ಏನು ಮಾಡಬೇಕು ಅಂತ ಗೊತ್ತಿರಲಿಲ್ಲ. ನೀನು ತಳ್ಳಿದಾಗ ನಾನು ಭಯದಿಂದಲೇ ಮುಳುಗಿಹೋದೆ. ಇವತ್ತು ನನಗೆ ಧೈರ್ಯ ಇತ್ತು, ನಾನೊಮ್ಮೆ ಮುಳುಗಿದರೂ ನೀನು ಬಂದು ರಕ್ಷಣೆ ಮಾಡುತ್ತಿ ಅಂತ. ಅದೇ ಭರವಸೆಯಲ್ಲಿ ಈಜಾಡಿದೆ.
ಅಪ್ಪ ಹೇಳಿದ: ಬಾವಿಗೆ ಬಿದ್ದಿದ್ದೇವೆ ಅಂತ ಕೈಕಾಲು ಬಿಡಬಾರದು ಮಗಾ.. ಯಾವುದೋ ಒಂದು ಶಕ್ತಿ, ಯಾವುದೋ ಒಂದು ಕೈ ನಮ್ಮನ್ನು ರಕ್ಷಣೆ ಮಾಡೇ ಮಾಡ್ತದೆ ಅನ್ನೋ ನಂಬಿಕೆ ಇಟ್ಟುಕೊಂಡು ಹೋರಾಟ ಮುಂದುವರಿಸಬೇಕು. ನಾನು ಉದ್ಯಮದಲ್ಲೂ ಅದೊಂದು ಆಶಾವಾದ ಇಟ್ಟುಕೊಂಡಿದ್ದೇನೆ. ನಮಗೆ ಒಳ್ಳೆದಾಗುತ್ತೆ ಅಲ್ವಾ ಮಗ?
ಮಗ ಏನೂ ಹೇಳದೆ ಅಪ್ಪನನ್ನು ಗಟ್ಟಿಯಾಗಿ ತಬ್ಬಿಕೊಂಡ.
ಇದನ್ನೂ ಓದಿ| Motivational story: ವಾಚು ಕದ್ದ ಹುಡುಗ ಮತ್ತು ಮರೆಯಲಾಗದ ಪಾಠ ಕಲಿಸಿದ ಮೇಸ್ಟ್ರು ಇದನ್ನೂ ಓದಿ| Motivational story: ಇದರಲ್ಲಿ ನಾವೇನು? ಆಲೂನಾ, ಮೊಟ್ಟೆನಾ? ಕಾಫಿ ಬೀಜಾನಾ?
ಇದನ್ನೂ ಓದಿ Motivational story: ವಾಚು ಕದ್ದ ಹುಡುಗ ಮತ್ತು ಮರೆಯಲಾಗದ ಪಾಠ ಕಲಿಸಿದ ಮೇಸ್ಟ್ರು