Site icon Vistara News

Motivational Story: ನಾವಾಡಿದ ಮಾತೇ ನಮಗೆ ತಿರುಗಿ ಕೇಳೋದು ಮಗಾ..!

motivational story

ಕೃಷ್ಣ ಭಟ್‌ ಅಳದಂಗಡಿ – Motivational story
ಅದೊಂದು ಸಣ್ಣ ಊರು. ಗುಡ್ಡ ಬೆಟ್ಟಗಳಿಂದ ಆವೃತವಾಗಿತ್ತು. ಅಲ್ಲೊಬ್ಬ ವ್ಯಕ್ತಿ ಇದ್ದ. ಅವನಿಗೆ ಪ್ರತಿ ದಿನವೂ ಗುಡ್ಡದ ಮೇಲೆ ಹೋಗುವುದು, ಒಂದಿಷ್ಟು ಹೊತ್ತು ಅಲ್ಲಿ ಕಳೆದು ಬರುವುದು ತುಂಬ ಇಷ್ಟವಾದ ಕೆಲಸ.
ಅದೊಂದು ದಿನ ಅವನು ಬೆಟ್ಟದ ಕಡೆಗೆ ಹೊರಟಾಗ ಪುಟ್ಟ ಮಗ ಬಂದು ಕೈ ಹಿಡ್ಕೊಂಡ: ಅಪ್ಪಾ ನಾನೂ ಬರ್ತೀನಪ್ಪಾ! ಬೆಟ್ಟದ ದಾರಿ ತುಂಬ ಕಠಿಣವಾಗಿತ್ತು, ಕಲ್ಲು ಮುಳ್ಳು ಮಾತ್ರವಲ್ಲ, ತೀರಾ ಕಿರಿದಾದ ದಾರಿ. ಹೀಗಾಗಿ ಬೇಡ ಮಗನೇ, ಇನ್ನೂ ಸ್ವಲ್ಪ ದೊಡ್ಡದಾದ ಮೇಲೆ ಬರೋಣವಂತೆ ಎಂದು ಹೇಳಿದ. ಆದರೆ, ಮಗ ಹಿಡಿದ ಕೈ ಬಿಡಲೇ ಇಲ್ಲ.
ಕೊನೆಗೆ ವಿಧಿ ಇಲ್ಲದೆ ಮಗನ ಕೈಹಿಡಿದು ಬೆಟ್ಟದತ್ತ ಹೊರಟ. ಒಂದು ಕಡೆ ಗುಡ್ಡ, ಇನ್ನೊಂದು ಕಡೆ ಪ್ರಪಾತ. ನಡುವೆ ಕಲ್ಲುಮುಳ್ಳಿನ ಹಾದಿ. ಹೇಗೋ ನಿಧಾನಕ್ಕೆ ಸಾಗುತ್ತಿದ್ದರು. ಒಂದು ಕಡೆ ಕಲ್ಲೊಂದು ತಾಕಿ ಮಗ ಎಡವಿಬಿದ್ದ. ಕಾಲಿಗೆ ಜೋರಾಗಿ ಏಟು ಬಿದ್ದಿದ್ದರಿಂದ ಮಗ ಜೋರಾಗಿ ಕಿರುಚಿಕೊಂಡ: ಅಯ್ಯೋ ಅಮ್ಮಾ!
ಅಷ್ಟು ಹೊತ್ತಿಗೆ ಅವನ ಚೀತ್ಕಾರಕ್ಕೆ ಪ್ರತಿಯಾಗಿ ಮತ್ತೆ `ಅಯ್ಯೋ ಅಮ್ಮಾ’ ಅಂತ ಧ್ವನಿ ಕೇಳಿಬಂತು. ಅಪ್ಪನ ಕಡೆಗೆ ನೋಡಿದ.. ಕಿರುಚಿದ್ದು ಅಪ್ಪನಲ್ಲ. ಹಾಗಿದ್ದರೆ ಯಾರೋ ನನ್ನನ್ನು ನೋಡಿ ತಮಾಷೆ ಮಾಡುತ್ತಿದ್ದಾರೆ ಅನಿಸಿತು ಹುಡುಗನಿಗೆ. ಹುಡುಗ ಸಿಟ್ಟಿನಿಂದ ಕೂಗಿದ: ಯಾರೋ ನೀನು? ಅದಕ್ಕೆ  ಆ ಕಡೆಯಿಂದ ಅದೇ ಮಾತು ಕೇಳಿಬಂತು: ಯಾರೋ ನೀನು?

ಪುಟ್ಟ ಹುಡುಗನ ಸಿಟ್ಟು ಇನ್ನಷ್ಟು ಹೆಚ್ಚಿತು. ಅವನಂದ: ಲೋ, ನಿನ್ನನ್ನು ಬಿಡಲ್ಲ ಕಣೋ ನಾನು. ಅದಕ್ಕೆ ಅದೇ ಮಾತಿನ ಪ್ರತ್ಯುತ್ತರ ಬಂತು. ಹುಡುಗ ಅಪ್ಪನ ಕಡೆಗೆ ನೋಡಿದ. ಅಪ್ಪ ನಗುತ್ತಿದ್ದ. ಹುಡುಗನಿಗೆ ತುಂಬ ಬೇಜಾರಾಯ್ತು. “ಏನಪ್ಪಾ ನೀನು, ಯಾರೋ ನನ್ನನ್ನು ತಮಾಷೆ ಮಾಡ್ತಾ ಇದಾರೆ. ನೀನು ನೋಡಿದ್ರೆ ನಗ್ತಾ ಇದ್ದೀಯಾ?’ ಅಂತ ಆಕ್ಷೇಪಿಸಿದ.
ಅಪ್ಪ ಸುಮ್ಮನೆ ನಕ್ಕು ಒಮ್ಮೆ ಜೋರಾಗಿ ಹೇಳಿದ: ನಾನು ನಿನ್ನನ್ನು ತುಂಬ ಪ್ರೀತಿಸುತ್ತೇನೆ. ಆಗ ಆ ಕಡೆಯಿಂದ ಅದೇ ಧ್ವನಿ ಮರುಕಳಿಸಿತು. ಹುಡುಗ ಕೇಳಿದ: ಅಪ್ಪಾ ನನ್ನನ್ನು ತಮಾಷೆ ಮಾಡ್ತಾ ಇದ್ದವನು ಈಗ ನಿನ್ನನ್ನು ಮಾತ್ರ ಪ್ರೀತಿಸ್ತೀನಿ ಅಂತಾನಲ್ಲ? ಏನಿದು?

ಆಗ ಅಪ್ಪ ಮತ್ತೊಮ್ಮೆ ಕೂಗಿ ಹೇಳಿದ: ನೀನು ತುಂಬ ಒಳ್ಳೆಯವನು. ಆಚೆ ಕಡೆಯಿಂದಲೂ ಅದೇ ಧ್ವನಿ ಬಂತು. ಹುಡುಗನಿಗೆ ಏನಪ್ಪಾ ಇದು ಅಂತ ಅನಿಸಿತು. ಮಗನ ಮನಸಿನಲ್ಲಿ ನಡೆಯುತ್ತಿರುವ ಕೋಲಾಹಲವನ್ನು ಊಹಿಸಿದ ಅಪ್ಪನೇ ಹೇಳಿದ.

ಮಗನೇ ನಿನಗೆ ಕೇಳಿಸಿತಲ್ಲ.. ಅದು ನಿನ್ನದೇ ಧ್ವನಿ ಕಣೋ. ನೀನು ಆಡಿದ ಮಾತು ಬೆಟ್ಟಗಳಿಗೆ ಬಡಿದು ಪ್ರತಿಧ್ವನಿಯಾಗಿದೆ ಅಷ್ಟೆ. ನೀನು ಏನು ಹೇಳುತ್ತಿದ್ದೆಯೋ ಅದೇ ನಿನಗೆ ಮರಳಿ ಕೇಳಿಸುತ್ತಿತ್ತು. ನೀನು ಸಿಟ್ಟಿನಿಂದ ಏನೋ ಹೇಳಿದೆಯಲ್ಲ, ಅದೇ ಸಿಟ್ಟಿನ ಮಾತು ನಿನಗೆ ಕೇಳಿಸಿತು. ನೀನು ಏನಾದರೂ ಒಳ್ಳೆ ಮಾತು ಹೇಳಿದ್ದರೂ ಅದೇ ವಾಪಸ್ ಬರ್ತಿತ್ತು.”

ಹುಡುಗ ಯೋಚಿಸಲು ಆರಂಭಿಸಿದ. ಅಪ್ಪ ಮುಂದುವರಿಸಿದ: ಬದುಕಿನಲ್ಲೂ ಹೀಗೇ ಮಗಾ.. ನಾವು ಬದುಕಿನ ಬಗ್ಗೆ ಹೇಗೆ ಯೋಚಿಸುತ್ತೇವೋ ಹಾಗೇ ಆಗ್ತದೆ. ನನ್ನ ಜೀವನ ತುಂಬ ಕೆಟ್ಟದಾಗಿದೆ ಅಂತ ಯೋಚನೆ ಮಾಡ್ತಾ ಇದ್ದರೆ ಕೆಟ್ಟದೇ ಆಗ್ತದೆ. ಅದೇ ಜೀವನವನ್ನು ನಾವು ಪ್ರೀತಿಸಿದರೆ ಜೀವನವೂ ನಮ್ಮನ್ನು ಪ್ರೀತಿಸ್ತದೆ.
ಅಪ್ಪನ ಮಾತುಗಳನ್ನು ಕೇಳುತ್ತಲೇ ಹುಡುಗ ಖುಷಿಯಿಂದ ಕುಣಿದ. ತನ್ನೆರಡೂ ಕೈಗಳನ್ನು ವಿಸ್ತಾರವಾಗಿ ಚಾಚುತ್ತಾ ತನ್ನೆಲ್ಲ ಶಕ್ತಿಯನ್ನು ಕೂಡಿಸಿ ಜೋರಾಗಿ ಹೇಳಿದ: ನಾನು ನಿನ್ನನ್ನು ತುಂಬ ತುಂಬ ಪ್ರೀತಿಸುತ್ತೇನೆ. ಝಿಂದಗೀ ಐ ಲವ್ ಯೂ… ಐ ಲವ್ ಯೂ.. ಐ ಲವ್ ಯೂ….

ಇದನ್ನೂ ಓದಿ | Motivational story: ಇದರಲ್ಲಿ ನಾವೇನು? ಆಲೂನಾ, ಮೊಟ್ಟೆನಾ? ಕಾಫಿ ಬೀಜಾನಾ?

Exit mobile version