Site icon Vistara News

Motivational story: ಅಪ್ಪ ಬಡತನ ತೋರಿಸಲು ಹೋದರೆ ಮಗನಿಗೆ ಕಂಡದ್ದು ಶ್ರೀಮಂತಿಕೆ!

motivational story

ಕೃಷ್ಣ ಭಟ್‌ ಅಳದಂಗಡಿ

ಅದೊಂದು ನಗರ. ಅಲ್ಲಿ ಒಬ್ಬ ಟೆಕ್ಕಿ. ಗಂಡ- ಹೆಂಡತಿ ಇಬ್ರೂ ದುಡೀತಾ ಇದ್ದುದರಿಂದ ಒಳ್ಳೆಯ ಸಂಪಾದನೆ ಇತ್ತು. ಅವರಿಗೊಬ್ಬ ಪುಟ್ಟ ಮಗ. ಶ್ರೀಮಂತಿಕೆಯಲ್ಲೇ ಬೆಳೆದ ಮಗನಿಗೆ ಬಡತನ ಅನ್ನೋದರ ಬಗ್ಗೆಯೂ ಪರಿಚಯ ಆಗಬೇಕು ಅಂತ ಅಪ್ಪನಿಗೆ ಆಸೆ. ಬೇರೆ ಜಗತ್ತನ್ನು ತೋರಿಸುವುದಕ್ಕಾಗಿ ಅವನನ್ನು ಒಂದು ಹಳ್ಳಿಗೆ ಕರೆದುಕೊಂಡು ಹೋದ.
ಅದು ಕರೆಂಟಿಲ್ಲದ, ಸೇತುವೆಯಿಲ್ಲದ, ಆಸ್ಪತ್ರೆ ಇಲ್ಲದ, ವಿದ್ಯಾವಂತರಿಲ್ಲದ, ಶಾಲೆಯೇ ಇಲ್ಲದ ಊರು. ಅಲ್ಲಿ ಯಾರದೋ ಮನೆಯಲ್ಲಿ ಆಶ್ರಯ ಪಡೆದು ಕೆಲವು ದಿನ ಅಲ್ಲಿ ಉಳಿದುಬಂದರು ಅಪ್ಪ- ಮಗ.

ಪಟ್ಟಣದ ಮನೆಗೆ ಮರಳಿದ ಮೇಲೆ ಅಪ್ಪ ಕೇಳಿದ: ಮಗಾ ಹೇಗಿತ್ತು ಹಳ್ಳಿ ಟ್ರಿಪ್.. ಮಗ ಹೇಳಿದ: ತುಂಬ ಚೆನ್ನಾಗಿತ್ತಪ್ಪಾ..

ಅಪ್ಪ ಮುಂದುವರಿದು ಕೇಳಿದ: ಅಲ್ಲಿನ ಜನರೆಲ್ಲ ಎಷ್ಟೊಂದು ಬಡವರಲ್ವಾ? ಅಲ್ಲಿನ ಬದುಕಿನ ಬಗ್ಗೆ ನಿನಗೆ ಏನನಿಸ್ತದೆ.

ಇದು ಇನ್ನೊಂದು ಕಥೆ| Motivational story: ಅಪ್ಪ ಬಿಟ್ಟುಹೋದ 17 ಗೋವುಗಳನ್ನು 3 ಪಾಲು ಮಾಡಿದ್ದು ಹೇಗೆ?

ಮಗ ಮುಗ್ಧವಾಗಿ ಉತ್ತರಿಸಿದ: ಅಪ್ಪಾ ನಮ್ಮಲ್ಲಿ ಇರೋದು ಒಂದೇ ನಾಯಿ. ಅವರ ಮನೆಯಲ್ಲಿ ನಾಲ್ಕು ನಾಯಿಗಳಿವೆಯಪ್ಪಾ..  ನಮ್ಮ ಗಾರ್ಡನ್ ನಲ್ಲಿ ಒಂದು ಸಣ್ಣ ನೀರಿನ ಟ್ಯಾಂಕ್ ಇದೆ, ಅವರ ಮನೆಯಲ್ಲಿ ಬಾವಿ, ಕೆರೆ ಮಾತ್ರ ಅಲ್ಲ ನದಿಯೇ ಇದೆ ಅಲ್ವಪ್ಪಾ?

ನಮ್ಮ ಮನೆಯಲ್ಲಿ ಚಂದ ಚಂದದ ದೀಪಗಳನ್ನು ನೇತು ಹಾಕಿದ್ದೇವೆ. ಆದರೆ ಅವರ ಮನೆಯ ಮೇಲೆ ನಕ್ಷತ್ರಗಳ ಮಾಲೆಯೇ ಉಂಟಪ್ಪ… ನಮಗೆ ಇರುವುದು ಬರೀ ಸಣ್ಣ ಜಾಗ ಅಪ್ಪ. ಅಲ್ಲಿನ ಮಕ್ಕಳಿಗೆ ಆಡಲು ಎಷ್ಟು ಬೇಕಾದರೂ ಜಾಗ ಉಂಟು. ಅವರ ಗದ್ದೆ ಎಷ್ಟು ಚಂದ ಇತ್ತಲ್ವಪ್ಪಾ..

ನಾವು ಇಲ್ಲಿ ಗಾಡಿಯಲ್ಲಿ ಬರೋದು ತರಕಾರಿ ತಗೋತೀವಿ, ಅಂಗಡಿಗೆ ಹೋಗಿ ತರ್ತೀವಿ. ಅವರ ಹತ್ರ ಅವರೇ ಬೆಳೆದ ಫ್ರೆಶ್ ವೆಜಿಟೆಬಲ್ಸ್ ಬೇಕಾದಷ್ಟಿದೆಯಲ್ವಾ? ನಾವಿಲ್ಲಿ ನಮಗ್ಯಾರೂ ತೊಂದರೆ ಮಾಡದಿರ್ಲಿ, ಕಳ್ಳರು ಬಾರದಿರಲಿ ಅಂತ ಎಷ್ಟು ದೊಡ್ಡ ಗೋಡೆ ಕಟ್ಕೊಂಡಿದೀವಿ. ಆದರೆ ಅಲ್ಲಿ ಫ್ರೆಂಡ್ಸೇ ಗೋಡೆ ತರ ರಕ್ಷಣೆಗೆ ನಿಲ್ತಾರಲ್ವಾ? ಜಾಗದ ರಕ್ಷಣೆಗೂ ಬೇಲಿ ಎಲ್ಲ ಹಾಕಿಲ್ಲ ಅವರು. ಅಲ್ಲಿನ ಮನೆಗೆ ಎಷ್ಟೊಂದು ಜನ ಬರ್ತಾರೆ, ಮಾತಾಡ್ತಾರೆ, ಮಕ್ಕಳೆಲ್ಲ ಆಟ ಆಡ್ತಾರೆ ಅಲ್ವಾ? 

ಅಪ್ಪ ಒಮ್ಮೆಗೇ ಗರಬಡಿದವನಂತೆ ಕೇಳುತ್ತಾ ಇದ್ದ.

ಮಗ ಮುಂದುವರಿದು ಹೇಳಿದ: ನಾವೆಷ್ಟು ಬಡವರು ಅಂತ ಅಲ್ಲಿಗೆ ಹೋಗಿ ಬಂದ ಮೇಲೆ ಗೊತ್ತಾಯ್ತು ಅಪ್ಪ.. ತ್ಯಾಂಕ್ಸ್ ಅಪ್ಪ.

ಅಪ್ಪ-ಅಮ್ಮ ಇಬ್ಬರೂ ಮಗನನ್ನು ತಬ್ಬಿಕೊಂಡರು.. ನಾವೂ ಅಲ್ಲಿಗೇ ಹೋಗೋಣ ಮಗಾ ಎಂದಳು ಅಮ್ಮ.

ಇದು ಇನ್ನೊಂದು ಕಥೆ | Motivational story: ಇದರಲ್ಲಿ ನಾವೇನು? ಆಲೂನಾ, ಮೊಟ್ಟೆನಾ? ಕಾಫಿ ಬೀಜಾನಾ?

Exit mobile version