ಕೃಷ್ಣ ಭಟ್ ಅಳದಂಗಡಿ-Motivational story
ವಿಶ್ವನಾಥ ರಾಯರು ಮಗನ ಮದುವೆಯನ್ನು ಅದ್ಧೂರಿಯಾಗಿ ಮುಗಿಸಿ ನಿರುಮ್ಮಳರಾಗಿದ್ದರು. ಬಂಧು ಮಿತ್ರರ ಪ್ರೀತಿಯ ಹಾರೈಕೆ, ಪ್ರಶಂಸೆಗಳಿಂದ ಖುಷಿಯಾಗಿದ್ದರು. ಸಂಜೆ ಸೊಸೆಯನ್ನು ಮನೆಗೆ ಕರೆ ತಂದರು. ಮನೆ ತುಂಬ ಸಂಭ್ರಮವೋ ಸಂಭ್ರಮ. ಈ ಸಂಭ್ರಮವನ್ನು ನೋಡಲು ಅವಳಿರಬೇಕಿತ್ತು ಅಂತ ಅನಿಸಿ ಸ್ವಲ್ಪ ಗದ್ಗದಿತರಾದರು. ಯಾರಿಗೂ ಕಾಣದಂತೆ ಶಾಲಿನ ಅಂಚಿನಿಂದ ಒರಸಿಕೊಂಡರು.
ಮುಸ್ಸಂಜೆಯ ಹೊತ್ತು.. ಆಗಷ್ಟೇ ಮದುವೆಯಾಗಿ ಖುಷಿಯಾಗಿ ಕುಣಿದಾಡುತ್ತಿದ್ದ ಮಗನನ್ನು ಕರೆದರು. ಸ್ವಲ್ಪ ದೂರ ನಾವಿಬ್ಬರೇ ವಾಕಿಂಗ್ ಹೋಗಿ ಬರೋಣವಾ ಅಂತ ಕೇಳಿದರು. ಅಪ್ಪನಿಗೆ ಏನೋ ಹೇಳಲಿಕ್ಕಿದೆ, ಮದುವೆಯಾದ ಬಳಿಕದ ಜವಾಬ್ದಾರಿಗಳ ಬಗ್ಗೆ ಹೇಳಲಿಕ್ಕಿರಬಹುದು ಅಂತ ಮಗ ಅಂದುಕೊಂಡ. ಆಯ್ತಪ್ಪ ಅಂತ ಹೇಳಿ ಹೊರಟ.
ದಾರಿಯಲ್ಲಿ ಹೋಗುತ್ತಾ ವಿಶ್ವನಾಥ ರಾಯರು ಹೇಳಿದರು: ಮಗನೇ ನಿನಗೀಗ ಮದುವೆಯಾಗಿದೆ. ಹೊಸ ಜವಾಬ್ದಾರಿ ಬಂದಿದೆ. ಹೆಂಡತಿಯನ್ನು ತುಂಬ ಚೆನ್ನಾಗಿ ನೋಡಿಕೋ. ಆದರೆ, ಇನ್ನೊಂದು ಸಂಗತಿ ನಾನು ನಿನಗೆ ಹೇಳಲೇಬೇಕು ಕಣೋ. ಸಾಮಾನ್ಯವಾಗಿ ಮದುವೆಯಾದ ಮೇಲೆ ಕೆಲವರು ಸ್ನೇಹಿತರನ್ನು ದೂರ ಮಾಡ್ತಾರೆ. ಸಂಸಾರ, ತಾಪತ್ರಯ ಅಂತೆಲ್ಲ ಗೆಳೆಯರನ್ನು ಮರೆತೇ ಬಿಡ್ತಾರೆ. ಆದರೆ, ನನ್ನದೊಂದು ಮನವಿ ಕಣೋ. ಏನೇ ಬಂದರೂ ಗೆಳೆಯರನ್ನು ಮರೀಬೇಡ ಆಯ್ತಾ.
ಮಗನಿಗೆ ಆಶ್ಚರ್ಯ ಆಯಿತು. ಎಲ್ಲ ಹೆತ್ತವರು ಗೆಳೆಯರ ಸಹವಾಸ ಸಾಕು, ಇನ್ನಾದರೂ ಜವಾಬ್ದಾರಿಯಿಂದ ಮನೆ ನೋಡಿಕೋ ಅಂದರೆ ನನ್ನ ಅಪ್ಪ ಹೀಗೆ ಯಾಕೆ ಹೇಳುತ್ತಾರೆ ಅಂತ ಚಕಿತನಾದ.
ಅಪ್ಪ ಮುಂದುವರಿಸಿದರು: ನಿನ್ನ ಹೆಂಡತಿ, ಕುಟುಂಬ, ಮುಂದೆ ಆಗಲಿರುವ ಮಕ್ಕಳು ಎಲ್ಲರೂ ಅತ್ಯಂತ ಮುಖ್ಯ ಮಗನೇ. ಆದರೆ, ಗೆಳೆಯರನ್ನು ಮಾತ್ರ ಮರೀಬೇಡ. ಅದರಲ್ಲೂ ಆತ್ಮೀಯ ಸ್ನೇಹಿತರನ್ನು ಆಗಾಗ ಕರೆದು ಮಾತನಾಡಿಸು. ಅವರೊಂದಿಗೆ ಟ್ರಿಪ್ ಹೋಗು.. ಆಯ್ತಾ?
ಮಗನಿಗೆ ಆಶ್ಚರ್ಯ ಆಯ್ತು. ಕೇಳಿದ: ಯಾಕಪ್ಪಾ ನನಗೆ ಈ ರೀತಿಯ ಸಲಹೆ ಕೊಡ್ತಿದ್ದೀಯಾ?
ಇದನ್ನು ನಾನು ಈಗ ಹೇಳುವುದು ಕಷ್ಟ ಮಗನೇ.. ಒಂದು ಅರುವತ್ತು ವರ್ಷ ಆಗೋ ಹೊತ್ತಿಗೆ ನಿನಗೇ ಇದು ಅರ್ಥವಾಗುತ್ತದೆ. ಮಗಾ.. ಕಾಲ ಕಳೆಯುತ್ತಾ ಹೋಗುತ್ತೆ.. ಬದುಕು ಬದಲಾಗ್ತಾ ಹೋಗ್ತದೆ. ಮಕ್ಕಳು ಬೆಳೀತಾ ಬೆಳೀತಾ ತಾವು ಸ್ವತಂತ್ರರಾಗುತ್ತಾರೆ. ರೆಕ್ಕೆ ಬಿಚ್ಚಿ ಹಾರಿ ಹೋಗ್ತಾರೆ..
ಮೊಮ್ಮಕ್ಕಳಿಗೆ ಅಜ್ಜ, ಅಜ್ಜಿ ಜತೆ ಮಾತನಾಡುವುದಕ್ಕೇ ಪುರುಸೊತ್ತುಇರುವುದಿಲ್ಲ..
ನಮ್ಮೊಳಗಿನ ಭ್ರಮೆಗಳು, ಕಲ್ಪನೆಗಳು, ಆಸೆಗಳು, ಕಾಮ ಎಲ್ಲವೂ ಕರಗಿ ಹೋಗುತ್ತದೆ
ನಮ್ಮ ಸಹೋದ್ಯೋಗಿಗಳು ಏನಾದರೂ ಸಹಾಯ ಸಿಕ್ಕಿದರೆ ಮಾತ್ರ ಹತ್ರ ಬರ್ತಾರೆ.
ಆಸ್ತಿ, ಅಂತಸ್ತು ಇದ್ದರೆ ಮಾತ್ರ ಸಂಬಂಧಿಕರು ಜತೆಗಿರ್ತಾರೆ..
ಹೆಂಡತಿ ಬದುಕಿರುವವರೆಗೆ ಓಕೆ, ನಂತರ ಬದುಕು ತುಂಬ ಬೋರಾಗುತ್ತದೆ.
ಆಗೆಲ್ಲ ಸುಮ್ಮನೆ ಕೂತು ಮಾತನಾಡಲಿಕ್ಕಾದರೂ ಒಬ್ಬರು ಬೇಕು ಅನಿಸ್ತದೆ.. ಏನೋ ಸಣ್ಣ ಸಹಾಯಕ್ಕೆ ಜನ ಬೇಕು ಅನಿಸ್ತದೆ, ಏನೋ ನೋವಿಗೆ ಸ್ಪಂದಿಸೋರು ಬೇಕಾಗ್ತದೆ.. ಆಗ ಗೆಳೆಯರು ಇದ್ದರೆ ಮಾತ್ರ ಬದುಕಬಹುದು ಕಣೋ.
ನಿನಗೆಲ್ಲ ಇದನ್ನು ಯಾವತ್ತೋ ಹೇಳಬೇಕು ಅಂದುಕೊಂಡಿದ್ದೆ… ಇವತ್ತು ಮದುವೆ ದಿನ ಹೇಳೋದು ಎಷ್ಟು ಸರಿ, ಎಷ್ಟು ತಪ್ಪು ಅಂತ ನಂಗೆ ಗೊತ್ತಿಲ್ಲಪ್ಪ.. ಕೆಲವೇ ದಿನದಲ್ಲಿ ನೀನು ಮತ್ತೆ ಅಮೆರಿಕಕ್ಕೆ ಹಾರುವವನಿದ್ದಿ. ಹಾಗಾಗಿ ಹೇಳೋಣ ಅನಿಸ್ತು.. ತಪ್ಪಿದ್ದರೆ ಕ್ಷಮಿಸು ಮಗಾ..
ಮಗ ವಿಶ್ವನಾಥ ರಾಯರ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ಕೇಳಿದ: ಅಪ್ಪಾ ನಿನಗೆ ನನಗಿಂತ ಬೇರೆ ಸ್ನೇಹಿತರು ಬೇಕೇನಪ್ಪಾ..?
ಇದನ್ನೂ ಓದಿ| Motivational story: ಅತ್ತೆಗೆ ಕೊಡಬೇಕಾಗಿರುವುದು ವಿಷ ಅಲ್ಲ ಮಗಳೇ, ಪ್ರೀತಿ!