ಕೃಷ್ಣ ಭಟ್ ಅಳದಂಗಡಿ- Motivational story
ಮದುವೆಯಾದ ಆರಂಭದಲ್ಲಿ ಅವರು ಅತ್ಯಂತ ಅನುರೂಪವಾದ ಜೋಡಿ ಅನಿಸಿದ್ದರು. ಉಳಿದವರು ಕೂಡಾ ಇದ್ದರೆ ಹಾಗಿರಬೇಕು ಅನ್ನುವ ಹಾಗೆ. ಆದರೆ, ದಿನ ಕಳೆದಂತೆ ಸಣ್ಣಪುಟ್ಟ ಕಿರಿಕಿರಿಗಳು ಶುರುವಾದವು. ಮೊದಲ ವಾರ್ಷಿಕೋತ್ಸವದ ಹೊತ್ತಿಗೆ ಇಬ್ಬರ ಮನಸಿನೊಳಗೆ ಏನೇನೋ ಕಿರಿಕಿರಿಗಳು. ಹೇಳಬಹುದೋ, ಬಿಡಬಹುದೋ ಎಂಬ ಗೊಂದಲಗಳು.
ಆವತ್ತು ಮೊದಲ ವಾರ್ಷಿಕೋತ್ಸವ. ಇಬ್ಬರಿಗೂ ಖುಷಿಯಾಗಿ ಆಚರಿಸಬೇಕು ಎಂಬ ತವಕವಿದ್ದರೂ ಏನೋ ಅಹಂ ಅನಿಸುವ ಅಡ್ಡಗೆರೆ. ಅವರಿಬ್ಬರೇ ಕುಳಿತು ಚಹಾ ಸೇವಿಸುತ್ತಿದ್ದಾಗ ಹೆಂಡತಿ ಹೇಳಿದಳು: ನನಗೆ ನಿಮ್ಮಲ್ಲಿ ಏನೋ ಹೇಳಬೇಕು ಅನಿಸುತ್ತದೆ. ಹೇಳುವುದಕ್ಕೆ ಸಮಯವೂ ಸಿಗುವುದಿಲ್ಲ. ಹೇಳಿದರೆ ತಪ್ಪಾದೀತಾ ಎನ್ನುವ ಆತಂಕ ಕೂಡಾ. ನಿಮಗೂ ಅದೇ ಥರ ಆಗುತ್ತಿರಬಹುದೇನೋ.. ನಾವೊಂದು ಉಪಾಯ ಮಾಡೋಣ. ನೀವು ಎರಡು ಡೈರಿ ತನ್ನಿ. ಅದರಲ್ಲಿ ನಮಗೆ ಏನೇನು ಅನಿಸುತ್ತದೆಯೋ ಅದನ್ನೆಲ್ಲ ಬರೆದಿಡೋಣ. ಮೂರು ತಿಂಗಳ ಬಳಿಕ ಪರಸ್ಪರ ವಿನಿಮಯ ಮಾಡಿಕೊಳ್ಳೋಣ. ಆಗ ನನ್ನ ಮನಸಲ್ಲಿರುವುದು ನಿಮಗೆ, ನಿಮ್ಮ ಮನಸಲ್ಲಿರುವುದು ನನಗೆ ತಿಳಿಯುತ್ತದೆ. ತಪ್ಪುಗಳು ಮತ್ತೆ ರಿಪೀಟ್ ಆಗದಂತೆ ನೋಡಿಕೊಳ್ಳೋಣ. ಆಗದೇ?
ಗಂಡ ಒಪ್ಪಿ ಎರಡು ಡೈರಿಗಳನ್ನು ತಂದ. ಒಂದು ಅವಳಿಗೆ. ಇನ್ನೊಂದು ಇವನಿಗೆ. ಮೂರು ತಿಂಗಳು ಕಳೆದವು. ಆವತ್ತು ಇಬ್ಬರೂ ತಮ್ಮ ಡೈರಿಗಳನ್ನು ವಿನಿಮಯ ಮಾಡಿಕೊಂಡರು.
ಗಂಡ ಹೆಂಡತಿಯ ಡೈರಿ ಓದತೊಡಗಿದ.
ಪೇಜ್ 01: ಇವತ್ತು ನಮ್ಮ ಮದುವೆ ಆನಿವರ್ಸರಿ ಇತ್ತು. ನೀವು ನನಗೊಂದು ಗಿಫ್ಟೂ ಕೊಡಲಿಲ್ಲ.
ಪೇಜ್ 02: ನನ್ನನ್ನು ಹೋಟೆಲಿಗೆ ಊಟಕ್ಕೆ ಕರೆದುಕೊಂಡು ಹೋಗಲಿಲ್ಲ.
ಪೇಜ್ 03: ಇವತ್ತು ಸಿನಿಮಾಕ್ಕೆ ಕರ್ಕೊಂಡು ಹೋಗುತ್ತೇನೆ ಅಂದಿದ್ದಿರಿ. ಏನೋ ನೆಪ ಹೇಳಿ ತಪ್ಪಿಸಿದಿರಿ.
ನನ್ನ ಮನೆಯವರು ಬಂದಾಗ ಸರಿಯಾಗಿ ಟೈಮ್ ಕೊಡಲಿಲ್ಲ, ನನಗೊಂದು ಹೊಸ ಡ್ರೆಸ್ ತಂದಿರಿ, ಆದರೆ, ಹಳೆ ಫ್ಯಾಷನ್‍ನದ್ದು.
ಓದುತ್ತಾ ಓದುತ್ತಾ ಗಂಡನಿಗೆ ಕಣ್ಣೀರೇ ಬಂತು. `ಎಷ್ಟೊಂದು ತಪ್ಪು ಮಾಡಿದ್ದೇನಲ್ವಾ ನಾನು.. ಸ್ಸಾರಿ ಕಣೆ, ನಮ್ಮ ಈ ಕಷ್ಟದ ಬದುಕಿನಲ್ಲಿ ಇದೆಲ್ಲ ಸಣ್ಣ ಸಂಗತಿಗಳು ಅಂದುಕೊಂಡಿದ್ದೆ. ಆದರೆ ಹೌದು.. ನಿನ್ನ ದೃಷ್ಟಿಯಲ್ಲಿ ಯೋಚಿಸಿದರೆ ಇದೂ ದೊಡ್ಡ ವಿಷಯವೆ.. ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ,” ಎಂದು ಹೆಂಡತಿಯ ಕೈ ಹಿಡಿದುಕೊಂಡ.
ಈಗ ಹೆಂಡತಿಯ ಡೈರಿ ಓದುವ ಸಮಯ
ಮೊದಲ ಪುಟ ತಿರುವಿದಳು… ಏನೂ ಬರೆದಿಲ್ಲ. ಎರಡನೆಯದೂ ಖಾಲಿ, ಮೂರು, ನಾಲ್ಕು, ಹತ್ತು, ಇಪ್ಪತ್ತು, ಮೂವತ್ತು, ಅರುವತ್ತು.. ತೊಂಬತ್ತು.. ಎಲ್ಲವೂ ಬ್ಲ್ಯಾಂಕ್.
ಹೆಂಡತಿಗೆ ಸಿಟ್ಟುಬಂತು. ನಾನು ಹೇಳಿದ ಒಂದು ಕೆಲಸವನ್ನೂ ನೀವು ನೆಟ್ಟಗೆ ಮಾಡುವುದಿಲ್ಲ ಎನ್ನುವುದನ್ನು ಮತ್ತೆ ಸಾಬೀತು ಮಾಡಿದಿರಿ. ನನಗೆ ಗೊತ್ತಿತ್ತು. ಆದರೂ ಒಂದು ಪ್ರಯೋಗ ಮಾಡಿದೆ. ನಾನು ನಿಮ್ಮ ತಪ್ಪುಗಳನ್ನೆಲ್ಲ ಬರೆದಿದ್ದೇನೆ. ನನ್ನ ಬಗ್ಗೆ ನಿಮ್ಮ ಅಭಿಪ್ರಾಯ ಬರೆಯಲೂ ನಿಮಗೆ ಕಷ್ಟವಾಯಿತು ಅಲ್ವೇ? ಎಂದು ಕೇಳಿದಳು.
ಗಂಡ ಹೇಳಿದ: ಡೈರಿಯ ಕೊನೆಯ ಪುಟವನ್ನೊಮ್ಮೆ ನೋಡು. ಹೇಳಬೇಕಾಗಿದ್ದನ್ನು ಅಲ್ಲಿ ಹೇಳಿದ್ದೇನೆ.
ಹೆಂಡತಿ ಕೊನೆಯ ಪುಟ ತಿರುಗಿಸಿದಳು.
ನಾನು ಅದೆಷ್ಟೋ ಬಾರಿ ನಿನ್ನನ್ನು ನೋಯಿಸಿದ್ದೇನೆ. ಆದರೂ ನನ್ನ ಬಗ್ಗೆ ನಿನ್ನ ಪ್ರೀತಿ ಕಡಿಮೆಯಾಗಿಲ್ಲ. ನಿನಗೆ ಕೊರಗು ಇದ್ದಿರಬಹುದು. ಆದರೆ, ಉಳಿದವರ ಮುಂದೆ ನನ್ನ ಹಳಿಯಲಿಲ್ಲ. ಬೇರೆಯವರ ಜತೆ ಹೋಲಿಸಲಿಲ್ಲ. ನನ್ನ ಕುಟುಂಬಕ್ಕೆ ನೋವು ಮಾಡಲಿಲ್ಲ. ಹೀಗಿರುವಾಗ ನಿನ್ನಲ್ಲಿ ಯಾವ ತಪ್ಪು ಹುಡುಕಲಿ ನಾನು?
ತಪ್ಪುಗಳು ನನಗೆ ಕಂಡಿಲ್ಲ ಅಂತಲ್ಲ. ಆದರೆ, ನಿನ್ನ ಪ್ರೀತಿ, ನಿನ್ನ ಬದ್ಧತೆ, ನಿನ್ನ ತ್ಯಾಗದ ಮುಂದೆ ಅದು ದೊಡ್ಡದು ಅನಿಸಲಿಲ್ಲ. ನಾನೆಷ್ಟೇ ತಪ್ಪು ಮಾಡಿದರೂ, ನಿರ್ಲಕ್ಷ್ಯ ಮಾಡಿದರೂ, ಸಮಯ ಕೊಡದಿದ್ದರೂ ನನ್ನನ್ನು ನೆರಳಿನಂತೆ ಹಿಂಬಾಲಿಸಿದಿ. ಬೆಂಬಲಿಸಿದಿ. ನನ್ನ ನೆರಳನ್ನೇ ನಾನು ತಪ್ಪು ಎಂದರೆ ನಾನೇ ತಪ್ಪಿತಸ್ಥನಾಗುವುದಿಲ್ಲವೇ?
ಓದುತ್ತಿದ್ದಂತೆಯೇ ಹೆಂಡತಿ ಬಿಕ್ಕಿ ಬಿಕ್ಕಿ ಅಳಲು ಶುರು ಮಾಡಿದಳು. ಗಂಡ ಅವಳ ಹೆಗಲ ಮೇಲೆ ಕೈ ಇಟ್ಟ.
ಇದನ್ನೂ ಓದಿ | Motivational story: ಕಿವಿ ಕೇಳಿಸದ್ದು ಯಾರಿಗೆ? ಹೆಂಡತಿಗಾ, ಗಂಡನಿಗಾ?