ಕೃಷ್ಣ ಭಟ್ ಅಳದಂಗಡಿ | Motivational story
ಅದು ಊರಿನ ಶ್ರೀಮಂತರ ಮಗಳ ಮದುವೆ. ಸಾವಿರಾರು ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಪಂಚ ಭಕ್ಷ್ಯ ಪರಮಾನ್ನಗಳಿಂದ ಕೂಡಿದ ಒಳ್ಳೆಯ ಊಟ. ಪಕ್ಕದೂರಿನ ಮೂವರು ಯುವಕರು ಕೂಡಾ ಮದುವೆಯ ಊಟದಲ್ಲಿ ಕೂತಿದ್ದರು. ಅವರಲ್ಲಿ ಒಬ್ಬ ಹೇಳಿದ: ನನಗೂ ಈ ತರಹವೇ ಒಂದು ದೊಡ್ಡ ಭೋಜನ ಕೂಟ ಏರ್ಪಡಿಸಬೇಕು ಎಂಬ ಆಸೆ ಇದೆ.
ಆಗ ಪಕ್ಕದಲ್ಲಿ ಕೂತ ಗೆಳೆಯ ಹೇಳಿದ: ಹೌದು ನನಗೂ ಆಸೆ ಇದೆ. ಆದರೆ, ಏನು ಮಾಡೋಣ. ನಮಗೆಲ್ಲ ಸಂಬಳ ಬರುವ ಮೊದಲೇ ಸಾಲ ಆಗಿರ್ತದೆ. ಮುಂದಿನ ತಿಂಗಳು ಏನು ಬೇಕು ಎನ್ನುವ ಬಗ್ಗೆ ದೊಡ್ಡ ಲೀಸ್ಟೇ ರೆಡಿ ಆಗಿರ್ತದೆ. ಬೇರೆಯವರಿಗೆ ಊಟ ಹಾಕುವುದು ಬಿಡು, ನಮಗೇ ಊಟ ಮಾಡುವುದು ಕಷ್ಟವಾಗುತ್ತದೆ. ಇನ್ನು ಬೇರೆಯವರಿಗೆ ಊಟ ಹಾಕುವ, ಹೊಟ್ಟೆ ತುಂಬಿಸುವ ಬಗ್ಗೆ ಯೋಚಿಸುವುದಾದರೂ ಹೇಗೆ?
ಮೂರನೆಯ ಗೆಳೆಯನೂ ಅದೇ ಉತ್ತರ ಕೊಟ್ಟ: ಹೌದಲ್ವಾ? ನಮ್ಮ ಆದಾಯ ಕಡಿಮೆ, ಖರ್ಚೇ ಜಾಸ್ತಿ ಆಗ್ತಾ ಇದೆ. ಏನು ಮಾಡೋದು. ಈಗಿನ ಪರಿಸ್ಥಿತಿಯಲ್ಲಿ ವೇತನ ಜಾಸ್ತಿ ಆಗುವ ಲಕ್ಷಣಗಳೂ ಕಾಣಿಸುತ್ತಿಲ್ಲ.
ಅವರ ಪಕ್ಕದಲ್ಲೇ ಹಿರಿಯ ವ್ಯಕ್ತಿಯೊಬ್ಬರು ಕೂತಿದ್ದವರು ಮೂವರ ಸಂಭಾಷಣೆಯನ್ನು ಕೇಳಿಸಿಕೊಳ್ಳುತ್ತಿದ್ದರು. ಅವರು ಹೇಳಿದ್ದರು: ಮಕ್ಕಳೇ ದೊಡ್ಡದೊಂದು ಭೋಜನ ಕೂಟ ಏರ್ಪಡಿಸುವುದಕ್ಕೆ ಬೇಕಿರುವುದು ದೊಡ್ಡ ಮೊತ್ತದ ಹಣವಲ್ಲ, ಬದಲಾಗಿ, ದೊಡ್ಡ ಮನಸು. ಮತ್ತು ದೊಡ್ಡದೊಂದು ಕನಸು, ಉದ್ದೇಶ ಅಷ್ಟೆ.
ಹಿರಿಯರ ಮಾತು ಕೇಳಿ ಗೆಳೆಯರಿಗೆ ಆಶ್ಚರ್ಯವೂ ಆಯಿತು. ನಗುವೂ ಬಂತು. ಹಿರಿಯರು ಈ ಹುಡುಗರು ಏನು ಯೋಚಿಸುತ್ತಿರಬಹುದು ಎಂದು ಯೋಚಿಸಿ ತಾನೂ ನಕ್ಕರು.
ಹಿರಿಯರು ಮಾತು ಮುಂದುವರಿಸಿದರು.
ಹುಡುಗರೇ ನೀವು ಒಂದು ಮುಷ್ಟಿಯಷ್ಟು ಸಕ್ಕರೆಯನ್ನು ಎಲ್ಲಾದರೂ ಒಂದು ಜಾಗದಲ್ಲಿ ಹರಡಿ ಬಿಡಿ. ಸಾವಿರಾರು ಇರುವೆಗಳು ಬಂದು ಅದನ್ನು ಹೊಟ್ಟೆ ತುಂಬ ತಿಂದು ಹೋಗುತ್ತವೆ. ಅದು ಕೂಡಾ ಒಂದು ದೊಡ್ಡ ಭೋಜನ ಕೂಟವೇ.
ಒಂದಿಷ್ಟು ಅಕ್ಕಿಯೋ, ಗೋಧಿಯೋ ತೆಗೆದುಕೊಂಡು ಮನೆಯ ಟೆರೇಸಿನಲ್ಲೋ, ದೇವಸ್ಥಾನದ ಹೊರಭಾಗದಲ್ಲೋ, ಮರದ ಬುಡದಲ್ಲೋ ಚೆಲ್ಲಿಬಿಡಿ. ಪಕ್ಕದಲ್ಲಿ ಒಂದು ಸಣ್ಣ ಪಾತ್ರೆಯಲ್ಲಿ ನೀರು ಇಟ್ಟುಬಿಡಿ. ಅದೆಷ್ಟು ಹಕ್ಕಿಗಳು ಬಂದು ಖುಷಿಯಿಂದ ತಿನ್ನುತ್ತವೆ.. ನೋಡಿ. ಪಾರಿವಾಳಗಳು ಹಾರಿಬರುವ ಖುಷಿಯನ್ನು ನೀವೇ ನೋಡಿ. ಅದು ಕೂಡಾ ದೊಡ್ಡ ಊಟದ ಹಬ್ಬವೇ.
ನಿಮ್ಮಲ್ಲಿ ದುಡ್ಡು ಇಲ್ಲದೇ ಇರಬಹುದು. ಮನೆಯಲ್ಲಿ ಉಳಿಯುವ ಅನ್ನವೋ, ತಿನಿಸನ್ನೋ ಎಲ್ಲಾದರೂ ಹಸಿದ ನಾಯಿಗಳಿಗೆ ಹಾಕಿ. ಬಿಸಿಲು ಕಾಲದಲ್ಲಿ ಬೀದಿಯಲ್ಲಿ ಓಡಾಡುವ ದನಗಳಿಗೆ ಸುಮ್ಮನೆ ನೀರು ಇಟ್ಟು ನೋಡಿ.
ನೋಡಿ.. ನಮಗೋ ಹೊತ್ತು ಹೊತ್ತಿಗೆ ಹೊಟ್ಟೆಗೇನೋ ಸಿಗುತ್ತದೆ. ದೇವರು ಒದಗಿಸಿದ್ದಾನೆ. ಗಳಿಸುವ ಶಕ್ತಿಯೂ ಇದೆ. ನಾವು ಯಾರಿಗೆ ಅನ್ನಾಹಾರಗಳು ಸುಲಭದಲ್ಲಿ ಸಿಗುವುದಿಲ್ಲವೋ ಅಂತವರ ಬೆಂಬಲಕ್ಕೆ ನಿಲ್ಲಬೇಕು. ಇದೆಲ್ಲ ತುಂಬ ಕಷ್ಟದ ಕೆಲಸವೇನೂ ಅಲ್ಲ. ಆದರೆ, ಇದರಿಂದ ಸಿಗುವ ಸಂತೋಷಕ್ಕೆ ಪಾರವೇ ಇಲ್ಲ.
ಯುವಕರಿಗೆ ಹೌದಲ್ವಾ ಅನಿಸಿತು. ಒಂದು ಹಬ್ಬದೂಟಕ್ಕೆ ನಾವು ಎಷ್ಟೊಂದು ಖರ್ಚು ಮಾಡುತ್ತೇವೆ. ಆದರೆ, ಒಂದು ಮುಷ್ಟಿ ಸಕ್ಕರೆಯಲ್ಲಿ, ಕೆಲವೇ ಕೇಜಿ ಅಕ್ಕಿ, ಗೋಧಿಯಲ್ಲಿ ಎಷ್ಟೊಂದು ಪ್ರಾಣಿ ಪಕ್ಷಿಗಳ ಹೊಟ್ಟೆ ತುಂಬಿಸಬಹುದಲ್ವಾ? ಅನಿಸಿತು.
ಇದನ್ನೂ ಓದಿ| Motivational story | ಹೋಟೆಲ್ ಗೆ ಬಂದ ಅಪ್ಪ- ಮಗ ಬಿಟ್ಟು ಹೋಗಿದ್ದೇನು?