Site icon Vistara News

Motivational story | ತುರ್ತು ಬೇಕಾಗಿದ್ದಾಳೆ, ಒಬ್ಬ ಪರ್ಫೆಕ್ಟ್ ಆದ ಹೆಂಡತಿ!

life partner

ಕೃಷ್ಣ ಭಟ್‌ ಅಳದಂಗಡಿ- Motivational story
ಅವರೊಬ್ಬ ಯಶಸ್ವೀ ಉದ್ಯಮಿ. ಬದುಕಿನುದ್ದಕ್ಕೂ ಮದುವೆಯಾಗದೆ ಒಂಟಿಯಾಗಿದ್ದರು. ವಯಸ್ಸು 80 ದಾಟಿದಾಗ ಅಸ್ವಸ್ಥರಾದರು. ಆರಂಭದಲ್ಲಿ ಅವರಲ್ಲಿದ್ದ ಆಸ್ತಿಪಾಸ್ತಿಯನ್ನು ನೋಡಿಕೊಂಡು ಕೆಲವರು ಸಹಾಯಕ್ಕೆ ನಿಂತರು. ಆದರೆ, ಅದೆಲ್ಲವೂ ಕರಗುತ್ತಿದ್ದುದನ್ನು ಕಂಡು ನಿಧಾನಕ್ಕೆ ದೂರ ಸರಿದರು. ಅದುವರೆಗೆ ನನ್ನಲ್ಲಿ ಹಣ ಇದೆ, ಯಾರಾದರೂ ನೋಡಿಕೊಳ್ಳುತ್ತಾರೆ ಎಂಬ ಭ್ರಮೆಯಲ್ಲಿದ್ದ ಅವರಿಗೆ ಸತ್ಯ ಗೊತ್ತಾಯಿತು. ಕೊನೆಗೆ ಅವರು ಕೈಯಲ್ಲಿದ್ದ ಹಣವನ್ನು ಒಂದು ವೃದ್ಧಾಶ್ರಮಕ್ಕೆ ಕೊಟ್ಟು ಅಲ್ಲಿಯೇ ವಾಸಿಸಲು ಆರಂಭಿಸಿದರು. ಅಲ್ಲಿ ಕೂಡಾ ಅವರು ಬಯಸಿದ ರೀತಿಯಲ್ಲಿ ಯಾವುದೂ ಇರಲಿಲ್ಲ. ಆದರೆ, ಅನಿವಾರ್ಯವಾಗಿ ಹೊಂದಿಕೊಂಡರು.

ಹಾಗೆ ಹತ್ತು ವರ್ಷ ಕಳೆಯಿತು. ದೇಹ ಹಣ್ಣಾಗಿ ಹೋಗಿತ್ತು. ಆಶ್ರಮದಲ್ಲಿ ಕೆಲವರು ಅವರನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಅವರಲ್ಲಿ ಒಬ್ಬ ಸ್ವಯಂಸೇವಕ ಹುಡುಗನೂ ಇದ್ದ.
ಅವನೊಂದು ದಿನ ಕೇಳಿದ: ಅಜ್ಜಾ..ನೀವು ಭಾರಿ ಶ್ರೀಮಂತರಾಗಿದ್ದಿರಂತೆ. ನಿಮಗೆ ಹೆಣ್ಣು ಕೊಡ್ಲಿಕೆ ಜನ ಕ್ಯೂನಲ್ಲಿ ನಿಂತಿರುತ್ತಿದ್ದರಂತೆ. ಅಷ್ಟಾದರೂ ನೀವ್ಯಾಕೆ ಮದುವೆಯಾಗಲಿಲ್ಲ ಅಜ್ಜ?

ಆಗ ಅಜ್ಜ ಹೇಳಿದರು: ಹೌದು ಮಗು, ಯೌವನದಲ್ಲಿ ನಂಗೂ ಅನಿಸ್ತಾ ಇತ್ತು. ನಂಗೆ ಯಾರು ಬೇಕಾದರೂ ಹೆಣ್ಣು ಕೊಡುತ್ತಾರೆ. ನನ್ನನ್ನು ಮದುವೆಯಾಗಲು ಹೆಣ್ಮಕ್ಕಳು ಕ್ಯೂನಲ್ಲಿ ನಿಲ್ತಾರೆ ಅಂತ. ಸ್ವಲ್ಪ ಮಟ್ಟಿಗೆ ಸತ್ಯವೂ ಆಗಿತ್ತು. ಆದರೆ, ಆಗ ನನಗೆ ಮದುವೆ ಇಂಪಾರ್ಟೆಂಟ್ ಅನಿಸಲಿಲ್ಲ. ಮದುವೆ ಯಾವಾಗ ಬೇಕಾದರೂ ಆಗಬಹುದು. ಏನಾದರೂ ಸಾಧಿಸಬೇಕು ಅಂತ ಯೋಚನೆ ಮಾಡ್ತಾ ದುಡ್ಡಿನ ಹಿಂದೆಯೇ ಬಿದ್ದೆ. ಸ್ವಲ್ಪ ಸಮಯದ ಬಳಿಕ ಇನ್ನು ಮದುವೆ ಆಗೋಣ ಅನಿಸಿತು. ಆಗ ನನಗೆ ಯಾರು ಪರ್ಫೆಕ್ಟ್ ಜೋಡಿ ಎಂದು ಹುಡುಕಲು ಶುರು ಮಾಡಿದೆ. ಆದರೆ, ನನಗೆ ಪರ್ಫೆಕ್ಟ್ ಅನಿಸುವ ಹುಡುಗಿ ಸಿಗಲೇ ಇಲ್ಲ. ಏನಾದರೂ ಒಂದು ವಿಷಯದಲ್ಲಿ ನನಗೆ ಇಷ್ಟ ಆಗುತ್ತಿರಲಿಲ್ಲ.

ಆಗ ಹುಡುಗ ಹೇಳಿದ: ಅಯ್ಯೋ ಅಜ್ಜ.. ನಿಮಗೆ ಇಡೀ ಜಗತ್ತಿನ ಕನೆಕ್ಷನ್ ಇತ್ತು. ಎಲ್ಲೂ ಕೂಡಾ ಒಬ್ಬ ಅನುರೂಪವಾದ ಹುಡುಗಿ ಸಿಗಲಿಲ್ಲವಾ?
ಅದನ್ನು ಕೇಳುತ್ತಾ ಅಜ್ಜನ ಕಣ್ಣಿನಿಂದ ನೀರು ಇಳಿಯತೊಡಗಿತು. ಅಜ್ಜ ಹೇಳಿದರು: ಕೊನೆಗೆ ಒಬ್ಬಳು ಸಿಕ್ಕಳು ಮಗಾ.. ನನಗೆ ತುಂಬ ಇಷ್ಟವಾದಳು. ನನಗೆ ಸೆಟ್ ಆಗ್ತಾಳೆ ಅನಿಸಿತು.
ಹುಡುಗ ಕೇಳಿದ: ಮತ್ತೆ ಏನಾಯಿತು? ಮದುವೆ ಆಗಬಹುದಿತ್ತಲ್ವಾ? ಯಾಕೆ ಆಗಲಿಲ್ಲ?

ಆಗ ಅಜ್ಜ ಹೇಳಿದರು: ಹೂಂ ಆಗಬಹುದಿತ್ತು. ಆದರೆ, ಆಕೆಗೆ ನಾನು ಪರ್ಫೆಕ್ಟ್ ಅನಿಸಲಿಲ್ಲ. ಆಕೆ ಕೂಡಾ ಒಬ್ಬ ಪರ್ಫೆಕ್ಟ್ ಗಂಡನನ್ನು ಹುಡುಕುತ್ತಿದ್ದಳು. ಇಷ್ಟೆಲ್ಲ ಆದಮೇಲೆ ನನಗೆ ಅನಿಸಿತು. ಜಗತ್ತಿನಲ್ಲಿ ಪರ್ಫೆಕ್ಟ್ ಅಂತ ಯಾವುದೂ ಇರುವುದಿಲ್ಲ. ನಾವು ಪರಸ್ಪರ ಹೊಂದಿಕೊಂಡು ಪರ್ಫೆಕ್ಟ್ ಆಗುವುದು. ಆದರೆ, ಅದು ಗೊತ್ತಾಗುವಾಗ ತುಂಬ ತಡವಾಗಿತ್ತು.

ಇದನ್ನೂ ಓದಿ | Motivational story | ಒಂದು ಬ್ಯಾಂಕ್‌, ನಾಲ್ಕು ಜನ ನೌಕರರು ಮತ್ತು ನೂರಾರು ಟಾರ್ಗೆಟ್‌!

Exit mobile version