ಕೃಷ್ಣ ಭಟ್ ಅಳದಂಗಡಿ- Motivational story
ಅದೊಂದು ಆಸ್ಪತ್ರೆ. ನರ್ಸ್ ಒಬ್ಬಳು ಓಡೋಡುತ್ತಾ ವಾರ್ಡ್‍ನಿಂದ ಹೊರಗೆ ಬಂದಳು. ಹಲೋ ಶ್ರೀನಿವಾಸ್ ಯಾರು, ಒಳಗೆ ಬನ್ನಿ' ಎಂದು ಯುವಕನೊಬ್ಬನನ್ನು ಕರೆದಳು. ಆಗ ಒಬ್ಬ ಯುವಕ
ʻನಾನಾ’ ಅಂತ ಕೇಳಿದ. ಅವಳು ʻನೀವು ಶ್ರೀನಿವಾಸ್ ಅಲ್ವಾ ಬೇಗ ಬನ್ನಿ’ ಎಂದು ಅವನನ್ನು ಕರೆದುಕೊಂಡು ಹೋಗಿ ಒಬ್ಬ ವೃದ್ಧ ವ್ಯಕ್ತಿಯ ಮುಂದೆ ನಿಲ್ಲಿಸಿದಳು.
ʻನೋಡಿ ನಿಮ್ಮ ಮಗ ಬಂದಿದ್ದಾರೆ,’ ಅಂತ ಹೇಳಿದಳು. ಮಂಚದಲ್ಲಿ ಮಲಗಿದ್ದ ರೋಗಿಗೆ ಕಣ್ಣು ಬಿಡಲಾಗದಷ್ಟು ಜೋಮು ಆವರಿಸಿತ್ತು. ಆದರೂ ಕಷ್ಟಪಟ್ಟು ಕಣ್ಣು ತೆರೆದು ಯುವಕನನ್ನು ನೋಡಿದರು. ಅವನ ಕೈ ಹಿಡಿಯುವ ಪ್ರಯತ್ನ ನಡೆಸಿದರು.
ಆಗ ಯುವಕ ತಾನೇ ಮುಂದಾಗಿ ಅವರ ಕೈಯನ್ನು ಹಿಡಿದುಕೊಂಡ. ನಡುಗುವ ಕೈಗಳನ್ನು ತನ್ನೆರಡು ಕೈಗಳಲ್ಲಿ ಮಗುವಿನಂತೆ ಪ್ರೀತಿಯಿಂದ ಬೆಚ್ಚಗಿಟ್ಟುಕೊಂಡ. ಇದನ್ನೆಲ್ಲ ನೋಡುತ್ತಿದ್ದ ನರ್ಸ್ ಅವನಿಗೆ ಒಂದು ಚೆಯರ್ ತಂದುಕೊಟ್ಟಳು.
ಆವತ್ತು ಇಡೀ ರಾತ್ರಿ ಯುವಕ ಅಪ್ಪನ ಕೈಯನ್ನು ಹಿಡಿದುಕೊಂಡೇ ಇದ್ದ. ಏನೋ ಮಾತನಾಡಿಸುತ್ತಿದ್ದ. ಆದರೆ ಅಪ್ಪನಿಗೆ ಅದ್ಯಾವುದೂ ಗೊತ್ತಾಗುತ್ತಿರಲಿಲ್ಲ.
ನರ್ಸ್ ಆಗಾಗ ಬಂದು ವೃದ್ಧನ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸುತ್ತಿದ್ದಳು. ಆಗೆಲ್ಲ ʻನೀವು ಸ್ವಲ್ಪ ರೆಸ್ಟ್ ಮಾಡಬಹುದಲ್ವಾ?’ ಎಂದು ಯುವಕನನ್ನು ಕೇಳುತ್ತಿದ್ದಳು. ಆತ ಮಾತ್ರ ʻಪರ್ವಾಗಿಲ್ಲ ಸಿಸ್ಟರ್’ ಎನ್ನುತ್ತಿದ್ದ. ಅಪ್ಪ ಮತ್ತು ಮಗನ ನಡುವಿನ ಈ ಪ್ರೀತಿಯನ್ನು ಕಂಡು ನರ್ಸ್ ಕುಳಿತಲ್ಲೇ ಕಣ್ಣೀರಾಗಿದ್ದಳು.
ಮಧ್ಯರಾತ್ರಿ ಕಳೆದು ಎಷ್ಟು ಹೊತ್ತಾದರೂ ಕದಲದೆ ಕುಳಿತಿದ್ದ ಯುವಕ ವೃದ್ಧನ ಬಳಿ ಏನೋ ಹೇಳುತ್ತಿದ್ದ. ಕೈಗಳನ್ನು ಹಾಗೇ ಉಜ್ಜುತ್ತಿದ್ದ. ಹಿತವಾಗಿ ನೇವರಿಸುತ್ತಿದ್ದ. ವೃದ್ಧ ಏನೂ ಹೇಳುತ್ತಿರಲಿಲ್ಲ. ಏನೋ ಹೇಳಿದಾಗ ಹಿಡಿದ ಕೈ ಸ್ವಲ್ಪ ಬಿಗಿಯಾಗುತ್ತಿತ್ತು ಅಷ್ಟೆ.
ಹಾಗೆ ಒಮ್ಮೆ ಬಿಗಿಯಾದ ಹಿಡಿತ ಒಮ್ಮೆಗೇ ಬಿಡಿಸಿಕೊಂಡಿತು. ಯುವಕನಿಗೆ ಅದು ಕೊನೆಯುಸಿರಿನ ಸಂಕೇತ ಎನ್ನುವುದು ಅರ್ಥವಾಯಿತು. ಕೈಯನ್ನು ಬಿಡಿಸಿಕೊಂಡು ನರ್ಸ್ ಗೆ ಹೋಗಿ ಹೇಳಿದ.
ನರ್ಸ್ ಎಲ್ಲ ಫಾರ್ಮಾಲಿಟಿಗಳನ್ನು ಮುಗಿಸಿ ಯುವಕನ ಬಳಿ ಬಂದು ಹೇಳಿದಳು: ತಂದೆಯನ್ನು ಕಳೆದುಕೊಳ್ಳುವ ನೋವು ಎಷ್ಟು ಎನ್ನುವುದು ನನಗೆ ಗೊತ್ತು. ದಯವಿಟ್ಟು ಸಮಾಧಾನ ಮಾಡಿಕೊಳ್ಳಿ.
ಆಗ ಯುವಕ, `ʻಇದನ್ನು ನನಗೆ ಯಾಕೆ ಹೇಳುತ್ತಿದ್ದೀರಿ ಸಿಸ್ಟರ್,’ ಎಂದು ಕೇಳಿದ. ನರ್ಸ್ ಆಶ್ಚರ್ಯದಿಂದ`ʻಅವರು ನಿಮ್ಮ ತಂದೆಯಲ್ಲವೇ.. ಅದಕೆ ಹೇಳಿದೆ’ ಎಂದಳು.
ʻʻಇಲ್ಲ ನನಗೆ ಅವರ ಪರಿಚಯವೇ ಇಲ್ಲ. ನಾನು ಯಾವತ್ತೂ ಅವರನ್ನು ಭೇಟಿ ಮಾಡಿಲ್ಲ” ಎಂದ ಯುವಕ.
ʻʻಹಾಗಿದ್ದರೆ ನಾನು ನಿಮ್ಮನ್ನು ಅವರ ಬಳಿಗೆ ಕರೆತಂದು-ನಿಮ್ಮ ಮಗ ಬಂದ್ರು- ಎಂದು ಹೇಳಿದಾಗಲೂ ಯಾಕೆ ಸುಮ್ಮನಿದ್ದಿರಿ”- ಎಂದು ನರ್ಸ್ ಕೇಳಿದಳು.
ಯುವಕ ಉತ್ತರಿಸಿದ: ಹೊರಗೆ ಬಂದು ನೀವು ನನ್ನ ಕಡೆಗೆ ಬೆಟ್ಟು ಮಾಡಿ ಬನ್ನಿ ಎಂದಿರಿ. ಒಳಗೆ ಬಂದು ನೋಡಿದಾಗ ನೀವು ತಪ್ಪಿ ನನ್ನನ್ನು ಕರೆದಿರಿ ಎನ್ನುವುದು ಗೊತ್ತಾಯಿತು. ನೀವು ತುಂಬ ಅವಸರದಲ್ಲಿದ್ದಿರಿ. ಇಲ್ಲಿ ಬಂದು ನೋಡಿದಾಗ ಈ ಹಿರಿಯರಿಗೆ ತಕ್ಷಣವೇ ಮಗನನ್ನು ನೋಡಬೇಕಿದೆ ಎಂದು ಅನಿಸಿತು. ಆ ವ್ಯಕ್ತಿ ಇಲ್ಲಿ ಇಲ್ಲ ಅಂಥ ಅರ್ಥ ಮಾಡಿಕೊಂಡೆ. ಅವರು ನನ್ನ ಕೈಯನ್ನು ಹಿಡಿದುಕೊಂಡ ಅಸಹಾಯಕ ಸ್ಥಿತಿ ನಾನವರ ಮಗನಲ್ಲ ಎಂದು ಹೇಳುವ ಸ್ಥಿತಿಯಲ್ಲೂ ಅವರಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಂಡೆ. ಕೊನೆಯ ಕ್ಷಣಗಳಲ್ಲಿ ಅವರಿಗೊಬ್ಬ ಮಗ ಬೇಕಿತ್ತು. ನಾನೇ ಮಗನಾಗುತ್ತೇನೆ ಎಂದು ಅಲ್ಲೇ ನಿಂತೆ..
ನರ್ಸ್ ಅವನ ಮುಖವನ್ನೇ ನೋಡಿದಳು.
ಇದನ್ನೂ ಓದಿ | Motivational story | ಒಬ್ಬ ಅಜ್ಜ, ಒಂದು ಸುಳ್ಳು ಮತ್ತು ಸಾವಿರ ಚೂರು, ನ್ಯಾಯಾಲಯದಲ್ಲಿ ನಡೆದಿದ್ದೇನು?