Site icon Vistara News

Motivational story | ಬ್ರೆಡ್‌ಗೆ ಬದಲಾಗಿ ಸಿಕ್ಕಿದ ಆ ಚಿನ್ನದ ನಾಣ್ಯ ಹಂಚಿಕೆಯಲ್ಲಿ ದೇವರ ಲೆಕ್ಕ ಬೇರೆಯೇ ಇತ್ತು!

ಬ್ರೆಡ್‌ ಪೀಸ್‌ ಮತ್ತು ಚಿನ್ನದ ನಾಣ್ಯ

ಕೃಷ್ಣ ಭಟ್‌ ಅಳದಂಗಡಿ-Motivational story
ಇಬ್ಬರು ಗೆಳೆಯರು ಒಂದು ದೇವಸ್ಥಾನದ ಸಮೀಪ ಕುಳಿತಿದ್ದರು. ಸ್ವಲ್ಪ ಹೊತ್ತಿನಲ್ಲಿ ಇನ್ನೊಬ್ಬ ಅಪರಿಚಿತ ವ್ಯಕ್ತಿ ಬಂದು ಕುಳಿತುಕೊಂಡ. ಮಾತನಾಡುತ್ತಾ ಮೂವರೂ ಸ್ವಲ್ಪ ಮಟ್ಟಿಗೆ ಹತ್ತಿರವಾದರು.

ಸ್ವಲ್ಪ ಹೊತ್ತಿನ ಬಳಿಕ ಮೂರನೇ ವ್ಯಕ್ತಿ `ʻಹಸಿವಾಗುತ್ತಲ್ವಾ.. ಇಲ್ಲಿ ಯಾವುದೇ ವ್ಯವಸ್ಥೆ ಇದ್ದಂತಿಲ್ಲ' ಎಂದು ಹೇಳಿದ. ಆಗ ಉಳಿದ ಇಬ್ಬರಿಗು ಹಸಿವಿನ ಅನುಭವ ಆಯಿತು. ಗೆಳೆಯರಲ್ಲಿ ಮೊದಲನೆಯವನು ಹೇಳಿದ ʻನನ್ನಲ್ಲಿ ಮೂರು ಪೀಸ್ ಬ್ರೆಡ್ ಇದೆ’, ಎರಡನೆಯವನು ಹೇಳಿದ: ನನ್ನಲ್ಲಿ ಐದು ಬ್ರೆಡ್ ಪೀಸ್ ಇದೆ. ಮೂವರೂ ಸೇರಿ ಹಂಚಿ ತಿನ್ನೋಣ.

ಇಬ್ಬರದೂ ಸೇರಿ ಎಂಟು ಬ್ರೆಡ್ ಪೀಸ್ ಆಯಿತು. ಆದರೆ, ಇದನ್ನು ಮೂರು ಜನರ ನಡುವೆ ಹಂಚಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಎದುರಾಯಿತು. ಆಗ ಮೂರನೇ ವ್ಯಕ್ತಿ ಹೇಳಿದ: ಪ್ರತಿಯೊಂದು ಬ್ರೆಡ್‍ನ್ನು ಮೂರು ಪೀಸ್ ಮಾಡೋಣ. ಒಟ್ಟು 24 ಪೀಸ್ ಆಗ್ತದೆ, ಒಬ್ಬೊಬ್ಬರಿಗೆ ಎಂಟೆಂಟು ಬರುತ್ತದೆ.

ಎಲ್ಲರೂ ಒಪ್ಪಿ ಎಲ್ಲ ಬ್ರೆಡ್ ಅನ್ನು ಸಮಾನವಾಗಿ ಮೂರು ತುಂಡು ಮಾಡಿದರು. ಮತ್ತು ಎಲ್ಲರೂ ತಮ್ಮ ಪಾಲನ್ನು ತಿಂದು ಹಸಿವು ನೀಗಿಸಿಕೊಂಡರು. ಮೂರೂ ಜನ ಎಲ್ಲೇ ಸ್ವಲ್ಪ ಹೊತ್ತು ನಿದ್ದೆ ಮಾಡಿ ಎದ್ದರು.

ಮೂರನೇ ವ್ಯಕ್ತಿ ಹೊರಡುವ ಮುನ್ನ ಹಸಿವು ಇಂಗಿಸಿದ್ದಕ್ಕಾಗಿ ಕೃತಜ್ಞತೆಯನ್ನು ಹೇಳಿದ ಆತ, ಜೇಬಿನಿಂದ ಎಂಟು ನಾಣ್ಯಗಳನ್ನು ತೆಗೆದು ಅವರ ಕೈಯಲ್ಲಿರಿಸಿ ನಡೆದು ಹೋದ.

ಗೆಳೆಯರಿಬ್ಬರಿಗೂ ತುಂಬ ಖುಷಿ ಆಯಿತು. ನಾವು ಕೊಟ್ಟಿದ್ದು ಬ್ರೆಡ್. ಆದರೆ, ಅವನು ಚಿನ್ನದ ನಾಣ್ಯಗಳನ್ನೇ ಕೊಟ್ಟು ಹೋದನಲ್ಲ ಅಂತ. ಆದರೆ, ಇಲ್ಲಿ ಮತ್ತೊಂದು ಸಮಸ್ಯೆ ಉಂಟಾಯಿತು.

ನಾನು ಮೂರು ಪೀಸ್ ಬ್ರೆಡ್ ತಂದಿದ್ದೆ.. ಹೀಗಾಗಿ ಮೂರು ನಾಣ್ಯ ನಂಗಿರಲಿ, ಉಳಿದ ಐದು ನಿನಗಿರಲಿ ಎಂದು ಮೊದಲನೆಯವನು ಹೇಳಿದ. ಆದರೆ ಎರಡನೆಯವನು ಅದರಲ್ಲಿ ಲೆಕ್ಕಾಚಾರ ಎಲ್ಲ ಬೇಡ.. ನಾನೂ ನೀನೂ ನಾಲ್ಕು – ನಾಲ್ಕು ಹಂಚಿಕೊಳ್ಳೋಣ ಎಂದ. ಆದರೆ, ಸಮಸ್ಯೆ ಬಗೆಹರಿಯಲಿಲ್ಲ.

ಕೊನೆಗೆ ದೇವಸ್ಥಾನದ ಅರ್ಚಕರಲ್ಲಿ ನ್ಯಾಯ ಕೇಳೋಣ ಎಂದಾಯಿತು. ಅರ್ಚಕರಿಗೂ ಸಮಾನವಾಗಿ ಹಂಚುವುದೇ ಸರಿ ಎನಿಸಿತು. ಆದರೆ, ʻನಂದು ಕಡಿಮೆ ಬ್ರೆಡ್. ಹಾಗಾಗಿ ನನಗೆ ಕಡಿಮೆ ಸಾಕು’ ಎನ್ನುವ ಮೊದಲನೆಯವನ ವಾದ ಮುಂದುವರಿದಿತ್ತು. ನಾಳೆ ಬೆಳಗ್ಗೆ ಈ ಬಗ್ಗೆ ಏನಾದರೂ ತೀರ್ಮಾನ ಹೇಳುತ್ತೇನೆ ಎಂದು ಅರ್ಚಕರು ಅವರಿಬ್ಬರನ್ನೂ ಕಳುಹಿಸಿದರು.

ಅರ್ಚಕರಿಗೆ ರಾತ್ರಿ ಕನಸಲ್ಲೂ ಅದೇ ಚಿಂತೆ. ಅಚ್ಚರಿ ಎಂದರೆ ಕನಸಿನಲ್ಲಿ ದೇವರು ಬಂದು, ʻಅರ್ಚಕರೇ, ನಿಜವಾದ ನ್ಯಾಯದ ಪ್ರಕಾರ, ಮೊದಲನೆಯವನಿಗೆ ಸಿಗಬೇಕಾಗಿರುವುದು ಒಂದೇ ನಾಣ್ಯ. ಎರಡನೆಯವನಿಗೆ ಏಳು ಕೊಡಿ’ ಎಂದರು.

ಅರ್ಚಕರಿಗೆ ಅಚ್ಚರಿ ಆಯಿತು. ದೇವರೇ ಇದ್ಯಾವ ಲೆಕ್ಕ ಎಂದು ಕೇಳಿದರು.

ದೇವರು ಹೇಳಿದರು: ನೋಡಿ, ಮೊದಲನೆಯವನು ಮೂರು ಬ್ರೆಡ್‍ನ್ನು ಒಂಬತ್ತು ತುಂಡು ಮಾಡಿದ್ದ. ಅದರಲ್ಲಿ ಎಂಟನ್ನು ಅವನೇ ತಿಂದಿದ್ದಾನೆ. ಅವನು ತ್ಯಾಗ ಮಾಡಿದ್ದು ಒಂದು ಪೀಸ್ ಮಾತ್ರ. ಎರಡನೆಯವನು ಐದು ಬ್ರೆಡ್‍ನ್ನು 15 ಪೀಸ್ ಮಾಡಿ ತಾನು ತಿಂದಿದ್ದು ಎಂಟು ಮಾತ್ರ. ಉಳಿದ ಏಳನ್ನು ತ್ಯಾಗ ಮಾಡಿದ್ದಾನೆ. ಹೀಗಾಗಿ ಅವನಿಗೆ ಏಳು ಕೊಡಬೇಕು.

ದೇವರ ಲೆಕ್ಕಾಚಾರ ಕೇಳಿ ಅರ್ಚಕರಿಗೂ ಆಶ್ಚರ್ಯವಾಯಿತು. ನಾವು ಹಾಕೋ ಲೆಕ್ಕವೇ ಬೇರೆ, ದೇವರ ಲೆಕ್ಕವೇ ಬೇರೆ ಎಂದು ಯೋಚಿಸಿದರು.

ಮರುದಿನ ಮುಂಜಾನೆ ಬಂದ ಯುವಕರಿಗೆ ಅರ್ಚಕರು ದೇವರ ನ್ಯಾಯವನ್ನು ಹೇಳಿದರು. ಮೊದಲನೆಯ ಯುವಕ ಪ್ರಾಮಾಣಿಕವಾಗಿ ಇದನ್ನು ಒಪ್ಪಿಕೊಂಡು, ಎರಡನೆಯವನಿಗೆ ಏಳು ನಾಣ್ಯ ಕೊಡುವುದೇ ಸರಿ ಎಂದ.

ಆದರೆ, ಎರಡನೆಯವನಿಗೆ ಈಗಲೂ ಇದನ್ನು ಒಪ್ಪಿಕೊಳ್ಳಲು ಮನಸ್ಸು ಬರಲಿಲ್ಲ. ಅವನು ಏಳು ನಾಣ್ಯಗಳನ್ನು ಸ್ವೀಕರಿಸಿದನಾದರೂ ಮೂರನ್ನು ಗೆಳೆಯನಿಗೆ ಕೊಟ್ಟ. ಇದು ಲೆಕ್ಕಾಚಾರವಲ್ಲ, ನನ್ನ ನಿನ್ನ ನಡುವಿನ ಸ್ನೇಹಕ್ಕೆ ಕೊಡುವ ಕಾಣಿಕೆ ಎಂದ.

ಇದನ್ನೂ ಓದಿ | Motivational story | ನನ್ನ ಹೋಟೆಲ್‌ ತಿಂಡಿಗೆ ಬೆಲೆ ಕಟ್ಟಬಹುದು, ಆದರೆ, ಅವನ ಪ್ರಾರ್ಥನೆಗೆ ಬೆಲೆ ಕಟ್ಟಬಹುದಾ?

Exit mobile version