Site icon Vistara News

Motivational story : ನಾನು ನಿನ್ನನ್ನು ಬೆಳೆಸಿದಂತೆ ನೀನು ಬೇರೆ ಯಾರನ್ನಾದರೂ ಬೆಳೆಸಿದೆಯಾ?

motivational story

ಕೃಷ್ಣ ಭಟ್‌ ಅಳದಂಗಡಿ- motivational story
ಒಂದು ಸಾರಿ ಒಬ್ಬ ಹುಡುಗ ಅಪ್ರೆಂಟಿಸ್‍ಷಿಪ್‍ಗಾಗಿ ಒಂದು ಕಂಪನಿಯನ್ನು ಸೇರಿಕೊಂಡ. ಆಗ ಅಲ್ಲಿ ಅವನಿಗೆ ಒಬ್ಬ ಒಳ್ಳೆಯ ಸೀನಿಯರ್ ವ್ಯಕ್ತಿ ಸಿಕ್ಕಿದ. ಅವನು ಎಲ್ಲ ರೀತಿಯ ಕೆಲಸಗಳನ್ನು ಕಲಿಸಿದ. ಕಂಪನಿಯಲ್ಲಿ ನಡೆಯುವ ಎಲ್ಲ ಕೆಲಸಗಳನ್ನು ಮಾಡಿಸಿದ. ನೀನು ಇದೆಲ್ಲವನೂ ಶ್ರದ್ಧೆಯಿಂದ ಕಲಿ ಒಳ್ಳೆಯದಾಗುತ್ತದೆ ಎಂದು ಹೇಳಿದ. ಮಾತು ಕಡಿಮೆ ಮಾಡು, ಕೆಲಸ ಹೆಚ್ಚು ಮಾಡು, ಕೆಲಸದಲ್ಲಿ ಪರ್ಫೆಕ್ಷನ್ ಇರಲಿ ಎಂದು ಸಲಹೆ ನೀಡಿದ.

ಸೀನಿಯರ್ ವ್ಯಕ್ತಿಯ ಮಾತೆಲ್ಲವನ್ನೂ ಕೇಳಿದ ಹುಡುಗ ಎಲ್ಲವನ್ನೂ ಕಲಿತ. ಅವನ ಉತ್ಸಾಹ ನೋಡಿ ಅದೇ ಕಂಪನಿಯಲ್ಲಿ ಕೆಲಸವೂ ಸಿಕ್ಕಿತು. ಮುಂದೆ ಸೀನಿಯರ್ ವ್ಯಕ್ತಿ ನಿವೃತ್ತನಾದಾಗ ಅವರ ಸ್ಥಾನಕ್ಕೆ ಇವನೇ ನೇಮಕಗೊಂಡ.

ಹೀಗೆ ಹಲವು ವರ್ಷಗಳು ಕಳೆದವು. ಕಂಪನಿಗೆ ಹೊಸ ಹೊಸ ವ್ಯಕ್ತಿಗಳು ಬಂದರು. ಇವನೇನೋ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದ. ಆದರೆ, ವೇತನದ ವಿಚಾರದಲ್ಲಿ ಮಾತ್ರ ಕಂಪನಿ ಅವನನ್ನು ಅಷ್ಟು ಚೆನ್ನಾಗಿ ನೋಡಿಕೊಳ್ಳಲಿಲ್ಲ. ಇದರಿಂದ ಅವನಿಗೆ ಬೇಸರವಾಗಿತ್ತು.

ಅವನು ಈ ವಿಚಾರವನ್ನು ತಿಳಿಸಿ ಸಲಹೆ ಪಡೆಯಲೆಂದು ಅದೇ ಸೀನಿಯರ್ ವ್ಯಕ್ತಿ ಬಳಿಗೆ ಹೋದ. `ನಾನು ಈಗಲೂ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇನೆ. ನೀವು ಹೇಳಿದ ಮಾತು ತಪ್ಪಿಲ್ಲ. ಆದರೆ, ಸಂಬಳದ ವಿಚಾರದಲ್ಲಿ ನನಗೆ ಮೋಸವಾಗಿದೆ. ಹೊಸ ಹೊಸ ಹುಡುಗರಿಗೆ ಹೆಚ್ಚು ಸಂಬಳ ಕೊಡ್ತಿದ್ದಾರೆ..’ ಅಂದ. ಹೌದಾ ಎಂದು ಯೋಚಿಸಿದ ಸೀನಿಯರ್ ಮ್ಯಾನ್ ಒಂದು ಸಲಹೆ ನೀಡಿದ.

“ನೋಡು ನೀನು ಶ್ರದ್ಧೆಯಿಂದ ಕೆಲಸ ಮಾಡುತ್ತಿರುವುದು ನಿಜ. ಆದರೆ, ಕಂಪನಿ ಅದನ್ನು ಅರ್ಥ ಮಾಡಿಕೊಂಡಿಲ್ಲ. ಒಂದು ಕೆಲಸ ಮಾಡು.. ನಡುವೆ ಒಂದೆರಡು ದಿನ ರಜೆ ಮಾಡು. ಆಗ ನಿನ್ನ ಮಹತ್ವ ಗೊತ್ತಾಗುತ್ತದೆ. ಇಷ್ಟೇ ಮಾಡು ಸಾಕು’ ಎಂದ. ಟೆಕ್ನಿಷಿಯನ್ ಹಾಗೇ ಮಾಡಿದ.

ಮೂರನೇ ದಿನ ಬಂದಾಗ ಸಂಸ್ಥೆಯಲ್ಲಿ ಸಮಸ್ಯೆ ಆಗಿತ್ತು. `ನೀವು ರಜೆ ಮಾಡಿದ್ದರಿಂದ ಭಾರಿ ಸಮಸ್ಯೆ ಆಯಿತು’ ಎಂದು ಮಾಲೀಕರೇ ಕರೆದು ಹೇಳಿದರು. ಜತೆಗೆ ಸಂಬಳದ ವಿಚಾರವೂ ಚರ್ಚೆಗೆ ಬಂತು. ವೇತನ ಹೆಚ್ಚಿಸುವ ಭರವಸೆಯೂ ಸಿಕ್ಕಿತು.

ಈ ನಡುವೆ, ಟೆಕ್ನಿಷಿಯನ್ ತನ್ನ ಮಹತ್ವ ತಿಳಿಯಲಿ ಎಂಬ ಕಾರಣಕ್ಕೆ ಆಗಾಗ ರಜೆ ಮಾಡಲು ಶುರು ಮಾಡಿದ. ಅವನ ಕೆಲಸ ಬೇರೆಯವರಿಗೆ ಗೊತ್ತಿಲ್ಲದೆ ಇರುವುದರಿಂದ ಸಮಸ್ಯೆ ಆಗಿ ಮಹತ್ವ ಹೆಚ್ಚಲಿ ಎನ್ನುವುದು ಅವನ ಇರಾದೆಯಾಗಿತ್ತು.

ಹೀಗೆ ಕೆಲವು ತಿಂಗಳು ಕಳೆಯಿತು. ಅದೊಂದು ದಿನ ರಜೆ ಮುಗಿಸಿ ಬಂದ ಟೆಕ್ನಿಷಿಯನನ್ನು ಸೆಕ್ಯುರಿಟಿ ಗಾರ್ಡ್ ಬಾಗಿಲಲ್ಲೇ ನಿಲ್ಲಿಸಿ, ನಿಮ್ಮನ್ನು ಒಳಗೆ ಬಿಡಬಾರದು ಎಂದಿದ್ದಾರೆ. ನಿಮ್ಮನ್ನು ಕೆಲಸದಿಂದ ಕಿತ್ತು ಹಾಕಲಾಗಿದೆಯಂತೆ ಅಂತ ಹೇಳಿದ.

ಜಾಬ್ ಹೋದುದರಿಂದ ಸಂಕಟಗೊಂಡ ಟೆಕ್ನಿಷಿಯನ್ ಮುಂದೇನು ಮಾಡುವುದೆಂದು ಕೇಳಲು ಅದೇ ಹಿರಿಯ ವ್ಯಕ್ತಿ ಬಳಿಗೆ ಹೋದ. ಎಲ್ಲವನ್ನೂ ಅರಿತುಕೊಂಡ ಹಿರಿಯ ವ್ಯಕ್ತಿ ಹೇಳಿದರು: ನಾನು ನಿನಗೆ ಹೇಳಿದ್ದು ನಿನ್ನ ಮಹತ್ವ ಅರಿಯುವಂತೆ ಮಾಡಲು ಒಂದು ಬಾರಿ ಈ ತಂತ್ರ ಪ್ರಯೋಗ ಮಾಡು ಅಂತ. ನೀನು ಅದನ್ನು ಪದೇಪದೆ ಮಾಡಿ ದುರುಪಯೋಗಪಡಿಸಿಕೊಂಡೆ. ಎರಡನೇಯದು ನಿನ್ನನ್ನು ನಾನು ಬೆಳೆಸಿದಂತೆ ನೀನು ಯಾರನ್ನೂ ಬೆಳೆಸಲಿಲ್ಲ. ಹಾಗಾಗಿ ಸಂಸ್ಥೆಗೆ ಸಮಸ್ಯೆ ಆಯಿತು. ಅದು ತಾನೇ ಬೇಕಾದವರನ್ನು ಬೆಳೆಸಿಕೊಂಡಿತು. ಮೂರನೇಯದು, ಒಂದು ಯಂತ್ರ ಚೆನ್ನಾಗಿ ಮಾಡುತ್ತಿರುವಾಗ ಯಾರೂ ಅದನ್ನು ಗಮನಿಸುವುದಿಲ್ಲ. ಒಮ್ಮೆ ಹಾಳಾದರೆ ಸರಿ ಮಾಡಲು ಪ್ರಯತ್ನಿಸುತ್ತಾರೆ. ಪದೇಪದೆ ಹಾಳಾದರೆ ಬದಲಿಸುತ್ತಾರೆ. ಇದು ಜಗದ ನಿಯಮ.

ಇದನ್ನೂ ಓದಿ| Motivational story | ಅಸಹಾಯಕ ಅಪ್ಪನ ತಾಕತ್ತು ಅವಳಿಗೆ ತಿಳಿದಾಗ ತುಂಬ ತಡವಾಗಿತ್ತು!

Exit mobile version