ಕೃಷ್ಣ ಭಟ್ ಅಳದಂಗಡಿ- Motivational story
ಇದು ಕೆಲವು ದಶಕಗಳ ಹಿಂದಿನ ಕಥೆ. ಮಹಮ್ಮದ್ ಅಬ್ದುಲ್ಲಾ ಅವರು ತುಂಬ ತಿಳಿವಳಿಕೆ ಹೊಂದಿರುವ ಪ್ರಾಮಾಣಿಕ ಮನುಷ್ಯ. ಹಣವಂತರೇ ಆದರೂ ಅಂತಸ್ತಿನ ಆಸೆಗೆ ಬಿದ್ದವರಲ್ಲ. ಇನ್ನೊಬ್ಬರ ಜತೆ ಜಗಳ ಮಾಡಿದವರಲ್ಲ. ಅವರು ಒಮ್ಮೆ ಮುಂಬಯಿಯಿಂದ ಸೌದಿಗೆ ಹಡಗಿನಲ್ಲಿ ಪ್ರಯಾಣ ಮಾಡಬೇಕಾಗಿ ಬಂತು.
ಹೋದಲ್ಲಿ ಯಾರಾದರೂ ಬಡವರು ಸಿಕ್ಕಿದರೆ, ಯಾರಿಗಾದರೂ ತುರ್ತು ಅಗತ್ಯ ಬಿದ್ದರೆ ಇರಲಿ ಎಂದು ತಮ್ಮ ಪ್ರಯಾಣದ ಖರ್ಚಿನ ಹೊರತಾಗಿಯೂ ಒಂದು ಲಕ್ಷ ರೂ.ಗಳನ್ನು ಹೆಚ್ಚುವರಿಯಾಗಿ ಇಟ್ಟುಕೊಂಡಿದ್ದರು. ಆ ಕಾಲದಲ್ಲಿ ಅಷ್ಟೊಂದು ದೊಡ್ಡ ಮೊತ್ತ ಯಾರಲ್ಲೂ ಇರುತ್ತಿರಲಿಲ್ಲ.
ಅಬ್ದುಲ್ಲಾ ಅವರು ತಮ್ಮ ವಿವೇಕದ ಮಾತು, ಸಂಯಮದ ನಡೆಯಿಂದ ಪ್ರಯಾಣ ಆರಂಭವಾದ ಕೆಲವೇ ಹೊತ್ತಿನಲ್ಲಿ ಎಲ್ಲರಿಗೂ ಹತ್ತಿರವಾದರು. ಹಲವಾರು ಮಂದಿ ಅವರ ಬಳಿ ಬಂದು ಮಾತನಾಡಿ ಹೋಗುತ್ತಿದ್ದರು. ಕೆಲವರು ಸಮಸ್ಯೆ ಹೇಳಿಕೊಂಡು ಪರಿಹಾರ ಪಡೆದುಕೊಂಡರು.
ಈ ನಡುವೆ, ಪ್ರಯಾಣಿಕರಲ್ಲಿ ಒಬ್ಬ ಅವರಿಗೆ ಸ್ವಲ್ಪ ಹೆಚ್ಚು ಆತ್ಮೀಯನಾದ. ಮಾತಿನ ನಡುವೆ ಅವರು ತಾನು ಹೆಚ್ಚುವರಿಯಾಗಿ ಒಂದು ಲಕ್ಷ ರೂ. ಇಟ್ಟುಕೊಂಡಿದ್ದು, ಸೌದಿಯಲ್ಲಿ ಯಾರಿಗಾದರೂ ಅಗತ್ಯ ಇರುವವರಿಗೆ ಹಂಚಲು ತೀರ್ಮಾನಿಸಿದ್ದನ್ನು ಅವನಿಗೂ ಹೇಳಿದರು.
ಅಷ್ಟು ಹೊತ್ತಿಗೆ ಆ ವ್ಯಕ್ತಿಗೆ ಆಸೆ ಶುರುವಾಯಿತು. ಹೇಗಾದರೂ ಮಾಡಿ ಹಣವನ್ನು ಲಪಟಾಯಿಸಬೇಕು ಎಂದು ಯೋಚನೆ ಮಾಡಿದ. ಒಂದು ಬೆಳಗ್ಗೆ ಅವರು ಜೋರಾಗಿ ಬೊಬ್ಬೆ ಹೊಡೆಯಲು ಶುರು ಮಾಡಿದ. ʻನನ್ನ ಒಂದು ಲಕ್ಷ ರೂ. ಕಾಣೆಯಾಗಿದೆ. ಯಾರೋ ತೆಗೆದಿದ್ದಾರೆ. ಈಗ ನಾನು ಏನು ಮಾಡಲಿ?’ ಎಂದು ಅಳತೊಡಗಿದ. ಹಡಗಿನ ಸಿಬ್ಬಂದಿ ಬಂದು ಏನೆಂದು ವಿಚಾರಿಸಿದರು. ʻಹಣ ಇದ್ದರೆ ಎಲ್ಲಿಗೂ ಹೋಗುವುದಿಲ್ಲ. ಇಲ್ಲೇ ಇರುತ್ತದೆ. ಸಿಕ್ಕೇ ಸಿಗುತ್ತದೆʼ ಎಂದು ಧೈರ್ಯ ಹೇಳಿದರು.
ಎಲ್ಲರನ್ನೂ ವಿಚಾರಿಸಿದ್ದಲ್ಲದೆ ತಪಾಸಣೆಯನ್ನೂ ನಡೆಸಿದರು. ಮಹಮ್ಮದ್ ಅಬ್ದುಲ್ಲಾ ಅವರ ಸರದಿ ಬಂದಾಗ,`ʻಬೇಡ ಸ್ವಾಮಿ.. ನಿಮ್ಮನ್ನು ನಾವು ತಪಾಸಣೆ ಮಾಡುವುದಿಲ್ಲ. ನಿಮ್ಮ ಬಗ್ಗೆ ಸಂಶಯಪಡುವುದು ಕೂಡಾ ತಪ್ಪಾಗುತ್ತದೆ,” ಎಂದರು. ಆದರೆ, ಅಬ್ದುಲ್ಲಾ ಒಪ್ಪಲಿಲ್ಲ. ʻಇಲ್ಲ ಹಣ ಕಳವಾಗಿದೆ. ನೀವು ನನ್ನನ್ನು ತಪಾಸಣೆ ಮಾಡದೆ ಹೋದರೆ ಸಂಶಯ ಉಳಿದುಹೋಗುತ್ತದೆ. ಹೀಗಾಗಿ ತಪಾಸಣೆ ಮಾಡಿ,’ ಎಂದು ಒತ್ತಾಯಿಸಿದರು.
ಅಬ್ದುಲ್ಲಾ ಅವರನ್ನು ತಪಾಸಣೆ ಮಾಡಿದಾಗಲೂ ಏನೂ ಸಿಗಲಿಲ್ಲ. ಕೊನೆಗೂ ಯಾರ ಬಳಿಯಲ್ಲೂ ಅಷ್ಟು ಮೊತ್ತ ಸಿಗಲೇ ಇಲ್ಲ.
ಇದಾಗಿ ಎರಡು ದಿನಗಳ ಬಳಿಕ ಅದೇ ಸಹ ಪ್ರಯಾಣಿಕ ಬಂದು ಅಬ್ದುಲ್ಲಾ ಅವರನ್ನು ಕೇಳಿದ: ಅಲ್ಲಾ ಸ್ವಾಮಿ, ನನ್ನ ಬಳಿ ಒಂದು ಲಕ್ಷ ರೂ. ಇದೆ ಅಂದಿರಿ. ಆದರೆ, ತಪಾಸಣೆ ಮಾಡಿದಾಗ ಸಿಗಲಿಲ್ಲವಲ್ಲ.. ಎಲ್ಲಿ ಹೋಯಿತು? ಎಂದು ಹೇಳಿದ.
ಅಬ್ದುಲ್ಲಾ ನಗುತ್ತಾ ಹೇಳಿದರು: ನಾನು ಅದನ್ನು ಸಮುದ್ರಕ್ಕೆ ಎಸೆದು ಬಿಟ್ಟೆ.
ಸಹ ಪ್ರಯಾಣಿಕ ಕೇಳಿದ: ಯಾಕೆ?
ಅಬ್ದುಲ್ಲಾ ಹೇಳಿದರು: ನಾನು ಬದುಕಿನಲ್ಲಿ ಸಂಪಾದಿಸಿರುವುದು ಎರಡು ದೊಡ್ಡ ಆಸ್ತಿಗಳನ್ನು. ಒಂದು ಪ್ರಾಮಾಣಿಕತೆ, ಇನ್ನೊಂದು ಇತರರ ನಂಬಿಕೆ. ಒಂದು ವೇಳೆ ನನ್ನ ಬಳಿ ಹಣ ಸಿಕ್ಕಿದ್ದರೂ ಜನ ಖಂಡಿತವಾಗಿ ಅದು ನನ್ನದೇ ಎಂದು ನಂಬುತ್ತಿದ್ದರೋ ಏನೋ.. ಆದರೆ, ಕೆಲವರಾದರೂ ನನ್ನ ಪ್ರಾಮಾಣಿಕತೆಯನ್ನು ಸಂಶಯಪಡುತ್ತಿದ್ದರು. ಅಷ್ಟಕ್ಕೂ ನಾನು ಇದನ್ನು ಯಾರಿಗಾದರೂ ಕೊಡಬೇಕೆಂದೇ ತಂದದ್ದು. ಅದರ ಬಗ್ಗೆ ನನಗೆ ವ್ಯಾಮೋಹವಿರಲಿಲ್ಲ. ಹಾಗಾಗಿ ಸಮುದ್ರಕ್ಕೆ ಎಸೆದೆ. ಒಂದು ವೇಳೆ, ನೀನು ಈ ರೀತಿ ಕುತಂತ್ರ ಮಾಡದೆ ನೇರವಾಗಿ ಕೇಳಿದ್ದರೂ ಪೂರ್ತಿ ಅಲ್ಲದಿದ್ದರೂ ದೊಡ್ಡ ಮೊತ್ತವನ್ನು ಕೊಡುತ್ತಿದ್ದೆ.
ಸಹ ಪ್ರಯಾಣಿಕ ನಾಚಿ ತಲೆ ತಗ್ಗಿಸಿದ.
ಇದನ್ನೂ ಓದಿ | Motivational story | ಅಲ್ಲಾ ಮಾರಾಯ್ತಿ ಆನೆ ರಾಣಿ.. ನಿನ್ನ ಮರಿ ಮರ ಯಾಕೆ ಹತ್ತಬೇಕು? ಟಾಪರ್ ಯಾಕಾಗ್ಬೇಕು?