ಕೃಷ್ಣ ಭಟ್ ಅಳದಂಗಡಿ – motivational story
ಅವಳಿನ್ನೂ ಸಣ್ಣ ಹುಡುಗಿಯಾಗಿದ್ದಳು. ಒಳ್ಳೆ ಬ್ಯಾಲೆ ಕಲಾವಿದೆಯಾಗಬೇಕು ಎನ್ನುವುದು ಅವಳ ಕನಸಾಗಿತ್ತು. ತನ್ನ ಪಾಡಿಗೆ ತಾನು ಕುಣಿಯುತ್ತಾ, ನಲಿಯುತ್ತಾ ಇದ್ದಳು. ಒಂದು ದಿನ ಅವಳ ಅಪ್ಪ-ಅಮ್ಮನಿಗೆ ಇವಳು ಇಷ್ಟೊಂದು ಚೆನ್ನಾಗಿ ಡ್ಯಾನ್ಸ್ ಮಾಡುತ್ತಿರುವುದು ಗೊತ್ತಾಯಿತು.
ಅವರದ್ದು ಬಡ ಕುಟುಂಬ. ಆಕೆಯನ್ನು ಡ್ಯಾನ್ಸ್ ಕ್ಲಾಸಿಗೆ ಕಳುಹಿಸುವಷ್ಟು ಹಣವೂ ಇರಲಿಲ್ಲ. ಆದರೂ ಅಪ್ಪನಿಗೆ ಏನನಿಸಿತೋ ಏನೋ.. ಆಕೆಗಿರುವ ಆಸಕ್ತಿ, ಡ್ಯಾನ್ಸ್ ಮಾಡುವ ಚಂದ ನೋಡಿ ನನ್ನ ಮಗಳೂ ಯಾಕೆ ಒಬ್ಬ ಒಳ್ಳೆಯ ಕಲಾವಿದೆಯಾಗಬಾರದು ಎನ್ನುವ ಆಸೆ ಚಿಗುರೊಡೆಯಿತು. ಹೇಗಾದರೂ ಹಣ ಹೊಂದಿಸಿ ಕಲಿಸೋಣ ಎಂದು ದಂಪತಿ ನಿರ್ಧರಿಸಿದರು. ಯಾವುದೇ ತರಬೇತಿ ಇಲ್ಲದೆಯೇ ಇಷ್ಟು ಚಂದ ನೃತ್ಯ ಮಾಡುವ ಆಕೆಗೆ ಸ್ವಲ್ಪ ತರಬೇತಿ ಸಿಕ್ಕರೆ ಇನ್ನೂ ಚಂದ ಮಾಡಬಹುದು ಎನ್ನುವುದು ಅವರ ಆಸೆಯಾಗಿತ್ತು.
ಮರುದಿನ ಪುಟ್ಟ ಮಗಳನ್ನು ಇರುವುದರಲ್ಲಿ ಚಂದದೊಂದು ಅಂಗಿ ಹಾಕಿಸಿ ಡ್ಯಾನ್ಸರ್ ಹತ್ತಿರ ಕರೆದುಕೊಂಡು ಹೋದರು. ಆಕೆಗೆ ತರಬೇತಿ ಕೊಡಬಹುದೇ ಎಂದು ಕೇಳಿದರು. ಬಡವರ ಮನೆ ಹುಡುಗಿ ಅಂತಾನೋ, ಹಳೆ ದಿರಸು ನೋಡಿಯೊ ಏನೋ ತುಂಬಾ ಆಸಕ್ತಿ ತೋರಿಸಲಿಲ್ಲ ಆ ಡ್ಯಾನ್ಸರ್. ಆದರೂ ʻಒಂದು ಆಡಿಷನ್ ಕೊಡಬೇಕು. ಆಕೆ ಈಗ ಮಾಡುತ್ತಿರುವ ನೃತ್ಯ ನೋಡಿ ಮುಂದಿನ ನಿರ್ಧಾರʼ ಎಂದರು.
ಅಪ್ಪ-ಅಪ್ಪ ಇಬ್ಬರೂ ʻನೀನು ಮನೇಲಿ ಒಬ್ಬಳೇ ಮಾಡ್ತೀಯಲ್ಲಾ.. ಆ ತರ ಮಾಡು’ ಎಂದು ಮಗಳನ್ನು ಹುರಿದುಂಬಿಸಿದರು. ಹುಡುಗಿ ಉತ್ಸಾಹದಿಂದ ಕುಣಿದಳು. ಆಗಲೇ ಸಾಕಷ್ಟು ಬಾರಿ ಪ್ರಾಕ್ಟೀಸ್ ಮಾಡಿದ್ದರಿಂದ ದೇಹ ಬಾಣದಂತೆ ಬಾಗುತ್ತಿತ್ತು. ತನಗಿಷ್ಟವಾದ ಸ್ಟೆಪ್‍ಗಳನ್ನೆಲ್ಲ ಮಾಡಿದಳು. ಆದರೆ, ಡ್ಯಾನ್ಸ್ ಮಾಸ್ಟರ್ ಮಾತ್ರ ಇವಳ ಕಡೆಗೆ ಹೆಚ್ಚು ಗಮನ ಕೊಟ್ಟಂತೆ ಕಾಣಲಿಲ್ಲ. ಆದರೂ ಆಕೆ ತುಂಬ ಹೊತ್ತು ಕುಣಿದೇ ಕುಣಿದಳು.
ಕೊನೆಗೆ ಡ್ಯಾನ್ಸ್ ಮಾಸ್ಟರ್, ʻಇನ್ನು ಸಾಕು ಹೋಗಿ’ ಅಂದ. ಹೆತ್ತವರು, ʻಸರ್ ತರಬೇತಿ ಕೊಡಬಹುದೇ’ ಎಂದು ಅಂಗಲಾಚುವಂತೆ ಕೇಳಿಕೊಂಡರು.
ʻನೋಡಿ ಎಲ್ಲ ಮಕ್ಕಳೂ ಸಣ್ಣ ವಯಸ್ಸಿನಲ್ಲಿ ಈ ತರ ಕುಣಿಯುತ್ತಾರೆ. ಹಾಗಂತ ಅವರೆಲ್ಲ ಮಹಾನ್ ಡ್ಯಾನ್ಸರ್ ಆಗುತ್ತಾರೆ ಅಂತಲ್ಲ. ಸುಮ್ಮನೆ ಟೈಮ್ ವೇಸ್ಟ್ ಮಾಡಬೇಡಿ’ ಎಂದ ಹೇಳಿದರು ಡ್ಯಾನ್ಸ್ ಮಾಸ್ಟರ್.
ಹುಡುಗಿಗೆ ಸಿಕ್ಕಾಪಟ್ಟೆ ನೋವಾಯಿತು, ಕಣ್ಣೀರೂ ಬಂತು. ಎಲ್ಲಕ್ಕಿಂತ ಹೆಚ್ಚಾಗಿ ಡ್ಯಾನ್ಸರ್ ಆಗಬೇಕು ಎನ್ನುವ ಕನಸಿಗೇ ಕೊಳ್ಳಿಬಿತ್ತು. ಆತ್ಮವಿಶ್ವಾಸವೇ ಉಡುಗಿ ಹೋಯಿತು. ಆಕೆ ಮತ್ತೆಂದೂ ನೃತ್ಯ ಮಾಡುವ ಮನಸು ಮಾಡಲಿಲ್ಲ.
ಬುದ್ಧಿವಂತೆಯಾಗಿದ್ದ ಆಕೆ ಕಲಿತು ಒಬ್ಬ ಟೀಚರ್ ಆದಳು. ಅಪಮಾನ ಮತ್ತು ಬದುಕಿನ ಒತ್ತಡಗಳಿಂದ ಆಕೆ ಡ್ಯಾನ್ಸನ್ನು ಸಂಪೂರ್ಣ ಮರೆತೇ ಹೋಗಿದ್ದಳು. ಆಕೆ ಪಾಠ ಮಾಡುತ್ತಿದ್ದ ಶಾಲೆಯಲ್ಲಿ ಬ್ಯಾಲೆ ಡಾನ್ಸ್ ಕ್ಲಾಸ್ ನಡೆಯುತ್ತಿತ್ತು. ಆಗಾಗ ಆ ಕಡೆಗೊಮ್ಮೆ ಹೋಗಬೇಕು ಅನಿಸುತ್ತಿತ್ತಾದರೂ ಅಪಮಾನದಿಂದ ಕುಗ್ಗಿ ಹೋದದ್ದು ನೆನಪಾಗುತ್ತಿತ್ತು.
ಒಂದು ಸಾರಿ ಶಾಲೆಯಲ್ಲಿ ತರಬೇತಿ ನೀಡುವ ಬ್ಯಾಲೆ ಡಾನ್ಸರ್ ಬರುವುದು ತಡವಾಯಿತು. ಸಣ್ಣ ಮಕ್ಕಳು ಗಲಾಟೆ ಮಾಡದಂತೆ ನೋಡಿಕೊಳ್ಳುವ ಜವಾಬ್ದಾರಿ ಈ ಯುವತಿಗೆ ಬಂತು. ಆಕೆ ಅಳುಕುತ್ತಲೇ ಅಲ್ಲಿ ಹೋದಳು. ಏನೇನೋ ಬರೆಸುವುದು, ಆಟ ಆಡಿಸುವ ಮೂಲಕ ಸ್ವಲ್ಪ ಹೊತ್ತು ಎಂಗೇಜ್ ಮಾಡಿದಳು. ಆದರೆ, ಮಕ್ಕಳು ಇನ್ನೂ ಡಾನ್ಸ್ ಟೀಚರ್ ಬಂದಿಲ್ಲ ಅಂತ ಕಿರಿಕಿರಿ ಮಾಡುತ್ತಿದ್ದವು.
ಇನ್ನೇನು ಮಾಡುವುದು ಎಂದು ಯೋಚಿಸಿದ ಯುವತಿ ತಾನು ಬಾಲ್ಯದಲ್ಲಿ ಮಾಡುತ್ತಿದ್ದ ಕೆಲವು ಹೆಜ್ಜೆಗಳನ್ನು ಕಲಿಸೋಣವೇ ಎಂದು ಯೋಚಿಸಿದಳು. ಸಣ್ಣ ಮಕ್ಕಳ ಮುಂದೆ ನಾಲ್ಕು ಹೆಜ್ಜೆ ಹಾಕಿದಳು. ಏನಾಯಿತೋ ಏನೋ.. ಕಳೆದು ಹೋದ ಹೆಜ್ಜೆಗಳೆಲ್ಲ ಮರಳಿ ಬಂದಂತೆ, ಹುಚ್ಚೆಲ್ಲ ಜಾಗೃತವಾದಂತೆ ಆಕೆ ಕುಣಿಯುತ್ತಾ ಹೋದಳು.
ಅದು ಮುಗಿಯುವ ಹಂತ ಬಂದಾಗ ಎಲ್ಲ ಕಡೆಯಿಂದ ಚಪ್ಪಾಳೆಗಳು ಕೇಳುತ್ತಿದ್ದವು. ನೋಡಿದರೆ ಮಕ್ಕಳು ಮಾತ್ರವಲ್ಲ ಬೇರೆ ಶಿಕ್ಷಕರು ಕೂಡಾ ಅಲ್ಲಿ ಬಂದು ನಿಂತಿದ್ದರು. ಸ್ವತಃ ಡ್ಯಾನ್ಸ್ ಟೀಚರ್ ಕೂಡಾ ಬಂದಿದ್ದರು! ಎಲ್ಲರೂ ಈಕೆಯ ಚಂದದ ಬ್ಯಾಲೆಗೆ ಮಾರು ಹೋಗಿದ್ದರು.
ಇಷ್ಟು ಚಂದ ಕುಣಿಯೋ ನೀನು ಯಾಕಮ್ಮಾ ಯಾರ ಮುಂದೆಯೂ ಹೇಳಿಲ್ಲ ಎಂದು ಡ್ಯಾನ್ಸ್ ಟೀಚರ್ ಕೇಳಿದರು. ಯುವತಿ ಅಪಮಾನದ ಕಥೆ ಹೇಳಿದಳು.
ಆಗ ಡ್ಯಾನ್ಸ್ ಟೀಚರ್: ಕಾಲೆಳೆಯುವವರು, ಅಪಮಾನ ಮಾಡೋರು ಯಾವತ್ತೂ ಇರುತ್ತಾರೆ. ನಾವು ಅವರನ್ನು ಮೀರಿ ಬೆಳೆಯಬೇಕು. ಇಷ್ಟು ಅಪಮಾನವಾದರೂ ನಿನ್ನ ಕಲೆಯನ್ನು ಬಿಟ್ಟುಕೊಟ್ಟಿಲ್ಲ ನೀನು. ನಿನಗೆ ದೊಡ್ಡ ಭವಿಷ್ಯವಿದೆ. ಮುಂದುವರಿಸು ಎಂದರು. ಆಗ ಯುವತಿ ಅವರಿಗೆ ತಲೆ ಬಾಗಿ ನಿಂತಳು.
Motivational story | ತುಂಬ ಹೊತ್ತು ಹಿಡ್ಕೊಂಡೇ ಇದ್ರೆ ಬಲೂನೂ ಭಾರವಾಗುತ್ತೆ!