Site icon Vistara News

Motivational story : ಬದುಕಿನಲ್ಲಿ ನಮಗೆ ಎಷ್ಟು ಗೆಳೆಯರು ಬೇಕು?

tree climbing

ಕೃಷ್ಣ ಭಟ್‌ ಅಳದಂಗಡಿ-Motivational story
ಅದೊಂದು ಶಾಲೆ. ಶಿಕ್ಷಕ ವಿಶ್ವನಾಥ್ ಮಕ್ಕಳನ್ನು ತುಂಬ ಆತ್ಮೀಯವಾಗಿ ನೋಡಿಕೊಳ್ಳುತ್ತಿದ್ದರು. ಅದೊಂದು ದಿನ ವಿದ್ಯಾರ್ಥಿಯೊಬ್ಬ ಒಂದು ಪ್ರಶ್ನೆಯನ್ನು ಕೇಳಿದ: ನಾವು ಖುಷಿಯಾಗಿರಬೇಕಾದರೆ ಎಷ್ಟು ಜನ ಗೆಳೆಯರು ಬೇಕು ಸರ್?

ಆಗ ವಿಶ್ವನಾಥ್ ಹೇಳಿದರು: ಅದನ್ನು ಇಂತಿಷ್ಟೇ ಅಂತ ಹೇಳುವುದಕ್ಕೆ ಆಗುವುದಿಲ್ಲ. ಎಷ್ಟು ಬೇಕು ಎನ್ನುವುದನ್ನು ನೀನೇ ತೀರ್ಮಾನ ಮಾಡಬೇಕಾಗುತ್ತದೆ.

ಸ್ವಲ್ಪ ಹೊತ್ತಿನ ಬಳಿಕ ವಿಶ್ವನಾಥ್ ಎಲ್ಲ ಮಕ್ಕಳನ್ನು ಕರೆದುಕೊಂಡು ಒಂದು ಹಣ್ಣಿನ ಮರಗಳ ತೋಟಕ್ಕೆ ಹೋದರು. ಅಲ್ಲೊಂದು ಎತ್ತರಕ್ಕೆ ಬೆಳೆದ ಮಾವಿನ ಮರವಿತ್ತು. ವಿಶ್ವನಾಥ್ ಪ್ರಶ್ನೆ ಕೇಳಿದ ಹುಡುಗನನ್ನು ಕರೆದು ಹೇಳಿದರು: ನೀನೀಗ ಇದರಿಂದ ಒಂದು ಮಾವಿನ ಹಣ್ಣನ್ನು ಕಿತ್ತು ತರಬೇಕು ತರ್ತೀಯಾ?

ಆಗ ವಿದ್ಯಾರ್ಥಿ ಹೇಳಿದ: ಸರ್ ಮಾವಿನ ಹಣ್ಣು ತುಂಬ ಮೇಲೆ ಇದೆ. ಅಲ್ಲಿಗೆ ಹೋಗಿ ಕಿತ್ತು ತರುವುದು ಹೇಗೆ? ಗೆಲ್ಲುಗಳು ಕೂಡಾ ಇಲ್ಲ.
ಆಗ ಶಿಕ್ಷಕರು ಹೇಳಿದರು: ನೀನ್ಯಾಕೆ ನಿನ್ನ ಸ್ನೇಹಿತರ ಸಹಾಯವನ್ನು ಪಡೆಯಬಾರದು. ವಿದ್ಯಾರ್ಥಿ, ಓ ಹೌದಲ್ವಾ ಅಂತ ಒಬ್ಬ ಗೆಳೆಯನನ್ನು ಕರೆದು ಸಹಾಯ ಕೇಳಿದ. ಅವರಿಬ್ಬರೂ ಒಬ್ಬರ ಮೇಲೊಬ್ಬರು ನಿಂತರೂ ಮಾವಿನ ಹಣ್ಣು ಸಿಗಲಿಲ್ಲ. ಆಗ ಇನ್ನೂ ಕೆಲವರನ್ನು ಕರೆದ. ಅವರು ಪಿರಾಮಿಡ್‍ನ ಹಾಗೆ ನಿಂತು ಮೇಲೇರಿದರು.
ಆಗಲೂ ಸಿಗಲಿಲ್ಲ. ಇನ್ನಷ್ಟು ಗೆಳೆಯರ ಸಹಾಯ ಕೇಳಿದ ಹುಡುಗ. ಮತ್ತಷ್ಟು ಜನ ಬಂದರು. ಕೊನೆಗೆ ಒಬ್ಬರ ಮೇಲೊಬ್ಬರು ನಿಂತು ಕೊನೆಗೆ ಮಾವಿನ ಹಣ್ಣು ಕೀಳಲು ಸಾಧ್ಯವಾಯಿತು.

ಹಣ್ಣನ್ನು ತಂದು ಕೊಟ್ಟ ಬಾಲಕನಲ್ಲಿ ಶಿಕ್ಷಕರು ಕೇಳಿದರು: ಈಗ ನಿನಗೆ ಏನು ಅರ್ಥವಾಯಿತು?
ಹುಡುಗ ಹೇಳಿದ: ಬದುಕಿನಲ್ಲಿ ತುಂಬ ಜನ ಫ್ರೆಂಡ್ಸ್ ಇರಬೇಕು. ಆಗ ಯಾವುದೇ ಸಮಸ್ಯೆ ಎದುರಾದರೂ ಒಬ್ಬರಿಗೊಬ್ಬರು ಸಹಾಯ ಮಾಡಿದರೆ ಅದನ್ನು ಸುಲಭದಲ್ಲಿ ಪರಿಹಾರ ಮಾಡಬಹುದು.

ವಿಶ್ವನಾಥ್ ಹೇಳಿದರು: ಶಹಬ್ಬಾಶ್.. ಒಳ್ಳೆಯ ನೀತಿಯನ್ನೇ ಕಲಿತಿದ್ದಿ.ಆದರೆ, ಇನ್ನೊಂದು ವಿಷಯವನ್ನೂ ನೀನು ಅರ್ಥ ಮಾಡಿಕೊಳ್ಳಬೇಕು. ಅದೇನೆಂದರೆ, ಬದುಕಿನಲ್ಲಿ ತುಂಬ ಜನ ಫ್ರೆಂಡ್ಸ್ ಇರಬೇಕು ಅನ್ನುವುದು ನಿಜ. ಇಲ್ಲಿ ಕೂಡಾ ನೀನು ತುಂಬ ಜನರನ್ನು ಫ್ರೆಂಡ್ ಮಾಡಿಕೊಂಡು ಮಾವಿನ ಹಣ್ಣನ್ನು ಕೀಳಲು ಸಾಧ್ಯವಾಗಿದ್ದು ನಿಜ. ಆದರೂ ಇನ್ನೊಮ್ಮೆ ಯೋಚನೆ ಮಾಡು, ನೀನು ಇಷ್ಟೆಲ್ಲ ಕಷ್ಟಪಟ್ಟು ಮಾವಿನ ಹಣ್ಣು ಕೀಳುವ ಬದಲು, ಅಕ್ಕಪಕ್ಕದಲ್ಲೆಲ್ಲಾದರೂ ಏಣಿ ಇದೆಯೇನೋ ನೋಡುವ ಅಂತ ಹೇಳುವ ಒಬ್ಬ ಗೆಳೆಯ ಸಿಕ್ಕಿದ್ದರೆ ನಿನ್ನ ಕೆಲಸ ಇನ್ನೂ ಸುಲಭ ಆಗುತ್ತಿತ್ತು ಅಲ್ವಾ? ಅಥವಾ ಒಂದು ಕಲ್ಲನ್ನು ಬೀಸಿ ಒಗೆಯೋಣ, ಬೀಳುತ್ತಾ ನೋಡೋಣ ಅಂತ ಹೇಳುವ ಕ್ರೇಜಿ ಗೆಳೆಯ ಇದ್ದಿದ್ದರೂ ಚೆನ್ನಾಗಿತ್ತು ಅಂತ ನಿನಗೆ ಅನಿಸ್ತಾ ಇಲ್ವಾ?

ಹುಡುಗ ತಲೆದೂಗುತ್ತಾ ಹೇಳಿದ: ಹೌದು ಸರ್ ನಾನು ಹಾಗೆ ಯೋಚನೆ ಮಾಡಲಿಲ್ಲ. ತುಂಬ ಜನ ಫ್ರೆಂಡ್ಸ್ ಇದ್ದರೆ ಒಳ್ಳೆಯದು ಅಂತಷ್ಟೇ ಯೋಚನೆ ಮಾಡಿದೆ. ತುಂಬ ಕಷ್ಟದ ಕೆಲಸವನ್ನು ಸುಲಭದಲ್ಲಿ ಮಾಡಲು ಸಾಧ್ಯವಾಗುವಂತೆ ಸ್ಮಾರ್ಟ್ ಸಲಹೆ ಕೊಡುವ ಒಬ್ಬ ಒಳ್ಳೆಯ ಬೆಸ್ಟ್ ಫ್ರೆಂಡ್ ಇದ್ರೂ ಸಾಕು ಅನಿಸ್ತಾ ಇದೆ. ಅಥವಾ ನೀನು ಹತ್ತು ನಾನು ಹಿಡ್ಕೊತೀನಿ ಅಂತ ಹೇಳುವ ಗೆಳೆಯನಾದರೂ ಬೇಕು ಅನಿಸ್ತಾ ಇದೆ.

ಇದನ್ನೂ ಓದಿ| Motivational story : ವಿಶಾಲಾಕ್ಷಮ್ಮನ ಅಪಮಾನಕ್ಕೆ ಗಗನಸಖಿ ಮಾಡಿದ್ರು ಸನ್ಮಾನ
ಇದನ್ನೂ ಓದಿ | Motivational story: ಸೋಲಿನ ಕೊನೆ ಮನೆಯಲ್ಲೂ ಗೆಲ್ಲಿಸುವ ಶಕ್ತಿಯೊಂದು ಇರ್ತದಲ್ವಾ? ಇದನ್ನೂ ಓದಿ| Motivational story: ವಾಚು ಕದ್ದ ಹುಡುಗ ಮತ್ತು ಮರೆಯಲಾಗದ ಪಾಠ ಕಲಿಸಿದ ಮೇಸ್ಟ್ರು

Exit mobile version