ಕೃಷ್ಣ ಭಟ್ ಅಳದಂಗಡಿ – Motivational story
ಒಂದು ಸಾರಿ ವಿಶ್ವನಾಥ ರಾಯರು ಏನೋ ಕೆಲಸದ ನಿಮಿತ್ತ ನಗರಕ್ಕೆ ಹೋಗಿದ್ದರು. ವಿಶ್ವನಾಥ ರಾಯರಿಗೆ ತಮ್ಮ ಮಕ್ಕಳು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಹೇಳಿದ ಮಾತು ಕೇಳುತ್ತಿಲ್ಲ. ಇನ್ನೂ ಬದುಕಿನಲ್ಲಿ ಸೆಟ್ಲ್ ಆಗಿಲ್ಲ, ಸೊಸೆಯಂದಿರು ಕೂಡಾ ಅವರಿಗೆ ಸರಿಯಾದ ಸಾಥ್ ನೀಡುತ್ತಿಲ್ಲ ಎನ್ನುವ ನೋವು.
ನಗರಕ್ಕೆ ಹೋಗಿದ್ದಾಗ ಅಲ್ಲೊಬ್ಬರು ವ್ಯಕ್ತಿಯೊಬ್ಬರು ಸಿಕ್ಕರು. ಸುಮಾರು ಒಂದೇ ಪ್ರಾಯ ಆಗಿದ್ದರಿಂದ ಮಾತು ಬೆಳೆದು ಗೆಳೆತನವಾಯಿತು. ನೀವೊಮ್ಮೆ ನಮ್ಮ ಮನೆಗೆ ಬನ್ನಿ ಎಂದು ಕರೆದರು ಆ ವ್ಯಕ್ತಿ. ʻನೀವು ನಮ್ಮ ಮನೆಗೆ ಬನ್ನಿʼ ಎಂಬ ಮಾತು ನಾಲಿಗೆ ತುದಿವರೆಗೆ ಬಂತಾದರೂ ವಿಶ್ವನಾಥ ರಾಯರು ತಡೆದುಕೊಂಡರು. ಮನೆಗೆ ಬಂದರೆ ಈ ಮಕ್ಕಳು ಏನು ಹೇಳುತ್ತಾರೋ ಎಂಬ ಭಯ ಅವರಿಗೆ. ಹೀಗಾಗಿ ತಾನೇ ಅವರ ಮನೆಗೆ ಹೋಗಲು ನಿರ್ಧರಿಸಿದರು ವಿಶ್ವನಾಥ ರಾಯರು.
ಅದೊಂದು ದಿನ ವಿಶ್ವನಾಥ ರಾಯರು ಆ ವ್ಯಕ್ತಿಯ ಮನೆಗೆ ಹೋದರು. ಅದೊಂದು ತುಂಬು ಕುಟುಂಬ. ತುಂಬ ಜನ ಗಂಡುಮಕ್ಕಳು, ಮೊಮ್ಮಕ್ಕಳಿಂದ ತುಂಬಿ ಹೋಗಿತ್ತು. ವಿಶ್ವನಾಥ ರಾಯರಿಗೆ ಖುಷಿಯಾಯಿತು. ʻʻನಿಮ್ಮ ಮನೆ ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿ ತುಳುಕುತ್ತಿದೆ. ಈ ರೀತಿ ಇರಲು ನೀವೇನು ಮಾಡಿದ್ದೀರಿʼʼ ಎಂದು ಕೇಳಿದರು ವಿಶ್ವನಾಥ ರಾಯರು. ಅವರಿಗೆ ಮನಸ್ಸಿನಲ್ಲಿ ತಮ್ಮ ಮನೆಯ ಒಂದು ಚಿತ್ರ ಮೂಡಿಬಂದು ಬೇಸರವಾಯಿತು. ಮೊಮ್ಮಕ್ಕಳೆಲ್ಲ ಬಂದು ಅಜ್ಜನನ್ನು ಮುತ್ತಿಕೊಂಡಾಗ ತಮ್ಮ ಮೊಮ್ಮಕ್ಕಳ ನೆನಪಾಯಿತು. ಒಮ್ಮೆಯೂ ಪ್ರೀತಿಯಿಂದ ತಬ್ಬಿಕೊಳ್ಳದ ಅವರ ಬಗ್ಗೆ ಬೇಸರವಾಯಿತು.
ʻʻನಾನು ಈಗ ಏನೂ ಮಾಡುತ್ತಿಲ್ಲ. ದೇವರ ದಯೆಯಿಂದ ನಮಗೆ ಒಳ್ಳೆಯ ಬ್ಯುಸಿನೆಸ್ ಇದೆ. ನಾನು ನನ್ನೆಲ್ಲ ಜವಾಬ್ದಾರಿಗಳನ್ನು ಮಕ್ಕಳಿಗೆ ಹಂಚಿ ಬಿಟ್ಟಿದ್ದೇನೆ. ಸೊಸೆಯಂದಿರು ಮನೆಯ ಜವಾಬ್ದಾರಿ ನೋಡಿಕೊಳ್ಳುತ್ತಾರೆ. ನಾನು ಮೊಮ್ಮಕ್ಕಳೊಂದಿಗೆ ಖುಷಿಯಾಗಿರುತ್ತೇನೆʼʼ ಎಂದರು ಆ ವ್ಯಕ್ತಿ.
ವಿಶ್ವನಾಥ ರಾಯರು ಕೇಳಿದರು: ನಿಮ್ಮ ಮಕ್ಕಳು ಏನಾದರೂ ತಪ್ಪು ಮಾಡಿದರೆ ನಿಮಗೆ ಅವರಿಗೆ ಬುದ್ಧಿ ಹೇಳಬೇಕು ಅನಿಸುವುದಿಲ್ಲವೇ?
ಆ ವ್ಯಕ್ತಿ ಹೇಳಿದರು: ನೋಡಿ ವಿಶ್ವನಾಥ ರಾಯರೇ, ನಾನು ಒಂದು ಪಾಲಿಸಿ ಮಾಡಿಕೊಂಡಿದ್ದೇನೆ. ನಾನು ಎಲ್ಲ ಜವಾಬ್ದಾರಿ ಹಂಚಿಬಿಟ್ಟಿದ್ದೇನೆ. ಪದೇಪದೆ ಅವರ ಕೆಲಸದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ನಾನು ಯಾರಿಂದಲೂ ಏನನ್ನೂ ನಿರೀಕ್ಷಿಸುವುದೂ ಇಲ್ಲ. ಏನು ಸಿಗುತ್ತದೋ ಅದರಲ್ಲಿ ಖುಷಿಪಡುವುದನ್ನು ರೂಢಿಸಿಕೊಂಡಿದ್ದೇನೆ.
ನನ್ನ ಮಕ್ಕಳು ಏನಾದರೂ ತಪ್ಪು ಮಾಡಿದ್ದು ಗೊತ್ತಾದರೂ ನಾನು ಸುಮ್ಮನಿರುತ್ತೇನೆ. ಆದರೆ, ಯಾವಾಗ ಮಕ್ಕಳು ಬಂದು ನನ್ನ ಸಲಹೆ ಕೇಳುತ್ತಾರೋ ಆಗ ನನ್ನ ಅನುಭವಗಳನ್ನು ಹೇಳುತ್ತೇನೆ. ಏನು ತಪ್ಪು ಮಾಡಿದ್ದಾರೆ ಎಂದು ಸ್ಪಷ್ಟವಾಗಿ ಹೇಳುತ್ತೇನೆ. ಹಾಗಂತ ನಂತರ ಅವರು ನನ್ನ ಸಲಹೆಗಳನ್ನು ಪಾಲಿಸುತ್ತಾರಾ ಇಲ್ವಾ ಎಂದು ನಾನೇನೂ ನೋಡಲು ಹೋಗುವುದಿಲ್ಲ. ಮಾಡದಿದ್ದರೆ ನನಗೆ ಬೇಜಾರಾಗುವುದೂ ಇಲ್ಲ. ನನ್ನ ಬಳಿ ಮಾತನಾಡಿದ ಬಳಿಕವೂ ತಪ್ಪು ಮಾಡಿದರೆ ನಾನೇನೂ ಯೋಚಿಸುವುದಿಲ್ಲ. ಮತ್ತೊಮ್ಮೆ ನನ್ನ ಬಳಿಗೆ ಬಂದಾಗ ಹಿಂದಿನ ವಿಚಾರಗಳನ್ನು ಪ್ರಸ್ತಾಪ ಮಾಡದೆ ಸಲಹೆ ಕೊಡುತ್ತೇನೆ.
ವಿಶ್ವನಾಥ ರಾಯರು ಹೇಳಿದರು: ಓ.. ನೀವು ಈ ವಯಸ್ಸಿನಲ್ಲಿ ಹೇಗೆ ಬದುಕಬೇಕು ಎಂದು ಅರ್ಥ ಮಾಡಿಕೊಂಡಿದ್ದೀರಿ..
ಆಗ ಆ ವ್ಯಕ್ತಿ ಹೇಳಿದರು: ಹೌದು ರಾಯರೇ, ಬದುಕಿನ ನಾಲ್ಕನೇ ಹಂತವನ್ನು ತಲುಪುತ್ತೇವಲ್ಲ.. ಆಗ ನಾವು ನಮ್ಮ ಮಾತುಗಳ ಮೇಲೆ ನಿಯಂತ್ರಣ ತಂದುಕೊಳ್ಳಬೇಕು. ಅದುವೇ ನಮ್ಮ ಸಂತೋಷದ ಮೂಲ. ಅದಕ್ಕಿಂತಲೂ ಮುಖ್ಯವಾಗಿ ಇನ್ನೊಬ್ಬರ ಕೆಲಸದಲ್ಲಿ ಮೂಗು ತೂರಿಸಬಾರದು. ಯಾರಾದರೂ ಏನಾದರೂ ಸಲಹೆ ಕೇಳಿದರೆ ಮಾತ್ರ ನಾವು ನಮ್ಮ ಅನುಭವ ಹೇಳಬೇಕು. ಸುಮ್ಮನೆ ಪ್ರತಿಯೊಂದರ ಬಗ್ಗೆ ಯೋಚಿಸಿ ಸಲಹೆ ಕೊಡಲು ಹೋಗಬಾರದು. ಹೀಗಾಗಿದ್ದಾಗ ನಮಗೆ ನೆಮ್ಮದಿ ಇರುತ್ತದೆ.. ಮತ್ತು ಅವರಿಗೂ ನೆಮ್ಮದಿ ಇರುತ್ತದೆ.
ವಿಶ್ವನಾಥ ರಾಯರಿಗೆ ಏನೋ ಥಟ್ಟನೆ ಹೊಳೆದಂತಾಯಿತು.. ʻಓ ನಾಳೆ ದೀಪಾವಳಿ ಅಲ್ವಾ.. ನನ್ನ ಮೊಮ್ಮಕ್ಕಳಿಗೆ ಎಣ್ಣೆ ಹಚ್ಚಬೇಕು.. ಅವರ ಜತೆ ಪಟಾಕಿ ಬಿಡಬೇಕು… ಅದು ಬಿಟ್ಟರೆ ನನಗೇನಿದೆ ಕೆಲಸʼ ಎಂದು ಹೊರಟೇಬಿಟ್ಟರು ವಿಶ್ವನಾಥ ರಾಯರು. ಆ ವ್ಯಕ್ತಿ ಕೈ ಬೀಸುತ್ತಾ ಇದ್ದರು.
ಇದನ್ನೂ ಓದಿ | Motivational story | ಹಠಕ್ಕೆ ಬಿದ್ದು ಒಮ್ಮೆಲೇ ಸೊಂಪಾಗಿ ಬೆಳೆಸಿದ ರಮೇಶನ ಗಿಡ ಉರುಳಿದ್ದೇಕೆ?