Site icon Vistara News

Motivational story: ಅಪ್ಪ ಬಿಟ್ಟುಹೋದ 17 ಗೋವುಗಳನ್ನು 3 ಪಾಲು ಮಾಡಿದ್ದು ಹೇಗೆ?

cows

. ಕೃಷ್ಣ ಭಟ್

ಒಂದು ಊರಲ್ಲಿ ಒಬ್ಬ ಪ್ರಗತಿಪರ ಹೈನುಗಾರ ಇದ್ದರು. ಒಂದಿಷ್ಟು ಭೂಮಿಯೂ ಇತ್ತು. ಹತ್ತಾರು ದನಗಳನ್ನು ಸಾಕಿಕೊಂಡಿದ್ದರು. ಅವನ ದೊಡ್ಡ ಮಗ ಮನೆಯಲ್ಲೇ ಇದ್ದು ಹೈನುಗಾರಿಕೆಯಲ್ಲಿ ಸಹಾಯ ಮಾಡುತ್ತಿದ್ದ. ಎರಡನೆಯವನು ಮನೆಯ ಹೊರಗೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಜತೆಗೆ ಅಪ್ಪನಿಗೆ ಹೈನುಗಾರಿಕೆಯಲ್ಲಿ ನೆರವಾಗುತ್ತಿದ್ದ. ಮೂರನೇ ಮಗ ಬೇರೆಯೇ ಉದ್ಯೋಗ ಮಾಡಿಕೊಂಡು ನಿರಾಳವಾಗಿದ್ದ.
ಒಂದು ದಿನ ಈ ಹೈನುಗಾರ ವಯೋಸಹಜವಾಗಿ ಮೃತಪಟ್ಟರು. ಆಗ ಮೂವರು ಗಂಡು ಮಕ್ಕಳಿಗೆ ಆಸ್ತಿ ಹಂಚಿಕೆಯ ವಿಚಾರ ಪ್ರಸ್ತಾಪವಾಯಿತು. ಅಪ್ಪ ತುಂಬ ಬುದ್ಧಿವಂತ. ಯಾರಿಗೆ ಯಾವುದನ್ನು ಎಷ್ಟು ಕೊಡಬೇಕು ಎನ್ನುವ ವಿಚಾರದಲ್ಲಿ ಮೊದಲೇ ಉಯಿಲು ಬರೆದಿಟ್ಟಿದ್ದರು.

ಇದನ್ನೂ ಓದಿ |motivational story: ನಾವಾಡಿದ ಮಾತೇ ನಮಗೆ ತಿರುಗಿ ಕೇಳೋದು ಮಗಾ..!
ಭೂಮಿಯನ್ನು ಮೂವರು ಗಂಡುಮಕ್ಕಳಿಗೆ ಸಮಪಾಲು ಮಾಡುವಂತೆ ಸೂಚಿಸಿದ್ದರು. ಹಣದ ವಿಚಾರದಲ್ಲೂ ಗೊಂದಲ ಆಗಲಿಲ್ಲ. ಆದರೆ, ದನಗಳ ಹಂಚಿಕೆ ಮಾತ್ರ ಸ್ವಲ್ಪ ಸಮಸ್ಯೆಯನ್ನು ಸೃಷ್ಟಿ ಮಾಡಿತು.
ಹೈನುಗಾರ ಆಗಾಗ ಹೊಸ ದನ ಖರೀದಿಸುತ್ತಿದ್ದರು, ಕೆಲವನ್ನು ಮಾರುತ್ತಿದ್ದರು. ಕೆಲವು ಸಣ್ಣ ದನಗಳು ಬೆಳೆದು ಹಾಲು ಕೊಡುವ ಹಂತಕ್ಕೆ ಬಂದಿದ್ದವು. ಒಟ್ಟಾರೆಯಾಗಿ ಅವನು ಸಾಯುವ ಹೊತ್ತಿಗೆ 17 ದನಗಳು ಇದ್ದವು. ಇವುಗಳಲ್ಲಿ ಅರ್ಧ ಭಾಗವನ್ನು ಹೈನುಗಾರಿಕೆ ಮುಂದುವರಿಸಲಿರುವ ದೊಡ್ಡ ಮಗನಿಗೆ ನೀಡುವಂತೆಯೂ, ಮೂರನೇ ಒಂದು ಭಾಗವನ್ನು ಹೈನುಗಾರಿಕೆಯಲ್ಲಿ ಸಹಾಯ ಮಾಡುತ್ತಿದ್ದ ಎರಡನೇ ಮಗನಿಗೂ, ಒಂಬತ್ತನೇ ಒಂದು ಭಾಗವನ್ನು ಹೈನುಗಾರಿಕೆಯಲ್ಲಿ ಅಷ್ಟೇನೂ ಆಸಕ್ತಿ ಇಲ್ಲದ, ಆದರೆ ಅಪ್ಪನ ಆಸ್ತಿಯಲ್ಲಿ ಚೂರಾದರೂ ಬೇಕು ಎನ್ನುವ ಕೊನೆಯ ಮಗನಿಗೂ ನೀಡುವಂತೆ ಸೂಚಿಸಿದ್ದರು.
ಫಜೀತಿಗೆ ಬಿದ್ದದ್ದೇ ಇಲ್ಲಿ. 17 ದನಗಳಲ್ಲಿ ಅರ್ಧ ಭಾಗ ಎಂದರೆ ಎಷ್ಟು? ಎಂಟೂವರೆ! ಮೂರನೇ ಒಂದು ಭಾಗ ಅಂದರೂ ಐದು ಮುಕ್ಕಾಲು! ಇದನ್ನು ಪಾಲು ಮಾಡುವುದು ಹೇಗೆ ಎಂದು ಮಕ್ಕಳು ಚಿಂತಾಕ್ರಾಂತರಾದರು.
ಕೊನೆಗೆ ಅಪ್ಪನಿಗೆ ಆತ್ಮೀಯರಾಗಿದ್ದ ವಿಶ್ವನಾಥ ರಾಯರನ್ನು ಒಂದು ಮಾತು ಕೇಳುವುದು ಎಂದು ಎಲ್ಲರೂ ಒಪ್ಪಿದರು. ವಿಶ್ವನಾಥ ರಾಯರು ವಿಷಯವನ್ನು ಮನದಟ್ಟು ಮಾಡಿಕೊಂಡರು. ಹೈನುಗಾರಿಕೆಯಲ್ಲಿ ಆಸಕ್ತಿಯೇ ಇಲ್ಲದ ಕೊನೆಯ ಮಗನಿಗೆ `ನಿನ್ನ ಪಾಲನ್ನು ಎರಡನೆಯವನಿಗೆ ಕೊಟ್ಟು ಬಿಡು.. ದೊಡ್ಡವನಿಗೆ ಒಂಭತ್ತು, ಎರಡನೆಯವನಿಗೆ ಎಂಟು ದನ ಆಗುತ್ತದೆ’ ಎಂದು ಸೌಹಾರ್ದದದ ಮಾತು ಆಡಿದರು. ಆದರೆ, ಅವನು ಒಪ್ಪಲಿಲ್ಲ. ಅಪ್ಪನ ಪ್ರೀತಿಯ ಕಾಣಿಕೆ ಅದು ಎಂದು ಏನೇನೋ ಕಾರಣ ಹೇಳಿದ.
ನೆರೆದಿದ್ದ ಎಲ್ಲರಿಗೂ ಕಾತರ. ಈಗ ಈ ದನಗಳನ್ನು ಹೇಗೆ ಪಾಲು ಮಾಡುತ್ತಾರೆ ವಿಶ್ವನಾಥ ರಾಯರು ಎಂದು. ಸ್ವಲ್ಪ ಹೊತ್ತು ಯೋಚಿಸಿದ ವಿಶ್ವನಾಥ ರಾಯರು ತಮ್ಮದೇ ಮನೆಯಿಂದ ಒಂದು ದನವನ್ನು ತರುವಂತೆ ಸೂಚಿಸಿದರು. ಅದನ್ನು ತಂದು ಈ ಮನೆಯ ಹಟ್ಟಿಯಲ್ಲಿ ಕಟ್ಟಲಾಯಿತು.
ವಿಶ್ವನಾಥ ರಾಯರು ಮೂರೂ ಹುಡುಗರನ್ನು ಹಟ್ಟಿಯ ಬಳಿಗೆ ಕರೆದುಕೊಂಡು ಹೋದರು. ಈಗ ಎಷ್ಟು ದನಗಳಿವೆ ಎಂದು ಕೇಳಿದರು. ಎಲ್ಲರೂ `18′ ಅಂದರು. ಈಗ ಪಾಲು ಮಾಡೋಣ ಅಂದರು. ಆಗ ಕೆಲವರು, ಅದರಲ್ಲಿ ಒಂದು ದನ ನಿಮ್ಮದಲ್ವಾ? ನೀವ್ಯಾಕೆ ಕೊಡಬೇಕು ಎಂದು ಕೇಳಿದರು.
ವಿಶ್ವನಾಥ ರಾಯರು, ಮೊದಲು ಪಾಲು ಮಾಡೋಣ, ಆಮೇಲೆ ಮಾತನಾಡೋಣ ಅಂದರು.
ಪಾಲು ಶುರುವಾಯಿತು. 18ರ ಅರ್ಧ ಅಂದರೆ ಒಂಬತ್ತು ದನಗಳನ್ನು ದೊಡ್ಡ ಮಗ ಹಿಡಿದುಕೊಂಡು ಹೋಗಿ ಬದಿಗೆ ನಿಂತ. ಎರಡನೇ ಮಗ ಮೂರನೇ ಒಂದು ಭಾಗ ಅಂದರೆ ಆರು ದನಗಳನ್ನುಪಡೆದ. ಮೂರನೇ ಮಗನಿಗೆ ಒಂಬತ್ತನೇ ಒಂದು ಭಾಗ ಅಂದರೆ 18ರಲ್ಲಿ ಎರಡು ದನಗಳನ್ನು ಸ್ವೀಕರಿಸಿದ.
ಅರೆರೆ ಇದೇನಾಶ್ಚರ್ಯ. ಇನ್ನೂ ಒಂದು ಹಸು ಹಾಗೆಯೇ ಉಳಿದಿತ್ತು. ವಿಶ್ವನಾಥ ರಾಯರು ಅದನ್ನು ತಮ್ಮ ಮನೆಗೇ ಮರಳಿ ಒಯ್ಯುವಂತೆ ತಮ್ಮ ಮಗನಿಗೆ ಸೂಚಿಸಿದರು.
ದನಗಳನ್ನು ಹೇಗೆ ಪಾಲು ಮಾಡುತ್ತಾರೆ ಎಂದು ಆಶ್ಚರ್ಯದಿಂದ ಬಂದಿದ್ದವರೆಲ್ಲ ವಿಶ್ವನಾಥ ರಾಯರ ಜಾಣ್ಮೆಗೆ ತಲೆದೂಗಿದರು. ಒಬ್ಬರಂತೂ ಕೇಳೇಬಿಟ್ಟರು. `ಈ ಐಡಿಯಾ ನಿಮಗೆ ಹೇಗೆ ಬಂತು?’ ಎಂದು.
ವಿಶ್ವನಾಥ ರಾಯರು ಹೇಳಿದರು: ಏನೂ ಇಲ್ಲ. ಸಮಸ್ಯೆಯನ್ನು ಅದರ ಒಳಗೇ ಕುಳಿತು ಪರಿಹರಿಸಲು ಕೆಲವೊಮ್ಮೆ ಕಷ್ಟವಾಗುತ್ತದೆ. ಆಗ ಹೊರಗಿನಿಂದ ನಿಂತು ಯೋಚಿಸಬೇಕು. ನಾನು ಒಂದು ದನವನ್ನು ತಂದು ಕಟ್ಟಿದ್ದು, ನನ್ನ ಪಾಲಿಗೆ ಒಂದು ಲೆಕ್ಕಾಚಾರವನ್ನು ಸಮಗೊಳಿಸುವ ಪ್ರಯತ್ನವಾಗಿತ್ತು. ಆದರೆ, ಆ ಮಕ್ಕಳ ಪಾಲಿಗೆ ನನ್ನ ಮೇಲಿನ ನಂಬಿಕೆಯನ್ನೂ ವಿಸ್ತರಿಸುವ ಪ್ರಕ್ರಿಯೆಯಾಗಿತ್ತು ಎಂದರು.

ಇದನ್ನೂ ಓದಿ| Motivational story: ಇದರಲ್ಲಿ ನಾವೇನು? ಆಲೂನಾ, ಮೊಟ್ಟೆನಾ? ಕಾಫಿ ಬೀಜಾನಾ?

Exit mobile version