Site icon Vistara News

Motivational story | ಪರ್ವತದ ನೆತ್ತಿಯಲ್ಲಿ ಕುಳಿತು ಪ್ರಾಣಿಗಳನ್ನು ಪಳಗಿಸುತ್ತಿದ್ದರು ಆ ಹೆಣ್ಮಗಳು!

woman on mountain

ಕೃಷ್ಣ ಭಟ್‌ ಅಳದಂಗಡಿ-Motivational story
ಆವತ್ತು ವಿಶ್ವನಾಥ ಯಾರೂ ಹೆಚ್ಚಾಗಿ ಏರಲು ಇಷ್ಟಪಡದ, ಬಲು ಕಠಿಣವಾದ ಪರ್ವತದ ತುತ್ತ ತುದಿಯನ್ನು ಏರಿ ನಿಂತಿದ್ದ. ಈ ಪರ್ವತ ಹತ್ತಿದ ಮೊದಲ ವ್ಯಕ್ತಿ ನಾನಿರಬಹುದು ಅಂತ ಅವನಿಗೆ ಅನಿಸತೊಡಗಿತ್ತು. ಜೋರಾಗಿ ಹುರ‍್ರೇ ಎಂದು ಖುಷಿಪಟ್ಟ. ಆದರೆ, ತಿರುಗಿ ನೋಡಿದರೆ ಕೆಲವೇ ಮೀಟರ್ ದೂರದಲ್ಲಿ ಮಹಿಳೆಯೊಬ್ಬರು ಸುಮ್ಮನೆ ಕುಳಿತಿದ್ದರು. ದೇವ್ರೆ ಒಬ್ಬ ಹೆಣ್ಮಗಳೇ ಈ ಪರ್ವತ ಹತ್ತಿ ಬಂದಿದ್ದಾರೆ ಎಂದರೆ ನಾನು ಹತ್ತಿದ್ದರಲ್ಲಿ ಏನು ದೊಡ್ಡ ಸಂಗತಿ ಇಲ್ಲ ಅಂತ ಅವನಿಗೆ ಅನಿಸತೊಡಗಿತು.

ಅವರ ಬಳಿ ಹೋಗಿ ಕೇಳಿದ: ಈ ಪರ್ವತದ ತುದಿಯಲ್ಲಿ ಒಬ್ಬರೇ ಏನು ಮಾಡುತ್ತಿದ್ದೀರಿ ನೀವು?
ಮಹಿಳೆ ಹೇಳಿದರು: ನನಗೆ ಇಲ್ಲಿ ಮಾಡುವುದಕ್ಕೆ ಬೇಕಾದಷ್ಟು ಕೆಲಸಗಳಿವೆ..
ವಿಶ್ವನಾಥ: ಹೌದಾ? ಯಾವ ರೀತಿಯ ಕೆಲಸ ಅದು. ನಿಮ್ಮ ಜತೆಗೆ ಇಲ್ಲಿ ಬೇರೆ ಯಾರೂ ಇದ್ದಂತೆ ಕಾಣುತ್ತಿಲ್ಲ.

ಮಹಿಳೆ: ನನಗೆ ಎರಡು ರಣ ಹದ್ದುಗಳಿಗೆ, ಎರಡು ಗಿಡುಗಗಳಿಗೆ, ಎರಡು ಮೊಲಗಳಿಗೆ ತರಬೇತಿ ನೀಡಬೇಕಾಗಿದೆ. ಒಂದು ಕತ್ತೆಗೆ ಬುದ್ಧಿ ಹೇಳಬೇಕಾಗಿದೆ. ಹಾವಿಗೆ ಶಿಸ್ತುಕಲಿಸಬೇಕಾಗಿದೆ. ಮತ್ತು ಒಂದು ಸಿಂಹವನ್ನು ಪಳಗಿಸಬೇಕಾಗಿದೆ.
ವಿಶ್ವನಾಥ ಆಶ್ಚರ್ಯದಿಂದ ಕೇಳಿದ: ಹೌದಾ? ಅವುಗಳೆಲ್ಲ ಇಲ್ಲೆಲ್ಲಾ ಕಾಣಿಸುತ್ತಿಲ್ಲವಲ್ಲ… ಎಲ್ಲಿ ಹೋಗಿವೆ?

ಮಹಿಳೆ ವಿವರಿಸುತ್ತಾ ಹೋದರು.
ಎರಡು ರಣಹದ್ದುಗಳು ಮೇಲಿಂದ ಹಾರುತ್ತಾ ಎಲ್ಲವನ್ನೂ ನೋಡುತ್ತವೆ, ಒಳ್ಳೆಯದು ಕೆಟ್ಟದು ಎಲ್ಲವನ್ನೂ. ಅವುಗಳಿಗೆ ಒಳ್ಳೆಯದನ್ನು ಮಾತ್ರ ನೋಡುವಂತೆ ನಾನೀಗ ಹೇಳಿಕೊಡಬೇಕಾಗಿವೆ. ಈ ರಣಹದ್ದುಗಳೆಂದರೆ ನನ್ನ ಕಣ್ಣುಗಳು.

ಎರಡು ಗಿಡುಗಗಳು ಯಾವಾಗಲೂ ಕಂಡದ್ದನ್ನು ಗಟ್ಟಿಯಾಗಿ ಹಿಡಿದು ನೋವು ಮಾಡುತ್ತವೆ. ರಕ್ತ ಒಸರುವಂತೆ ಮಾಡುತ್ತಿವೆ. ಅವುಗಳ ಉಗುರುಗಳಿಗೆ ಹಿತವಾಗಿ ಹಿಡಿಯುವುದು ಹೇಗೆಂದು ಕಲಿಸಬೇಕಾಗಿದೆ. ಆ ಗಿಡುಗಗಳೆಂದರೆ ನನ್ನ ಈ ಕೈಗಳು.

ಮೊಲಗಳು ಬೇಕಾಬಿಟ್ಟಿ ಅತ್ತಿಂದಿತ್ತ ಓಡಾಡಿ ಕೆಲವೊಮ್ಮೆ ಕಷ್ಟದಲ್ಲಿ ಸಿಕ್ಕಾಕಿ ಕೊಳ್ಳುತ್ತವೆ. ಉರುಳಿಗೂ ಬೀಳುತ್ತವೆ. ಸ್ವಲ್ಪ ನೋಡಿಕೊಂಡು, ಅವಸರವಿಲ್ಲದೆ, ನಿಧಾನವಾಗಿ ಓಡಾಡಲು ಅವುಗಳಿಗೆ ಹೇಳಿಕೊಡಬೇಕಾಗಿದೆ. ಈ ಮೊಲಗಳೆಂದರೆ ನನ್ನ ಈ ಕಾಲುಗಳು.

ಕತ್ತೆ ಯಾವತ್ತೂ ಸಿಕ್ಕಾಪಟ್ಟೆ ಭಾರ ಹೊತ್ತುಕೊಂಡು ಆಯಾಸದಿಂದ ನಡುಗುತ್ತದೆ. ವಿಪರೀತ ಭಾರ ಹೊರಬೇಕಾಗಿಲ್ಲ. ದೇಹಕ್ಕೆ ಎಷ್ಟು ಸಾಧ್ಯವೋ ಅಷ್ಟು ಹೊತ್ತರೆ ಸಾಕು, ಬಿದ್ದು ಹೋದರೆ ಆಮೇಲೆ ಯಾರೂ ಕೇಳುವುದಿಲ್ಲ. ಹುಷಾರಾಗಿರು ಅಂತ ಆ ಕತ್ತೆಗೆ ನಾನು ಮನವರಿಕೆ ಮಾಡಬೇಕಾಗಿದೆ. ಆ ಕತ್ತೆ ಎಂದರೆ ಈ ನನ್ನ ದೇಹ.

ನಿಜವಾಗಿ ಈ ಹಾವಿಗೆ ಶಿಸ್ತು ಕಲಿಸೋದು ತುಂಬ ಕಷ್ಟ. ಈ ಹಾವನ್ನು ನಿಯಂತ್ರಿಸಲಿಕ್ಕೆ ೩೨ ಗರಗಸಗಳಿರುವ ಚಕ್ರವ್ಯೂಹವೇ ಇದೆ. ಸ್ವಲ್ಪ ಹೆಚ್ಚುಕಡಿಮೆ ಆದರೂ ಕತ್ತರಿಸಿ ಹೋಗಬಹುದು. ಆದರೂ ಕೂಡಾ ಅದು ಹೊರಗೆ ಚಾಚಿ ವಿಷ ಕಾರಲು ಪ್ರಯತ್ನಿಸುತ್ತಲೇ ಇರುತ್ತದೆ. ಅದಕ್ಕೆ ವಿಷದ ಬದಲು ಪ್ರೀತಿಯನ್ನು ಹರಿಸಲು ನಾನು ಕಲಿಸಬೇಕಾಗಿದೆ. ಆ ಹಾವೆಂದರೆ ನನ್ನ ನಾಲಿಗೆ.

ನನ್ನ ಬಳಿ ಒಂದು ಸಿಂಹವೂ ಇದೆ. ಅದು ನಾನೇ ರಾಜ ಎನ್ನುತ್ತದೆ. ಎಲ್ಲವೂ ನನ್ನಿಂದ ಎಂದು ಮೆರೆಯುತ್ತಾ ಇರುತ್ತದೆ. ಆ ಸಿಂಹವನ್ನು ನಾನು ಮೆತ್ತಗೆ ಪಳಗಿಬೇಕಾಗಿದೆ. ಈ ಸಿಂಹವೆಂದರೆ ನನ್ನ ಅಹಂಕಾರ.

ವಿಶ್ವನಾಥ ಏನೂ ಮಾತನಾಡಲಿಲ್ಲ. ಸ್ವಲ್ಪ ದೂರದಲ್ಲಿ ಹೋಗಿ ಸುಮ್ಮನೆ ಧ್ಯಾನಮಗ್ನನಾದ. ಅವನಿಗೂ ಹುಲಿ, ಹಾವು, ಮೊಲ, ಗಿಡುಗ, ಕತ್ತೆ, ರಣಹದ್ದುಗಳು ಕಾಣಿಸಿಕೊಳ್ಳತೊಡಗಿದವು.

ಇದನ್ನೂ ಓದಿ | Motivational story | ವಸ್ತುಪ್ರದರ್ಶನದಲ್ಲಿ ಕಂಡ ಆ ಅಮೂಲ್ಯ ವಸ್ತುವನ್ನು ನಿಜಕ್ಕೂ ಕಳೆದುಕೊಂಡವರಾರು?

Exit mobile version