ಕೃಷ್ಣ ಭಟ್ ಅಳದಂಗಡಿ-motivational story
ಒಂದು ಬಾರಿ ಗುರು ಶಿಷ್ಯರಿಬ್ಬರು ಒಂದೂರನ್ನು ದಾಟಿ ಹೋಗುತ್ತಿದ್ದರು. ಇಬ್ಬರಿಗೂ ಹಸಿವೆಯಾಗಿತ್ತು, ಆಗಲೇ ಕತ್ತಲೂ ಆವರಿಸುತ್ತಿತ್ತು. ಹೀಗೇ ಮುಂದೆ ಸಾಗಿದರೆ ತಿನ್ನಲು ಏನೂ ಸಿಗಲಾರದು ಎಂದು ಭಾವಿಸಿದ ಅವರು ಅಕ್ಕಪಕ್ಕದಲ್ಲಿ ಮನೆ ಏನಾದರೂ ಇದೆಯೇ ಎಂದು ನೋಡಿದರು.
ಅವರಿಗೆ ದೂರದಲ್ಲೊಂದು ಸಣ್ಣ ಮನೆ ಕಾಣಿಸಿತು. ಅಲ್ಲಿ ಹೋಗಿ ಬಾಗಿಲು ತಟ್ಟಿದರು.`ನಾವು ಮುಂದಿನೂರಿಗೆ ಹೋಗಬೇಕಾಗಿದೆ. ಈಗ ಹಸಿವೆಯಾಗಿದೆ. ಏನಾದರೂ ಸಿಗಬಹುದಾ?’ ಎಂದು ಕೇಳಿದರು. ಮನೆಯಲ್ಲಿ ಒಬ್ಬ ವ್ಯಕ್ತಿ, ಅವನ ಹೆಂಡತಿ ಮತ್ತು ಇಬ್ಬರು ಮಕ್ಕಳಿದ್ದರು. ಮೂವರೂ ಹಾಕಿದ ಬಟ್ಟೆ ಅವರ ಬಡತನವನ್ನು ಎತ್ತಿ ತೋರಿಸುತ್ತಿತ್ತು. ಆದರೂ ಬಂದ ಅತಿಥಿಗಳನ್ನು ಗೌರವದಿಂದಲೇ ನೋಡಿಕೊಂಡರು. ಮತ್ತು ಆ ರಾತ್ರಿ ಅಲ್ಲೇ ಉಳಿದು ಮರುದಿನ ಮುಂಜಾನೆ ಪ್ರಯಾಣ ಮುಂದುವರಿಸುವಂತೆ ಕೇಳಿಕೊಂಡರು.
ಆವತ್ತು ರಾತ್ರಿ ಊಟ ಮಾಡಿ ಎಲ್ಲರೂ ಮಲಗಿದ್ದರು. ಮಧ್ಯರಾತ್ರಿ ಮೆಲ್ಲಗೆ ಎದ್ದ ಗುರುಗಳು, ಶಿಷ್ಯನನ್ನೂ ಎಬ್ಬಿಸಿದರು. ʻಈ ಮನೆಯಲ್ಲೊಂದು ದನ ಇದೆ. ಅದನ್ನು ಹಿಡಿದುಕೊಂಡು ನಾವು ಓಡಿಹೋಗೋಣ’ ಎಂದರು ಗುರುಗಳು. ಶಿಷ್ಯ ವಿರೋಧಿಸಿದ. `ʻಗುರುಗಳೇ ಇವರು ತುಂಬ ಬಡವರು. ಅವರ ಜೀವನಕ್ಕೆ ಆಸರೆಯಾಗಿರುವುದೊಂದೇ ದನ. ಅದರ ಹಾಲು ಮಾರಿಯೇ ಇವರು ಬದುಕುತ್ತಿರುವುದು. ಅದನ್ನೇ ಕಿತ್ತುಕೊಳ್ಳುವುದು ಅನ್ಯಾಯ. ಅದಕ್ಕಿಂತಲೂ ಹೆಚ್ಚಾಗಿ ನಾವು ಕಳ್ಳರಾಗುತ್ತೇವೆ,” ಎಂದ. ಆದರೆ, ಗುರುಗಳು ಒಪ್ಪಲಿಲ್ಲ.
ಯಜಮಾನ ಬೆಳಗ್ಗೆ ಎದ್ದು ನೋಡಿದಾಗ ದನ ಇಲ್ಲದ್ದನ್ನು ಕಂಡು ಗೋಳಾಡಿದ. ಅಯ್ಯೋ ಗುರುಗಳು ಎಂದು ನಂಬಿ ಮೋಸ ಹೋದೆ. ಅವರಿಗೆ ಆಶ್ರಯ ಕೊಟ್ಟದ್ದಕ್ಕೆ, ಉಂಡ ಮನೆಗೇ ಎರಡು ಬಗೆದರಲ್ಲಾ ಎಂದು ಬೇಜಾರು ಮಾಡಿಕೊಂಡ. ತಲೆ ಮೇಲೆ ಕೈ ಇಟ್ಟುಕೊಂಡ.
ಇದಾಗಿ ಐದು ವರ್ಷದ ಬಳಿಕ ಅದೇ ಗುರು-ಶಿಷ್ಯರು ಅದೇ ದಾರಿಯಾಗಿ ಬಂದರು. ನೋಡಿದರೆ ಹಳೆಯ ಗುಡಿಸಲಿನ ಜಾಗದಲ್ಲಿ ಒಂದು ದೊಡ್ಡ ಮನೆ ಇದೆ. ಎದುರಿನ ಗದ್ದೆಯಲ್ಲಿ ನಳನಳಿಸುವ ತರಕಾರಿಗಳು!
ಮನೆಗೆ ಬಂದ ಅತಿಥಿಗಳನ್ನು ಅದೇ ಯಜಮಾನ ಮತ್ತು ಮಕ್ಕಳು ಪ್ರೀತಿಯಿಂದ ಆದರಿಸಿದರು. ಮತ್ತು ತಮ್ಮ ಬದುಕಿನ ಕಥೆಯನ್ನು ಹೇಳಿದರು.
ಐದು ವರ್ಷದ ಹಿಂದೆ ನಿಮ್ಮ ಹಾಗೆಯೇ ಗುರು-ಶಿಷ್ಯರು ಬಂದಿದ್ದರು. ನಮಗೆ ಆಸರೆಯಾಗಿದ್ದ ಒಂದೇ ಒಂದು ಹಸುವನ್ನು ಅವರು ಕದ್ದೊಯ್ದರು. ನಮಗೆ ಅದು ಬಿಟ್ಟರೆ ಬೇರೆ ಯಾವುದೇ ಆದಾಯ ಮೂಲ ಇರಲಿಲ್ಲ. ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾಗ ನನ್ನ ಪುಟ್ಟ ಮಗ ಹೇಳಿದ: ಅಪ್ಪಾ, ಎದುರುಗಡೆ ಪಾಳು ಬಿಟ್ಟಿರುವ ಭೂಮಿಯಲ್ಲಿ ತರಕಾರಿ ಬೆಳೆಯೋಣ ಅಪ್ಪ, ಎಲ್ಲರೂ ಸೇರಿ ದುಡಿಯೋಣ ಅಂದ. ದನವನ್ನು ಕಳೆದುಕೊಂಡಿದ್ದ ನನಗೆ ಅದೇ ಸರಿ ಅನಿಸಿತು. ಮೊದಲು ಕೆಲವೇ ದಿನದಲ್ಲಿ ಬೆಳೆಯುವ ಸೊಪ್ಪು ತರಕಾರಿಗಳನ್ನು ಬೆಳೆದು ಮಾರಾಟ ಮಾಡಿದೆ. ಮುಂದೆ ದೀರ್ಘಕಾಲಿಕ ಬೆಳೆಗಳನ್ನು ಮಾಡಿದೆ. ಈಗ ನಾನು ಈ ಊರಿನಲ್ಲಿ ಒಳ್ಳೆಯ ಕೃಷಿಕನಾಗಿದ್ದೇನೆ. ಇದಕ್ಕೆಲ್ಲ ದನ ಕದ್ದುಕೊಂಡು ಹೋದ ಆ ಗುರುಗಳಿಗೆ ಧನ್ಯವಾದ ಹೇಳಬೇಕು-ಎಂದ.
ಆವತ್ತು ಅಲ್ಲೇ ಉಳಿದ ಗುರು ಶಿಷ್ಯರು ಮರುದಿನ ಪ್ರಯಾಣ ಬೆಳೆಸಿದರು. ದಾರಿಯಲ್ಲಿ ಗುರುಗಳು ಶಿಷ್ಯನಿಗೆ ಹೇಳಿದರು: ಐದು ವರ್ಷದ ಹಿಂದೆ ಆ ಮನೆಗೆ ಹೋದಾಗ ಅವರ ಬಡತನಕ್ಕೆ ನಿರುತ್ಸಾಹಿ ಮತ್ತು ಆಲಸ್ಯದ ಜೀವನವೇ ಕಾರಣ ಎಂದು ನನಗೆ ಅನಿಸಿತು. ಮನೆ ಎದುರಿನ ಜಾಗ ಅವರದೆಂದೂ ತಿಳಿಯಿತು. ಆದರೆ ಪಾಳು ಬಿಟ್ಟಿದ್ದರು. ದನದಿಂದ ಸಿಗುವ ಆದಾಯ ಸಾಕು ಎನ್ನುವ ಸೀಮಿತತೆ ಅವರದಾಗಿತ್ತು. ಅದನ್ನು ಕಿತ್ತುಕೊಂಡರೆ ಮಾತ್ರ ಅವರು ಬೇರೆ ಆಯ್ಕೆಗಳ ಬಗ್ಗೆ ಯೋಚಿಸುತ್ತಾರೆ ಅಂತ ನಾನು ತೀರ್ಮಾನ ಮಾಡಿ.. ದನವನ್ನು ಆ ಮನೆಯಿಂದ ತಪ್ಪಿಸಲು ನಿರ್ಧರಿಸಿದೆ.
ಶಿಷ್ಯ ಹೇಳಿದ: ನನಗೆ ಆವತ್ತು ಇದೆಲ್ಲ ಅರ್ಥವಾಗಲಿಲ್ಲ. ಮನುಷ್ಯ ಅನಿವಾರ್ಯತೆಗೆ ಬಿದ್ದಾಗಲೇ ಹೊಸ ಯೋಚನೆ ಮಾಡುತ್ತಾನೆ ಅಂತ ಇವತ್ತು ಅರ್ಥವಾಯಿತು.
ಅಷ್ಟು ಹೊತ್ತಿಗೆ ಶಿಷ್ಯನಲ್ಲೂ ನಾನೇಕೆ ಗುರುವಾಗಬಾರದು ಎಂಬ ಸಣ್ಣ ಆಸೆಯೊಂದು ಮೊಳಕೆಯೊಡೆಯಿತು.
ಇದನ್ನೂ ಓದಿ | Motivational story| ದೇವರು ಒಂದಿಡೀ ದಿನ ನಮ್ಮ ಜತೆಗೇ ಸುತ್ತಾಡಿದರೆ ಹೇಗಿರ್ತದೆ?