Site icon Vistara News

Motivational story | ನಾವು ಏನು ಹೇಳ್ತೀವಿ ಅನ್ನುವುದಕ್ಕಿಂತಲೂ ಅದನ್ನು ಹೇಗೆ ಹೇಳ್ತೀವಿ ಅನ್ನೋದೂ ಮುಖ್ಯ!

Talking each other

ಕೃಷ್ಣ ಭಟ್‌ ಅಳದಂಗಡಿ- Motivational story
ದೊರೆ ಅಕ್ಬರ್ ಗೆ ಆವತ್ತು ಒಂದು ವಿಚಿತ್ರವಾದ ಕನಸು ಬಿತ್ತು. ಕನಸಿನಲ್ಲಿ ಅವನ ಎಲ್ಲ ಹಲ್ಲುಗಳು ಉದುರಿ ಹೋಗಿ ಒಂದು ಹಲ್ಲು ಮಾತ್ರ ಉಳಿದಿತ್ತು! ಕನ್ನಡಿ ನೋಡಿಕೊಂಡರೆ ತುಂಬ ಹೇಸಿಗೆಯಾಗುತ್ತಿತ್ತು.

ಬೆಳಗ್ಗೆ ಎದ್ದವನೇ ಆಸ್ಥಾನ ಜೋತಿಷಿಯನ್ನು ಕರೆಸಿಕೊಂಡು ಈ ಕನಸಿನ ಮರ್ಮವೇನು ಎಂದು ಕೇಳಿದ. ಜೋತಿಷಿ ತನ್ನ ಗ್ರಂಥಗಳನ್ನು ಪರಿಶೀಲಿಸಿ ಹೇಳಿದ: ದೊರೆಗಳೇ, ನಿಮ್ಮ ಕುಟುಂಬದವರೆಲ್ಲ ನಿಮ್ಮ ಕಣ್ಣಮುಂದೆಯೇ ಸತ್ತು ಹೋಗ್ತಾರೆ ಅನ್ನೋದರ ಸೂಚನೆ ಇದು ಅಂತ ಸ್ವಪ್ನ ಶಾಸ್ತ್ರ ಹೇಳುತ್ತದೆ.

ಅಕ್ಬರನಿಗೆ ತುಂಬ ಕೋಪ ಬಂತು. ಬೇಸರವೂ ಆಯಿತು. ಆ ಜೋತಿಷಿಯನ್ನು ಕಳುಹಿಸಿ ಬೇರೆ ಜೋತಿಷಿಗಳನ್ನು ಕರೆಸಿಕೊಂಡ. ಯಾರನ್ನೇ ಕೇಳಿದರೂ ಎಲ್ಲರೂ ಒಂದೇ ಅಭಿಪ್ರಾಯ ತಿಳಿಸಿದರು. ಫಲ ಜೋತಿಷದ ಪ್ರಕಾರ ಹೀಗೇ ಇದೆ ದೊರೆಗಳೇ ಅಂದರು. ಅವರ್ಯಾರಿಗೂ ಚಿಕ್ಕಾಸನ್ನೂ ಕೊಡದೆ ಕಳುಹಿಸಿಕೊಟ್ಟ ಅಕ್ಬರ್.

ಕೆಲವು ದಿನಗಳ ನಂತರ ಅಕ್ಬರನಿಗೆ ಬೀರಬಲ್ಲ ಎದುರಾದ. ಆಗ ಅಕ್ಬರ್ ಬೀರಬಲ್ಲನ ಮುಂದೆ ತನ್ನ ಕನಸಿನ ಕಥೆ ಹೇಳಿಕೊಂಡ. ಏನಿರಬಹುದು ಇದರ ಮರ್ಮ ಎಂದು ಪ್ರಸ್ನಿಸಿದ.

ಬೀರಬಲ್ಲ ಸ್ವಲ್ಪ ಹೊತ್ತು ಯೋಚನೆ ಮಾಡಿ ಹೇಳಿದ: ದೊರೆಗಳೇ ನೀವು ಈ ಸ್ವಪ್ನದ ಬಗ್ಗೆ ತುಂಬ ಚಿಂತೆ ಮಾಡಬೇಕಾಗಿಲ್ಲ. ಇದರ ಅರ್ಥ ಏನೆಂದರೆ, ನಿಮಗೆ ದೀರ್ಘಾಯುಷ್ಯವಿದೆ. ನಿಮ್ಮ ಕುಟುಂಬದ ಇತರ ಎಲ್ಲರಿಗಿಂತ ಹೆಚ್ಚು ಕಾಲ ನೀವು ಬದುಕುತ್ತೀರಿ.. ಅಂತ ಹೇಳುತ್ತದೆ ಫಲ ಜೋತಿಷ ಅಂದ.

ಬೀರಬಲ್ಲನ ಮಾತು ಕೇಳಿ ಅಕ್ಬರ್ ಗೆ ತುಂಬ ಖುಷಿಯಾಗಿ ಬಹುಮಾನಗಳನ್ನು ಕೊಟ್ಟ.

ನಿಜ ಅಂದರೆ ಜೋತಿಷಿಗಳು ಮತ್ತು ಬೀರಬಲ್ಲ ಹೇಳಿದ ಅಭಿಪ್ರಾಯಗಳಲ್ಲಿ ಯಾವುದೇ ವ್ಯತ್ಯಾಸ ಇರಲಿಲ್ಲ. ಆದರೆ, ಹೇಳಿದ ರೀತಿಯಲ್ಲಿ ವ್ಯತ್ಯಾಸ ಇತ್ತು ಅಷ್ಟೆ.

ಇದನ್ನೂ ಓದಿ | Motivational story | ಆ ವಿದ್ವಾಂಸನ ಅಹಂಕಾರ ನಡು ನೀರಲ್ಲಿ ಮುಳುಗಿತು!

Exit mobile version