Site icon Vistara News

Motivational story : ಕಷ್ಟಪಟ್ಟು ಬರೆದ ಚಿತ್ರದಲ್ಲಿ ತಪ್ಪು ಹುಡುಕೋದು ಭಾರಿ ಸುಲಭ.. ಆದರೆ, ಸರಿ ಮಾಡೋದು?

Artist

ಕೃಷ್ಣ ಭಟ್‌ ಅಳದಂಗಡಿ-motivational story
ಒಂದು ಊರಲ್ಲಿ ಒಬ್ಬ ಮಹಾನ್ ಚಿತ್ರ ಕಲಾವಿದರಿದ್ದರು. ಅವರ ಬಳಿ ಒಬ್ಬ ವಿದ್ಯಾರ್ಥಿ ಮೂರು ವರ್ಷಗಳ ಕಾಲ ತುಂಬ ಶ್ರದ್ಧೆಯಿಂದ ಚಿತ್ರ ಕಲೆ ಅಭ್ಯಾಸ ಮಾಡಿದ್ದ. ಕಲಿಕಾ ಅವಧಿಯ ಕೊನೆಯ ದಿನಗಳು ಸಮೀಪಿಸುತ್ತಿದ್ದವು. ಆ ಯುವಕನಿಗೆ ತನ್ನ ಕಲೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಬೇಕು, ಅದರ ಬಗ್ಗೆ ಜನರ ಅಭಿಪ್ರಾಯ ಏನಿರುತ್ತದೆ ಎಂದು ತಿಳಿಯಬೇಕು ಎನ್ನುವ ಆಸೆ ಆಯಿತು.

ಅವನು ಒಂದು ವಾರ ಕುಳಿತು ಶ್ರದ್ಧೆಯಿಂದ ಒಂದು ಸುಂದರವಾದ ಚಿತ್ರವನ್ನು ಪೇಂಟ್ ಮಾಡಿದ. ದೊಡ್ಡ ಕ್ಯಾನ್ವಾಸ್‍ನಲ್ಲಿದ್ದ ಅದನ್ನು ಆ ನಗರದ ಪ್ರಧಾನ ಸ್ಥಳದ ನಾಲ್ಕು ರಸ್ತೆಗಳು ಸೇರುವ ಜಾಗದಲ್ಲಿ ಎಲ್ಲರಿಗೂ ಕಾಣುವಂತೆ ಇಡಲು ನಿರ್ಧರಿಸಿದ. ಒಂದು ಮುಂಜಾನೆ ಅದನ್ನು ಅಲ್ಲಿ ಇಟ್ಟೇ ಬಿಟ್ಟ.

ಅದರ ಪಕ್ಕದಲ್ಲಿ ಒಂದು ಟಿಪ್ಪಣಿಯನ್ನು ಬರೆದಿದ್ದ: ಪ್ರೀತಿಯ ಕಲಾರಸಿಕರೇ, ನಾನೊಂದು ಚಿತ್ರವನ್ನು ಬರೆದಿದ್ದೇನೆ. ನಾನು ಒಬ್ಬ ವಿದ್ಯಾರ್ಥಿ ಮತ್ತು ಈ ವೃತ್ತಿಗೆ ಹೊಸಬ. ನಾನು ಬರೆದ ಚಿತ್ರಗಳಲ್ಲಿ ಏನಾದರೂ ತಪ್ಪುಗಳು ಆಗಿರಬಹುದು. ಕಲಾಪ್ರೇಮಿಗಳು, ಕಲಾ ಪೋಷಕರೂ ಆದ ತಾವು ಇದರಲ್ಲೇನಾದರೂ ತಪ್ಪು ಕಂಡರೆ ಆ ಭಾಗದಲ್ಲಿ ತಪ್ಪು ಗುರುತನ್ನು ಹಾಕಿ. ನಾನು ಸರಿ ಮಾಡಿಕೊಳ್ಳುತ್ತೇನೆ.

ಹಾಗೆ ಕ್ಯಾನ್ವಾಸ್ ಇಟ್ಟು ಮನೆಗೆ ಬಂದ. ಸಂಜೆ ಮರಳಿ ಹೋಗಿ ನೋಡಿದರೆ ಇಡೀ ಕ್ಯಾನ್ವಾಸ್‍ನ ತುಂಬ ಗೆರೆಗಳನ್ನು ಹಾಕಲಾಗಿತ್ತು. ಎಲ್ಲ ಕಡೆ ತಪ್ಪು ಗುರುತುಗಳನ್ನು ಹಾಕಲಾಗಿತ್ತು. ನಿಜವೆಂದರೆ, ಈ ತಪ್ಪು ಗುರುತುಗಳ ನಡುವೆ ಅವನ ಚಿತ್ರವೇ ಕಣ್ಮರೆಯಾಗಿ ಹೋಗಿತ್ತು.

ಇದನ್ನು ನೋಡಿ ಅವನು ಕುಸಿದೇ ಹೋದ. ಆ ಫ್ರೇಮನ್ನು ಹಿಡಿದುಕೊಂಡ ಗುರುಗಳ ಬಳಿಗೆ ಧಾವಿಸಿದ. `ನಾನು ಒಬ್ಬ ಒಳ್ಳೆಯ ಕಲಾವಿದನಾಗಬೇಕು ಎಂದು ಬಯಸಿದ್ದೆ. ಆದರೆ, ಆ ಕನಸೆಲ್ಲ ಚೂರಾಗಿ ಹೋಯಿತು. ಜನ ಸಾಮಾನ್ಯರು ಕೂಡಾ ನನ್ನ ಒಂದು ಚಿತ್ರದಲ್ಲಿ ಇಷ್ಟೊಂದು ತಪ್ಪುಗಳನ್ನು ಕಂಡುಹಿಡಿಯುವಂತಿದೆ ಎಂದರೆ ನಾನು ಕಲಾವಿದನಾಗಲು ಯೋಗ್ಯನಲ್ಲ. ನನಗೆ ಸತ್ತೇ ಹೋಗುವಷ್ಟು ಬೇಸರವಾಗುತ್ತಿದೆ,’ ಎಂದ.

ಆಗ ಗುರುಗಳು ಅವನನ್ನು ಸಮಾಧಾನಿಸಿದರು. ʻʻಇಲ್ಲ ಮಗು, ನೀನೊಬ್ಬ ಒಳ್ಳೆಯ ಕಲಾವಿದನಿದ್ದೀಯ. ಅದನ್ನು ನೀನು ಪ್ರೂವ್ ಮಾಡಬೇಕಾಗಿಲ್ಲ. ನಾನು ಪ್ರೂವ್ ಮಾಡುತ್ತೇನೆ’ ಎಂದರು. ಆದರೆ, ವಿದ್ಯಾರ್ಥಿ ಅದನ್ನು ನಂಬುವ ಸ್ಥಿತಿಯಲ್ಲಿ ಇರಲಿಲ್ಲ.

ಗುರುಗಳು ಹೇಳಿದರು: ಹುಡುಗಾ, ನೀನು ಅಷ್ಟೇ ಶ್ರದ್ಧೆಯಿಂದ ಇನ್ನೊಂದು ಚಿತ್ರವನ್ನು ಬರೆದು ತರಬಹುದೇ?

ವಿದ್ಯಾರ್ಥಿ ಒಲ್ಲದ ಮನಸ್ಸಿನಿಂದ ಆಯಿತು ಎಂದ. ನಾಲ್ಕು ದಿನ ಬಿಟ್ಟು ಒಂದು ಸಾಧಾರಣ ಚಿತ್ರದೊಂದಿಗೆ ಗುರುಗಳ ಬಳಿಗೆ ಬಂದ. ಗುರುಗಳು ಅವನನ್ನು ಅದೇ ಹಳೆಯ ನಾಲ್ಕು ರಸ್ತೆಗಳು ಸೇರುವ ವೃತ್ತಕ್ಕೆ ಕರೆ ತಂದರು.

ʻʻಹಿಂದೆ ಎಲ್ಲಿಟ್ಟಿದ್ದೆಯೋ ಅದೇ ಜಾಗದಲ್ಲಿ ಈ ಚಿತ್ರವನ್ನು ಇಡು. ಅದರ ಪಕ್ಕದಲ್ಲಿ ಕಳೆದ ಬಾರಿಯ ಹಾಗೆಯೇ ಒಂದು ಟಿಪ್ಪಣಿಯನ್ನೂ ಬರೆದಿಡು. ಆದರೆ, ಈ ಬಾರಿ ಟಿಪ್ಪಣಿ ಹೀಗಿರಲಿ: ಕಲಾ ರಸಿಕರೇ, ನಾನೊಂದು ಕಲಾಕೃತಿಯನ್ನು ಬರೆದಿದ್ದೇನೆ. ನಾನು ಈ ವೃತ್ತಿಗೆ ಹೊಸಬನಾಗಿರುವುದರಿಂದ ನಾನು ತಪ್ಪುಗಳನ್ನು ಮಾಡಿರುವ ಸಾಧ್ಯತೆಗಳಿವೆ. ಒಂದೊಮ್ಮೆ ನೀವು ತಪ್ಪುಗಳನ್ನು ಕಂಡರೆ ಅದನ್ನು ಮುಲಾಜಿಲ್ಲದೆ ಸರಿಪಡಿಸಬೇಕು ಎಂದು ಮನವಿ ಮಾಡುತ್ತೇನೆ. ಇಲ್ಲೇ ಪಕ್ಕದಲ್ಲಿ ಒಂದು ಬಣ್ಣದ ಪೆಟ್ಟಿಗೆ ಮತ್ತು ಕುಂಚವನ್ನು ಇಟ್ಟಿದ್ದೇನೆ’- ಎಂದು ಗುರುಗಳು ವಿವರಿಸಿದರು.

ಗುರುಗಳು ಮತ್ತು ವಿದ್ಯಾರ್ಥಿ ಚಿತ್ರಶಾಲೆಗೆ ಮರಳಿದರು. ಸಂಜೆ ಗುರುಗಳು ಹೇಳಿದರು; ಆ ಫ್ರೇಮನ್ನೊಮ್ಮೆ ನೋಡಿ ಬರೋಣವಾ?

ವಿದ್ಯಾರ್ಥಿಗೆ ಭಯ.. ಚಿತ್ರ ಹೇಗಾಗಿರಬಹುದು ಅನ್ನೋ ಆತಂಕ. ಆದರೆ, ಅಲ್ಲಿ ಹೋಗಿ ನೋಡಿದಾಗ ಅಚ್ಚರಿ ಕಾದಿತ್ತು. ಒಂದೇ ಒಂದು ಸಣ್ಣ ಬದಲಾವಣೆಯೂ ಆಗಿರಲಿಲ್ಲ. ಯಾರೂ ಒಂದು ಗೆರೆಯನ್ನೂ ಎಳೆದಿರಲಿಲ್ಲ.

ಆಗ ಗುರುಗಳು ಹೇಳಿದರು: ಓ ಜನರಿಗೆ ಸಮಯ ಸಾಕಾಗಲಿಲ್ಲ ಅನಿಸುತ್ತದೆ. ಇನ್ನೊಂದು ದಿನ ಇದು ಇಲ್ಲೇ ಇರಲಿ.

ಆದರೆ, ಮರುದಿನ ನೋಡಿದಾಗಲೂ ಚಿತ್ರ ಹಾಗೇ ಇತ್ತು. ಮೂರನೇ ದಿನವೂ ಒಂದು ಗೆರೆಯೂ ಕೊಂಕಲಿಲ್ಲ.

ಮೂರನೇ ದಿನದ ಅಂತ್ಯಕ್ಕೆ ಗುರುಗಳು ಹೇಳಿದರು: ಮಗಾ, ಮೂರಲ್ಲ ನೂರು ದಿನ ಇಟ್ಟರೂ ಇದರಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ. ಯಾಕೆಂದರೆ, ಜನರು ಅತ್ಯಂತ ಸುಲಭದಲ್ಲಿ ಇನ್ನೊಬ್ಬರಲ್ಲಿ ತಪ್ಪು ಕಂಡು ಹುಡುಕಿ ಬಿಡುತ್ತಾರೆ. ಆದರೆ, ಸರಿ ಮಾಡುವುದು ಹೇಗೆ ಎಂದು ಕೇಳಿದರೆ ಯಾರಿಗೂ ಗೊತ್ತಿರುವುದಿಲ್ಲ. ಅದರಲ್ಲೂ ನೀವೇ ಸರಿ ಮಾಡಿ ಎಂದರೆ ಯಾರೂ ಮುಂದೆ ಬರುವುದಿಲ್ಲ. ದಾರಿ ಹೋಕರ ಮಾತಿಗೆಲ್ಲ ಕಿವಿಗೊಡದೆ ನಿನ್ನ ಕೆಲಸ ಶ್ರದ್ಧೆಯಿಂದ ಮುಂದುವರಿಸು. ಒಳ್ಳೆಯ ಕಲಾವಿದನಾಗುತ್ತಿ.

ಇದನ್ನೂ ಓದಿ | Motivational story |ಆ ಸಿಎಂಡಿ ಯಾವತ್ತೂ ತನ್ನ ಹೆಂಡತಿ, ಮಕ್ಕಳನ್ನು ಖುಷಿಯಾಗಿಡಲೇ ಇಲ್ಲ! ಆದರೆ,,,

Exit mobile version