Site icon Vistara News

Motivational story : ನಿಜಕ್ಕೂ ಅಪಶಕುನದ ಮುಖ ಯಾರದ್ದು? ಅವನದ್ದಾ? ಮಹಾರಾಜನದ್ದಾ?

Bad omen

#image_title

ಕೃಷ್ಣ ಭಟ್‌ ಅಳದಂಗಡಿ- Motivational story
ಒಂದು ಊರಿನಲ್ಲಿ ಒಬ್ಬ ವ್ಯಕ್ತಿ ಇದ್ದ. ಅವನನ್ನು ಎಲ್ಲರೂ ಅಪಶಕುನದ ವ್ಯಕ್ತಿ ಎಂದೇ ಹೇಳುತ್ತಿದ್ದರು. ಯಾಕೆಂದರೆ, ಬೆಳಗಾಗೆದ್ದು ಅವನ ಮುಖ ನೋಡಿದವರಿಗೆ ನೀರೂ ಸಿಗುವುದಿಲ್ಲ ಎನ್ನುವುದು ಪ್ರತೀತಿಯಾಗಿತ್ತು. ಸಾಲದ್ದಕ್ಕೆ ಆತನ ಮುಖವೂ ತುಂಬ ಅಕರಾಳ ವಿಕರಾಳವಾಗಿತ್ತು.

ʻನೀನು ಯಾವ ಕಾರಣಕ್ಕೂ ಮನೆ ಬಿಟ್ಟು ಹೊರಬರಬಾರದು. ನಿನ್ನ ಮುಖ ನೋಡಿದರೆ ನಮ್ಮ ಯಾವ ಕೆಲಸವೂ ಆಗುವುದಿಲ್ಲ. ನೀನು ಮುಖ ಮುಚ್ಚಿಕೊಂಡು ಮನೆಯಲ್ಲಿರಬೇಕುʼ ಎಂದು ಊರಿನವರು ತಾಕೀತು ಮಾಡಿದ್ದರು. ಆದರೆ, ಆತನಿಗೆ ಮನೆಯಲ್ಲೇ ಕುಳಿತರೆ ಹೊಟ್ಟೆ ತುಂಬಲು ಬೇರೆ ದಾರಿಗಳಿರಲಿಲ್ಲ. ಹೀಗಾಗಿ, ಅವನು ಅಲ್ಲಿಲ್ಲಿ ಓಡಾಡುತ್ತಾ ಇರುತ್ತಿದ್ದ.

ಕೊನೆಗೊಂದು ದಿನ ಆತನ ಬಗ್ಗೆ ಆ ರಾಜ್ಯದ ಮಹಾರಾಜನಿಗೆ ದೂರು ಹೋಯಿತು. ಆದರೆ, ರಾಜ ಸ್ವಲ್ಪ ಒಳ್ಳೆಯವನು. ಅವರಿವರ ಮಾತು ಕೇಳಿ ಆತನನ್ನು ಗಡಿಪಾರು ಮಾಡುವ, ಶಿಕ್ಷೆ ವಿಧಿಸುವ ಕೆಲಸಕ್ಕೆ ಮುಂದಾಗಲಿಲ್ಲ. ನಾನೊಮ್ಮೆ ಅವನನ್ನು ನೋಡಬೇಕು, ಬಳಿಕ ನಿರ್ಧಾರ ಮಾಡುತ್ತೇನೆ ಎಂದರು ಮಹಾರಾಜರು.

ಅದೊಂದು ದಿನ ಆ ವ್ಯಕ್ತಿಯನ್ನು ಕರೆದುಕೊಂಡು ಬಂದು ಅರಮನೆಯಿಂದ ಸ್ವಲ್ಪ ದೂರದಲ್ಲಿರುವ ಒಂದು ಸಣ್ಣ ಕೊಠಡಿಯಲ್ಲಿ ಕೂಡಿ ಹಾಕಲಾಯಿತು. ಮರುದಿನ ಮುಂಜಾನೆ ಸ್ವತಃ ರಾಜನೇ ಹೋಗಿ ಆ ಮನೆಯ ಬಾಗಿಲು ತಟ್ಟಿದ. ಈ ವಿಕರಾಳ ವ್ಯಕ್ತಿ ಬಾಗಿಲು ತೆರೆದ!

ಅಚ್ಚರಿ ಎಂದರೆ ಆವತ್ತು ಮಹಾರಾಜನಿಗೆ ಇಡೀ ದಿನ ಹೊಟ್ಟೆಗೆ ಏನೂ ತಿನ್ನಲು ಆಗಲಿಲ್ಲ. ಇಡೀ ದಿನ ಒಂಥರಾ ಸಿಡುಕು. ಮನಸ್ಸಿಗೆ ನೆಮ್ಮದಿಯೇ ಇಲ್ಲದ ಹಾಗಾಗಿ ಹೋಯ್ತು. ಯಾಕೆ ಹೀಗಾಗ್ತಿದೆ ಅಂತ ಯೋಚಿಸಿದ. ಬೆಳಗ್ಗೆ ಯಾರ ಮುಖ ನೋಡಿದ್ದು ಎನ್ನುವುದು ನೆನಪಾಯಿತು. ಓ… ಆ ವ್ಯಕ್ತಿ ಬಗ್ಗೆ ಊರಿನ ಜನರು ಹೇಳುತ್ತಿದ್ದುದು ಸತ್ಯ ಸಂಗತಿ ಅಂತ ಅವನಿಗೂ ಅರಿವಾಯಿತು.

ಅವನ ಮುಖ ನೋಡಿದ್ದರಿಂದ ತನಗೇ ಇಷ್ಟೊಂದು ಅಪಶಕುನ, ಕಿರಿಕಿರಿಗಳು ಆಗುತ್ತಿದ್ದರೆ ಸಾಮಾನ್ಯರ ಪಾಡೇನು ಎಂದು ಯೋಚಿಸಿದ ಮಹಾರಾಜ, ಸೇನಾಧಿಪತಿಯನ್ನು ಕರೆದು ಆ ವ್ಯಕ್ತಿಗೆ ಮರಣದಂಡನೆ ಶಿಕ್ಷೆಯನ್ನೇ ವಿಧಿಸುವಂತೆ ಸೂಚಿಸಿದ.

ಮಹಾರಾಜನ ಈ ಆದೇಶ ಆ ರಾಜ್ಯದ ಮಂತ್ರಿಗೆ ಗೊತ್ತಾಯಿತು. ಅವನು ಕೂಡಲೇ ಆಸ್ಥಾನಕ್ಕೆ ಹೋಗಿ ರಾಜರ ಮುಂದೆ ನಿವೇದಿಸಿಕೊಂಡ: ಮಹಾರಾಜರೇ ನೀವು ಅವನಿಗೆ ಯಾಕೆ ಮರಣ ದಂಡನೆ ಶಿಕ್ಷೆ ಕೊಡುತ್ತಿದ್ದೀರಿ?
ಆಗ ರಾಜ ಹೇಳಿದ: ಮಂತ್ರಿಗಳೇ, ಅವನು ತುಂಬ ಅಪಶಕುನದ ಮನುಷ್ಯ. ಆವತ್ತು ಅವನನ್ನು ನೋಡಿದ ನನಗೇ ಇಡೀ ದಿನ ನೀರು ಕೂಡಾ ಸಿಗಲಿಲ್ಲ. ತುಂಬ ಅವಲಕ್ಷಣ, ವಿಕಾರ ಮುಖದವನು ಅವನು. ಊರಿನ ಜನರು ನೀಡಿದ ದೂರು ಸರಿಯಾಗಿಯೇ ಇದೆ ಅಂದ.

ಆಗ ಮಂತ್ರಿ: ಮಹಾರಾಜರೇ ಅವನನ್ನು ಭೇಟಿಯಾದ ದಿನ ನಿಮಗೆ ವಿಪರೀತ ಕೆಲಸದ ಒತ್ತಡವಿತ್ತು. ಹಾಗಾಗಿ ನೀವು ಆಹಾರ ಸೇವಿಸುವುದನ್ನೂ ಮರೆತು ಕೆಲಸ ಮಾಡಿದಿರಿ. ನಿಮಗೆ ಆಹಾರ ಸಿಗದ ಪರಿಸ್ಥಿತಿ ಏನೂ ನಿರ್ಮಾಣವಾಗಿರಲಿಲ್ಲ. ಅದೊಂದು ಕಡೆ ಇರಲಿ.. ಒಮ್ಮೆ ಅವನ ಬಗ್ಗೆಯೂ ಯೋಚನೆ ಮಾಡಿ. ಆವತ್ತು ಅವನು ಬೆಳಗ್ಗೆ ಎದ್ದು ಮೊದಲು ನೋಡಿದ್ದು ನಿಮ್ಮ ಮುಖವನ್ನು. ಆವತ್ತು ಅವನಿಗೆ ಮರಣ ದಂಡನೆ ಶಿಕ್ಷೆಯೇ ಆಗಿದೆ. ಹಾಗಿದ್ದರೆ ಯಾರ ಮುಖ ಹೆಚ್ಚು ಅಪಶಕುನ ಮಹಾರಾಜ?

ಮಂತ್ರಿಯ ಈ ಮಾತು ಕೇಳಿ ಮಹಾರಾಜ ಬೆಚ್ಚಿಬಿದ್ದ.

ಮಂತ್ರಿ ವಿವರಿಸಿದ: ಮಹಾರಾಜ ಜಗತ್ತಿನ ಯಾವ ಮುಖವೂ ಅವಲಕ್ಷಣವಲ್ಲ. ಯಾವುದೂ ಕೆಟ್ಟದಲ್ಲ. ನಾವು ಯಾವ ರೀತಿ ನೋಡುತ್ತೇವೆ, ನಮ್ಮ ಬದುಕನ್ನು ಹೇಗೆ ರೂಪಿಸುತ್ತೇವೆ ಎನ್ನುವುದರ ಆಧಾರದ ಮೇಲೆ ಆ ದಿನ ನಿರ್ಧಾರವಾಗುತ್ತದೆ. ಕೆಟ್ಟದಕ್ಕೆಲ್ಲ ಅವನನ್ನು ದೂಷಿಸುವುದಕ್ಕೆ ಅರ್ಥವಿದೆ ಎಂದು ನನಗೆ ಅನಿಸುವುದಿಲ್ಲ ಎಂದ.

ಮಹಾರಾಜನಿಗೆ ವಿಷಯ ಅರ್ಥವಾಗಿ ಆ ವ್ಯಕ್ತಿಯನ್ನು ಬಂಧ ಮುಕ್ತಗೊಳಿಸಿದ.

ಇದನ್ನೂ ಓದಿ: Motivational story : ಯಾರದೋ ಮಗನನ್ನು ಉಳಿಸಲು ಓಡಿ ಬಂದ ಆ ವೈದ್ಯರ ಮಗು ಸ್ಮಶಾನದಲ್ಲಿತ್ತು!

Exit mobile version