ಕೃಷ್ಣ ಭಟ್ ಅಳದಂಗಡಿ- Motivational story
ಒಂದು ಸಾರಿ ಒಬ್ಬ ವಿದ್ವಾಂಸರು ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುವ ದಾರಿಯಲ್ಲಿದ್ದರು. ಮಧ್ಯದಲ್ಲಿ ಒಂದು ನದಿ ಬಂತು. ನದಿಯ ದಡಕ್ಕೆ ಬಂದ ಅವರು ದೋಣಿಯವನನ್ನು ಕರೆದರು. ದೋಣಿಯವನು ಬಂದ. ಲೋಕಾಭಿರಾಮದ ಮಾತು ಶುರು ಮಾಡಿದ ವಿದ್ವಾಂಸರು ತನ್ನ ಜ್ಞಾನದ ಬಗ್ಗೆ ಹೇಳಿಕೊಂಡರು. ಕೊನೆಗೆ ಅಂಬಿಗನನ್ನು ಉದ್ದೇಶಿಸಿ ʻನೀನು ಏನೆಲ್ಲ ಓದಿಕೊಂಡಿದ್ದೀಯಾʼ ಎಂದು ಪ್ರಶ್ನಿಸಿದರು.
ಆಗ ದೋಣಿಗ: ಇಲ್ಲ ಸ್ವಾಮಿ.. ನಾನು ಹೆಚ್ಚು ಶಿಕ್ಷಣ ಪಡೆದವನಲ್ಲ. ನನ್ನ ಅಜ್ಜ, ಅಪ್ಪ, ಅಣ್ಣ ಎಲ್ಲರೂ ದೋಣಿ ನಡೆಸುವ ಕೆಲಸವನ್ನೇ ಪ್ರಮುಖವಾಗಿ ಮಾಡಿಕೊಂಡು ಬಂದವರು. ಹೀಗಾಗಿ ನಾನು ಈಜುವುದು, ದೋಣಿ ನಡೆಸುವುದು ಮೊದಲಾದ ಕೆಲಸವನ್ನಷ್ಟೇ ಕಲಿತೆ. ವಿದ್ಯೆಯ ಕಡೆಗೆ ಹೆಚ್ಚು ಗಮನ ಕೊಡಲಿಲ್ಲ. ನನಗೆ ಅದರ ಅಗತ್ಯವೂ ಕಾಣಿಸಲಿಲ್ಲ.
ಆಗ ವಿದ್ವಾಂಸರು ಕೊಂಕು ಮಾತಿನಲ್ಲಿ ಹೇಳಿದರು: ಹೌದಾ? ನೀನು ಇಡೀ ಜೀವಮಾನವನ್ನು ವ್ಯರ್ಥ ಮಾಡಿಕೊಂಡುಬಿಟ್ಟೆ.. ಇರಲಿ ಬಿಡು.. ಹಣೆಬರಹ ನಿನ್ನದು. ಅದೆಲ್ಲ ಪಡೆದುಕೊಂಡು ಬಂದಿರಬೇಕು.
ವಿದ್ವಾಂಸರ ಮಾತಿನಿಂದ ದೋಣಿ ನಡೆಸುವವನಿಗೆ ಬೇಸರವಾಯಿತಾದರೂ ಆತ ಅದನ್ನು ತೋರಿಸಿಕೊಳ್ಳಲಿಲ್ಲ. ಬದಲಾಗಿ ತನ್ನ ಕಾಯಕದಂತೆ ಹುಟ್ಟುಹಾಕುತ್ತಾ ಮುಂದುವರಿಸಿದ. ಅದು ತುಂಬ ಅಗಲವಾದ ನದಿ. ಮಧ್ಯ ಭಾಗಕ್ಕೆ ಬರುತ್ತಿದ್ದಂತೆಯೇ ದೋಣಿ ಅಲ್ಲಾಡಲು ಶುರುವಾಯಿತು. ಅದು ಒಂದು ಸುಳಿಗೆ ಸಿಕ್ಕಿ ಹಾಕಿಕೊಂಡಿತ್ತು. ಒಮ್ಮಿಂದೊಮ್ಮೆಗೆ ನೀರಿನ ರಭಸವೂ ಹೆಚ್ಚಾಯಿತು. ದೋಣಿ ಸಂಕಷ್ಟದಲ್ಲಿ ಸಿಲುಕಿದ್ದು ಇಬ್ಬರಿಗೂ ಅರ್ಥವಾಯಿತು.
ಆಗ ದೋಣಿ ನಡೆಸುವವನು ಕೇಳಿದ: ವಿದ್ವಾಂಸರೇ ತಮಗೆ ಈಜಲು ಬರುತ್ತದೆಯೇ?
ವಿದ್ವಾಂಸರು ಮುಜುಗರದಿಂದ ನಡುಗುತ್ತಾ ಹೇಳಿದರು: ಇಲ್ಲ ನನಗೆ ಬರುವುದಿಲ್ಲ.
ಆಗ ದೋಣಿಗ ಹೇಳಿದ: ಓ ಹೌದಾ? ನಮ್ಮ ದೋಣಿ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಈ ಬೋಟು ನೀರಿನಲ್ಲಿ ಮುಳುಗಲಿದೆ. ನಿಮ್ಮ ಎಲ್ಲ ಜ್ಞಾನವೂ ನೀರುಪಾಲಾಗಲಿದೆಯಲ್ವಾ?
ದೋಣಿಗ ಎಷ್ಟೇ ಪ್ರಯತ್ನಿಸಿದರೂ ಸುಳಿಯಿಂದ ಮೇಲೆ ಬರಲಿಲ್ಲ ದೋಣಿ. ದೋಣಿ ಮುಳುಗಿಯೇ ಬಿಟ್ಟಿತು. ವಿದ್ವಾಂಸರು ನೀರಿಗೆ ಬಿದ್ದರು. ಅವರ ಅಷ್ಟೂ ಜ್ಞಾನವೂ ನೀರಿನಲ್ಲಿ ನಡೆಯಲಿಲ್ಲ.
ವಿದ್ವಾಂಸರು ನೀರಿನಲ್ಲಿ ಮುಳುಗೇಳುತ್ತಾ ಸಹಾಯಕ್ಕಾಗಿ ಯಾಚಿಸತೊಡಗಿದರು. ದೋಣಿಗನಿಗೆ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕು, ಬೋಟನ್ನು ಉಳಿಸಿಕೊಳ್ಳಬೇಕು. ಅಷ್ಟಾದರೂ ಆತ ವಿದ್ವಾಂಸರನ್ನು ಹಿಡಿದುಕೊಂಡು ಹೋಗೋ ದಡ ಸೇರಿಸಿದ.
ವಿದ್ವಾಂಸರ ದುರಭಿಮಾನ ಅಲ್ಲಿ ನೀರುಪಾಲಾಗಿತ್ತು. ಇತರರು, ಯಾವುದೇ ವೃತ್ತಿಯವರಾಗಿರಬಹುದು, ಎಷ್ಟೇ ಅವಿದ್ಯಾವಂತರಾಗಿರಬಹುದು. ಯಾರನ್ನೂ ಅವಮಾನಿಸಬಾರದು ಎನ್ನುವುದು ನೀರಿನಲ್ಲಿ ಬಿದ್ದಾಗ ಅವರಿಗೆ ಅರಿವಾಯಿತು! ಹಾಗಂತ ದೋಣಿಗ ಏನನ್ನೂ ಹೇಳಲಿಲ್ಲ. ಹೇಳದೆಯೇ ಎಲ್ಲವನ್ನೂ ಅವನು ದಾಟಿಸಿ ಬಿಟ್ಟಿದ್ದ!
ಇದನ್ನೂ ಓದಿ | Motivational story | ನೆನಪಿರಲಿ ನಮ್ಮ ಮುಂದೆ ಯಾವತ್ತೂ ಒಬ್ಬ ಮಾಟಗಾತಿ ಇರ್ತಾಳೆ, ಅವಳು ಯಾವ ರೂಪದಲ್ಲಾದರೂ ಬರಬಹುದು!