Site icon Vistara News

Motivational story | ಒಳ್ಳೆಯವನಾಗುವುದು ಎಂದರೆ ಶರಣಾಗತಿಯಲ್ಲ.. ಎಲ್ಲವನ್ನೂ ಬಿಟ್ಟು ಬಿಡಬೇಕು ಅಂತ ಅಲ್ಲ!

saint

ಕೃಷ್ಣ ಭಟ್‌ ಅಳದಂಗಡಿ – motivational story
ಒಂದು ಸಲ ಒಬ್ಬ ಪ್ರಭಾವಿ ಸನ್ಯಾಸಿ ಒಂದು ಮರದ ಅಡಿಯಲ್ಲಿ ಶಿಷ್ಯರೊಂದಿಗೆ ಕುಳಿತಿದ್ದರು. ಆಗ ಆ ರಾಜ್ಯದ ಮಹಾರಾಜ ಒಬ್ಬಂಟಿಯಾಗಿ ಅಲ್ಲಿಗೆ ಬಂದ. ಸನ್ಯಾಸಿ ಅವನನ್ನು ಆದರದಿಂದ ಬರಮಾಡಿಕೊಂಡರು. ಅರಸ ತನ್ನ ಕಷ್ಟವನ್ನು ಹೇಳಿಕೊಂಡ.

ʻʻಗುರುಗಳೇ ನಿಮ್ಮ ಅನುಯಾಯಿಯಾದ ಬಳಿಕ ಪ್ರಜೆಗಳು ನನ್ನನ್ನು ತುಂಬ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ತುಂಬ ಕೋಪಿಷ್ಠನಾಗಿದ್ದ ನಾನು ನಿಮ್ಮ ಮಾತುಗಳನ್ನು ಕೇಳಿದ ಬಳಿಕ ತುಂಬ ಶಾಂತವಾಗಿದ್ದೇನೆ. ಹಿಂದೆ ನಾನು ತಪ್ಪು ಮಾಡಿದವರಿಗೆ ಮರಣ ದಂಡನೆ ವಿಧಿಸಲೂ ಹಿಂದೆ ಮುಂದೆ ನೋಡುತ್ತಿರಲಿಲ್ಲ. ಈಗ ನನಗೆ ಯಾರನ್ನೂ ಶಿಕ್ಷಿಸಬೇಕು ಎಂದು ಅನಿಸುವುದೇ ಇಲ್ಲ. ಪ್ರತಿಯೊಬ್ಬರ ದುಷ್ಕೃತ್ಯದ ಹಿಂದೆ ಏನೋ ಒಂದು ಕಾರಣವಿರುತ್ತದೆ ಎಂದು ನನಗೆ ಅನಿಸುತ್ತದೆ. ಹಾಗಾಗಿ ನಾನು ಯಾರನ್ನೂ ಶಿಕ್ಷಿಸಲು ಹೋಗುವುದಿಲ್ಲ. ಹೀಗಾಗಿ ಜನರಿಗೆ ಈಗ ನನಗೆ ಅಸಡ್ಡೆಯಾಗಿದೆ. ಯಾರೂ ನನ್ನ ಮಾತು ಕೇಳುತ್ತಿಲ್ಲ.. ಹಾಗಿದ್ದರೆ ನಾನು ಒಳ್ಳೆಯವನಾಗಿದ್ದೇ ತಪ್ಪಾ?’ ಎಂದು ಬೇಸರದಿಂದ ಕೇಳಿದ.

ಆಗ ಸನ್ಯಾಸಿ, ʻರಾಜಾ.. ನಾನು ನಿನಗೊಂದು ಹಾವಿನ ಕಥೆ ಹೇಳುತ್ತೇನೆ.. ಅದನ್ನು ಕೇಳಿದ ಮೇಲೆ ನಿನ್ನ ಸಮಸ್ಯೆಗೂ ಪರಿಹಾರ ಸಿಗಬಹುದು ಅಂದುಕೊಳ್ಳುತ್ತೇನೆ’ ಎಂದರು.

ಒಂದೂರಿನಲ್ಲಿ ಒಂದು ದೊಡ್ಡ ಮರ ಇತ್ತು. ದೊಡ್ಡ ಗೋಮಾಳದ ಕೊನೆಯಲ್ಲಿನ ಒಂಟಿ ಮರ ಅದು. ಅಲ್ಲೊಂದು ವಿಷಕಾರಿ ಹಾವು ಇತ್ತು. ಜನರು ಬಿಸಿಲು ಎಂದು ಆ ಮರದ ಬಳಿಗೆ ಹೋದರೆ ಆ ಹಾವು ಅವರನ್ನು ಕಚ್ಚಿ ಸಾಯಿಸುತ್ತಿತ್ತು. ಹಾಗಾಗಿ ಯಾರೂ ಕೂಡಾ ಆ ಮರದ ಬಳಿಗೆ ಹೋಗಲು ಹೆದರುತ್ತಿದ್ದರು.

ಒಂದು ದಿನ ಒಬ್ಬ ಸನ್ಯಾಸಿ ಆ ಮಾರ್ಗವಾಗಿ ಸಾಗುತ್ತಿದ್ದವರು ಗೋಮಾಳದ ತುದಿಯಲ್ಲಿದ್ದ ಮರದ ಅಡಿಯಲ್ಲಿ ಆಶ್ರಯ ಪಡೆಯಲೆಂದು ಅತ್ತ ನಡೆದರು. ಇದನ್ನು ಗಮನಿಸಿದ ಒಬ್ಬ ರೈತರ ವಿಷಕಾರಿ ಹಾವಿನ ವಿಷಯ ತಿಳಿಸಿ ತಡೆಯಲು ಯತ್ನಿಸಿದ. ಆದರೆ, ಸನ್ಯಾಸಿ ನಕ್ಕು ಮುಂದೆ ನಡೆದರು.

ಮರದ ಬುಡಕ್ಕೆ ಬಂದು ವಿಶ್ರಮಿಸುತ್ತಿದ್ದಂತೆಯೇ ಹಾವು ಬುಸುಗುಡುತ್ತಾ ಹತ್ತಿರ ಬಂತು. ಆಗ ಸನ್ಯಾಸಿ ಒಂದು ಮಂತ್ರವನ್ನು ಪಠಿಸಿದರು. ಕೂಡಲೇ ಹಾವು ಮನುಷ್ಯರಂತೆ ಮಾತನಾಡಲು ಆರಂಭಿಸಿತು.

ಹಾವು ಕೇಳಿತು: ಓ ಸನ್ಯಾಸಿಯೇ, ಏನು ನಿನಗೆ ನನ್ನ ಭಯವಾಗುವುದಿಲ್ಲವೇ? ಇದು ನನ್ನ ಜಾಗವೆಂದು ನಿನಗೆ ಗೊತ್ತಿಲ್ಲವೇ? ಎಲ್ಲರೂ ಇಲ್ಲಿ ಬರಲು ಹೆದರುತ್ತಾರೆ.

ಸನ್ಯಾಸಿ ಹೇಳಿದರು: ಇದರಲ್ಲಿ ಹೆದರುವುದು ಏನಿದೆ? ನನಗೆ ಸಾವಿನ ಬಗ್ಗೆ ಭಯ ಇಲ್ಲ. ಬದುಕುವುದಕ್ಕೆ ಆಸೆಯೂ ಇಲ್ಲ. ಹಾಗಿರುವಾಗ ನಾನ್ಯಾಕೆ ಹೆದರಬೇಕು? ನಿಜವೆಂದರೆ ಹೆದರಿಕೆ ಇರುವುದು ನಿನಗೆ. ಯಾರಾದರೂ ಕೊಲ್ಲಬಹುದು ಎಂಬ ಭಯದಿಂದ ನೀನು ಹೀಗೆ ಬಂದವರನ್ನೆಲ್ಲ ಕಚ್ಚುತ್ತಿರುವೆ.

ಹಾವಿಗೆ ಸನ್ಯಾಸಿಯ ಮಾತು ಹೌದೆನಿಸಿತು. `ʻʻಇಲ್ಲಿವರೆಗೆ ನಾನು ಅವರನ್ನೆಲ್ಲ ಕಚ್ಚಿದ್ದು ನನ್ನ ಪ್ರಾಣ ಭಯದಿಂದ ಎನ್ನುವುದು ಈಗ ನನಗೆ ಅರಿವಾಯಿತು. ಹಾಗಂತ ಕೊಲ್ಲದೆ ಹೋದರೆ ಅವರೇ ನನ್ನನ್ನು ಕೊಲ್ಲುತ್ತಾರಲ್ಲಾ?ʼʼ ಎಂದು ಕೇಳಿತು.

ಸನ್ಯಾಸಿ ಹೇಳಿದರು: ಈ ಜೀವ ಯಾವತ್ತಾದರೂ ಹೋಗಲಿಕ್ಕೇ ಇರುವುದು. ಅದನ್ನು ಉಳಿಸಿಕೊಳ್ಳಲು ನಾವು ಇನ್ನೊಬ್ಬರನ್ನು ಕೊಲ್ಲಬೇಕಾಗಿಲ್ಲ. ಅದರ ಬದಲು ಹೃದಯಲ್ಲಿ ಪ್ರೀತಿ ತುಂಬಿಕೋ ಎಂದು ಸಲಹೆ ನೀಡಿ ಹೊರಟು ಹೋದರು.

ಸನ್ಯಾಸಿಯ ಮಾತು ಕೇಳಿದ ಹಾವು ಇನ್ನು ಮುಂದೆ ಯಾರನ್ನೂ ಕಚ್ಚಬಾರದು ಎಂಬ ತೀರ್ಮಾನಕ್ಕೆ ಬಂತು. ಆದರೆ, ಇದರಿಂದ ಪ್ರತಿಕೂಲವೇ ಆಯಿತು. ಯಾವಾಗ ಹಾವು ಕಚ್ಚುವುದಿಲ್ಲ ಎಂದು ಗೊತ್ತಾಯಿತೋ ಜನರು ಅದರ ಮೇಲಿನ ಭಯ ಮರೆತು ಬೇಕಾಬಿಟ್ಟಿಯಾಗಿ ನಡೆಸಿಕೊಂಡರು. ಕೆಲವರು ಅದನ್ನು ಹಿಡಿದರು, ಕೆಲವರು ನೆಲಕ್ಕೆ ಬಡಿದರು. ಮಕ್ಕಳು ಕೂಡಾ ಹಿಡಿದುಕೊಂಡು ಹಿಂಸೆ ನೀಡಿದರು.

ಹೀಗಿರುತ್ತಾ, ಒಂದು ತಿಂಗಳ ಬಳಿಕ ಅದೇ ಸನ್ಯಾಸಿ ಮರಳಿ ಅದೇ ಮರದಡಿಗೆ ಬಂದರು. ಹಾವು ತನ್ನ ವಿಚಾರಗಳನ್ನು ಹೇಳಿ ಕಣ್ಣೀರಿಟ್ಟಿತು.

ಅದಕ್ಕೆ ಸನ್ಯಾಸಿ ಶಾಂತವಾಗಿ ಹೇಳಿದರು: ನಾನು ನಿನಗೆ ಹೇಳಿದ್ದು ಜೀವ ಉಳಿಸಿಕೊಳ್ಳುವುದಕ್ಕೆ ಕಚ್ಚಬೇಕಾಗಿಲ್ಲ ಅಂತ ಹೊರತು ಕನಿಷ್ಠ ಬುಸುಗುಡಲೂ ಬಾರದು ಅಂತ ಅಲ್ಲ. ನೀನು ನಿನ್ನ ನಿಜವಾದ ಗುಣವನ್ನು ಮರೆತು ಬಾಳಬೇಕಾಗಿಲ್ಲ. ಜನರು ಕೆಟ್ಟದಾಗಿ ನಡೆದುಕೊಂಡರೆ ಅವರನ್ನು ಹೆದರಿಸಲು ಬುಸುಗುಡದಿದ್ದರೆ ಹೇಗೆ? ಎಂದು ಕೇಳಿದರು.

ಈ ಕಥೆಯನ್ನು ಹೇಳಿ ಮುಗಿಸಿದ ಸನ್ಯಾಸಿ ರಾಜನತ್ತ ತಿರುಗಿದರು.

ʻʻನಾನು ನಿನಗೆ ಹೇಳಿದ್ದು ನಿನ್ನ ಕ್ರೂರತನವನ್ನು ಬಿಡು ಎಂದೇ ಹೊರತು ರಾಜನಾಗಿ ನಿನ್ನ ಕರ್ತವ್ಯವನ್ನು ಮರೆಯಬೇಕು ಅಂತಲ್ಲ. ಜನರಲ್ಲಿನ ಅಭದ್ರತೆಯ ಭಾವನೆಯನ್ನು ಹೋಗಲಾಡಿಸುವುದು ನಿನ್ನ ಕರ್ತವ್ಯವೇ ಹೊರತು ಅವರ ಪಾಲಿಗೆ ನೀನೇ ಅಭದ್ರತೆಯಾಗಬಾರದು ಎಂದು ಹೇಳಿದ್ದು. ನೀನು ತುಂಬ ಒಳ್ಳೆಯವನಾಗಿದ್ದರೆ ಜನ ಅದನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ ಎನ್ನುವುದು ನಿಜವೇನಲ್ಲ. ಹಾಗಂತ ನೀನು ಎಲ್ಲ ಕಾಲದಲ್ಲೂ ಒಳ್ಳೆಯವನಂತೆ ವರ್ತಿಸಬೇಕಿಲ್ಲ. ಆದರೆ, ದ್ವೇಷ ಸಾಧನೆಯ ಮನೋವೃತ್ತಿಯನ್ನು ಹೊಂದಬೇಕಿಲ್ಲ. ನೀನು ಬಹಿರಂಗದಲ್ಲಿ ರಾಜನಂತೆಯೇ ಇರಬೇಕು. ಅದೇ ಅಂತರಂಗದಲ್ಲಿ ಒಬ್ಬ ಸನ್ಯಾಸಿಯಂತಿರಬೇಕು. ಆಗ ಮಾತ್ರ ಸುಭಿಕ್ಷ ನೆಲೆಸುತ್ತದೆʼʼ

ರಾಜನಿಗೆ ಈಗ ಎಲ್ಲವೂ ಅರ್ಥವಾಯಿತು; ಒಳ್ಳೆಯತನ ಬೆಳೆಸಿಕೊಳ್ಳುವುದು ಎಂದರೆ ನಮ್ಮತನವನ್ನು ಕಳೆದುಕೊಳ್ಳುವುದಲ್ಲ. ಎಲ್ಲರ ಮುಂದೆ ತಲೆ ತಗ್ಗಿಸಿ ನಿಲ್ಲುವುದಲ್ಲ. ಆಂತರ್ಯದಲ್ಲಿ ಪ್ರೀತಿಯನ್ನು ಹೊಂದಿರುತ್ತಲೇ ಪರಿಸ್ಥಿತಿಗೆ ತಕ್ಕಂತೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದು. ಒಳ್ಳೆಯವನಾಗಿರಬೇಕು. ಆದರೆ ಅದರ ದುರುಪಯೋಗಕ್ಕೆ ಅವಕಾಶ ನೀಡಬಾರದು.

ಇದನ್ನೂ ಓದಿ | Motivational story | ಯಾವತ್ತೂ ಇಲ್ಲದ ಪ್ರೀತಿ ತೋರಿದ ಗಂಡ, ಹಾಗಿದ್ದರೆ ಸತ್ತೋಗಿದ್ದು ಯಾರು?

Exit mobile version