ಕೃಷ್ಣ ಭಟ್ ಅಳದಂಗಡಿ | Motivational stroy
ಅವನಿಗೆ ಆವತ್ತು ಮೀಟಿಂಗ್ ಗಡಿಬಿಡಿ. ಬೆಳಗೆದ್ದು ಸ್ನಾನ ಮಾಡಿ, ಅವಸರದಲ್ಲಿ ಏನೋ ತಿಂದು, ಕ್ವಿಕ್ಕಾಗಿ ಬಟ್ಟೆ ಧರಿಸಿ ಬ್ಯಾಗ್ ಹಿಡಿದು ಹೊರಟೇಬಿಟ್ಟ.
ಅಷ್ಟು ಹೊತ್ತಿಗೆ ಇನ್ನೂ ಮಲಗಿದ್ದ ಪುಟ್ಟ ಮಗನಿಗೆ ಎಚ್ಚರಾಗಿ ಬಿಡ್ತು. *ಅಪ್ಪಾ ಅಪ್ಪಾ* ಅಂತ ಓಡೋಡಿ ಬಂದ. ಅಷ್ಟು ಹೊತ್ತಿಗೆ ಎರಡು ಮಹಡಿ ಕೆಳಗಿಳಿದು ಕಾರು ಹತ್ತಿ ಹೋಗಿ ಆಗಿತ್ತು ಅಪ್ಪ.
ಅಪ್ಪ ಯಾವತ್ತೂ ಹೀಗ್ಮಾಡಿಲ್ಲ… ಅಂತ ಬೇಜಾರು ಮಾಡಿಕೊಂಡ ಮಗು ಮತ್ತೆ ಮೆಟ್ಟಿಲು ಹತ್ತಿದ. ಮನೆಗೆ ಹೋಗಿ ಅಪ್ಪನಿಗೆ ಫೋನ್ ಮಾಡಿದ. *ಅಪ್ಪಾ ನೀನ್ಯಾವತ್ತೂ ನಂಗೊಂದು ಮುತ್ತು ಕೊಡದೆ ಹೋದವನೇ ಅಲ್ಲ.. ಯಾಕಪ್ಪಾ* ಅಂದ.
ಆಗ ಅಪ್ಪನಿಗೆ ಬೇಜಾರಾಯ್ತು. *ಆಫೀಸಲ್ಲಿ ತುಂಬ ಮುಖ್ಯವಾದ ಮೀಟಿಂಗ್ ಇತ್ತು. ಅದರ ಗಡಿಬಿಡಿಯಲ್ಲಿ ಮರೆತು ಬಿಟ್ಟೆ ಕಂದಾ… ಬೇಜಾರ್ ಮಾಡ್ಕೊಬೇಡ* ಅಂದ. *ಇಲ್ಲಪ್ಪ… ಪರ್ವಾಗಿಲ್ಲ…* ಅಂತ ಪುಟ್ಟ ಮಗನೂ ಫೋನಿಟ್ಟ.
ಮಗುವಿಗೆ ಸಮಾಧಾನ ಮಾಡ್ತಲೇ ಅಮ್ಮ ಶಾಲೆಗೆ ಹೊರಡಿಸಿದಳು. ಮಗು ಮೆಟ್ಟಿಲಿಳಿದು ಬಂದು ಶಾಲೆಯ ವಾಹನಕ್ಕಾಗಿ ಕಾಯ್ತಾ ನಿಂತಿತ್ತು. ಅಷ್ಟು ಹೊತ್ತಿಗೆ ಎದುರು ಬಂದು ನಿಂತಿದ್ದು ಅಪ್ಪನದೇ ವಾಹನ!
ಮಗು ಒಂದೇ ಜಿಗಿತಕ್ಕೆ ಅಪ್ಪನ ಕೈಯಲ್ಲಿತ್ತು. ಮಗನನ್ನು ಹೆಗಲಿಗೆ ಹಾಕಿಕೊಂಡು ಬೆನ್ನು ತಟ್ಟುತ್ತಾ ಅಪ್ಪ ಹೇಳಿದ: *ಸ್ಸಾರಿ ಕಂದಾ..*
ಇಬ್ಬರ ಮುಖಗಳು ಒತ್ತಿಕೊಂಡವು. ಅಲ್ಲೇ ಬೆಚ್ಚನೆಯ ಕಣ್ಣ ಬಿಂದುಗಳು ಸೇರಿಕೊಂಡು ತಣ್ಣಗಾದವು.
++++++++++++++++++
ಅಪ್ಪ ಯೋಚಿಸಿದ… ಇನ್ನು ನಾಲ್ಕು ದಿನ ಕಳೆದರೆ ನಾನು ಮೀಟಿಂಗ್ ಗೆ ಲೇಟಾಗಿ ಹೋಗಿದ್ದೆ ಅನ್ನೋದು ಯಾರಿಗೂ ನೆನಪಿರೊಲ್ಲ. ಆದರೆ, *ಆಫೀಸಿಗೆ ಹೋದ ಅಪ್ಪ ಮರೆತುಹೋದ ಒಂದೇ ಒಂದು ಸಿಹಿ ಮುತ್ತು ಕೊಡುವುದಕ್ಕಾಗಿ ಮರಳಿಬಂದಿದ್ದ* ಅಂತ ಜೀವನಪೂರ್ತಿ ಮಗ ನೆನಪಿಟ್ಕೊಳಲ್ವಾ? ಅವನಿಗೆ ನೆನಪಿರುತ್ತೋ ಗೊತ್ತಿಲ್ಲ… ನಂಗಾದ್ರೂ ಇರುತ್ತಲ್ವಾ?
+++++++++++++++++++
ಅಂದ ಹಾಗೆ ನೀವು ಮನೆಯಿಂದಹೊರಡುವಾಗ ನಿಮ್ಮ ಮಗುವೂ ಒಂದು ಪ್ರೀತಿಯ ಅಪ್ಪುಗೆ, ಒಂದು ಹೂವಿನಂಥ ಚುಂಬನ ಅಥವಾ ಹೃದಯದಿಂದ ಬರುವ ಬಾಯ್ ಗಾಗಿ ಕಾಯ್ತಾ ಇರುತ್ತಲ್ವಾ?
DONT MISS IT… ಯಾಕೆಂದರೆ, ಮಕ್ಕಳು ದೊಡ್ಡವರಾದ ಮೇಲೆ ಈ ಸುಖ ಬೇಕೆಂದರೂ ಸಿಗೊಲ್ಲ.
ಇದನ್ನೂ ಓದಿ| Motivational story | ಇನ್ನೊಂದು ಐದು ನಿಮಿಷ, ಐದೇ ನಿಮಿಷ.. ಪ್ಲೀಸ್ ಅಪ್ಪ!