Site icon Vistara News

Motivational story | ತಿರಂಗಾ ಹೊದ್ದು ಮಲಗಿದ ಕರೀಮನ ಕಿಸೆಯಲ್ಲಿತ್ತು ಟೀಚರ್ ಕೊಟ್ಟ ಆ ಚೀಟಿ!

indian flag

ಕೃಷ್ಣ ಭಟ್‌ ಅಳದಂಗಡಿ – motivational story
ಅದೊಂದು ಪ್ರೌಢ ಶಾಲೆ. 10ನೇ ತರಗತಿಯ ಕೊನೆಯ ದಿನಗಳು. ಪರೀಕ್ಷೆಗೆ ಮುನ್ನ ರಜೆ ಕೊಡುವ ಸಮಯ. ಶಿಕ್ಷಕಿಯೊಬ್ಬರು ಕ್ಲಾಸಿನ ಎಲ್ಲ ಮಕ್ಕಳಿಗೆ ಒಂದು ಪೇಪರ್ ನೀಡಿದರು. ಅದರಲ್ಲಿ ತರಗತಿಯ ಎಲ್ಲ ಮಕ್ಕಳ ಹೆಸರು ಪ್ರಿಂಟ್ ಮಾಡಲಾಗಿತ್ತು. ಮಧ್ಯೆ ಸಾಕಷ್ಟು ಜಾಗ ಬಿಟ್ಟಿದ್ದರು.

ʻಮಕ್ಕಳೇ, ನಿಮಗೆ ನಿಮ್ಮ ಸಹಪಾಠಿಗಳ ಬಗ್ಗೆ ಹೇಳಬೇಕು ಎನಿಸುವ ಒಳ್ಳೆಯ ವಿಷಯಗಳನ್ನು ಇದರಲ್ಲಿ ಅವರ ಹೆಸರಿನ ಮುಂದೆ ಬರೆಯಿರಿ’ ಎಂದು ಮಿಸ್ ಹೇಳಿದರು. ನಾಳೆ ಕ್ಲಾಸಿಗೆ ಬರುವಾಗ ತಂದರೆ ಸಾಕು ಎಂದರು.

ಮರುದಿನ ಎಲ್ಲ ಮಕ್ಕಳು ಶೀಟನ್ನು ತಂದು ಟೀಚರ್ ಕೈಗೆ ಒಪ್ಪಿಸಿದರು. ಟೀಚರ್ ಪ್ರತಿಯೊಬ್ಬರ ವಿದ್ಯಾರ್ಥಿಯ ಬಗ್ಗೆ ಬೇರೆ ಬೇರೆಯವರು ಬರೆದ ವಿಷಯಗಳನ್ನು ಪ್ರತ್ಯೇಕಿಸಿದರು. ಒಬ್ಬ ವಿದ್ಯಾರ್ಥಿಯ ಬಗ್ಗೆ ಉಳಿದವರು ಬರೆದ ಅದಷ್ಟೂ ಸಂಗತಿಗಳನ್ನು ಒಂದೇ ಪುಟದಲ್ಲಿ ಜೋಡಿಸಿ ಆಯಾ ವಿದ್ಯಾರ್ಥಿಯ ಕೈಗೆ ನೀಡಿದರು.

ಮಕ್ಕಳೆಲ್ಲ ಖುಷಿಯಿಂದ ಕುಣಿದಾಡಿದರು. ಯಾಕೆಂದರೆ ಅದರಲ್ಲಿ ಅವರ ಬಗ್ಗೆ ಒಳ್ಳೆಯ ಮಾತುಗಳೇ ತುಂಬಿ ಹೋಗಿದ್ದವು. `ʻನಾನು ಏನೂ ಅಲ್ಲ ಅಂದುಕೊಂಡಿದ್ದೆ. ನನ್ನ ಸ್ನೇಹಿತರು ನನ್ನ ಬಗ್ಗೆ ಇಷ್ಟೆಲ್ಲ ಒಳ್ಳೆ ಅಭಿಪ್ರಾಯ ಹೊಂದಿದ್ದಾರೆ ಎಂದು ತಿಳಿದು ಕಣ್ಣೀರೇ ಬಂತು’ ಎಂದು ಕೆಲವರು ಗದ್ಗಗರಾದರು. ಕೆಲವರಿಗೆ ಕೆಲವರ ಬಗ್ಗೆ ಸಣ್ಣ ಮಟ್ಟಿಗೆ ಸಿಟ್ಟು, ಸಣ್ಣಪುಟ್ಟ ಕಿರಿಕಿರಿಗಳೆಲ್ಲ ಇದ್ದವು. ಆದರೆ, ಒಮ್ಮೆ ಈ ಮಾತುಗಳನ್ನು ಓದಿದ ಬಳಿಕ ಅದೆಲ್ಲವೂ ಕರಗಿ ಹೋಯಿತು.

ಇದೆಲ್ಲ ಆಗಿ ಕೆಲವು ವರ್ಷಗಳು ಕಳೆದವು. ಅದೊಂದು ದಿನ ಆ ವಿದ್ಯಾರ್ಥಿಗಳ ಪೈಕಿ ಕರೀಂ ಎಂಬಾತ ಯುದ್ಧದಲ್ಲಿ ವೀರಮರಣವನ್ನು ಅಪ್ಪಿದ ಸುದ್ದಿ ತಿಳಿಯಿತು. ಶಿಕ್ಷಕಿ ಅಂತಿಮ ನಮನ ಸಲ್ಲಿಸಲು ಅಲ್ಲಿಗೆ ತೆರಳಿದರು. ಎಲ್ಲರಂತೆಯೇ ಕಣ್ಣೀರ ವಿದಾಯವನ್ನು ಹೇಳಿದರು. ಹಾಗೆ ಹಣೆಗೊಂದು ಮುತ್ತಿಕ್ಕಿ ತಲೆ ಎತ್ತಿದಾಗ ಸೇನಾ ವಸ್ತ್ರದಲ್ಲಿದ್ದ ಅವನದೇ ವಯಸ್ಸಿನ ಸೈನಿಕ ಕೇಳಿದ: ನೀವು ಕರೀಂನ ಗಣಿತ ಶಿಕ್ಷಕಿ ಶಕುಂತಲಾ ಮೇಡಮ್ಮಾ?

ಮೇಡಂ ʻಹೌದು, ಹೇಗೆ ಗೊತ್ತಾಯಿತುʼ ಎಂದರು.ಕರೀಂ ಅವನ ವ್ಯಾಲೆಟ್‍ನಲ್ಲಿ ನಿಮ್ಮದೊಂದು ಫೋಟೊ ಇಟ್ಟುಕೊಂಡಿದ್ದ. ನಾನು ಒಬ್ಬ ಸಾಮಾನ್ಯ ಹುಡುಗ. ಆದರೆ, ನನ್ನಲ್ಲೂ ಶಕ್ತಿ ಇದೆ, ಒಳ್ಳೆಯತನ ಇದೆ ಅಂತ ತೋರಿಸಿಕೊಟ್ಟಿದ್ದು ಇವರು ಅಂತ ನಮ್ಮನ್ನು ಕೂರಿಸಿ ಹೇಳುತ್ತಿದ್ದ. ನೋಡಿ ಇದೊಂದು ಚೀಟಿಯನ್ನು ಕೂಡಾ ಯಾವತ್ತು ಎದೆಗೊತ್ತಿಕೊಳ್ಳುತ್ತಿದ್ದ,’ ಎಂದು ಬಹುತೇಕ ಹರಿದ, ಹಲವು ತೇಪೆ ಹಾಕಿದ ಪುಟ್ಟ ಚೀಟಿಯನ್ನು ತೋರಿಸಿದರು. ಅದು ಟೀಚರ್ ಅವರೇ ಜೋಡಿಸಿದ, ಕರೀಂನ ಒಳ್ಳೆಯ ಗುಣಗಳ ಬಗ್ಗೆ ಸಹಪಾಠಿಗಳು ಬರೆದ ಮಾತುಗಳಾಗಿದ್ದವು.

ಮೇಡಂ ಅಲ್ಲೇ ಕುಳಿತು ಬಿಕ್ಕಳಿಸಿದರು. ಆಗ ಕರೀಂನ ತಂದೆ ಮತ್ತು ತಾಯಿ ಹತ್ತಿರ ಬಂದು ಭುಜ ಹಿಡಿದು ಎಬ್ಬಿಸಿ ತಬ್ಬಿಕೊಂಡರು. `ʻನನ್ನ ಮಗನಿಗೆ ನಾನು ಹೆತ್ತ ತಾಯಿ ಅಷ್ಟೆ. ನಿಜವಾದ ತಾಯಿ ನೀವೇ ಅಮ್ಮಾ’ ಎಂದು ಕರೀಂನ ತಾಯಿ ಹೇಳಿದಾಗ ಸುತ್ತ ನೆರೆದವರೆಲ್ಲ ಕಣ್ಣೀರು ಒರೆಸಿಕೊಂಡರು.

ಇದನ್ನೂ ಓದಿ | Motivational story | ಸಾಯುವ ಯೋಚನೆಯಲ್ಲಿದ್ದಾಗ ಆ ವೃದ್ಧ ಬಂದು ಕೊಟ್ಟ ಚೆಕ್‌ನಲ್ಲಿದ್ದು ಹಣವಲ್ಲ, ಮತ್ತೇನು?

Exit mobile version