Site icon Vistara News

Motivational story: ಮೂರ್ಖನಾಗಿದ್ದು ಯಾರು? ಅವನಾ? ಇವನಾ?

diamond

ಕೃಷ್ಣ ಭಟ್‌ ಅಳದಂಗಡಿ- Motivational story
ಅದೊಂದು ಸಾರಿ ಊರಿನಲ್ಲಿ ವಸ್ತು ಪ್ರದರ್ಶನ ಆಯೋಜನೆಗೊಂಡಿತ್ತು. ಎಕ್ಸಿಬಿಷನ್ ಎಂದರೆ ಅಲ್ಲಿ ಫ್ಯಾನ್ಸಿ ವಸ್ತುಗಳಿಂದ ಹಿಡಿದು ನಿತ್ಯ ಜೀವನಕ್ಕೆ ಅಗತ್ಯವಿರುವ ನೂರಾರು ವಸ್ತುಗಳು ಸಿಗುತ್ತಿದ್ದವು. ನೂರಾರು ಅಂಗಡಿಗಳೂ ಇದ್ದವು. ಊರಿನ ಜನ ಸಮಯ ಕಳೆಯಲೆಂದೋ, ಖರೀದಿ ಮಾಡಲೆಂದೋ, ಅಲ್ಲಿ ಸಿಗುವ ತಿನಿಸುಗಳನ್ನು ತಿನ್ನಲೆಂದೋ ಗುಂಪು ಗುಂಪಾಗಿ ಬರುತ್ತಿದ್ದರು.

ಅಲ್ಲೊಬ್ಬ ಅತಿ ಸಾಮಾನ್ಯ ವ್ಯಾಪಾರಿಯೂ ಬಂದಿದ್ದ. ಅವನ ಅಂಗಡಿಯಲ್ಲಿ ಇಮಿಟೇಷನ್ ಜುವೆಲ್ಲರಿಗಳು, ಗಾಜಿನ ಶೈನಿಂಗ್ ವಸ್ತುಗಳೆಲ್ಲ ಇದ್ದವು. ಆ ಊರಿನ ಒಬ್ಬ ಚಿನ್ನಾಭರಣ ವ್ಯಾಪಾರಿ ಆ ಅಂಗಡಿಗೆ ಬಂದ.

ಅಲ್ಲಿದ್ದ ಹೊಳೆಯುವ ಗಾಜಿನ ವಸ್ತುಗಳನ್ನು ನೋಡುತ್ತಿದ್ದಾಗ ಅವನಿಗೆ ಅದರಲ್ಲಿರುವ ಒಂದು ಎಂಟು ಮೈಯುಳ್ಳ, ಅಷ್ಟ ಭುಜಾಕೃತಿಯ ಹೊಳೆಯುವ ಗಾಜು ಬರೀ ಗಾಜಲ್ಲ, ಅದು ವಜ್ರ ಅಂತ ಗೊತ್ತಾಯಿತು. ಬಹುಶಃ ಅದು ಕಣ್ತಪ್ಪಿ ಬಂದಿರಬಹುದು ಅನಿಸುತ್ತದೆ. ಈ ವಿಷಯ ಅಂಗಡಿ ಇಟ್ಟವನಿಗಂತೂ ಗೊತ್ತಿರಲಿಲ್ಲ.ಆ ಗಾಜಿನಂತೆ ಹೊಳೆಯುವ ವಸ್ತುವನ್ನು ತೋರಿಸಿದ ವ್ಯಾಪಾರಿ ಅದಕ್ಕೆಷ್ಟು ಬೆಲೆ ಎಂದು ಕೇಳಿದ. ಆಗ ವ್ಯಾಪಾರಿ, ಅದಕ್ಕೆ 200 ರೂ. ಎಂದ.

ವ್ಯಾಪಾರಿಗೆ ಸ್ವರ್ಗವೇ ಧರೆಗೆ ಇಳಿದಂತಾಯಿತು. ಆದರೆ, ಜಿಪುಣ ಬುದ್ಧಿ ಬಿಡಲಿಲ್ಲ. ಇದನ್ನು 150 ರೂ. ಕೊಡುತ್ತೀಯಾ ಎಂದು ಕೇಳಿದ. ಅಂಗಡಿ ಮಾಲೀಕ ನಿರಾಕರಿಸಿದ.ನಿಜವೆಂದರೆ ಆ ಆಂಗಡಿಗೆ ತುಂಬ ಗ್ರಾಹಕರೇನೂ ಇರಲಿಲ್ಲ. ಹೀಗಾಗಿ ಇನ್ನೊಂದು ರೌಂಡ್ ಹೋಗಿ ಬರೋಣ. ಆಗ ಅದನ್ನು 150 ರೂ.ಗಳಿಗೆ ಕೊಡಬಹುದು ಎಂದು ಭಾವಿಸಿದ ವ್ಯಾಪಾರಿ ಮತ್ತೆ ಮೇಳ ಸುತ್ತಲು ಹೊರಟ.

ಒಂದು ಸುತ್ತು ಹೋಗಿ ಬಂದಾಗ ಆ ನಿರ್ದಿಷ್ಟ ಗಾಜಿನ ಶೈನಿಂಗ್ ಪೀಸ್ ಕಾಣೆಯಾಗಿತ್ತು. ಆಗ ಅವನು `ಆಗ ನಾನೊಂದು ಪೀಸ್ ನೋಡಿದ್ನಲ್ಲ. ಅದು ಎಲ್ಲಿ ಹೋಯಿತು’ ಎಂದು ಕೇಳಿದ.

ಆಗ ಅಂಗಡಿಯವನು: ಓ ಅದಾ ಅದು ಮಾರಾಟ ಆಯಿತು. ನೀವು ಬೇಕೂಂತ ಹೇಳಿರಲಿಲ್ಲ ಅಂದ.

ಆಗ ಚಿನ್ನಾಭರಣ ವ್ಯಾಪಾರಿ: ಎಂಥ ಮೂರ್ಖ ಮಾರಾಯ ನೀನು. ಅದು ಬರೀ ಗಾಜಿನ ಪೀಸ್ ಅಲ್ಲ. ಅದು ವಜ್ರ ಮಾರಾಯ. ಮಾರ್ಕೆಟ್‍ನಲ್ಲಿ ಅದಕ್ಕೆ ಎಷ್ಟು ಕಡಿಮೆ ಎಂದರೂ ಒಂದು ಲಕ್ಷ ರೂ. ಬೆಲೆ ಉಂಟು. ಅವನು ನಿನ್ನನ್ನು ಮಂಗ ಮಾಡಿ ಹೋದ- ಎಂದ.

ಆಗ ಅಂಗಡಿಯವನು: ನಾನು ಮೂರ್ಖ ಅಲ್ಲ ಸ್ವಾಮೀ.. ನೀವೇ ಮೂರ್ಖರು. ನನಗೆ ಅದು ವಜ್ರದ್ದೋ ಇನ್ನೊಂದೋ ಗೊತ್ತಿಲ್ಲ. ನನಗೆ ಬಂದಿರುವ ಮಾಲುಗಳಲ್ಲಿ ಅದೂ ಇತ್ತು. ನನಗೆ ಅದು 100 ರೂ.ಗೆ ಸಿಕ್ಕಿತ್ತು. ಅದು ವಜ್ರ ಅಂತ ಗೊತ್ತಾದ ಮೇಲೂ ಅದನ್ನು 200 ರೂ. ಬದಲು 150 ರೂ. ಕೇಳಿದಿರಿ. ಅದನ್ನು ಖರೀದಿಸಿದ ವ್ಯಕ್ತಿ ನಾನು 200 ರೂ. ಎಂದರೂ ಐನೂರರ ನೋಟು ಕೊಟ್ಟು ಚಿಲ್ಲರೆಯನ್ನೂ ಇಟ್ಟುಕೊ ಎಂದು ಬಿಟ್ಟು ಹೋಗಿದ್ದಾರೆ. ನನಗೆ 400 ರೂ. ಲಾಭ ಬಂದಿದೆ- ಎಂದ.

ಚಿನ್ನಾಭರಣ ವ್ಯಾಪಾರಿ ಛೆ ಎಂದು ಕೈ ಕೈ ಹಿಸುಕಿಕೊಂಡ. ತನ್ನ ಸಣ್ಣ ಮನಸ್ಸಿನಿಂದ ಎಂಥಾ ಅವಕಾಶ ಮಿಸ್ ಆಯ್ತಲ್ಲ ಅಂತ ಬೇಜಾರಾದ.

ಇದನ್ನೂ ಓದಿ| Motivational story: ಕಿವಿ ಕೇಳಿಸದ್ದು ಯಾರಿಗೆ? ಹೆಂಡತಿಗಾ, ಗಂಡನಿಗಾ?
ಇದನ್ನೂ ಓದಿ | Motivational story: ದಾರಿ ಮಧ್ಯೆ ಚಿನ್ನದ ಚೀಲ ಸಿಕ್ಕರೆ ನೀವೇನು ಮಾಡ್ತೀರಾ?

Exit mobile version