Site icon Vistara News

motivational story : ತುಂಬ ಸಲ ಹೀಗಾಗುತ್ತೆ, ನಮ್ಮನ್ನು ಪರೀಕ್ಷಿಸುವ ಮಾನದಂಡಗಳೇ ಸರಿ ಇರುವುದಿಲ್ಲ!

porcelin

ಕೃಷ್ಣ ಭಟ್‌ ಅಳದಂಗಡಿ- motivational story
ಒಬ್ಬ ಶ್ರೀಮಂತ ಯುವಕ ಇದ್ದ. ಅವನಿಗೆ ಒಳ್ಳೆಯ, ಹೊಸ ಪಿಂಗಾಣಿ ಕಪ್ ತೆಗೆದುಕೊಳ್ಳಬೇಕು ಅಂತ ಅನಿಸಿತು. ಹಾಗಾಗಿ ನಗರದ ಪ್ರತಿಷ್ಠಿತ ಮಳಿಗೆಯೊಂದಕ್ಕೆ ಹೋದ. ಅದು ಎಕ್ಸ್ ಕ್ಲೂಸಿವ್ ಶೋ ರೂಂ ಆಗಿತ್ತು. ಸಾವಿರಾರು ಬಗೆಯ ಪಾರ್ಶೆಲಿನ್‌ ಪಾತ್ರೆಗಳು ಅಲ್ಲಿದ್ದವು.

ಶ್ರೀಮಂತ ಯುವಕನಿಗೆ ಕಪ್‍ಗಳ ಖಯಾಲಿ ದೊಡ್ಡದಿತ್ತು. ಅವುಗಳ ಗುಣಮಟ್ಟ, ಆಯ್ಕೆ ಮಾಡುವ ರೀತಿಯ ಬಗ್ಗೆಯೂ ಅವನು ಚೆನ್ನಾಗಿ ಅರಿತಿದ್ದ. ಎಷ್ಟು ದುಡ್ಡು ಕೊಟ್ಟಾದರೂ ಖರೀದಿಸುವುದು ಅವನ ಹವ್ಯಾಸ.

ಅವನು ಕಂಡುಕೊಂಡಂತೆ, ಎರಡು ಪಾರ್ಶೆಲಿನ್‌ ಕಪ್‍ಗಳನ್ನು ಒಂದಕ್ಕೊಂದು ಮೆಲ್ಲಗೆ ಬಡಿದರೆ ಒಂದು ಮಧುರ ತರಂಗ ಸ್ವರ ಹುಟ್ಟಬೇಕು. ಹಾಗೆ ಹುಟ್ಟಿದಾಗಲೇ ಅದು ಒಳ್ಳೆಯ ಪಿಂಗಾಣಿ ಎನ್ನುವುದು ಅವನ ನಿಲುವು ಮತ್ತು ಅದೊಂದು ಪ್ರಮಾಣಿತ ವಿಧಾನವೂ ಆಗಿತ್ತು.

ಅವನು ಹಾಗೆಯೇ ಮಾಡಿದ. ಒಂದು ಕಪ್ ತೆಗೆದುಕೊಂಡು ಇನ್ನೊಂದಕ್ಕೆ ಮೆಲ್ಲಗೆ ಬಡಿದ. ಆದರೆ, ಒಳ್ಳೆಯ ಸೌಂಡ್ ಬರಲಿಲ್ಲ. ಅವನು ಬಯಸಿದ ಲಾಲಿತ್ಯ, ಠಣ್ ಅಂತ ಹೇಳಿ ನಂತರ ನಿಧಾನಕ್ಕೆ ಸ್ವರ ಇಳಿಯುವ ಮೃದುಲ ಸಂಗೀತ ಅಲ್ಲಿರಲಿಲ್ಲ.

ಅವನು ಎರಡನೇ ಬೌಲ್‍ಗೆ ಅದೇ ರೀತಿ ಬಡಿದ. ಆದರೆ, ಖುಷಿಯಾಗುವ ಸ್ವರ ಬರಲಿಲ್ಲ. ಮೂರನೇಯದು, ನಾಲ್ಕನೆಯದು, ಐದನೆಯದು.. ನೋ.. ಯಾವ ಕಪ್‍ನ್ನು ಪರಿಶೀಲಿಸಿದರೂ ಬಯಸಿದ ಸ್ವರ ಏಳಲೇ ಇಲ್ಲ. ಎಲ್ಲವೂ ಡಲ್ ಆಗಿದ್ದವು.

ಶ್ರೀಮಂತ ವ್ಯಕ್ತಿಯ ಈ ಪರೀಕ್ಷೆಯನ್ನು ಆ ಅಂಗಡಿಯ ಒಬ್ಬ ಸಿಬ್ಬಂದಿ ದೂರದಿಂದಲೇ ನೋಡುತ್ತಿದ್ದರು. ಕೊನೆಗೆ ಕರೆದು ಹೇಳಿದರು: ನೀವು ಮಾಡುತ್ತಿರುವ ಪರೀಕ್ಷೆ ಸರಿ ಇದೆ. ಆದರೆ, ನೀವು ಪರೀಕ್ಷೆಗೆ ಬಳಸಿದ ಮೊದಲ ಕಪ್ ಇದೆಯಲ್ವಾ? ಅದನ್ನೊಮ್ಮೆ ಬದಲಿಸಿ ನೋಡಿ ಅಂದರು.

ವ್ಯಕ್ತಿ ಅವರು ಹೇಳಿದಂತೆಯೇ ಮಾಡಿದರು. ಬೇರೊಂದು ಕಪ್ ತೆಗೆದುಕೊಂಡು ಹಿಂದೆ ಪರೀಕ್ಷಿಸಿದ ಕಪ್‍ಗಳನ್ನೇ ಮತ್ತೆ ಮೆಲ್ಲಗೆ ಬಡಿದು ನೋಡಿದರು. ಕಿವಿಗಿಂಪಾದ, ಮೆಲ್ಲಗೆ ಕಂಪಿಸುವ ಮಧುರ ಧ್ವನಿ ಹುಟ್ಟಿತು.

ಯುವಕ ಕೇಳಿದ: ಅಯ್ಯೋ ಎಲ್ಲ ಬೌಲ್‍ಗಳು ಅದೆಷ್ಟು ಚೆನ್ನಾಗಿದಾವಲ್ವಾ? ಅಲ್ಲ.. ನಂಗೆ ಮೊದಲ ಬಾರಿ ಪರೀಕ್ಷಿಸಿದಾಗ ಯಾಕೆ ಈ ಸ್ವರ ಬರಲಿಲ್ಲ?

ಸಿಬ್ಬಂದಿ ಹೇಳಿದರು: ನೀವು ಪರೀಕ್ಷೆಗೆ ಬಳಸಿದ ಕಪ್ ಸರಿ ಇರ್ಲಿಲ್ಲ. ನಾನು ಅದನ್ನು ತೆಗೆಯಬೇಕಾಗಿತ್ತು ಅಲ್ಲಿಂದ.

ಆ ಸಿಬ್ಬಂದಿ ಮುಂದುವರಿಸಿದರು.

`ʻʻಪಾರ್ಸೆಲಿನ್ ಬೌಲ್ ಪರೀಕ್ಷೆ ಒಂದು ಘಟನೆ ಮಾತ್ರ. ನಾವು ಕೆಲವೊಮ್ಮೆ ಪರೀಕ್ಷೆಗೆ ಬಳಸುವ ಮಾನದಂಡಗಳು ಸರಿ ಇರುವುದಿಲ್ಲ. ನಾವು ಖುಷಿಯಾಗಿರಬೇಕು ಎಂದು ಬಯಸುತ್ತೇವೆ… ಆದರೆ ನಗುವುದನ್ನೇ ಮರೆಯುತ್ತೇವೆ. ನಮ್ಮನ್ನು ಎಲ್ಲರೂ ಪ್ರೀತಿಸಬೇಕು ಅಂತ ಬಯಸುತ್ತೇವೆ. ನಾವು ಯಾರನ್ನೂ ಪ್ರೀತಿಸುವುದಿಲ್ಲ. ಪ್ರತಿಯೊಬ್ಬರನ್ನೂ ನಮ್ಮದೇ ಅಳತೆಗೋಲುಗಳಿಂದ ಅಳೆದು ಅವನು ಸರಿ ಇಲ್ಲ, ಇವಳು ಸರಿ ಇಲ್ಲ ಅಂತೇವೆ. ನಾವೆಷ್ಟು ಸರಿ ಅಂತ ಯೋಚನೆ ಮಾಡುವುದಿಲ್ಲ. ನಾವು ಯಾರನ್ನೂ ನಂಬುವುದಿಲ್ಲ. ಹಾಗಾಗಿ ಜಗತ್ತು ನಂಬಿಕೆಗೆ ಅರ್ಹವಲ್ಲ ಅಂತ ಅನಿಸುತ್ತದೆ. ನಾವು ಬೇರೆಯವರ ಸಾಮಥ್ರ್ಯವನ್ನು ಗೌರವಿಸುವುದಿಲ್ಲ. ಅವರಿಗೆ ಸಾಮಥ್ರ್ಯವಿಲ್ಲ ಅಂತ ತೀರ್ಮಾನಿಸಿ ಬಿಡುತ್ತೇವೆ” ಎಂದರು.

ಯುವಕನಿಗೆ ಒಂದು ಪಿಂಗಾಣಿ ಕಪ್‍ನ ಹಿಂದೆ ಎಷ್ಟೊಂದು ಸಂದೇಶಗಳಿವೆಯಲ್ವಾ ಅನಿಸಿತು.

ಇದನ್ನೂ ಓದಿ | Motivational story | ಹುಷಾರು, ನಮ್ಮ ಪ್ರಾಮಾಣಿಕತೆಯ ಪರೀಕ್ಷೆ ಯಾವಾಗ ಬೇಕಾದರೂ ನಡೆಯಬಹುದು!

Exit mobile version