Site icon Vistara News

Motivational story | ಶಾಂತವಾಗಿದ್ದ ಅಮ್ಮನೊಳಗಿನ ಜ್ವಾಲಾಮುಖಿ ಸಿಡಿದದ್ದು ಮಾತ್ರ ಅತ್ಯಂತ ತಣ್ಣಗೆ! ಅದು ಹೇಗೆ?

indian woman

ಕೃಷ್ಣ ಭಟ್‌ ಅಳದಂಗಡಿ- Motivational stroy
ಸುನೀತಾ ಬೆಳಗ್ಗೆ ಎದ್ದು ಯೋಗ ಮಾಡುತ್ತಿದ್ದರು. ಗಂಡ ಬಂದು ಹೇಳಿದರು: ಸುನೀತಾ, ನಮ್ಮ ಆಫೀಸಿನ ಫ್ರೆಂಡ್ಸೆಲ್ಲ ಸೇರಿ ನಾಲ್ಕು ದಿನ ಔಟಿಂಗ್ ಹೋಗ್ತಾ ಇದಾರೆ. ನಾನೂ ಹೋಗ್ಬೇಕು ಅಂತ ಇದ್ದೀನಿ. ಹೋಗ್ಲಾ?
ಸುನೀತಾ ಹೇಳಿದ್ರು: ಡೋಂಟ್ ವರಿ, ಹೋಗಿ ಬನ್ನಿ.. ಓಕೆ

ಗಂಡನಿಗೆ ಆಶ್ಚರ್ಯ ಆಗೋಯ್ತು.. ಮೊದಲೆಲ್ಲ ಫ್ರೆಂಡ್ಸ್ ಜತೆ ಹೋಗ್ತೀನಿ ಅಂದ್ರೆ ಸಿಡಿಮಿಡಿ ಮಾಡೋಳು, ಜಾಸ್ತಿ ಕುಡೀಬಾರ್ದು ಅಂತೆಲ್ಲ ಕಿರಿಕಿರಿ ಮಾಡೋಳು, ಈಗ ಇಷ್ಟು ನಿರಾಳವಾಗಿ ಹೋಗಿ ಬನ್ನಿ ಅಂತ ಹೇಳಿದ್ಲಲ್ಲ.. ಹೇಗಿದು ಅಂತ ಯೋಚನೆ ಮಾಡತೊಡಗಿದರು.

ಮರುದಿನ ಕಾಲೇಜಿಗೆ ಹೋಗೋ ಮಗ ಬಂದು ಹೆದರಿಕೊಂಡೇ ಹೇಳಿದ: ಅಮ್ಮಾ ನನ್ನ ಇಂಟರ್ನಲ್ಸ್ ಮಾರ್ಕ್ಸ್ ಬಂದಿದೆ. ಯಾಕೋ ಸ್ವಲ್ಪ ಕಡಿಮೆ ಇದೆ. ಸರಿಯಾಗಿ ಮಾರ್ಕ್ಸ್‌ ಕೊಟ್ಟಿಲ್ಲ.

ಅಮ್ಮ ಬೈತಾಳೆ, ನಿನಗೆ ಓದೋದು ಬಿಟ್ಟು ಬೇರೇನಿದೆ ಕೆಲಸ ಇದೆ? ಹೀಗಿದ್ರೂ ಕಡಿಮೆ ಮಾರ್ಕ್ಸ್‌ ಹೇಗೆ ಬಂತು ಅಂತೆಲ್ಲ ಅಮ್ಮ ತರಾಟೆಗೆ ತೆಗೆದುಕೊಳ್ಳಬಹುದು ಅಂತ ಅವನು ಮುದುಡಿಕೊಂಡು ನಿಂತಿದ್ದ

ಸುನೀತಾ ಮಗನ ಬೆನ್ನು ತಟ್ಟುತ್ತಾ ಹೇಳಿದರು: ಓಕೆ ಪರವಾಗಿಲ್ಲ. ನೀನು ಚೆನ್ನಾಗಿ ಪರಿಶ್ರಮ ಪಟ್ಟು ಕಲಿತರೆ ಒಳ್ಳೆಯ ರಿಸಲ್ಟ್ ಬರ್ತದೆ. ಇಲ್ಲದಿದ್ದರೆ ಸೆಮಿಸ್ಟರ್ ರಿಪೀಟ್ ಮಾಡಬೇಕಾದೀತು.. ಅಷ್ಟೆ.. ಡೋಂಟ್ ವರಿ.

ಮರುದಿನ ಜಾಬ್‍ನಿಂದ ಮರಳಿ ಬಂದ ಮಗಳು ಆತಂಕದಿಂದಲೇ ಹೇಳಿದ್ಲು: ಅಮ್ಮ ನಾನು ಸ್ಕೂಟರನ್ನು ಡಿವೈಡರ್‌ಗೆ ಗುದ್ದಿಸಿ ಬಿಟ್ನಮ್ಮಾ.. ಎದುರಿನ ಭಾಗ ಜಜ್ಜಿ ಹೋಗಿದೆ.
ಅಮ್ಮ ಕೂಲಾಗಿ ಹೇಳಿದರು: ಹೌದಾ? ಗ್ಯಾರೇಜಿನಲ್ಲಿಟ್ಟು ಸರಿ ಮಾಡಿಸು..
ಅಮ್ಮಾ ಸಿಕ್ಕಾಪಟ್ಟೆ ಬೈತಾರೆ, ನಾಳೆಯಿಂದ ಗಾಡಿ ತೆಗೆದುಕೊಂಡು ಹೋಗೋದೇ ಬೇಡ ಅಂತಾರೆ ಅಂತೆಲ್ಲ ಯೋಚನೆ ಮಾಡ್ತಾ ಇದ್ದ ಮಗಳಿಗೆ ಆಶ್ಚರ್ಯ.

ಮೊದಲೆಲ್ಲ ಅಮ್ಮ ಹೀಗಿರ್ಲಿಲ್ಲ. ಒಮ್ಮಿಂದೊಮ್ಮೆಗೇ ಹೀಗ್ಯಾಕಾದರು ಅಂತ ಅಪ್ಪ, ಮಗ ಮತ್ತು ಮಗಳು ಮಾತನಾಡಿಕೊಂಡರು.
ಮೂವರೂ ಸೇರಿ ಸುನೀತಾ ಅವರ ಬಳಿಗೆ ಬಂದು ಕೇಳಿದರು: ಮೊದಲೆಲ್ಲ ಸಣ್ಣ ಸಣ್ಣ ವಿಷಯಗಳಿಗೂ ತುಂಬಾ ಆತಂಕಪಡ್ತಾ ಇದ್ದಿ. ಈಗ ಯಾಕೆ ಇಷ್ಟೊಂದು ಕಾಮ್ ಆಗಿ, ಏನೂ ಆಗದವರಂತೆ, ಸಂಬಂಧವೇ ಇಲ್ಲದಂತೆ ವರ್ತಿಸ್ತಾ ಇದ್ದೀರಿ? ಆರ್ ಯೂ ಆಲ್‍ರೈಟ್?

ಅಮ್ಮ ನಗುತ್ತಾ ಹೇಳಿದರು.
ʻʻಇದನ್ನೆಲ್ಲ ಅರ್ಥ ಮಾಡಿಕೊಳ್ಳಿಕೆ ನನಗೆ ತುಂಬ ಸಮಯ ಬೇಕಾಯಿತು. ನನ್ನ ಸಿಟ್ಟು, ನನ್ನ ಆತಂಕ, ನಾನು ಮಾಡಿಕೊಳ್ಳುವ ತಲೆಬಿಸಿ, ಒತ್ತಡಗಳು ನಿಮ್ಮ ಯಾವ ಸಮಸ್ಯೆಯನ್ನೂ ಪರಿಹರಿಸುವುದಿಲ್ಲ. ನನ್ನ ಯಾವ ಬುದ್ಧಿ ಮಾತುಗಳೂ ನಿಮ್ಮನ್ನು ಬದಲಾಯಿಸುವುದಿಲ್ಲ. ಬದಲಾಗಿ ಅದೆಲ್ಲವೂ ನನ್ನನ್ನು ಇನ್ನಷ್ಟು ಒತ್ತಡಕ್ಕೆ, ಆತಂಕಕ್ಕೆ ತಳ್ಳುತ್ತವೆ. ಆರೋಗ್ಯವನ್ನು ಹದಗೆಡಿಸುತ್ತವೆ”

ʻʻಪ್ರತಿಯೊಂದು ವಿಷಯದಲ್ಲೂ ನಾನು ಅನಗತ್ಯವಾಗಿ ಮೂಗು ತೂರಿಸಬಾರದು ಅಂತ ನಾನು ಅರ್ಥ ಮಾಡಿಕೊಂಡಿದ್ದೇನೆ. ಮಕ್ಕಳಾಗಿರುವ ನಿಮಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದು ಅಂತ ಸಣ್ಣ ವಯಸ್ಸಿನಲ್ಲೇ ಹೇಳಿದ್ದೇನೆ. ಈಗ ನಿಮಗೆ ಅರ್ಥವಾಗದಿರುವುದು ಯಾವುದೂ ಇಲ್ಲ. ನಾನೇನೋ ಹೇಳಿದರೆ ನಿಮಗೆ ಅದು ಕಿರಿಕಿರಿ ಅನಿಸಬಹುದು. ನಾನು ಜೋರಾಗಿ ಬೈದರೆ ಕೆಲವೊಮ್ಮೆ ದಿನಗಟ್ಟಲೆ ಮಾತು ಬಿಡ್ತೀರಿ. ಅದನ್ನು ನೋಡಿದ್ರೆ ನಂಗೆ ಎದೆ ಒಡೆದ ಹಾಗಾಗುತ್ತದೆ”

ʻʻನಾನು ನಿಮಗೆ ಸಲಹೆಯನ್ನಷ್ಟೇ ಕೊಡಬಹುದು. ಪಾಲಿಸುವುದು, ಬಿಡುವುದು ನಿಮಗೆ ಬಿಟ್ಟದ್ದು. ತೆಗೆದುಕೊಳ್ಳುವ ಯಾವುದೇ ನಿರ್ಧಾರ, ಅದು ಒಳ್ಳೆಯದೋ ಕೆಟ್ಟದೋ ಅದರ ರಿಸಲ್ಟ್‌ಗೆ ನೀವೇ ಹೊಣೆಗಾರರು. ಅದಕ್ಕೆ ನಾನು ಜವಾಬ್ದಾರಳಾಗಲು ಸಾಧ್ಯವಿಲ್ಲ”

ʻʻನನಗೆ ಅಂತಿಮವಾಗಿ ಒಂದು ಸತ್ಯ ಗೊತ್ತಾಯಿತು. ನಾನು ನನ್ನನ್ನು ಮಾತ್ರ ನಿಯಂತ್ರಿಸಿಕೊಳ್ಳಬಲ್ಲೆ, ಇತರರನ್ನಲ್ಲ. ನನ್ನ ಕೆಲಸ ನಿಮ್ಮನ್ನು ಪ್ರೀತಿಸುವುದು, ಆರೈಕೆ ಮಾಡುವುದು, ಪ್ರೋತ್ಸಾಹಿಸುವುದು. ಅದನ್ನು ಮಾಡಿದ್ದೇನೆ, ಮಾಡುತ್ತೇನೆ. ಅದರಾಚೆಗೆ ನೀವು ಏನು ಮಾಡುತ್ತೀರೋ ಅದು ನಿಮಗೆ ಬಿಟ್ಟದ್ದು. ಪ್ರತಿಯೊಂದಕ್ಕೂ ನಾನು ತಲೆಬಿಸಿ ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ. ಹಾಗಾಗಿ ನಾನು ಏನೇ ಆದರೂ ಶಾಂತವಾಗಿರಲು ಕಲಿತುಕೊಂಡೆ. ಉಳಿದವರ ಬಗ್ಗೆ ನಾನೀಗ ತುಂಬ ತಲೆ ಕೆಡಿಸಿಕೊಳ್ಳುವುದಿಲ್ಲ.”

ಅಷ್ಟು ಶಾಂತವಾಗಿದ್ದ ಅಮ್ಮನ ಅತ್ಯಂತ ನಿಷ್ಠುರ ಮಾತಿಗೆ ಮೂವರೂ ದಂಗಾಗಿ ಹೋದರು. ಆವತ್ತಿನಿಂದ ಅವರೆಲ್ಲರೂ ಹಿಂದಿಗಿಂತ ಹೆಚ್ಚು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ತೀರ್ಮಾನಿಸಿದರು. ಸುನೀತಾ ತಣ್ಣಗೆ ಎದ್ದು ಹೋಗಿ ದೇವರ ಮುಂದೆ ನಿಂತು ದೀರ್ಘವಾಗಿ ನಿಟ್ಟುಸಿರುಬಿಟ್ಟರು.

ಇದನ್ನೂ ಓದಿ | Motivational story | ಅವನು ಗೆಳೆಯನ ಮುಂದೆ ಸದಾ ಸೋಲುತ್ತಿದ್ದ, ಸೋಲುತ್ತಲೇ ಗೆಲ್ಲುವ ಆಟ ಕಲಿತುಕೊಂಡ!

Exit mobile version