ಕೃಷ್ಣ ಭಟ್ ಅಳದಂಗಡಿ- motivational story
ಹಳ್ಳಿಯ ಯುವಕನೊಬ್ಬ ಬಡ ಕುಟುಂಬಕ್ಕೆ ಬೆನ್ನೆಲುಬಾಗಬೇಕು ಎಂಬ ದೊಡ್ಡ ಕನಸಿನೊಂದಿಗೆ ಉದ್ಯೋಗವನ್ನು ಅರಸುತ್ತಾ ಸಿಟಿಗೆ ಬಂದ. ಒಂದು ದೊಡ್ಡ ಕಂಪನಿಯಲ್ಲಿ ಕೆಲಸಕ್ಕೆ ಅರ್ಜಿ ಹಾಕಿದ. ಸಂದರ್ಶನದ ದಿನ ಬಂತು. ಎಲ್ಲ ಪ್ರಶ್ನೆ, ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಿದ. ಅದೊಂದು ದಿನ ಸಂದರ್ಶನವೂ ನಡೆದು ʻನಿನ್ನನ್ನು ಕೆಲಸಕ್ಕೆ ತೆಗೆದುಕೊಂಡಿದ್ದೇವೆ. ನಿನ್ನ ಪೂರ್ತಿ ಡಿಟೇಲ್ ಎಚ್ಚಾರ್ ವಿಭಾಗದಲ್ಲಿ ಕೊಡು’ ಅಂತ ಹೇಳಲಾಯಿತು. ಜತೆಗೆ ಇನ್ನೊಂದು ಮಾತೂ ಹೇಳಿದರು: ನಿನ್ನ ಬೈಕನ್ನು ನೀಟಾಗಿ ರೆಡಿ ಇಟ್ಟಿರು. ನೀನು ಕಸ್ಟಮರ್ಸ್ ವಿಸಿಟ್‍ಗೆ ಹೋಗಲಿಕ್ಕಿರ್ತದೆ-ಅಂತ.
ಯುವಕ ಹೇಳಿದ: ಸರ್ ನನ್ನ ಬಳಿ ಬೈಕ್ ಇಲ್ಲ.. ಏನ್ಮಾಡಲಿ?
ಮ್ಯಾನೇಜರ್ ಅಂದ: ಬೈಕಿಲ್ವಾ? ಹಾಗಿದ್ದರೆ ಈ ಕೆಲಸವೂ ಸಿಗಲ್ಲ.. ಹೋಗು ಅಂದ.
ಯುವಕನ ಬಳಿ ತಕ್ಷಣಕ್ಕೊಂದು ಬೈಕ್ ತೆಗೆದುಕೊಳ್ಳುವಷ್ಟು ಹಣವಂತೂ ಇರಲೇ ಇಲ್ಲ. ಒಂದೆರಡು ದಿನಕ್ಕೆ ಊಟಕ್ಕಾಗುವಷ್ಟು ಮಾತ್ರ ಹಣವಿತ್ತು. ಊರಿಗೆ ಮರಳುವ ಯೋಚನೆಯಂತೂ ಇರಲೇ ಇಲ್ಲ. ಇಲ್ಲೇ ಏನಾದರೂ ಕೆಲಸ ಸಿಕ್ಕೀತು ಎಂದು ನಡೆಯುತ್ತಾ ಹೊರಟ.
ದಾರಿಯಲ್ಲಿ ಹೋಗ್ತಾ ಒಂದು ತರಕಾರಿ ಮಾರ್ಕೆಟ್ ಕಂಡಿತು. ತಕ್ಷಣವೇ ಒಂದು ಐಡಿಯಾ ಹೊಳೆಯಿತು. ಕೈಯಲ್ಲಿರುವ ಹಣದಲ್ಲಿ ಸ್ವಲ್ಪ ತರಕಾರಿ ಖರೀದಿ ಮಾಡಿ, ಮನೆಗಳ ಮುಂದೆ ಹೋಗಿ ಮಾರಿದರೆ ಹೇಗೆ? ಯೋಚನೆ ಬಂದದ್ದೇ ತಡ ತಕ್ಷಣ ಹೊರಟೇ ಬಿಟ್ಟ. ಸಂಜೆಯ ಹೊತ್ತಿಗೆ ತರಕಾರಿ ಎಲ್ಲ ಮಾರಾಟವಾಗಿ ಸ್ವಲ್ಪ ಲಾಭ ಬಂದಿತ್ತು! ಮರುದಿನ ಬೆಳಗ್ಗೆ ಎದ್ದು ಮಾರ್ಕೆಟ್‍ಗೆ ಓಡಿದ. ಸಂಜೆಯ ಹೊತ್ತಿಗೆ ಮತ್ತೊಂದಿಷ್ಟು ಕಾಸು!
ಈ ಕೆಲಸವನ್ನು ಅತ್ಯಂತ ಭಕ್ತಿಯಿಂದ, ಶ್ರದ್ಧೆಯಿಂದ ಮಾಡಿದ. ದಿನದಿಂದ ದಿನಕ್ಕೆ ಹೆಚ್ಚೆಚ್ಚು ಖರೀದಿ ಮಾಡಿ, ವ್ಯಾಪಾರ ಮಾಡಿದ. ಮುಂದೆ ಕೆಲವು ಹುಡುಗರನ್ನು ಸೇರಿಸಿಕೊಂಡ. ಒಂದು ದೊಡ್ಡ ವ್ಯಾಪಾರಕ್ಕೇ ಅದು ಮುನ್ನುಡಿ ಆಯ್ತು. ಅವನು ಶ್ರೀಮಂತನೇ ಆಗಿಬಿಟ್ಟ.
ಅದೊಂದು ಸಾರಿ ಅವನ ಬಂಗಲೆಗೆ ಗೆಳೆಯರೆಲ್ಲ ಬಂದರು. ಮನೆ ಎದುರು ಕಾರುಗಳ ಸಾಲೇ ಇತ್ತು. ಒಬ್ಬ ಕೇಳಿದ: ನಿನ್ನ ಹತ್ರ ತುಂಬ ಕಾರಿನ ಕಲೆಕ್ಷನ್ಸ್ ಇದೆ. ಬೈಕ್ ಯಾಕಿಲ್ಲ?
ವ್ಯಾಪಾರಿ ಹೇಳಿದ: ನನ್ನಲ್ಲಿ ಬೈಕೇನಾದರೂ ಇರುತ್ತಿದ್ದರೆ ನಾನು ಈ ಹಂತಕ್ಕೆ ಬೆಳೆಯುತ್ತಲೇ ಇರಲಿಲ್ಲ. ಬೈಕಲ್ಲಿ ಓಡಾಡ್ತಾ ಕಸ್ಟಮರ್ಸ್ ವಿಸಿಟ್ ಮಾಡ್ತಾ ಇರ್ತಿದ್ದೆ. ಆವತ್ತು ಬೈಕ್ ಇಲ್ಲದೆ ಹೋಗಿದ್ದೇ ಒಳ್ಳೆದಾಯ್ತು. ಬೈಕ್ ಬೇಡ ಅಂತ ನಿರ್ಧರಿಸಿ ವ್ಯಾಪಾರಕ್ಕೆ ಇಳಿದ ದಿನವೇ ನನ್ನ ಬದುಕಿಗೆ ದೊಡ್ಡ ತಿರುವು ಬಂತು.
ಇದನ್ನೂ ಓದಿ | Motivational story | ಒಬ್ಬ ಸಾಮಾನ್ಯ ಕಾರು ಚಾಲಕನ ಡಿಫರೆಂಟ್ ಬಿಸಿನೆಸ್ ಮಾಡೆಲ್!