ಕೃಷ್ಣ ಭಟ್ ಅಳದಂಗಡಿ- motivational story
ಒಬ್ಬ ಶ್ರೀಮಂತ ವ್ಯಕ್ತಿ ಒಂದು ಹೊಸಾ ಬೋಟ್ ಖರೀದಿ ಮಾಡಿದ್ದ. ಅದಕ್ಕೆ ಕೆಂಪು ಬಣ್ಣ ಬಳಿಯುವಂತೆ ಒಬ್ಬ ಪೇಂಟರನ್ನು ಗುರುತು ಮಾಡಿದ್ದ. ಆ ಪೇಂಟರ್ ಬಂದು ಬಣ್ಣ ಬಳಿದು ದುಡ್ಡು ಪಡೆದುಕೊಂಡು ಹೋದ.
ಮರುದಿನ ಆ ಶ್ರೀಮಂತ ವ್ಯಕ್ತಿ ಪೇಂಟ್ ಮಾಡಿದವನ ಬಳಿಗೆ ಕಾರಿನಲ್ಲಿ ಧಾವಿಸಿ ಬಂದ. ಪೇಂಟ್ ಮಾಡಿದವನು ಏನೋ ಎಡವಟ್ಟಾಗಿದೆ ಎಂದು ಭಯಗೊಂಡ.
ಶ್ರೀಮಂತ ಬಂದವನೇ ಪೇಂಟರ್ ನ ಕೈ ಹಿಡಿದು ಒಂದು ಲಕ್ಷ ರೂಪಾಯಿಯ ಕಟ್ಟು ಇಟ್ಟುಬಿಟ್ಟ. ಪೇಂಟರ್ ಗೆ ಆಶ್ಚರ್ಯ. ಯಾಕಿಷ್ಟು ಹಣ, ಪೇಂಟಿಂಗ್ ಮಾಡಿದ್ದಕ್ಕೆ ಆಗಲೇ ಹಣ ಕೊಟ್ಟಿದ್ದೀರಿ.. ಇದೆಲ್ಲ ಯಾಕೆ ಎಂದು ಕೇಳಿದ.
ಆಗ ಶ್ರೀಮಂತ ಹೇಳಿದ: ಪೇಂಟಿಂಗ್ ಮಾಡಿದ್ದಕ್ಕೆ ದುಡ್ಡು ಕೊಟ್ಟಾಗಿದೆ. ಬೋಟ್ ನಲ್ಲಿದ್ದ ಒಂದು ಸಣ್ಣ ರಂಧ್ರವನ್ನು ಮುಚ್ಚಿದ್ದಕ್ಕೆ ಇಷ್ಟು ಹಣ ಎಂದ.
ಪೇಂಟರ್ ಗೆ ಅರ್ಥವಾಗಲಿಲ್ಲ. ಅದೇನು ದೊಡ್ಡ ಸಂಗತಿಯಾ? ಅಷ್ಟು ಸಣ್ಣ ಕೆಲಸಕ್ಕೆ ಇಷ್ಟು ಹಣವಾ? ಪೇಂಟ್ ಮಾಡುವಾಗ ಕಂಡಿತು, ಮುಚ್ಚಿದೆ ಅಷ್ಟೆ.. ಅಂದ.
ಆಗ ಶ್ರೀಮಂತ ಹೇಳಿದ: ಇದು ಇಷ್ಟು ಸರಳ ಸಂಗತಿ ಅಲ್ಲ. ಏನಾಯ್ತು ಅಂತ ನಾನು ಹೇಳ್ತೇನೆ. ಪೇಂಟ್ ಮಾಡಲು ಹೇಳುವಾಗ ನನಗೆ ಅದರಲ್ಲಿ ಒಂದು ರಂಧ್ರ ಇರುವ ಬಗ್ಗೆ ಹೇಳಲು ಮರೆತು ಹೋಗಿತ್ತು. ನೀವು ಪೇಂಟ್ ಮಾಡಿ ಒಣಗಿದ್ದನ್ನು ಗಮನಿಸಿದ ನನ್ನ ಮಕ್ಕಳೂ ಬೋಟನ್ನು ನೀರಿಗಿಳಿಸಿ ಬೋಟಿಂಗ್ ಶುರು ಮಾಡೇ ಬಿಟ್ಟಿದ್ದಾರೆ. ಅವರಿಗೂ ಅದರಲ್ಲಿ ರಂಧ್ರ ಇದ್ದದ್ದು ಗೊತ್ತಿಲ್ಲ.
ನಾನು ಹೊರಗೆ ಹೋಗಿ ಬರುವ ಹೊತ್ತಿಗೆ ದೋಣಿ ಕಾಣಲಿಲ್ಲ. ಯಾರು ತಗೊಂಡು ಹೋದ್ರು ಅಂತ ಕೇಳಿದ್ರೆ- ಮಕ್ಕಳು ಅಂದ್ರು. ನಂಗೆ ಜೀವ ಬಾಯಿಗೆ ಬಂತು. ನಾನು ಎಲ್ಲರನ್ನೂ ಕರೆದು ಹುಡುಕಿ ಅಂದೆ.
ಅಷ್ಟು ಹೊತ್ತಿಗೆ ಅವರು ನಗ್ತಾ ನಗ್ತಾ ಬೋಟ್ ನಡೆಸಿಕೊಂಡು ಬರ್ತಾ ಇರುವುದು ಕಾಣಿಸಿತು. ನಾನು ಬೋಟ್ ನಿಂತ ಕೂಡಲೇ ಓಡಿ ಹೋಗಿ ನೋಡಿದ್ರೆ ರಂಧ್ರವನ್ನು ಮುಚ್ಚಲಾಗಿದೆ..
ಹೌದು ನಾನೇ ಮುಚ್ಚಿದ್ದು- ಎಂದ ಪೇಂಟರ್.
ಈಗಿನ ಕಾಲದಲ್ಲಿ ಹೇಳಿದ ಕೆಲಸವನ್ನೇ ನೆಟ್ಟಗೆ ಮಾಡುವುದಿಲ್ಲ. ಅಂತದ್ರಲ್ಲಿ ನೀವು ನಿಮಗೆ ಸಂಬಂಧಿಸದ ಕೆಲಸವನ್ನು ಕೂಡಾ ನಿಯತ್ತಿನಿಂದ ಮಾಡಿದ್ರಿ…ನನ್ನ ಮಕ್ಕಳ ಪ್ರಾಣ ಉಳಿಸಿದ್ರಿ- ಎಂದರು ಶ್ರೀಮಂತ ವ್ಯಕ್ತಿ.
ಪೇಂಟರ್ ಗೆ ಖುಷಿ ಆಯಿತು.. ನಾವು ತುಂಬ ಸಲ ಇಂಥ ಸಣ್ಣ ಪುಟ್ಟ ಕೆಲಸ ಮಾಡ್ತೇವೆ. ಆದರೆ, ಈ ಥರ ಗುರುತಿಸಿ ಧನ್ಯವಾದ ಇದುವರೆಗೆ ಯಾರೂ ಹೇಳಿಲ್ಲ ಅಂದ.
ಇದನ್ನೂ ಓದಿ | Motivational story | 10 ವರ್ಷದ ಸೇವೆ ಮೇಲೋ, 10 ದಿನಗಳ ನಾಯಿ ಪ್ರೀತಿ ಮೇಲೋ? ಒಂದು Terror ಕಥೆ!