ಕೃಷ್ಣ ಭಟ್ ಅಳದಂಗಡಿ-motivational story
ಒಂದೂರಿಗೆ ಒಬ್ಬ ಸನ್ಯಾಸಿ ಬಂದಿದ್ದ. ಅವನು ನದಿಯ ತೀರದಲ್ಲಿ ಕುಳಿತುಕೊಳ್ಳುತ್ತಿದ್ದ. ಅಲ್ಲಿಂದಲೇ ಜೋರಾಗಿ ಹೇಳುತ್ತಿದ್ದ: ನಿಮಗೇನು ಬೇಕೋ ನಾನು ಕೊಡುವೆ.. ನಿಮಗೇನು ಬೇಕೋ ನಾನು ಕೊಡುವೆ!
ಊರಿನ ಜನ ಇವನಿಗೆಲ್ಲೋ ಹುಚ್ಚುಹಿಡಿದಿರಬೇಕು ಎಂದು ತಮಾಷೆ ಮಾಡುತ್ತಾ ಸಾಗುತ್ತಿದ್ದರು. ಆ ದಿನವೂ ಸನ್ಯಾಸಿ ಅದೇ ರೀತಿ ಬೊಬ್ಬೆ ಹೊಡೆಯುತ್ತಿದ್ದ: ನಿಮಗೇನು ಬೇಕೋ ಅದನ್ನು ನಾನು ಕೊಡುವೆ!
ಆ ದಾರಿಯಲ್ಲಿ ಸಾಗುತ್ತಿದ್ದ ಒಬ್ಬ ಯುವಕನಿಗೆ ಏನನಿಸಿತೋ ಏನೋ.. ಅವನು ಸನ್ಯಾಸಿಯ ಬಳಿಗೆ ಹೋದ. `ಸನ್ಯಾಸಿಗಳೇ ನೀವು ಹೇಳುತ್ತಿರುವುದನ್ನು ಕೇಳಿದೆ. ನನಗೆ ಬೇಕಾದ್ದನ್ನು ನೀವು ಕೊಡಬಲ್ಲಿರಾ?’ ಎಂದು ಕೇಳಿದ.
ಸನ್ಯಾಸಿ ಸಾವಧಾನವಾಗಿ ಹೇಳಿದ: ಖಂಡಿತ ಕೊಡಬಲ್ಲೆ ಗೆಳೆಯ.. ಆದರೆ, ನಾನು ಹೇಳಿದಂತೆ ನೀನು ಕೇಳಬೇಕು. ಹೂಂ.. ಅದೆಲ್ಲಕ್ಕಿಂತ ಮೊದಲು ನಿನಗೇನು ಬೇಕು ಕೇಳು..
ಯುವಕ ಹೇಳಿದ: ನಾನು ಶ್ರೀಮಂತನಾಗಬೇಕು. ದೊಡ್ಡ ಮಟ್ಟದಲ್ಲಿ ವಜ್ರ ಮತ್ತು ಮುತ್ತಿನ ವ್ಯಾಪಾರ ಮಾಡಬೇಕು..
ಸನ್ಯಾಸಿ ಹೇಳಿದ: ನಿನ್ನ ದೃಢ ನಿರ್ಧಾರ ನೋಡಿ ಖುಷಿ ಆಯಿತು. ಖಂಡಿತವಾಗಿ ಅದು ಈಡೇರುತ್ತದೆ. ನಾನು ನಿನಗೆ ಒಂದು ವಜ್ರ ಮತ್ತು ಒಂದು ಮುತ್ತನ್ನು ಕೊಡುತ್ತೇನೆ. ಇದರಿಂದ ನೀನು ಎಷ್ಟು ವಜ್ರ, ಮುತ್ತುಗಳನ್ನಾದರೂ ಮಾಡಿಕೊಳ್ಳಬಹುದು.
ಹಾಗೆ ಹೇಳುತ್ತಲೇ.. ನಿನ್ನ ಅಂಗೈಯನ್ನು ಇತ್ತ ಚಾಚು. ಇದೋ ಜಗತ್ತಿನ ಅತ್ಯಂತ ಅಮೂಲ್ಯವಾದ ವಜ್ರವನ್ನು ನಿನಗೆ ಕೊಡುತ್ತೇನೆ. ಇದಕ್ಕೆ ಸಮಯ ಎಂದು ಹೇಳುತ್ತಾರೆ ಎಂದು ಸನ್ಯಾಸಿ. ಯುವಕ ಇದೇನಪ್ಪಾ ಎಂದು ಯೋಚಿಸುತ್ತಿದ್ದಾಗ ಸನ್ಯಾಸಿ ಮತ್ತೆ ಹೇಳಿದ: ಗೆಳೆಯಾ.. ಮತ್ತೊಂದು ಕೈ ಕೊಡು.. ಇನ್ನೊಂದು ಬೆಲೆಬಾಳುವ ಮುತ್ತನ್ನು ಕೊಡುವೆ. ಜನ ಇದನ್ನು ತಾಳ್ಮೆ ಎಂದು ಕರೆಯುತ್ತಾರೆ. ನೀನು ಮೊದಲು ನಾನು ಕೊಟ್ಟ ಸಮಯವೆಂಬ ವಜ್ರವನ್ನು ಬಳಸು. ಆಗಲೂ ನಿನ್ನ ಕೆಲಸ ಸಾಧ್ಯವಾಗುತ್ತಿಲ್ಲ ಎಂದೇನಾದರೂ ಅನಿಸಿದರೆ ಈ ತಾಳ್ಮೆ ಎಂಬ ಮುತ್ತನ್ನು ಬಳಸು. ಇದರಿಂದ ಸಾಧ್ಯವಾಗದ್ದು ಜಗತ್ತಿನಲ್ಲಿ ಯಾವುದೂ ಇಲ್ಲ.
ಯುವಕ ಸನ್ಯಾಸಿಯ ಮಾತನ್ನು ಗಂಭೀರವಾಗಿ ಸ್ವೀಕರಿಸಿದ. ಯಾವತ್ತೂ ಸಮಯವನ್ನು ವ್ಯರ್ಥ ಮಾಡಬಾರದು. ತಾಳ್ಮೆ ಕಳೆದುಕೊಳ್ಳಬಾರದು ಎಂದು ನಿರ್ಧರಿಸಿದ. ಮುಂದೆ ಒಂದು ದೊಡ್ಡ ವಜ್ರದ ವ್ಯಾಪಾರಿಯ ಜತೆ ಕೆಲಸಕ್ಕೆ ಸೇರಿಕೊಂಡ. ಸಣ್ಣ ಸಮಯವನ್ನೂ ವ್ಯರ್ಥ ಮಾಡದೆ ಕೆಲಸವನ್ನೆಲ್ಲ ಪ್ರಾಮಾಣಿಕವಾಗಿ ಕಲಿತ. ಮತ್ತು ಮುಂದೆ ಅವನೇ ದೊಡ್ಡ ವಜ್ರದ ವ್ಯಾಪಾರಿಯಾದ.
ನಮಗೆಲ್ಲರಿಗೂ ಹೀಗೆಯೇ ದೊಡ್ಡ ದೊಡ್ಡ ಕನಸುಗಳು ಇರ್ತವೆ. ಆದರೆ, ಅದನ್ನು ನನಸು ಮಾಡಿಕೊಳ್ಳಲು ಬೇಕಾದ ಪ್ರಮುಖ ಆಯುಧಗಳಾದ ಸಮಯ ನಿರ್ವಹಣೆ ಮತ್ತು ತಾಳ್ಮೆಗಳು ನಮ್ಮ ಬಳಿ ಇರುವುದಿಲ್ಲ.
ನಮಗೂ ಒಬ್ಬ ಸನ್ಯಾಸಿ ಸಿಗಬೇಕಿತ್ತು ಅಲ್ವಾ?
ಇದನ್ನೂ ಓದಿ | Motivational story | ನಮಗಾಗಿ, ನಮ್ಮನ್ನು ಜತನದಿಂದ ಕಾಪಾಡುವುದಕ್ಕಾಗಿ ಧರೆಗಿಳಿದ ಆ ದೇವತೆಯ ಹೆಸರೇ…