ಕೃಷ್ಣ ಭಟ್ ಅಳದಂಗಡಿ- motivational story
ಅದೊಂದು ರೆಸ್ಟೋರೆಂಟ್. ಹಲವಾರು ಮಂದಿ ಅಲ್ಲಿ ತಿಂಡಿ ತಿನ್ನಲು ಸೇರಿದ್ದರು. ಆಗ ಇದ್ದಕ್ಕಿದ್ದಂತೆಯೇ ಒಂದು ಜಿರಳೆ ಒಬ್ಬ ಮಹಿಳೆಯ ಮೇಲೆ ಬಿತ್ತು. ಆಕೆ ಜೋರಾಗಿ ಕಿರುಚಿಕೊಳ್ಳುತ್ತಾ ಕುಣಿದಾಡಿದರು. ಕುರ್ಚಿ ಬಿಟ್ಟೆದ್ದರು, ಟೇಬಲ್ ಹತ್ತಿದರು, ಬಟ್ಟೆ ಎಳೆದಾಡಿದರು. ಉಳಿದವರಿಗೆ ಅಲ್ಲಿ ಏನಾಗ್ತಿದೆ ಅನ್ನೋದೇ ಗೊತ್ತಿರಲಿಲ್ಲ.. ಆಕೆ ಒಂದೇ ಸಮನೆ ಬೊಬ್ಬೆ ಹೊಡೆಯುತ್ತಿದ್ದರು. ಹೀಗಾಗಿ ಉಳಿದವರಿಗೂ ಆತಂಕ.
ಕೊನೆಗೆ ಹೇಗೋ ಆಕೆಯ ಮೈಮೇಲೆ ಬಿದ್ದ ಜಿರಳೆ ಕೆಳಗೆ ಬಿತ್ತು. ಆಗ ಜನ ಮತ್ತೆ ಹೋ ಎಂದು ಕಿರುಚಿದರು. ಆಗ ಅದು ಟಕ್ಕನೆ ಇನ್ನೊಬ್ಬ ಮಹಿಳೆಯ ಮೈಮೇಲೆ ಹತ್ತಿಕೊಂಡಿತು. ಮೊದಲೇ ಆತಂಕದಲ್ಲಿದ್ದ ಆಕೆ ಇನ್ನಷ್ಟು ಭಯಭೀತರಾದರು.
ಇಡೀ ಹೋಟೆಲಿನಲ್ಲಿ ಅಸಹನೀಯ ವಾತಾವರಣ. ಕೆಲವರು ಇಷ್ಟು ದೊಡ್ಡ ಹೋಟೆಲ್ ನಲ್ಲಿ ಜಿರಳೆ ಹೇಗೆ ಬಂತು, ಹೈಜೆನಿಕ್ ಮೆಂಟೇನ್ ಮಾಡ್ತಿಲ್ಲ. ಜಿರಳೆಗಳಿರುವ ಹೋಟೆಲ್ ನ ಆಹಾರ ಹೇಗಿರಬಹುದು ಎಂದೆಲ್ಲ ಮಾತನಾಡಿಕೊಂಡರು.
ತುಂಬ ಹೊತ್ತಾದ ಬಳಿಕ ಜಿರಳೆ ಆ ಮಹಿಳೆಯ ಮೈಯಿಂದ ಹೊರಬಿತ್ತು. ಕೂಡಲೇ ಅದು ಓಡಿ ಹೋಗಿ ಪಕ್ಕದಲ್ಲಿದ್ದ ಇನ್ನೊಬ್ಬ ಮಹಿಳೆಯ ಮೈಮೇಲೆ ಹತ್ತಿತು. ಆ ಮಹಿಳೆ ಬೊಬ್ಬೆ ಹೊಡೆಯಲಿಲ್ಲ, ಚೀರಾಡಲಿಲ್ಲ. ಬದಲಾಗಿ ಜಿರಳೆ ಎಲ್ಲಿ ಹೋಗ್ತಾ ಇದೆ, ಏನು ಮಾಡ್ತಾ ಇದೆ ಎಂದು ಕೆಲವು ಸೆಕೆಂಡ್ ಗಮನಿಸಿದರು. ಮತ್ತು ಸರಿಯಾದ ಸಮಯ ನೋಡಿ ಅದರ ಮೀಸೆಯನ್ನು ಹಿಡಿದು ಬಿಟ್ಟರು. ಮತ್ತು ಅದನ್ನು ಹಾಗೇ ಹಿಡಿದುಕೊಂಡು ಹೋಗಿ ಹೊರಗೆ ಎಸೆದುಬಂದರು.
ಇದನ್ನೆಲ್ಲ ವಿಶ್ವನಾಥ ಮತ್ತು ಅವರ ಮಗ ದೂರದಿಂದಲೇ ನೋಡುತ್ತಿದ್ದರು. ಮಗ ಕೇಳಿದ: ಅಲ್ಲಪ್ಪ ಒಂದು ಜಿರಳೆ ಕಂಡು ಅವರಿಬ್ಬರೂ ಅಷ್ಟೆಲ್ಲ ಗಲಾಟೆ ಮಾಡಿದ್ರು.. ಮೂರನೇ ಮಹಿಳೆ ಅಷ್ಟು ಧೈರ್ಯದಿಂದ ಜಿರಳೇನ ಎತ್ತಿ ಎಸೆದರಲ್ಲ… ಹೇಗಿದು?
ಅದಕ್ಕೆ ವಿಶ್ವನಾಥ ಹೇಳಿದ: ಇಲ್ಲಿ ಜಿರಳೆ ಎನ್ನುವುದು ಏನೂ ಅಲ್ಲ. ಅದಕ್ಕೆ ಅವರು ತೋರಿದ ಪ್ರತಿಕ್ರಿಯೆ ವಿಭಿನ್ನವಾಗಿತ್ತು ಅಷ್ಟೆ. ಮೊದಲ ಇಬ್ಬರು ಮಹಿಳೆಯರು ವಿವೇಚನೆ ತೋರದೆ, ಭಯದಿಂದ ಪ್ರತಿಕ್ರಿಯಿಸಿದರು. ಮೂರನೇ ಮಹಿಳೆ ವಿವೇಚನೆಯಿಂದ ಪ್ರತಿಕ್ರಿಯಿಸಿದರು.. ಹಾಗಾಗಿ ಪರಿಸ್ಥಿತಿಯನ್ನು ಸುಲಭದಲ್ಲಿ ನಿಭಾಯಿಸಲು ಸಾಧ್ಯವಾಯಿತು. ಮೂರನೆ ಮಹಿಳೆಗೆ ಮೊದಲ ಇಬ್ಬರು ನೀಡಿದ ಪ್ರತಿಕ್ರಿಯೆಯ ಅರಿವಿತ್ತು. ಅದನ್ನು ಅನುಭವವಾಗಿಸಿಕೊಂಡು ಆಕೆ ಪ್ರತಿಕ್ರಿಯಿಸಿದರು.
ವಿಶ್ವನಾಥ ಮುಂದುವರಿಸಿದ-
ಬದುಕಿನಲ್ಲೂ ಅಷ್ಟೆ, ನಾವು ಪರಿಸ್ಥಿತಿಗೆ ಕೊಡುವ ಪ್ರತಿಕ್ರಿಯೆಯೇ ಮುಖ್ಯವಾಗುತ್ತದೆ. ಕಚೇರಿಯಲ್ಲಿ ಬಾಸ್ ಬೈದರು ಅನ್ನೋದನ್ನು, ಮನೆಯಲ್ಲಿ ಗಂಡನೋ/ಹೆಂಡತಿಯೋ ಏನೋ ಅಂದರು ಎಂದರೆ ಅದನ್ನು ಯಾವ ರೀತಿ ಸ್ವೀಕರಿಸುತ್ತೇವೆ ಎನ್ನುವುದರ ಆಧಾರದ ಮೇಲೆ ನಮ್ಮ ಶಕ್ತಿ ಪ್ರಕಟಗೊಳ್ಳುತ್ತದೆ. ನಾವು ವಿವೇಚನಾರಹಿತವಾಗಿ, ಆತಂಕದಿಂದ ಪ್ರತಿಕ್ರಿಯಿಸುವುದರ ಬದಲು ಬುದ್ಧಿವಂತಿಕೆಯಿಂದ ನಿಭಾಯಿಸಬೇಕು. ಇಲ್ಲಿ ಅನುಭವವೂ ಒಂದು ಪಾತ್ರವನ್ನು ವಹಿಸುತ್ತದೆ. ಮಗ ಏನೋ ಅರ್ಥವಾದಂತೆ ತಲೆದೂಗಿದ.
ಇದನ್ನೂ ಓದಿ | Motivational story | ಅವನು ಕೊನೇ ಗೂಳಿಯ ಬಾಲ ಹಿಡಿಯೋಕೆಂದು ಕಾದು ಕುಳಿತಿದ್ದ, ಆದರೆ ಅದಕ್ಕೆ ಬಾಲವೇ ಇರಲಿಲ್ಲ!