ಕೃಷ್ಣ ಭಟ್ ಅಳದಂಗಡಿ- Motivational story
ಅದೊಂದು ಬ್ಯಾಂಕಿನ ಬ್ರಾಂಚ್ ಆಫೀಸು. ಬ್ರಾಂಚ್ ಮ್ಯಾನೇಜರ್ ಏನು ಮಾಡುವುದು ಎಂದು ತೋಚದೆ ಕುಳಿತಿದ್ದರು. ಎದುರಿಗೆ ಮ್ಯಾನೇಜ್‍ಮೆಂಟ್ ಟೀಮಿನ ಮೂರು ಜನ ಕುಳಿತಿದ್ದರು. ವರ್ಷದ ಮೊದಲ ತ್ರೈಮಾಸಿಕದಲ್ಲಿ ಬ್ರಾಂಚ್ ಆಫೀಸಿನ ಲಾಭಾಂಶ ಕಡಿಮೆ ಆಗಿದೆ ಎಂಬ ವಿಚಾರವಾಗಿ ವಿಚಾರಣೆ ನಡೆಯುತ್ತಿತ್ತು.
ಆಡಳಿತ ಮಂಡಳಿ: ಏನ್ಮಾಡ್ತಾ ಇದೀರಾ ಇಲ್ಲಿ? ಲಾಭಾಂಶ ಭಾರಿ ಕಡಿಮೆ ಆಗಿದೆಯಲ್ಲಾ?
ಮ್ಯಾನೇಜರ್: ಸರ್ ನಾನು ತುಂಬ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇನೆ.
ಆಡಳಿತ: ಹಾಗಿದ್ದರೆ ನಿಮ್ಮ ಗುರಿಯನ್ನು ಮೀಟ್ ಮಾಡಬೇಕಿತ್ತಲ್ವಾ?
ಮ್ಯಾನೇಜರ್: ನಾನು ತ್ರೈಮಾಸಿಕದ ಆರಂಭದಿಂದಲೇ ಟಾರ್ಗೆಟ್ ರೀಚ್ ಮಾಡಲು ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸುತ್ತಲೇ ಇದ್ದೇನೆ.
ಆಡಳಿತ: ಹಾಗಿದ್ದರೂ ಯಾಕೆ ಗುರಿ ಮುಟ್ಟಿಲ್ಲ.. ಕಾರಣ ಕೊಡಿ.
ಮ್ಯಾನೇಜರ್: ನನ್ನ ಹಲವಾರು ಲೋನ್ ಪ್ರಪೋಸಲ್‍ಗಳನ್ನು ರಿಜೆಕ್ಟ್ ಮಾಡಲಾಗಿದೆ. ಕೆಲವೊಂದು ಅನಗತ್ಯ ಎನಿಸುವ ಪ್ರಶ್ನೆಗಳನ್ನು ಕೇಳಿದ್ದರಿಂದ ಕಸ್ಟಮರ್‌ಗಳು ಸಾಲದ ಅರ್ಜಿಯನ್ನೇ ಹಿಂದಕ್ಕೆ ಪಡೆದು ಬೇರೆ ಬ್ಯಾಂಕಿಗೆ ಹೋದರು. ಕೆಲವರು ಇನ್ನೂ ಕಾಯ್ತಾ ಇದಾರೆ, ದಿನಾ ಬಂದು ಕಾಟ ಕೊಡ್ತಾ ಇದಾರೆ. ಅವರಲ್ಲಿ ಮಾತನಾಡುವುದರಲ್ಲೇ ತುಂಬ ಟೈಮ್ ಕಳೆದುಹೋಗುತ್ತದೆ.
ಆಡಳಿತ: ನೀವು ಟಾರ್ಗೆಟ್‍ಗಳ ಮೇಲೆ ಗಮನ ಇಟ್ಟಿದ್ದರೆ ಅದನ್ನು ಅಚೀವ್ ಮಾಡಬೇಕಿತ್ತಲ್ವಾ.. ಯಾವುದೂ ಅಚೀವ್ ಆಗಿಲ್ಲ.. ಎಲ್ಲವೂ ಅರೆಬರೆ.
ಮ್ಯಾನೇಜರ್: ನಾನು ಮಾಡ್ತಾ ಇದ್ದೆ ಇದ್ದೆ. ಅದರ ನಡುವೆ ಝೋನಲ್ ಆಫೀಸಿನಿಂದ ಕಾಲ್ ಬಂತು. ನೀವು ತಕ್ಷಣ ರಿಟೇಲ್ ಲೋನ್ ಮೇಲೆ ಕಾನ್ಸಂಟ್ರೇಟ್ ಮಾಡಿ.. ನಾವು ಇನ್ನೊಂದು ಝೋನ್‍ನ್ನು ಮೀರಿಸಬೇಕು ಅಂತ ಹೇಳಿದರು.
ಆಡಳಿತ: ಹಾಗಿದ್ದರೆ ನೀವು ರಿಟೇಲ್ ಲೋನ್‍ಗಳ ಮೇಲೆ ಕಾನ್ಸಂಟ್ರೇಟ್ ಮಾಡಿದಿರಿ..
ಮ್ಯಾನೇಜರ್: ಇಲ್ಲ ಸರ್.. ಅದನ್ನು ಕೈಗೆತ್ತಿಕೊಳ್ಳಬೇಕು ಅನ್ನುವಷ್ಟರಲ್ಲಿ ಇನ್ನೊಂದು ಸೂಚನೆ ಬಂತು. ಎಲ್ಲ ಕೆಲಸ ಬದಿಗಿಟ್ಟು ಇನ್ಷೂರೆನ್ಸ್ ಪಾಲಿಸಿ ಪ್ರಚಾರ ನಡೆಸಬೇಕು ಅಂತ.
ಆಡಳಿತ: ಓ ಹಾಗಿದ್ದರೆ ಇನ್ಷೂರೆನ್ಸ್ ಪಾಲಿಸಿ ಚೆನ್ನಾಗಿ ಮಾಡಿರಬೇಕಲ್ಲ..
ಮ್ಯಾನೇಜರ್: ಇಲ್ಲ ಸರ್, ಎಲ್ಲ ಗ್ರಾಹಕರ ಕೆವೈಸಿಯನ್ನು ಮತ್ತೊಮ್ಮೆ ಮಾಡಿಸಲು ಆರ್ಡರ್ ಬಂತು.. ಕಳೆದ ವರ್ಷವೂ ಮಾಡಿತ್ತು. ನಾನು ಅದರ ಹಿಂದೆ ಬಿದ್ದೆ.
ಆಡಳಿತ: ಹಾಗಿದ್ದರೆ ಎಲ್ಲ ಕಸ್ಟಮರ್ಸ್ ಕೆವೈಸಿ ಆಯ್ತಾ?
ಮ್ಯಾನೇಜರ್: ಮಾಡ್ತಾ ಇದ್ದೆ ಸರ್.. ಅಷ್ಟು ಹೊತ್ತಿಗೆ ಹೆಲ್ತ್ ಇನ್ಷೂರೆನ್ಸ್ ಸ್ಕೀಮ್ಸ್ ಸ್ಟಾರ್ಟ್ ಆಯ್ತು.. ಎಲ್ಲ ಕಡೆ ಹೋಗಿ ಜನರನ್ನು ಮನ ಒಲಿಸಲು ಹೇಳಿದರು.
ಆಡಳಿತ: ಹಾಗಿದ್ದರೆ ತುಂಬ ಹೆಲ್ತ್ ಇನ್ಷೂರೆನ್ಸ್ ಪಾಲಿಸಿಗಳು ಆಗಿರಬೇಕಲ್ಲ..
ಮ್ಯಾನೇಜರ್: ಅಷ್ಟು ಹೊತ್ತಿಗೆ ನನಗೆ ಬ್ರಾಂಚ್ ಆಫೀಸ್ ಕಟ್ಟಡದ ಟೈಟಲ್ ಡೀಡ್, ರೆಕಾಡ್ರ್ಸ್ ಎಲ್ಲ ಮತ್ತೆ ವೆರಿಫಿಕೇಶನ್‍ಗೆ ಬಂತು. ಎಲ್ಲ ಗ್ರಾಹಕರನ್ನು ಪ್ರಧಾನ ಮಂತ್ರಿಗಳ ಯೋಜನೆಗೆ ಜೋಡಿಸಲು ಸೂಚಿಸಲಾಯಿತು.
ಆಡಳಿತ: ಈಗ ಎಲ್ಲ ಗ್ರಾಹಕರು ಈ ಯೋಜನೆ ಸೇರಿದರಾ?
ಮ್ಯಾನೇಜರ್: ಮಾಡ್ತಾ ಇದ್ದೇವೆ ಸರ್.. ಆಗ ರೀಜನಲ್ ಮತ್ತು ಝೋನಲ್ ಆಫೀಸಿನಿಂದ ಇನ್ನೊಂದು ಸಕ್ರ್ಯುಲರ್ ಬಂತು. ಎಲ್ಲ ಎನ್‍ಪಿಎ ರಿಕವರಿ ಮಾಡ್ಲಿಕೆ ಸೂಚಿಸಲಾಯಿತು. ನಾನು ಅದಕ್ಕೆ ವ್ಯವಸ್ಥೆಗಳನ್ನು ಮಾಡಿಕೊಳ್ತಾ ಇದ್ದೆ.
ಆಡಳಿತ: ಹಾಗಿದ್ದರೆ ರಿಕವರಿ ಎಲ್ಲ ನೀಟಾಗಿ ಆಯ್ತಾ?
ಮ್ಯಾನೇಜರ್: ಇಲ್ಲ ಸರ್.. ಇಷ್ಟೆಲ್ಲದರ ನಡುವೆ ಅವರನ್ನು ಮೀಟ್ ಮಾಡೋಕೆ ಆಗ್ಲಿಲ್ಲ. ಆಮೇಲೆ ನೋಡಿದರೆ ಮೊದಲ ಕ್ವಾರ್ಟರೇ ಮುಗಿದುಹೋಗಿತ್ತು. ಮುಂದೆ ಮಾಡ್ತೀನಿ ಸರ್.
ಆಡಳಿತ: ಏನ್ರೀ ಇದು.. ಒಂದೇ ಒಂದು ಕೆಲಸ ಮಾಡಿಲ್ಲ.. ಏನ್ ಕತ್ತೆ ಕಾಯ್ತಾ ಇದ್ದೀರಾ? ಎಷ್ಟ್ ಜನ ಇದೀರಾ ಬ್ರಾಂಚಲ್ಲಿ? ಎಲ್ಲರನ್ನೂ ಕೆಲಸದಿಂದ ಕಿತ್ತು ಹಾಕ್ತೀವಿ.. ಕರೀರಿ ಎಲ್ರನ್ನೂ..
ಬ್ರಾಂಚ್ ಮ್ಯಾನೇಜರ್: ನಾನು, ಇಬ್ಬರು ಕ್ಲರ್ಕ್, ಒಬ್ಬ ಕ್ಯಾಶಿಯರ್ ಇದ್ದೇವೆ ಸರ್. ನಾವೆಲ್ಲರೂ ಈ ಸರ್ಕ್ಯೂಲರ್ ಮತ್ತು ನೋಟಿಸ್‍ಗಳನ್ನು ಸಾರ್ಟೌಟ್ ಮಾಡೋದ್ರಲ್ಲೇ ಬಿಸಿ ಆಗ್ತೀವಿ.. ಇವತ್ತು ಒಬ್ಬರು ರಜೆಯಲ್ಲಿದ್ದಾರೆ. ಇಬ್ರು ಬಂದ್ರು ನೋಡಿ..
ಇದನ್ನೂ ಓದಿ | Motivational story | ಮುಖಕ್ಕೆ ಉಗುಳಿಹೋದ ಮುಂಗೋಪಿ ಮರಳಿ ಬಂದು ಎದುರು ನಿಂತರೂ ಬುದ್ಧನಿಗೆ ಪರಿಚಯವೇ ಆಗಲಿಲ್ಲ!